ಮಹಾರಾಷ್ಟ್ರ : ಎನ್‌ಸಿಪಿ ಮುಖ್ಯಸ್ಥನ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಘೋಷಿಸಿದ್ದ ಶರದ್ ಪವಾರ್ ತಮ್ಮ ರಾಜೀನಾಮೆ ವಾಪಸ್ ಪಡೆದಿದ್ದಾರೆ. ಶರದ್ ಪವಾರ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಸಮಿತಿ ತಿರಸ್ಕರಿಸಿತ್ತು.

ಪಕ್ಷಕ್ಕೆ ಹೊಸ ನಾಯಕನ ಅವಶ್ಯಕತೆಯಿದೆ ಎಂದಿದ್ದ ಶರದ್ ಪವಾರ್ ರಾಜೀನಾಮೆ ನೀಡುತ್ತಿದ್ದಂತೆಯೇ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಶರದ್ ಪವಾರ್ ರಾಜೀನಾಮೆ ಅಂಗೀಕರಿಸಲು ಪಕ್ಷದ ಸಮಿತಿ ಕೂಡ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ಶರದ್ ಪವಾರ್ ತಮ್ಮ ನಿರ್ಧಾರ ಬದಲಿಸಿದ್ದಾರೆ.
ರಾಜೀನಾಮೆ ವಾಪಸ್ ಪಡೆದ ಬಳಿಕ ಮಾತನಾಡಿದ ಅವರು, ನನ್ನ ಹಿಂದಿನ ನಿರ್ಧಾರವನ್ನು ನಾನು ಹಿಂಪಡೆಯುತ್ತಿದ್ದೇನೆ. ನಾನು ಎನ್‌ಸಿಪಿ ಪಕ್ಷದ ಅಧ್ಯಕ್ಷನಾಗಿ ಮುಂದುವರಿಯುತ್ತೇನೆ ಎಂದು ಹೇಳಿದ್ದಾರೆ.






