• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಹಾಡಿಯ ಮಕ್ಕಳಿಗೆ ಶಿಕ್ಷಣದ ಹಾದಿಯ ತೋರುತ್ತಿರುವ ಮೆಘಾನೆಯ ಅನ್ವರ್ ಮಾಸ್ತರು!

ಹಾಡಿಯ ಮಕ್ಕಳಿಗೆ ಶಿಕ್ಷಣದ ಹಾದಿಯ ತೋರುತ್ತಿರುವ ಮೆಘಾನೆಯ ಅನ್ವರ್ ಮಾಸ್ತರು!

Shivakumar by Shivakumar
November 27, 2021
in ಅಭಿಮತ, ಕರ್ನಾಟಕ
0
Share on WhatsAppShare on FacebookShare on Telegram

ಇದೊಂದು ಬೆಟ್ಟದ ಮೇಲೊಂದು ಮನೆಯ ಮಾಡಿದ ಕಥೆ. ಜನಸಂಚಾರವೇ ಸಾಹಸವಾದ ಬೆಟ್ಟದ ಮೇಲಿನ ಕುಗ್ರಾಮದ ಶಾಲೆಯ ಆವರಣದಲ್ಲೇ ವಾಸ್ತವ್ಯ ಹೂಡಿ, ಕಾಡಿನ ಮಕ್ಕಳಿಗೆ ಅಕ್ಷರದ ಬೆಳಕು ತೋರಿಸುತ್ತಿರುವ ಉತ್ಸಾಹಿ ಯುವ ಶಿಕ್ಷಕರೊಬ್ಬರ ಅಪರೂಪದ ಸಾಮಾಜಿಕ ಕಾಳಜಿಯ ಸಾಹಸಗಾಥೆ.

ADVERTISEMENT

ಹೌದು, ನಾಗರಿಕ ಸೌಲಭ್ಯ ವಂಚಿತ ಹಲವು ಹಳ್ಳಿಗಳನ್ನು ಹೊಂದಿರುವ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಉತ್ತರಕನ್ನಡ ಜಿಲ್ಲೆಯ ಭಟ್ಕಳ ಗಡಿ ಭಾಗದ ದುರ್ಗಮ ಕಾಡು-ಕಣಿವೆಯ ನಡುವೆ ಹೂತುಹೋಗಿರುವ ಮೆಘಾನೆ ಎಂಬ ಬೆಟ್ಟದ ಮೇಲಿನ ಊರಿನ ಶಾಲೆಯಲ್ಲಿ ಅಕ್ಷರ ಸೇವೆ ಸಲ್ಲಿಸುತ್ತಿರುವ ಅನ್ವರ್ ಎಂಬ ಯುವ ಶಿಕ್ಷಕರು, ಕಳೆದ ಐದೂವರೆ ವರ್ಷಗಳಿಂದ ಪುಟ್ಟ ಶಾಲೆಯ ಆವರಣದಲ್ಲೇ ವಾಸವಿದ್ದು ಮಕ್ಕಳಿಗೆ ಪಾಠಪ್ರವಚನ ಮಾಡುತ್ತಿದ್ದಾರೆ.

ಮೆಘಾನೆ ಎಂಬುದು ಇಡೀ ಶರಾವತಿ ಕಣಿವೆ ಪ್ರದೇಶದಲ್ಲೇ ಅತ್ಯಂತ ದುರ್ಗಮವಾದ ಪ್ರದೇಶ. ಸಮುದ್ರ ಮಟ್ಟದಿಂದ ಬರೋಬ್ಬರಿ 1600 ಅಡಿ ಎತ್ತರದಲ್ಲಿರುವ ಈ ಮೆಘಾನೆಗೆ ತಲುಪಲು ದ್ವಿಚಕ್ರ ವಾಹನದಲ್ಲಿ ಕೂಡ ಸಾಗಲು ಸಾಧ್ಯವಿಲ್ಲ. ಹಾಗಾಗಿ ಇಲ್ಲಿನ ನಿವಾಸಿಗಳು ಇಂದಿಗೂ ಕಾಲು ನಡಿಗೆಯಲ್ಲೇ, ಹಾದಿ ಸವೆಸಬೇಕು. ಫೋರ್ ವೀಲ್ ಡ್ರೈವ್ ನ ಜೀಪು ಮಾತ್ರ ಹರಸಾಹಸದಿಂದ ತಲುಪಬಹುದಾದ ಈ ಆರು ಕಿ.ಮೀ ದೂರದ ದುರ್ಗಮ ಹಾದಿಯಲ್ಲಿ ಸಾಮಾನ್ಯ ಸಂಚಾರ ಸಾಧ್ಯವೇ ಇಲ್ಲ ಎನ್ನಬಹುದಾದ ಕಡಿದಾದ ಮಣ್ಣಿನ ಹಾದಿ ಇದೆ.

ತಾಲೂಕು ಕೇಂದ್ರ ಸಾಗರದಿಂದ ಬರೋಬ್ಬರಿ 90 ಕಿ.ಮೀ ದೂರದ ಬೆಟ್ಟದ ತುತ್ತತುದಿಯಲ್ಲಿರುವ ಪುಟ್ಟ ಹಳ್ಳಿ ಮೆಘಾನೆಯಲ್ಲಿ ಒಂದು ಕುಟುಂಬ ಹೊರತುಪಡಿಸಿ ಉಳಿದವರೆಲ್ಲಾ ಕುಣಬಿ ಬುಡಕಟ್ಟು ಸಮುದಾಯದವರೇ ವಾಸವಾಗಿರುವುದು. ಹಳ್ಳಿಯಲ್ಲಿ ಒಟ್ಟು 36 ಮನೆಗಳಿದ್ದು, ಅಲ್ಲಿನ ಪ್ರಾಥಮಿಕ ಶಾಲೆಯಲ್ಲಿ 27 ಮಕ್ಕಳಿದ್ದಾರೆ. ಈ ಮಕ್ಕಳ ಮನೆಮಾತು ಮರಾಠಿ. ಹಾಗಾಗಿ ಈ ಊರಿಗೆ, ಊರಿನ ಶಾಲೆಗೆ ತಲುಪುವುದು ಮಾತ್ರವಲ್ಲ, ಮರಾಠಿ ಮನೆಮಾತಿನ ಈ ಕಾಡಿನ ಮಕ್ಕಳಿಗೆ, ಕನ್ನಡ ಶಾಲೆಯ ಕನ್ನಡ ಮಾಧ್ಯಮದಲ್ಲಿ ಕಲಿಸುವುದು ಕೂಡ ಸಾಹಸವೇ.

ವಾರ್ಷಿಕ ಸರಿಸುಮಾರು ಐದು ಸಾವಿರ ಮಿಮೀ ಮಳೆ ಸುರಿಯುವ ಈ ಪ್ರದೇಶದಲ್ಲಿ ಮೇನಿಂದ ಸೆಪ್ಟೆಂಬರ್ ವರೆಗೆ ಸುಸಜ್ಜಿತ ರಸ್ತೆಗಳಲ್ಲೇ ಓಡಾಟ ಮಾಡುವುದು ದುಸ್ತರ. ಇನ್ನು ಬೇಸಿಗೆ ಮಳೆಗಾಲವೆನ್ನದೆ ವರ್ಷದ ಮುನ್ನೂರೈವತ್ತು ದಿನವೂ ಬೈಕ್ ಪ್ರಮಾಣವೂ ಜೀವಕ್ಕೆ ಸಂಚಕಾರ ತರಬಹುದಾದಷ್ಟು ಅಪಾಯಕಾರಿ ಎನ್ನುವಂತಹ ಕಡಿದಾದ ರಸ್ತೆಯಲ್ಲಿ ಶಾಲೆಗೆ ಹೋಗಿ ಪಾಠ ಮಾಡುವ ಶಿಕ್ಷಕರು ಎಲ್ಲಿದ್ದಾರೆ? ಅದೇ ಹಳ್ಳಿಯಲ್ಲೇ ವಾಸ್ತವ್ಯ ಹೂಡೋಣವೆಂದರೆ, ಅಲ್ಲಿ ಬಾಡಿಗೆ ಕೊಡುವಂತಹ ಮನೆಗಳೂ ಇಲ್ಲ! ಹಾಗಾಗಿ ಶಾಲೆ ಇದ್ದರೂ, 25ಕ್ಕೂ ಹೆಚ್ಚು ಕಲಿಯುವ ಆಸಕ್ತಿಯ ಮಕ್ಕಳಿದ್ದರೂ ಆ ಶಾಲೆಗೆ ಶಿಕ್ಷಕರು ಬರುವುದೇ ವಿರಳವಾಗಿತ್ತು.

ಅಂತಹ ಸ್ಥಿತಿಯಲ್ಲಿ ಕಾಡಿನ ಮಕ್ಕಳ ಪಾಲಿಗೆ ಅಕ್ಷರದ ಬೆಳಕು ತೋರುವ ಗುರುವಾಗಿ ಬಂದವರು ಕೆ ಆರ್ ಅನ್ವರ್. 2016ರ ಮಾರ್ಚ್ನಲ್ಲಿ ಹೊಸದಾಗಿ ಶಿಕ್ಷಕ ವೃತ್ತಿಗೆ ನೇಮಕಗೊಂಡು ಆ ಕುಗ್ರಾಮಕ್ಕೆ ಬಂದ ಅವರಿಗೆ ಮೊದಲು ಆಘಾತವಾಗಿದ್ದು ನಿಜ. ಮಲೆನಾಡಿನ ತೀರ್ಥಹಳ್ಳಿಯ ಮೂಲದವರಾದ ಅವರಿಗೆ ಮಳೆ ಮತ್ತು ಕಾಡು ಹೊಸದೇನಾಗಿರಲಿಲ್ಲ. ಆದರೆ, ಆ ಊರಿಗೆ ತಲುಪುವ ದುರ್ಗಮ ಹಾದಿ ಮತ್ತು ಅಲ್ಲಿನ ಕಾಡುಪ್ರಾಣಿಗಳ ಅಪಾಯ ಅವರ ಆಘಾತಕ್ಕೆ ಕಾರಣವಾಗಿತ್ತು. ಆದರೆ ಹೊಸದಾಗಿ ಕೆಲಸಕ್ಕೆ ಸೇರಿದ್ದ ಉತ್ಸಾಹಿ ಯುವಕ ಅನ್ವರ್ ಅವರಿಗೆ, ಆ ಊರಿಗೆ ತಲುಪಿದ ಮೇಲೆ, ಹತ್ತು ಕಿಮೀ ದೂರದ ನಾಗವಳ್ಳಿ ಅಥವಾ 35 ಕಿಮೀ ದೂರದ ಭಟ್ಕಳದಲ್ಲಿ ಮನೆಮಾಡಿಕೊಂಡು ನಿತ್ಯ ಶಾಲೆಗೆ ಓಡಾಡಿ, ಹೈರಾಣಾಗುವ ಬದಲು ತಾನೇಕೆ ಆ ಬುಡಕಟ್ಟು ಜನರ ಹಾಡಿಯಲ್ಲೇ ಒಂದು ಪುಟ್ಟ ಗುಡಿಸಲು ಮಾಡಿಕೊಂಡು ದಿನವಿಡೀ ಮಕ್ಕಳೊಂದಿಗೆ ಕಾಲಕಳೆಯಬಾರದು ಎಂಬ ಯೋಚನೆ ಬಂದಿತು.

ಆ ಯೋಚನೆಗೆ ಊರಿನ ಗ್ರಾಮಸ್ಥರೂ ಕೈಜೋಡಿಸಿದರು. ಶಾಲೆಯ ಆವರಣದಲ್ಲೇ ತಮ್ಮೂರಿನ ಶಿಕ್ಷಕರಿಗೆ ಒಂದು ಪುಟ್ಟ ಶೆಡ್ ಮಾಡಿಕೊಟ್ಟರು. ಶಿಕ್ಷಕ ಅನ್ವರ್ ಪಾಲಿಗೆ ಶಾಲೆಯೇ ಮನೆಯೂ ಆಯಿತು, ಜ್ಞಾನದೇಗುಲವೂ ಆಯಿತು. ಕಗ್ಗಾಡಿನ ನಡುವಿನ ಬುಡಕಟ್ಟು ಸಮುದಾಯದ ಹಾಡಿನ ಮಕ್ಕಳ ಪಾಲಿಗೆ ಜ್ಞಾನದ ಬೆಳಕು ತೆರೆದುಕೊಂಡಿತು.

ಹಾಗಾಗಿ ಕಳೆದ ಐದೂವರೆ ವರ್ಷಗಳಿಂದ ಅನ್ವರ್ ಊರಿನ ಜನರೊಂದಿಗೆ ಬೆರೆತು, ಊರಿನ ಜನರ ಪಾಲಿನ ಮೆಚ್ಚಿನ ಶಿಕ್ಷಕರಾಗಿದ್ದಾರೆ. ಅವರಿಗೆ ಹಲವು ವಿಷಯಗಳಲ್ಲಿ ಮಾರ್ಗದರ್ಶಕರೂ ಆಗಿದ್ದಾರೆ. ಆ ಅಭಿಮಾನ ಮತ್ತು ಪ್ರೀತಿಯ ಕಾರಣಕ್ಕೇ ಗ್ರಾಮಸ್ಥರು, ಇದೀಗ ವಿವಾಹಿತರಾಗಿರುವ ತಮ್ಮೂರಿನ ಶಿಕ್ಷಕರು ವರ್ಗಾವಣೆ ಪಡೆದುಕೊಂಡು ಬೇರೆ ಕಡೆ ಹೋದಾರು ಎಂಬ ಆತಂಕದಲ್ಲಿದ್ದಾರೆ.

“ನಮ್ಮೂರಿಗೆ ಶಿಕ್ಷಕರು ಬರುವುದಕ್ಕೇ ಹಿಂಜರಿಯುತ್ತಾರೆ. ಹಾಗಾಗಿ ಸದ್ಯ ಶಾಲೆಯಲ್ಲಿ ಎರಡು ಶಿಕ್ಷಕರ ಸ್ಥಾನಗಳು ಮಂಜೂರಾಗಿದ್ದರೂ, ಅನ್ವರ್ ಶಿಕ್ಷಕರು ಮಾತ್ರ ಇದ್ದು ಒಂದು ರೀತಿಯಲ್ಲಿ ಏಕೋಪಾಧ್ಯಾಯ ಶಾಲೆಯಂತಾಗಿದೆ. ಮಳೆಗಾಲದಲ್ಲಂತೂ ಆರೇಳು ದಶಕಗಳಿಂದ ಇಲ್ಲಿಯೇ ವಾಸವಾಗಿರುವ ನಮಗೇ ಕಷ್ಟವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಮ್ಮ ಶಿಕ್ಷಕರು ನಮ್ಮೊಂದಿಗೆ ಇಲ್ಲಿಯೇ ಇದ್ದು ಶನಿವಾರ, ಭಾನುವಾರವೆನ್ನದೆ ಪೋಷಕರು ಕೇಳಿದರೆ ಮಕ್ಕಳಿಗೆ ಯಾವಾಗಲೂ ಪಾಠ ಮಾಡುತ್ತಾ, ಶಾಲಾ ಅವಧಿಯ ನಂತರೂ ಮಕ್ಕಳಿಗೆ ಕಲಿಸುತ್ತಾ ಇದ್ದಾರೆ. ಅವರು ಇಲ್ಲಿಗೆ ಬಂದ ಐದೂವರೆ ವರ್ಷದಲ್ಲಿ ಬೇಸಿಗೆ ರಜೆ ಹೊರತುಪಡಿಸಿ ಅವರು ಒಂದೇ ಒಂದು ದಿನ ರಜೆ ಹಾಕಿದ ಉದಾಹರಣೆ ಕೂಡ ಇಲ್ಲ. ಅಂತಹ ಶಿಕ್ಷಕರು ಸಿಕ್ಕಿರುವುದು ನಮ್ಮಂಥ ಅಕ್ಷರ ಲೋಕದಿಂದ ದೂರವೇ ಉಳಿದಿದ್ದ ಸಮುದಾಯದ ಪುಣ್ಯವೇ ಸರಿ” ಎಂಬ ಸ್ಥಳೀಯ ಯುವ ಮುಖಂಡ ಓಮೇಂದ್ರ ಹೇಳುತ್ತಾರೆ. ಅವರ ಆ ಮಾತುಗಳು ಅನ್ವರ್ ಅವರ ಕರ್ತವ್ಯ ಪ್ರಜ್ಞೆಗೆ ಮತ್ತು ಜನಪರ ಕಾಳಜಿಗೆ ಸಾಕ್ಷಿ.

ಸಕಲ ಸೌಲಭ್ಯ, ಸವಲತ್ತುಗಳಿರುವ ನಗರ, ಪಟ್ಟಣಗಳಲ್ಲೇ ತಮ್ಮ ಇಡೀ ವೃತ್ತಿ ಜೀವನವನ್ನು ಕಳೆಯಬೇಕು ಎಂದು ಬಯಸಿ ಹಳ್ಳಿಗಳತ್ತ ಬೆನ್ನು ಮಾಡುವ ಶಿಕ್ಷಕರ ನಡುವೆ, ಯುವ ಶಿಕ್ಷಕ ಅನ್ವರ್ ಅವರು ಈ ಬದ್ಧತೆ ಅಪರೂಪದ್ದು. ಬಡ್ಡಿ ವ್ಯವಹಾರ, ರಿಯಲ್ ಎಸ್ಟೇಟ್ ಬ್ಯುಸಿನೆಸ್, ರಾಜಕಾರಣಿಗಳ ಚಮಚಾಗಿರಿ, ಗುಂಪುಗಾರಿಕೆ ರಾಜಕಾರಣದ ನಡುವೆ ನೈಜ ಶಿಕ್ಷಕರು ಕಳೆದುಹೋಗುತ್ತಿರುವ ದಿನಗಳಲ್ಲಿ, ಅನ್ವರ್ ಶಿಕ್ಷಕರು ಮಾದರಿಯಾಗಿ ನಿಂತಿದ್ದಾರೆ. ಅದರಲ್ಲೂ ತೀರ್ಥಹಳ್ಳಿಯಂತಹ ಪಟ್ಟಣದಿಂದ ಬಂದು ಒಂದು ಬೆಂಕಿ ಪೊಟ್ಟಣ ಬೇಕಾದರೂ ಹತ್ತು ಕಿಮೀ ದೂರದ ಊರಿಗೆ ಸಾಗಬೇಕಾದ ಮತ್ತು ಹಾಗೆ ಸಾಗುವ ದಾರಿ ಜೀವಕ್ಕೇ ಅಪಾಯ ತರಬಹುದಾದಷ್ಟು ಅಪಾಯಕಾರಿಯಾಗಿರುವ ಜಾಗದಲ್ಲಿ ನೆಲೆ ನಿಂತು, ಅಲ್ಲಿಯೇ ಮನೆ ಮಾಡಿ ಸೇವೆ ಸಲ್ಲಿಸುತ್ತಿರುವುದು ವಿಶೇಷ.

ಇಷ್ಟಾಗಿಯೂ ಅವರ ಈ ಬದ್ಧತೆಯ ಕುರಿತ ಮಾತನಾಡಿಸಿದರೆ, “ಅದರಲ್ಲೇನಿದೆ ಸರ್, ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ಎಲ್ಲರೂ ಕಾಡು, ಮೇಡು ಎಂದು ಸುರಕ್ಷಿತ ಜಾಗಗಳಲ್ಲೇ, ತಮ್ಮ ಅನುಕೂಲ ನೋಡಿಕೊಂಡರೆ, ಇಂತಹ ಮಕ್ಕಳಿಗೆ ಶಿಕ್ಷಣ ಕೊಡುವವರು ಯಾರು?” ಎಂದು ಪ್ರಶ್ನಿಸುತ್ತಾರೆ. ಅದು ಅನ್ವರ್ ಅವರಿಗೆ ಇರುವ ಸ್ಪಷ್ಟತೆ ಮತ್ತು ಸರಳತೆ. ಇಂತಹ ಬದ್ಧತೆಯ ಮತ್ತು ಸ್ಪಷ್ಟತೆಯ ಸೇವಾ ಮನೋಭಾವದ ಸರಳ ಶಿಕ್ಷಕರು ಮಲೆನಾಡಿನ ಎಲ್ಲ ಮಕ್ಕಳಿಗೂ ಸಿಗುವಂತಾದರೆ ಎಷ್ಟು ಚಂದ ಅಲ್ಲವೆ?

Previous Post

ಸಂವಿಧಾನ ದಿನಾಚರಣೆ ಮತ್ತು ಮೋದಿ ಆಡಳಿತದಲ್ಲಿ ಸಂವಿಧಾನಕ್ಕೆ ಸಿಗುತ್ತಿರುವ ಗೌರವ

Next Post

ಬೆಂಗಳೂರಿನಲ್ಲಿ ಚುನಾವಣಾ ಚಾಣಕ್ಯ ಪ್ರಶಾಂತ್‌ ಕಿಶೋರ್‌ : ಹೊಸ ಪಕ್ಷ ಕಟ್ಟಲು ತೆರೆಮರೆಯಲ್ಲಿ ಸಿದ್ದತೆ ಶುರುಮಾಡಿಕೊಂಡರೇ ಮಾಜಿ ಸಿಎಂ ಬಿಎಸ್‌ವೈ.!?

Related Posts

ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..
Top Story

ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

by ಪ್ರತಿಧ್ವನಿ
May 2, 2026
0

ಬೆಂಗಳೂರು : ಬೆಳಂಬೆಳಿಗ್ಗೆ ಪಶ್ಚಿಮ ಬಂಗಾಳ ಮೂಲದ ದಂಪತಿಗಳ ಮೇಲೆ ಪುಂಡರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ನಗರದ ಹೃದಯ ಭಾಗವಾಗಿರುವ ಎಲೆಕ್ಟ್ರಾನಿಕ್ ಸಿಟಿಯ ಸಮೀಪದ ಬೆಟ್ಟದಾಸನಪುರದಲ್ಲಿ ರೋಡ್...

Read moreDetails
ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್   

ಮೊದಲ ದಿನವೇ ಕೆಡಿ ಭರ್ಜರಿ ಓಪನಿಂಗ್:  ಮೊದಲ‌ ದಿನದ ಕಲೆಕ್ಷನ್ ಎಷ್ಟು ?

May 1, 2026
ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್   

ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್  

May 1, 2026
ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

May 1, 2026
ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

May 1, 2026
Next Post
ಬೆಂಗಳೂರಿನಲ್ಲಿ ಚುನಾವಣಾ ಚಾಣಕ್ಯ ಪ್ರಶಾಂತ್‌ ಕಿಶೋರ್‌ : ಹೊಸ ಪಕ್ಷ ಕಟ್ಟಲು ತೆರೆಮರೆಯಲ್ಲಿ ಸಿದ್ದತೆ ಶುರುಮಾಡಿಕೊಂಡರೇ ಮಾಜಿ ಸಿಎಂ ಬಿಎಸ್‌ವೈ.!?

ಬೆಂಗಳೂರಿನಲ್ಲಿ ಚುನಾವಣಾ ಚಾಣಕ್ಯ ಪ್ರಶಾಂತ್‌ ಕಿಶೋರ್‌ : ಹೊಸ ಪಕ್ಷ ಕಟ್ಟಲು ತೆರೆಮರೆಯಲ್ಲಿ ಸಿದ್ದತೆ ಶುರುಮಾಡಿಕೊಂಡರೇ ಮಾಜಿ ಸಿಎಂ ಬಿಎಸ್‌ವೈ.!?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada