• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಶಕ್ತಿ ಯೋಜನೆ ಮತ್ತು ಮಹಿಳಾ ಶ್ರಮಶಕ್ತಿಯ ಮುಂಚಲನೆ- ಭಾಗ 3

ನಾ ದಿವಾಕರ by ನಾ ದಿವಾಕರ
July 5, 2023
in ಅಂಕಣ, ಅಭಿಮತ
0
ಶಕ್ತಿ ಯೋಜನೆ ಮತ್ತು ಮಹಿಳಾ ಶ್ರಮಶಕ್ತಿಯ ಮುಂಚಲನೆ- ಭಾಗ 1
Share on WhatsAppShare on FacebookShare on Telegram

ಆರ್ಥಿಕತೆ ಮತ್ತು ಶ್ರಮ ಚಲನೆಯ ಮಾರ್ಗಗಳು

ADVERTISEMENT

ಇಲ್ಲಿ ನಾವು ಗ್ರಹಿಸಬೇಕಾದ ಸೂಕ್ಷ್ಮ ಅಂಶವೆಂದರೆ, ಬಂಡವಾಳಶಾಹಿ ಆರ್ಥಿಕತೆಯಲ್ಲಿ ಮಾನವ ಶ್ರಮವೂ ಒಂದು ಸರಕಿನಂತೆಯೇ ವ್ಯವಹರಿಸಲ್ಪಡುತ್ತದೆ. ಕೊಳ್ಳಬಹುದಾದ, ಬಿಕರಿ ಮಾಡಬಹುದಾದ, ಗುತ್ತಿಗೆ ನೀಡಬಹುದಾದ, ನಿರಾಕರಿಸಬಹುದಾದ ಹಾಗೂ ಖರ್ಚಿಲ್ಲದೆ ಉಚಿತವಾಗಿ ಬಳಸಿಕೊಳ್ಳಬಹುದಾದ ಒಂದು ಸರಕಿನಂತೆ ಮಾನವ ಶ್ರಮವನ್ನೂ ಮಾರುಕಟ್ಟೆಯಲ್ಲಿ ಅಳೆಯಲಾಗುತ್ತದೆ. ಈ ಕೊಳ್ಳುವ-ಬಿಕರಿಯಾಗುವ ಚೌಕಾಸಿ ವ್ಯವಹಾರದಲ್ಲಿ ಸಹಜವಾಗಿ ಶ್ರಮಶಕ್ತಿಯೂ ಸಹ ಶ್ರಮವಿಭಜನೆಯೊಂದಿಗೇ ಭಿನ್ನ ನೆಲೆಗಳಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುತ್ತದೆ. ಮಾರುಕಟ್ಟೆ ಆರ್ಥಿಕತೆಯ ನಿಯಮಗಳಿಗನುಸಾರವಾಗಿ ಅಗ್ಗದ ಶ್ರಮ , ಅಂದರೆ ಕಡಿಮೆ ಕೂಲಿಯ/ವೇತನದ ದುಡಿಮೆ ಹೆಚ್ಚು ಬಿಕರಿಯಾಗುತ್ತದೆ. ಮಾರುಕಟ್ಟೆ ಔದ್ಯಮಿಕ ಶಕ್ತಿಗಳಿಗೆ ಮಹಿಳೆಯರೇ ಅಗ್ಗದ ಶ್ರಮದ ಪರಿಚಾರಕರಾಗಿ ಕಂಡುಬರುತ್ತಾರೆ. ಕಡಿಮೆ ಕೂಲಿಗೆ ಹೆಚ್ಚಿನ ಅವಧಿ ದುಡಿಸಿಕೊಳ್ಳಬಹುದು ಎಂಬ ಒಂದು ಮಾರುಕಟ್ಟೆಯ ನಂಬಿಕೆ ಇಲ್ಲಿ ಕಾರ್ಯಗತವಾಗುತ್ತದೆ.

ಹಾಗಾಗಿಯೇ ಗಾರ್ಮೆಂಟ್‌ ಉದ್ದಿಮೆಗಳಲ್ಲಿ, ಸಣ್ಣ ಕೈಗಾರಿಕೆಗಳಲ್ಲಿ ಹಾಗೂ ನಿತ್ಯಬಳಕೆ ವಸ್ತುಗಳನ್ನು ಉತ್ಪಾದಿಸುವ ಔದ್ಯಮಿಕ ವಲಯಗಳಲ್ಲಿ ಮಹಿಳಾ ಕಾರ್ಮಿಕರ ಸಂಖ್ಯೆ ಹೆಚ್ಚಾಗಿರುತ್ತದೆ. ಈ ಮಹಿಳಾ ಕಾರ್ಮಿಕರು ತಮ್ಮ ನೌಕರಿಯನ್ನು ಆಯ್ಕೆ ಮಾಡುವಾಗ ತಾವು ಕೆಲಸದ ಜಾಗ ತಲುಪಲು ಕ್ರಮಿಸಬೇಕಾದ ದೂರವನ್ನು ಮತ್ತು ತಗಲುವ ಸಾರಿಗೆ ವೆಚ್ಚವನ್ನು ಗಣನೆಗೆ ತೆಗೆದುಕೊಂಡೇ ನೌಕರಿಗೆ ಸೇರಿಕೊಳ್ಳುತ್ತಾರೆ. ಬಸ್‌ ಪ್ರಯಾಣದ ಖರ್ಚನ್ನು ಉಳಿಸುವ ಸಲುವಾಗಿಯೇ ಐದಾರು ಕಿಲೋಮೀಟರ್‌ ನಡೆದೇ ಹೋಗುವ ಮಹಿಳಾ ಗಾರ್ಮೆಂಟ್‌ ಕಾರ್ಮಿಕರ ದಂಡವನ್ನು ಇತ್ತೀಚಿನವರೆಗೂ ಬೆಂಗಳೂರು ಸುತ್ತಮುತ್ತ ಕಾಣಬಹುದಿತ್ತು. ತಮ್ಮಲ್ಲಿ ದುಡಿಮೆಯ ಶಕ್ತಿ ಇದ್ದರೂ ಆ ಶ್ರಮಶಕ್ತಿಯ ಮೂಲಕ ಕುಟುಂಬಕ್ಕೆ ಆದಾಯ ಗಳಿಸುವ ಮಹಿಳೆಗೆ ಪ್ರಯಾಣದ ಅಂತರ ಮತ್ತು ಖರ್ಚು ಎರಡೂ ಸಹ ತೊಡಕಾಗಿ ಪರಿಣಮಿಸುತ್ತದೆ.  ಕುಟುಂಬಗಳಲ್ಲೂ ಸಹ ಸುರಕ್ಷತೆಯ ದೃಷ್ಟಿಯಿಂದ ಬಹುದೂರದ ಕೆಲಸದ ಜಾಗಗಳಿಗೆ ಪ್ರಯಾಣ ಮಾಡುವುದರಿಂದ ಮಹಿಳೆಯರನ್ನು ನಿರ್ಬಂಧಿಸುವುದೂ ಸಹ ಸಾಮಾನ್ಯವಾಗಿ ಕಾಣುವ ದೃಶ್ಯ.

ಕಾಂಗ್ರೆಸ್‌ ಸರ್ಕಾರದ ಶಕ್ತಿ ಯೋಜನೆ ಈ ಶ್ರಮಿಕ ಮಹಿಳೆಯರಿಗೆ ಮುಕ್ತ ಸಾಮಾಜಿಕ ಚಲನೆಯ ಅವಕಾಶವನ್ನು ನೀಡಿರುವುದೇ ಅಲ್ಲದೆ ಅವರ ಶ್ರಮಶಕ್ತಿಯ ಮಾರುಕಟ್ಟೆಯನ್ನೂ ವಿಸ್ತರಿಸಲು ಅನುಕೂಲಕರವಾಗಿದೆ. ಮಹಿಳಾ ಸಬಲೀಕರಣವನ್ನು ಸಾಮಾಜಿಕ-ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರವೇ ನೋಡದೆ, ಆರ್ಥಿಕ ನೆಲೆಯಲ್ಲೂ ವಿಶ್ಲೇಷಿಸಿದಾಗ, ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ಮಹಿಳೆಯ ಸಾಮಾಜಿಕ ಚಲನೆ ಮಹತ್ವ ಪಡೆದುಕೊಳ್ಳುತ್ತದೆ. ಈ ಸಾಮಾಜಿಕ ಭೌತಿಕ ಚಲನೆಗೆ ಅಡ್ಡಿಯಾಗುವುದೇ ಬಡತನ-ದಾರಿದ್ರ್ಯ ಮತ್ತು ಸಾಂಪ್ರದಾಯಿಕ ಸಮಾಜದ ನಿಬಂಧನೆಗಳು. ಈ ಕಾರಣಗಳಿಂದಲೇ ಮಹಿಳೆಯ ಶ್ರಮಶಕ್ತಿಯೂ ಬಳಕೆಯಾಗದೆ ವ್ಯರ್ಥವಾಗುತ್ತದೆ.  ತನ್ನ ಸ್ವಂತ ನಿರ್ಧಾರದ ಮೇಲೆ ತಾನು ಇಚ್ಚಿಸುವ ಕೆಲಸವನ್ನು ಆಯ್ಕೆ ಮಾಡುವ ತನ್ಮೂಲಕ ತನ್ನೊಳಗಿನ ಶ್ರಮಶಕ್ತಿಯನ್ನು ವ್ಯಯಿಸಿ ಸ್ವಂತ ಸಂಪಾದನೆಯಲ್ಲಿ ತೊಡಗುವ ಮಹಿಳೆಗೆ ಭೌತಿಕ ಚಲನೆಯ ಮುಕ್ತ ಅವಕಾಶಗಳು ಸಾಮಾಜಿಕ ಮೇಲ್‌ ಚಲನೆಯ ಅವಕಾಶಗಳನ್ನೂ ಕಲ್ಪಿಸುತ್ತದೆ. ಈ ಚಲನೆಯನ್ನು ಪಡೆದ ಮಹಿಳೆಯರು ಗ್ರಾಮೀಣ ಪ್ರದೇಶಗಳಲ್ಲಿ ಹಲವು ಉದ್ಯಮಗಳಲ್ಲಿ, ಉದ್ಯೋಗಗಳಲ್ಲಿ ತೊಡಗುವ ಮೂಲಕ ತಮ್ಮ ಸಾಮಾಜಿಕ-ಸಾಂಸ್ಕೃತಿಕ ಸ್ಥಿತಿಗತಿಗಳನ್ನು ಉತ್ತಮಪಡಿಸಿಕೊಂಡಿರುವುದನ್ನು ಗ್ರಾಮೀಣ ಪ್ರದೇಶಗಳ ಮಹಿಳಾ ಸಂಘಟನೆಗಳ ಮೂಲಕ ಕಾಣಬಹುದು.

ಶಕ್ತಿ ಯೋಜನೆ ಈ ಸಾಮಾಜಿಕ ಚಲನೆಗೆ ಒಂದು ಅವಕಾಶವನ್ನು ಕಲ್ಪಿಸಿದೆ. ಇದನ್ನು ʼ ಉಚಿತ ʼಪ್ರಯಾಣ ಎಂದು ಬಣ್ಣಿಸುವುದಕ್ಕಿಂತಲೂ ಮಹಿಳೆಯ ಶ್ರಮ ಮತ್ತು ಶ್ರಮಶಕ್ತಿಯ ಮುಂಚಲನೆಗೆ ಒದಗಿಸಲಾಗಿರುವ ಅವಕಾಶ ಎಂದು ಭಾವಿಸಿದರೆ ಮಹಿಳಾ ಸಬಲೀಕರಣವನ್ನು ವಿಭಿನ್ನ ನೆಲೆಯಲ್ಲಿ ವ್ಯಾಖ್ಯಾನಿಸಲು ಸಾಧ್ಯ. ಮತ್ತೊಂದು ಆಯಾಮದಿಂದ ನೋಡಿದಾಗ ಮಹಿಳೆಯ ಶ್ರಮಶಕ್ತಿಗೆ ಈ ಮುಂಚಲನೆಯನ್ನು ನೀಡುವ ಹೊಣೆ ಸರ್ಕಾರದ ಮೇಲಿರುತ್ತದೆ. ಬಂಡವಾಳಶಾಹಿ ಆರ್ಥಿಕತೆ ಇದನ್ನು ಶಾಸನಬದ್ಧವಾಗಿ ಅಥವಾ ಹಣಕಾಸು ಆಡಳಿತ ನೀತಿಗಳ ಮೂಲಕ ಈಡೇರಿಸುವ ಅವಕಾಶವನ್ನು ನೀಡುವುದಿಲ್ಲ. ಸಮ ಸಮಾಜದ ಕನಸು ಹೊತ್ತಿದ್ದರೂ ಭಾರತದ ಸಂವಿಧಾನದ ಬಳಕೆಯಾಗುತ್ತಿರುವುದು ಅಸಮಾನತೆಯನ್ನು ಹೆಚ್ಚಿಸುವ ಬಂಡವಾಳಶಾಹಿ ಆರ್ಥಿಕ ನೀತಿಗಳ ಅನುಷ್ಟಾನಕ್ಕೆ ಎನ್ನುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಈ ಆರ್ಥಿಕ ನೀತಿಗಳು ಮಹಿಳಾ ಸಬಲೀಕರಣವನ್ನು ಮೇಲ್ಪದರದ-ಮೇಲ್ವರ್ಗದ ಸಮಾಜಕ್ಕೆ ಮೀಸಲಾಗಿರಿಸುತ್ತದೆ. ತಳಮಟ್ಟದ ಅವಕಾಶವಂಚಿತ ಮಹಿಳಾ ಸಮುದಾಯವು ಅಭಿವೃದ್ಧಿ ಪಥದಿಂದ ದೂರವೇ ಉಳಿಯುತ್ತದೆ ಅಥವಾ ಅಂಚಿಗೆ ತಳ್ಳಲ್ಪಡುತ್ತದೆ.

ಈ ಕೊರತೆಯನ್ನು ಆಡಳಿತ-ಹಣಕಾಸು ನೀತಿಗಳ ಮೂಲಕ ನೀಗಿಸಲು ಸಾಧ್ಯವಾಗದ ಕಾರಣವೇ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಮಹಿಳೆಯರಿಗಾಗಲೀ, ಇತರ ಯಾವುದೇ ಅವಕಾಶವಂಚಿತರಿಗಾಗಲೀ, ಕೆಲವು ಸವಲತ್ತುಗಳನ್ನು ಒದಗಿಸುವ ಮೂಲಕ ಅಸಮಾನತೆಯ ಕಂದರವನ್ನು ಕಡಿಮೆ ಮಾಡುವ ಪ್ರಯತ್ನಗಳನ್ನು ಮಾಡಲಾಗುತ್ತದೆ. ಕಲ್ಯಾಣ ರಾಜ್ಯ ಪರಿಕಲ್ಪನೆಯ ಒಂದು ಭಾಗವಾಗಿ ರೂಪುಗೊಳ್ಳುವ ಈ ಆರ್ಥಿಕ ನೀತಿಗಳು ಮಹಿಳೆಯ ಶ್ರಮಶಕ್ತಿಗೆ ಹೆಚ್ಚಿನ ಚಾಲನೆ ನೀಡಲು ಕೆಲಸದ ಜಾಗಗಳಲ್ಲೂ ಕೆಲವು ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗುತ್ತವೆ. ರಾಜ್ಯ ಸರ್ಕಾರ ಘೋಷಿಸಿರುವ ಶಕ್ತಿ ಯೋಜನೆಯೂ ಅಂತಹುದೇ ಒಂದು ಸಕಾರಾತ್ಮಕ ಎನ್ನಬಹುದಾದ ಕ್ರಮವಾಗಿದ್ದು, ಇದು ಮಹಿಳೆಗೆ, ಆಕೆಯ ಶ್ರಮ ಮತ್ತು ಶ್ರಮಶಕ್ತಿಗೆ ಮುಂಚಲನೆಯನ್ನು ನೀಡುವ ಒಂದು ಸಾಧನವಾಗಿದೆ. ಈ ಕ್ರಮದಿಂದ ಮುಂಬರುವ ದಿನಗಳಲ್ಲಿ ದುಡಿಮೆಯ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ಎಷ್ಟು ಹೆಚ್ಚಾಗುತ್ತದೆ ಎಂದು ಕಾದು ನೋಡಬೇಕಿದೆ.

ಶಕ್ತಿ ಯೋಜನೆಯ ಹಿಂದೆ ಮುಂದೆ

ಕಾಂಗ್ರೆಸ್‌ ಸರ್ಕಾರ ಮಹಿಳೆಯರಿಗೆ ಪ್ರಯಾಣದ ಸವಲತ್ತು ನೀಡುವುದರಿಂದ ರಾಜ್ಯ ಸಾರಿಗೆ ಸಂಸ್ಥೆಗಳು ದೀವಾಳಿಯಾಗುತ್ತವೆ, ಸರ್ಕಾರದ ಬೊಕ್ಕಸ ಬರಿದಾಗುತ್ತದೆ ಎಂಬ ಆಪಾದನೆಗಳನ್ನು  ಪ್ರಾರಂಭಿಕ ಬೆಳವಣಿಗೆಗಳು ಅಲ್ಲಗಳೆದಿವೆ. ಶಕ್ತಿ ಯೋಜನೆ ಜಾರಿಯಾದ ನಂತರದಲ್ಲಿ ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳ ವರಮಾನದಲ್ಲಿ ಹೆಚ್ಚಳ ಕಂಡುಬಂದಿದ್ದು, ಸರಾಸರಿ 25 ಲಕ್ಷ ಪ್ರಯಾಣಿಕರು ಹೆಚ್ಚಾಗಿರುವುದು ವರದಿಯಾಗಿದೆ.  ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ಸಂಸ್ಥೆಗಳ ಆದಾಯದಲ್ಲಿ ಅಪಾರ ಹೆಚ್ಚಳವಾಗಿರುವುದೇ ಅಲ್ಲದೆ ಈ ಸಂಸ್ಥೆಗಳ ನಷ್ಟದ ಭಾರವನ್ನು ತಗ್ಗಿಸಿರುವುದು ವರದಿಯಾಗಿದೆ. ಈ ವರಮಾನ ಹೆಚ್ಚಳ ಮತ್ತು ಹೆಚ್ಚಿನ ಪ್ರಯಾಣಿಕರ ಸಂಖ್ಯೆ ಶಾಶ್ವತವಾಗಿ ಒಂದೇ ಮಟ್ಟದಲ್ಲಿರುವುದಿಲ್ಲ ಎಂಬ ವಾಸ್ತವವನ್ನು ಪರಿಗಣಿಸಿಯೇ ನೋಡಬಹುದಾದರೆ, ಶಕ್ತಿ ಯೋಜನೆ ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ಸಂಚಾರ ಸ್ವಾತಂತ್ರ್ಯವನ್ನು ಕಲ್ಪಿಸಿರುವುದು ಸತ್ಯ ಎನಿಸುತ್ತದೆ.

ಮಹಿಳೆಯರ ಸಂಚಾರ ಹೆಚ್ಚಾಗುತ್ತಿರುವಂತೆಯೇ ಸಾರಿಗೆ ಸಂಸ್ಥೆಗಳು ತಮ್ಮ ದಿನನಿತ್ಯದ ಟ್ರಿಪ್‌ಗಳ ಸಂಖ್ಯೆಯನ್ನೂ ಹೆಚ್ಚಿಸಿವೆ.  ಪ್ರತಿದಿನ 22 ಸಾವಿರ ಟ್ರಿಪ್‌ ಓಡಾಡುತ್ತಿದ್ದ ಸಾರಿಗೆ ಬಸ್ಸುಗಳು ಈಗ 23 ಸಾವಿರ ಟ್ರಿಪ್‌ಗಳಿಗೆ ಹೆಚ್ಚಿಸಿಕೊಂಡಿವೆ. ಇದರಿಂದ ಚಾಲಕರು ಮತ್ತು ನಿರ್ವಾಹಕರ ಭತ್ಯೆಯನ್ನೂ ಹೆಚ್ಚಿಸಲಾಗಿದೆ. ಆದರೂ ರಾಜ್ಯದಲ್ಲಿರುವ 25 ಸಾವಿರ ಹಳ್ಳಿಗಳ ಪೈಕಿ 300 ಹಳ್ಳಿಗಳಿಗೆ ರಾಜ್ಯ ಸಾರಿಗೆ ಸಂಸ್ಥೆಯ ಸೇವೆಯನ್ನು  ಒದಗಿಸಲಾಗಿಲ್ಲ. 3000 ಹಳ್ಳಿಗಳ ಮಾರ್ಗದಲ್ಲಿ ಸಾರಿಗೆ ಸಂಸ್ಥೆಯ ಏಕಸ್ವಾಮ್ಯವನ್ನು ಸಾಧಿಸಲು ಸಾಧ್ಯವಾಗಿಲ್ಲ. ಖಾಸಗಿ ಬಸ್‌ಗಳ ಲಾಬಿ ಮತ್ತು ಒತ್ತಡಗಳಿಂದ ಹಲವಾರು ಹಳ್ಳಿಗಳಿಗೆ ಸರ್ಕಾರಿ ಬಸ್‌ ಸೇವೆಯನ್ನೇ ಒದಗಿಸಲು ಸಾದ್ಯವಾಗುವುದಿಲ್ಲ. ಈ ಕೊರತೆ ಮೊದಲಿನಿಂದಲೂ ಇದ್ದರೂ, ಶಕ್ತಿ ಯೋಜನೆ ಇದನ್ನು ಬಹಿರಂಗಪಡಿಸಿದೆ. ಹಾಗೆಯೇ ಎಲ್ಲ ಹಳ್ಳಿಗಳಿಗೂ ಸರ್ಕಾರಿ ಬಸ್ಸುಗಳ ಸೇವೆ ಒದಗಿಸುವ ನೈತಿಕ ಹೊರೆಯನ್ನು ಸರ್ಕಾರ ಮೇಲೆ ಹೊರಿಸಿದೆ.

ಈ ಸಕಾರಾತ್ಮಕ ಸೂಚನೆಗಳ ಹೊರತಾಗಿಯೂ ಶಕ್ತಿ ಯೋಜನೆ ಮಹಿಳೆಯರ ಸಬಲೀಕರಣದ ಹಾದಿಯಲ್ಲಿ ಹಾಗೂ ಮಹಿಳಾ ಶ್ರಮ ಮತ್ತು ಶ್ರಮಶಕ್ತಿಯ ಸಮರ್ಪಕ ಬಳಕೆಯ ನಿಟ್ಟಿನಲ್ಲಿ ಎಷ್ಟರ ಮಟ್ಟಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ಗಮನಿಸಬೇಕಿದೆ.  ಕೇವಲ ಪ್ರಯಾಣದ ಖರ್ಚು ಇಲ್ಲ ಎಂದ ಮಾತ್ರಕ್ಕೆ ಸಾಂಪ್ರದಾಯಿಕ ಸಮಾಜದ ನಿಬಂಧನೆಗಳಿಗೊಳಗಾಗಿರುವ ಮಹಿಳಾ ಸಂಕುಲ ತಮ್ಮ ಸಂಕೋಲೆಗಳನ್ನು ಕಡಿದುಕೊಂಡು ಹೊರಬರಲು ಸಾಧ್ಯವೇ ಎಂಬ ಜಟಿಲ ಪ್ರಶ್ನೆಯೂ  ಚರ್ಚೆಗೊಳಗಾಗಬೇಕಿದೆ. ಶಕ್ತಿ ಯೋಜನೆ ಮಹಿಳೆಯರಿಗೆ ಸಾರ್ವಜನಿಕ ಚಲನೆಯ ಒಂದು ಮುಕ್ತ ಅವಕಾಶವನ್ನು ಕಲ್ಪಿಸಿದ್ದು ತಮ್ಮ ಪರಾವಲಂಬನೆಯ ಸ್ಥಿತಿಯಿಂದ ಹೊರಬರಲು ನೆರವಾಗಬಹುದು. ಆದರೆ ಕೌಟುಂಬಿಕ ನೆಲೆಯಲ್ಲಿ, ಸಾಮುದಾಯಿಕ ಸ್ತರದಲ್ಲಿ ಮಹಿಳೆಯ ಸುತ್ತ ನಿರ್ಮಿತವಾಗಿರುವ ಸಾಮಾಜಿಕ-ಸಾಂಸ್ಕೃತಿಕ-ಸಾಂಪ್ರದಾಯಿಕ ಪುರುಷಪ್ರಧಾನ ಕವಚಗಳನ್ನು ಭೇದಿಸಲು ಇದೊಂದೇ ಸಾಕಾಗುವುದಿಲ್ಲ. ಈ ಕವಚಗಳನ್ನು, ಗೋಡೆಗಳನ್ನು ಕೆಡವಲು ಸಾಧ್ಯವಾದಾಗ ಮಾತ್ರ ಮಹಿಳಾ ಸಬಲೀಕರಣ ಪರಿಪೂರ್ಣತೆಯನ್ನು ಪಡೆದುಕೊಳ್ಳುತ್ತದೆ.

ಕಾಂಗ್ರೆಸ್‌ ಸರ್ಕಾರದ ಶಕ್ತಿ ಯೋಜನೆಯನ್ನು ವೈಜ್ಞಾನಿಕ ನೆಲೆಯಲ್ಲಿ ಜಾರಿಗೊಳಿಸಿ ಇದರ ಫಲಾನುಭವಿಗಳಾದ ಮಹಿಳಾ ಸಮುದಾಯ ತನ್ನ ವಿಮೋಚನೆಯ ಹಾದಿಯಲ್ಲಿ ಮತ್ತಷ್ಟು ಬಲದೊಂದಿಗೆ ಚಲಿಸಲು ಅನುಕೂಲ ಮಾಡಿಕೊಡುವುದಾದರೆ ಈ ಯೋಜನೆಯೂ ಸಾರ್ಥಕವಾದೀತು. ಸುಗಮ ಭೌತಿಕ ಚಲನೆಯೊಂದೇ ಮಹಿಳಾ ವಿಮೋಚನೆಯನ್ನು ಸಾಧಿಸಲಾಗುವುದಿಲ್ಲ. ಮಹಿಳೆಯ ಘನತೆ, ಗೌರವ ಹಾಗೂ ಭೌತಿಕ-ಬೌದ್ಧಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಂತಹ ಆಡಳಿತ ನೀತಿಗಳನ್ನು ಜಾರಿಗೊಳಿಸುವ ಅವಶ್ಯಕತೆ ಇದೆ. ಮಹಿಳಾ ದೌರ್ಜನ್ಯಗಳು, ಮರ್ಯಾದೆಗೇಡು ಹತ್ಯೆಗಳು, ಅತ್ಯಾಚಾರಗಳು, ತಾರತಮ್ಯದ ಪ್ರಕರಣಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಶಕ್ತಿ ಯೋಜನೆಯನ್ನು ಮಹಿಳಾ ಸಬಲೀಕರಣದ ಒಂದು ಅತ್ಯಲ್ಪ ಅಂಶ ಎಂದಷ್ಟೇ ಭಾವಿಸಬಹುದಾಗಿದೆ. ಈ ಯೋಜನೆಯನ್ನೂ ವಿಭಿನ್ನ ಕಾರಣಗಳಿಗಾಗಿ ವಿರೋಧಿಸುವ ಪಿತೃಪ್ರಧಾನ ಮನಸ್ಸುಗಳ ಬೌದ್ಧಿಕ ಮಾಲಿನ್ಯವನ್ನು ತೊಡೆದುಹಾಕುವುದೂ ಅವಶ್ಯವಾಗಿದೆ. ಶಕ್ತಿ ಯೋಜನೆ ಮಹಿಳೆಯ ಶ್ರಮ ಮತ್ತು ಶ್ರಮಶಕ್ತಿಯ ಮುಂಚಲನೆಗೆ-ಸಾಮಾಜಿಕ ಮೇಲ್‌ ಚಲನೆಗೆ ತೆರೆದಿರುವ ಒಂದು ಸಣ್ಣ ಕಿಂಡಿಯಷ್ಟೇ ಆಗಿದೆ. ಹೆದ್ದಾರಿಯಲ್ಲಿ ಇನ್ನೂ ಹಲವಾರು ತೊಡಕುಗಳಿವೆ. ಭಾರತದ ಪಿತೃಪ್ರಧಾನ ವ್ಯವಸ್ಥೆ ಈ ಹೆದ್ದಾರಿಯಲ್ಲಿ ನಿರ್ಮಿಸಿರುವ ರಸ್ತೆ ಡುಬ್ಬಗಳನ್ನು ತೊಡೆದುಹಾಕುವತ್ತ ಪ್ರಜ್ಞಾವಂತ ಸಮಾಜ ಯೋಚಿಸಬೇಕಿದೆ. ಅಂತಹ ಆಲೋಚನೆಗೆ ಶಕ್ತಿ ಯೋಜನೆ ಕೊಂಚ ಮಟ್ಟಿಗೆ ಇಂಧನ ದೊರಕಿಸುತ್ತದೆ.

Tags: cmsiddaramiahCongress GovernmentDKShivakumarShakti Yojana
Previous Post

ಬಿಟ್ ಕಾಯಿನ್ ಹಗರಣ: ಮನೀಷ್ ಖರ್ಭೀಕರ್ ನೇತೃತ್ವದ ಎಸ್‌ಐಟಿ ತನಿಖಾ ತಂಡ ರಚಿಸಿದ ಸರ್ಕಾರ

Next Post

ಮಣಿಪುರದ ಹಿಂಸಾಚಾರ ಮತ್ತು ಬಿಜೆಪಿಯ ಹುನ್ನಾರಗಳು

Related Posts

2047-ವಿಕಸಿತ ಭಾರತಕ್ಕೊಂದು ಜನ ಪ್ರಣಾಳಿಕೆ
Top Story

2047-ವಿಕಸಿತ ಭಾರತಕ್ಕೊಂದು ಜನ ಪ್ರಣಾಳಿಕೆ

by ನಾ ದಿವಾಕರ
August 27, 2026
0

ನೂರು ತುಂಬಿದ ಭಾರತ ಹೇಗಿರಲಿದೆ ಎಂಬ ಜಿಜ್ಞಾಸೆ ಮತ್ತು ಹೇಗಿರಬೇಕು ಎಂಬ ದೃಢ ನಿರ್ಧಾರ ವರ್ತಮಾನದ ಸಾಮಾಜಿಕ-ರಾಜಕೀಯ ಸಂಕಥನಗಳಲ್ಲಿ ಧ್ವನಿಸಲೇಬೇಕಾದ ಸನ್ನಿವೇಶದಲ್ಲಿ ನಾವಿದ್ದೇವೆ. ಈ ಎರಡೂ ಪ್ರಶ್ನೆಗಳನ್ನು...

Read moreDetails
ಯಶಸ್ಸಿನ ಓಟದಲ್ಲಿ ನೆಮ್ಮದಿ ಕಳೆದುಕೊಳ್ಳುತ್ತಿದೆಯೇ ಇಂದಿನ ಪೀಳಿಗೆ..?

ಯಶಸ್ಸಿನ ಓಟದಲ್ಲಿ ನೆಮ್ಮದಿ ಕಳೆದುಕೊಳ್ಳುತ್ತಿದೆಯೇ ಇಂದಿನ ಪೀಳಿಗೆ..?

August 26, 2026
ಎದೆ ಕಲಕುವ ಭಾವಸ್ಪರ್ಷಾನುಭವ- ಒಥೆಲೊ

ಎದೆ ಕಲಕುವ ಭಾವಸ್ಪರ್ಷಾನುಭವ- ಒಥೆಲೊ

August 25, 2026
ವಿಕಾಸದ ಹಾದಿಯ ಬಹುಮುಖಿ ಮಾಲಿನ್ಯಗಳು -5

ವಿಕಾಸದ ಹಾದಿಯ ಬಹುಮುಖಿ ಮಾಲಿನ್ಯಗಳು -5

August 23, 2026
ವಿಕಾಸದ ಹಾದಿಯ ಬಹುಮುಖಿ ಮಾಲಿನ್ಯಗಳು -4

ವಿಕಾಸದ ಹಾದಿಯ ಬಹುಮುಖಿ ಮಾಲಿನ್ಯಗಳು -4

August 22, 2026
Next Post
ಮಣಿಪುರದ ಹಿಂಸಾಚಾರ ಮತ್ತು ಬಿಜೆಪಿಯ ಹುನ್ನಾರಗಳು

ಮಣಿಪುರದ ಹಿಂಸಾಚಾರ ಮತ್ತು ಬಿಜೆಪಿಯ ಹುನ್ನಾರಗಳು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada