ರಾತ್ರೋರಾತ್ರಿ ತರಾತುರಿಯಲ್ಲಿ ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಗೆ ಇದೀಗ ಐದು ವರ್ಷ. ಸ್ವತಂತ್ರ್ಯೋತ್ತರ ಭಾರತದಲ್ಲಿ ಜಾರಿಗೆ ತರಲಾಗಿರುವ ಅತಿದೊಡ್ಡ ತೆರಿಗೆ ಸುಧಾರಣೆ ಇದು. ಜಿಎಸ್ ಟಿ ಜಾರಿಗೆ ಬಂದು ಐದು ವರ್ಷಗಳು ಕಳೆದ ನಂತರವೂ ಈ ವ್ಯವಸ್ಥೆಯನ್ನು ಜಾರಿಗೆ ತಂದ ಉದ್ದೇಶವಾದ ಏಕ ರಾಷ್ಟ್ರ- ಏಕ ತೆರಿಗೆ ಆಶಯ ಈಡೇರಿಯೇ ಇಲ್ಲ.
ಹತ್ತಾರು ತೆರಿಗೆಗಳ ಸಂಕೋಲೆಯಲ್ಲಿ ಬಳಲುತ್ತಿದ್ದ ನಾಗರಿಕರಿಗೆ ಜನಸ್ನೇಹಿ ಆಗಬೇಕಿದ್ದ ಜಿಎಸ್ ಟಿ ಆರಂಭದಿಂದಲೂ ಜನ ವಿರೋಧಿಯಾಗುತ್ತಲೇ ಸಾಗಿದೆ. ಐದು ವರ್ಷದ ನಂತರವೂ ಜನವಿರೋಧಿ ಎಂಬುದಕ್ಕೆ ಎರಡು ದಿನಗಳ ಕಾಲ ಚಂಡಿಘಡದಲ್ಲಿ ನಡೆದ ಜಿಎಸ್ ಟಿ ಮಂಡಳಿ ಸಭೆಯಲ್ಲಿ ಹೊಸದಾಗಿ ತೆರಿಗೆ ವಿಸ್ತರಿಸುವ ನಿರ್ಧಾರಗಳೇ ಸಾಕ್ಷಿ.
ಎಲ್ಲಾ ವಸ್ತುಗಳಿಗೂ ತೆರಿಗೆ ಹೇರುತ್ತಲೇ ಇರುವ ಜಿಎಸ್ ಟಿ ಜನಸ್ನೇಹಿ ಆಗುವ ಯಾವ ನಿರೀಕ್ಷೆಯೂ ಉಳಿದಿಲ್ಲ.
ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಕೂಡಾ ನಿಧಾನಗತಿಯಲ್ಲಿ ಮಾನವೀಯತೆ ನೆಲೆಯಿಂದ ದೂರ ಸರಿಯುತ್ತಾ ಬರೀ ಸಂಪನ್ಮೂಲ ಕ್ರೋಢೀಕರಣದತ್ತ ಕೇಂದ್ರೀಕೃತಗೊಳ್ಳುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ತಾಜಾ ಉದಾಹರಣೆ ಎಂದರೆ ಹೈನು ಉತ್ಪನ್ನಗಳಾದ ಬ್ರಾಂಡೆಡ್ ಅಲ್ಲದ ಪ್ಯಾಕ್ ಮಾಡಲಾದ ಮೊಸರು ಮತ್ತು ಪನ್ನೀರಿಗೆ ತೆರಿಗೆ ಹೇರಿದೆ.
ಮೊಸರು ಬಡವ ಶ್ರೀಮಂತ ಎಂಬ ಬೇಧವಿಲ್ಲದೆ ಎಲ್ಲರೂ ಬಳಸುತ್ತಾರೆ. ಪನ್ನೀರು ಬಹುತೇಕ ಶ್ರೀಮಂತರು, ಮೇಲ್ಮಧ್ಯಮ ವರ್ಗದವರು ಬಳಸುತ್ತಾರೆ. ಇಂತಹ ಪರಿಜ್ಞಾನ ತೆರಿಗೆ ವಿಧಿಸುವವರಿಗೆ ಇರಬೇಕು. ವಾಸ್ತವವಾಗಿ ಪನ್ನೀರನ್ನು ಮಾತ್ರ ತೆರಿಗೆ ವ್ಯಾಪ್ತಿಗೆ ತರಬೇಕಿತ್ತು. ಈಗ ಮೊಸರನ್ನೂ ತೆರಿಗೆ ವ್ಯಾಪ್ತಿಗೆ ತಂದು ಬಡವರ ಮೇಲೂ ತೆರಿಗೆ ಹೇರಲು ಹಿಂಜರಿಯುವುದಿಲ್ಲ ಎಂಬುದನ್ನು ಸಾಬೀತು ಪಡಿಸಿದೆ. ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಹೇಗೆ ಜನವಿರೋಧಿಯಾಗುತ್ತಾ ಸಾಗಿದೆ ಎಂಬುದರ ಸಂಕೇತವೇ ಮೊಸರಿಗೂ ತೆರಿಗೆ ಹೇರಿರುವುದು.
ಐದು ವರ್ಷ ಪೂರೈಸುತ್ತಿರುವ ಹೊತ್ತಿನಲ್ಲಿ ಹೊಸ ತೆರಿಗೆ ವ್ಯಾಪ್ತಿಗೆ ಏನೆನೆಲ್ಲ ಬಂದಿವೆ ನೋಡಿ.
ತೆರಿಗೆಯನ್ನು ತರ್ಕಬದ್ಧಗೊಳಿಸುವ ದೃಷ್ಟಿಯಿಂದ ಕೆಲವು ಸರಕುಗಳು ಮತ್ತು ಸೇವೆಗಳ ತೆರಿಗೆ ದರಗಳಲ್ಲಿ ಬದಲಾವಣೆ ಮಾಡಲು ಈ ನಿರ್ಧಾರ ಕೈಗೊಂಡಿರುವುದಾಗಿ ಜಿಎಸ್ ಟಿ ಮಂಡಳಿ ತೆರಿಗೆ ಏರಿಕೆ ನಿಲುವನ್ನು ಸಮರ್ಥಿಸಿಕೊಂಡಿದೆ. ತತ್ಪರಿಣಾಮ ಬಹಳಷ್ಟು ಸೇವೆಗಳು ಹೊಸದಾಗಿ ತೆರಿಗೆ ವ್ಯಾಪ್ತಿಗೆ ಸೇರ್ಪಡೆಗೊಂಡಿವೆ. ಇಲ್ಲವೇ ಮೇಲು ಹಂತದ ತೆರಿಗೆ ವ್ಯಾಪ್ತಿಗೆ ಬಂದಿವೆ.
- ಚೆಕ್ ವಿತರಣೆಗೆ ಬ್ಯಾಂಕ್ ಗಳು ವಿಧಿಸುವ ಶುಲ್ಕದ ಮೇಲೆ ಶೇ.18ರಷ್ಟು ಜಿಎಸ್ ಟಿ ವಿಧಿಸಲಾಗುತ್ತದೆ.
- ಅಟ್ಲಾಸ್ಗಳು ಸೇರಿದಂತೆ ನಕ್ಷೆಗಳು ಮತ್ತು ಚಾರ್ಟ್ಗಳು ಶೇಕಡಾ 12 ರಷ್ಟು ತೆರಿಗೆ ವ್ಯಾಪ್ತಿಗೆ ಬರುತ್ತವೆ. (ಲೇಬಲ್ ಮಾಡದ ಮತ್ತು ಬ್ರಾಂಡ್ ಮಾಡದ ಸರಕುಗಳಿಗೆ ಜಿಎಸ್ಟಿ ವಿನಾಯಿತಿ ಮುಂದುವರಿಸುತ್ತವೆ.)
- ದಿನಕ್ಕೆ 1000 ರೂ.ಗಿಂತ ಕಡಿಮೆ ಇರುವ ಹೋಟೆಲ್ ಕೊಠಡಿಗಳಿಗೆ ಶೇ.12 ತೆರಿಗೆ ವಿಧಿಸಲಾಗುತ್ತದೆ. ಇದುವರೆಗೆ ತೆರಿಗೆ ಇರಲಿಲ್ಲ.
- ಮೊದಲೇ ಪ್ಯಾಕ್ ಮಾಡಲಾದ ಮತ್ತು ಲೇಬಲ್ ಮಾಡಿದ ಮಾಂಸ (ಶೀಥಲೀಕರಿಸಿದ್ದು ಹೊರತುಪಡಿಸಿ), ಮೀನು, ಮೊಸರು, ಲಸ್ಸಿ, ಪನೀರ್, ಜೇನುತುಪ್ಪ, ಒಣಗಿದ ದ್ವಿದಳ ಧಾನ್ಯಗಳು, ಒಣಗಿದ ಮಖಾನಾ, ಗೋಧಿ ಮತ್ತು ಇತರ ಧಾನ್ಯಗಳು, ಗೋಧಿ ಅಥವಾ ಮೆಸ್ಲಿನ್ ಹಿಟ್ಟು, ಬೆಲ್ಲ, ಮಂಡಕ್ಕಿ ಮತ್ತು ಸಾವಯವ ಗೊಬ್ಬರ ಮತ್ತು ತೆಂಗಿನಕಾಯಿ ಮಿಶ್ರಗೊಬ್ಬರ ಈ ಎಲ್ಲವೂ ಈಗ ಶೇ.5ರ ತೆರಿಗೆ ವ್ಯಾಪ್ತಿಗೆ ಬರುತ್ತವೆ.
- ಖಾದ್ಯ ತೈಲ, ಕಲ್ಲಿದ್ದಲು, ಎಲ್ಇಡಿ ಲ್ಯಾಂಪ್ಗಳು, ಪ್ರಿಂಟಿಂಗ್/ಡ್ರಾಯಿಂಗ್ ಇಂಕ್, ಫಿನಿಶ್ಡ್ ಲೆದರ್ ಮತ್ತು ಸೋಲಾರ್ ವಾಟರ್ ಹೀಟರ್ ಸೇರಿದಂತೆ ಹಲವಾರು ವಸ್ತುಗಳಿಗೆ ಕೆಳ ಹಂತದ ತೆರಿಗೆ ವ್ಯಾಪ್ತಿಗೆ ಸೇರುವಂತೆ ಶಿಫಾರಸು ಮಾಡಿದೆ.
- ಕಳ್ಳತನವನ್ನು ಪರಿಶೀಲಿಸಲು ಚಿನ್ನ, ಚಿನ್ನಾಭರಣಗಳು ಮತ್ತು ಬೆಲೆಬಾಳುವ ವಜ್ರ ಹರಳುಗಳು ಅಂತರ-ರಾಜ್ಯ ಸಾಗಾಟಕ್ಕೆ ಇ-ವೇ ಬಿಲ್ಗೆ ಕಡ್ಡಾಯ ಮಾಡಲಾಗಿದೆ. ಇ- ಬಿಲ್ ಕಡ್ಡಾಯ ಮಾಡಬೇಕಾದ ಗರಿಷ್ಠ ಮೊತ್ತದ ಮಿತಿಯನ್ನು ರಾಜ್ಯಗಳು ನಿರ್ಧರಿಸಬಹುದು ಎಂದು ಜಿಎಸ್ಟಿ ಮಂಡಳಿ ಶಿಫಾರಸು ಮಾಡಿದೆ. ಇವುಗಳ ಹೊರತಾಗಿ, ಕ್ಯಾಸಿನೊಗಳು, ಆನ್ಲೈನ್ ಗೇಮಿಂಗ್ ಮತ್ತು ಕುದುರೆ ರೇಸಿಂಗ್ಗಳ ಮೇಲೆ ಶೇಕಡಾ 28 ರಷ್ಟು ತೆರಿಗೆ ಹೇರುವ ಪ್ರಸ್ತಾಪ ಇದೆ.
ಇನ್ನೂ ಬಾರದ ಪೆಟ್ರೋಲ್, ಡೀಸೆಲ್:
ಐದು ವರ್ಷ ಕಳೆದರೂ ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ಮದ್ಯಗಳನ್ನು ಜಿಎಸ್ಟಿ ವ್ಯಾಪ್ತಿಗೆ ತಂದಿಲ್ಲ. ಪೆಟ್ರೋಲ್ ಮತ್ತು ಡಿಸೇಲ್ ಜಿಎಸ್ ಟಿ ವ್ಯಾಪ್ತಿಗೆ ಬಂದರೆ ಕನಿಷ್ಠವೆಂದರೂ ಶೇ.40ರಷ್ಟು ದರ ಇಳಿಯುತ್ತದೆ. ಅದೇ ರೀತಿ ಮದ್ಯವನ್ನು ಜಿಎಸ್ಟಿ ವ್ಯಾಪ್ತಿಗೆ ತಂದರೆ ಶೇ.50ಕ್ಕಿಂತಲೂ ಕಡಮೆ ದರಕ್ಕೆ ಮದ್ಯ ಲಬ್ಯವಾಗುತ್ತದೆ. ಆದರೆ, ಉದ್ದೇಶಪೂರ್ವಕವಾಗಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಿಎಸ್ಟಿ ವ್ಯಾಪ್ತಿಗೆ ತರುತ್ತಿಲ್ಲ. ಅಂದರೆ, ಬೊಕ್ಕಸ ತುಂಬಿಕೊಳ್ಳುವುದರತ್ತ ಗಮನ ಕೇಂದ್ರೀಕರಿಸುತ್ತಿವೆಯೇ ಹೊರತು ಜನರಿಗೆ ಅನುಕೂಲವಾಗುವಂತಹ ಸರಕು ಸೇವೆಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುತ್ತಿಲ್ಲ.
ಹತ್ತಾರು ತೆರಿಗೆಗೂಡಿ GST :
ಕೇಂದ್ರೀಯ ಅಬಕಾರಿ ಸುಂಕ, ಸೇವಾ ತೆರಿಗೆ, ಮೌಲ್ಯವರ್ಧಿತ ತೆರಿಗೆ, ವಿಶೇಷ ಹೆಚ್ಚುವರಿ ಸುಂಕ, ಹೆಚ್ಚುವರಿ ಅಬಕಾರಿ ಸುಂಕ, ಔಷಧೀಯ ಮತ್ತು ಶೌಚಾಲಯಗಳ ತಯಾರಿ ಕಾಯಿದೆಯಡಿ ವಿಧಿಸಲಾದ ಸುಂಕ, ಕೌಂಟರ್ವೈಲಿಂಗ್ ಸುಂಕ, ಸಿಎಸ್ಟಿ, ಮನರಂಜನಾ ತೆರಿಗೆ, ಆಕ್ಟ್ರಾಯ್, ಖರೀದಿ ತೆರಿಗೆ, ಐಷಾರಾಮಿ ತೆರಿಗೆ, ಲಾಟರಿ ಮೇಲಿನ ತೆರಿಗೆಗಳು, ಬೆಟ್ಟಿಂಗ್ , ಜೂಜು ಮತ್ತು ಸೆಸ್ಗಳು ಮತ್ತು ಹೆಚ್ಚುವರಿ ಶುಲ್ಕಗಳು ಎಲ್ಲವನ್ನೂ ಒಗ್ಗೂಡಿಸಿ ಸರಕು ಮತ್ತು ಸೇವಾ ತೆರಿಗೆ ರೂಪಿಸಲಾಗಿದೆ. ಜಿಎಸ್ಟಿಯು ಕೇಂದ್ರ ಸರ್ಕಾರವು ವಿಧಿಸುವ ಏಕ, ಪರೋಕ್ಷ ತೆರಿಗೆಯಾಗಿದೆ. ಜಿಎಸ್ಟಿಯನ್ನು ಜುಲೈ 1, 2017 ಮದ್ಯರಾತ್ರಿ ಸಂಸತ್ತಿನ ಉಭಯ ಸದನಗಳ ಸಮಾವೇಶದೊಂದಿಗೆ ಜಾರಿಗೆ ತರಲಾಗಿದೆ. ತರಾತುರಿಯಲ್ಲಿ ತಂದ ಕಾರಣ ಮೊದಲ ಎರಡು ವರ್ಷಗಳು ವ್ಯಾಪಾರಿಗಳು ಕಷ್ಟ ಅನುಭವಿಸಿದರು. ಐದೂ ವರ್ಷಗಳಿಂದಲೂ ತೆರಿಗೆದಾರರು ಕಷ್ಟ ಅನುಭವಿಸುತ್ತಲೇ ಇದ್ದಾರೆ.