ಇಂದಿನ ಪೀಳಿಗೆ ಬದಲಾಗುತ್ತಿರುವ ಬದುಕಿನ ಕನ್ನಡಿ. ಇಂದಿನ ಪೀಳಿಗೆಯನ್ನು ನೋಡಿದ್ರೆ ಕೆಲವೊಮ್ಮೆ ಅಚ್ಚರಿ ಆಗುತ್ತೆ. ನಮ್ಮ ಕಾಲದಲ್ಲಿ ಒಂದು ವಿಷಯ ತಿಳಿದುಕೊಳ್ಳಬೇಕು ಅಂದರೆ ಹಿರಿಯರನ್ನು ಕೇಳಬೇಕು, ಪುಸ್ತಕ ಹುಡುಕಬೇಕು. ಆದರೆ ಇವತ್ತಿನ ಮಕ್ಕಳ ಕೈಯಲ್ಲಿ ಮೊಬೈಲ್ ಇದೆ. ಬೆರಳ ತುದಿಯಲ್ಲಿ ಜಗತ್ತಿನ ಮಾಹಿತಿ ಇದೆ. ನಿಮಿಷದಲ್ಲಿ ಏನು ಬೇಕಾದ್ರೂ ಹುಡುಕಬಹುದು. ತಂತ್ರಜ್ಞಾನ ಇವತ್ತು ಬದುಕನ್ನು ತುಂಬಾ ಸುಲಭ ಮಾಡಿದೆ.

ಆದರ ಇದೇ ತಂತ್ರಜ್ಞಾನ ಕೆಲವೊಮ್ಮೆ ಬದುಕನ್ನು ಕಷ್ಟವೂ ಮಾಡ್ತಿದೆ. ಇಂದಿನ ಪೀಳಿಗೆಗೆ ಅವಕಾಶಗಳು ತುಂಬಾ ಇವೆ. ಓದಿಗೆ, ಕೆಲಸಕ್ಕೆ, ತಮ್ಮ ಪ್ರತಿಭೆ ತೋರಿಸೋಕೆ, ಹೊಸದನ್ನು ಕಲಿಯೋಕೆ ಸಾವಿರ ದಾರಿಗಳಿವೆ. ಯಾರ ಸಹಾಯವೂ ಇಲ್ಲದೆ ತಮ್ಮದೇ ಆದ ಗುರುತು ಮಾಡಿಕೊಳ್ಳಬಹುದು. ಹೆಣ್ಣುಮಕ್ಕಳಾಗಲಿ, ಗಂಡುಮಕ್ಕಳಾಗಲಿ ತಮ್ಮ ಕನಸುಗಳನ್ನು ಬೆನ್ನತ್ತೋ ಧೈರ್ಯ ಇವತ್ತು ಹೆಚ್ಚಾಗಿದೆ. ಇದು ಖಂಡಿತ ಒಳ್ಳೆಯ ಬೆಳವಣಿಗೆ.
ಆದರೆ ಇನ್ನೊಂದು ಕಡೆ ನೋಡಿದ್ರೆ, ಸಹನೆ ಮಾತ್ರ ಕಡಿಮೆಯಾಗ್ತಿದೆ. ಎಲ್ಲವೂ ತಕ್ಷಣ ಬೇಕು. ಮೆಸೇಜ್ ಮಾಡಿದ್ರೆ ತಕ್ಷಣ ಉತ್ತರ ಬರಬೇಕು. ವಿಡಿಯೋ ಹಾಕಿದ್ರೆ ತಕ್ಷಣ ಲೈಕ್ಸ್ ಬರಬೇಕು. ಕೆಲಸ ಶುರು ಮಾಡಿದ್ರೆ ಬೇಗ ಯಶಸ್ಸು ಸಿಗಬೇಕು. ಸಂಬಂಧದಲ್ಲಿ ಸಣ್ಣ ಸಮಸ್ಯೆ ಬಂದ್ರೂ ಮಾತಾಡಿ ಬಗೆಹರಿಸಿಕೊಳ್ಳೋದಕ್ಕಿಂತ ದೂರ ಆಗೋದು ಸುಲಭ ಅನ್ನಿಸಿಬಿಡುತ್ತೆ.

ನಮ್ಮ ಕಾಲದಲ್ಲಿ ಸಂಬಂಧ ಅಂದ್ರೆ ಜವಾಬ್ದಾರಿ ಇತ್ತು. ಈಗ ಸಂಬಂಧ ಅಂದ್ರೆ ಕೆಲವೊಮ್ಮೆ ಅನುಕೂಲ ಅನ್ನೋ ಮನಸ್ಥಿತಿ ಕಾಣಿಸುತ್ತೆ. ಇವತ್ತಿನ ಪೀಳಿಗೆಯ ದೊಡ್ಡ ಸಮಸ್ಯೆ ಏನಂದ್ರೆ ಹೋಲಿಕೆ. ಸಾಮಾಜಿಕ ಜಾಲತಾಣದಲ್ಲಿ ಇನ್ನೊಬ್ಬರ ಜೀವನ ನೋಡ್ತಾ ತಮ್ಮ ಜೀವನವನ್ನೇ ಕಡಿಮೆ ಅಂತ ಭಾವಿಸಿಕೊಳ್ಳುತ್ತಾರೆ. ಅವನು ಕಾರು ತಗೊಂಡ, ಅವಳು ವಿದೇಶಕ್ಕೆ ಹೋದಳು, ಇವನು ದೊಡ್ಡ ಮನೆ ಕಟ್ಟಿದ, ಅವರು ಖುಷಿಯಾಗಿದ್ದಾರೆ ಅಂತ ನೋಡ್ತಾ ತಮ್ಮ ಬದುಕಿನ ನೆಮ್ಮದಿಯನ್ನು ಕಳೆದುಕೊಳ್ತಾರೆ.

ಆದ್ರೆ ಒಂದು ವಿಷಯ ಅರ್ಥ ಮಾಡಿಕೊಳ್ಳಬೇಕು. ಸಾಮಾಜಿಕ ಜಾಲತಾಣದಲ್ಲಿ ಕಾಣೋದು ಜೀವನದ ಒಂದು ಭಾಗ ಮಾತ್ರ, ಇಡೀ ಜೀವನ ಅಲ್ಲ. ಇಂದಿನ ಪೀಳಿಗೆಗೆ ಹಣ ಬೇಕು, ಸ್ವಾತಂತ್ರ್ಯ ಬೇಕು, ಒಳ್ಳೆಯ ಜೀವನ ಬೇಕು. ಇದರಲ್ಲಿ ತಪ್ಪೇನಿಲ್ಲ. ಆದರೆ ಹಣದ ಹಿಂದೆ ಓಡುತ್ತಾ ನೆಮ್ಮದಿಯನ್ನು ಕಳೆದುಕೊಳ್ಳಬಾರದು. ಯಶಸ್ಸಿನ ಹಿಂದೆ ಓಡುತ್ತಾ ಸಂಬಂಧಗಳನ್ನ ಕಳೆದುಕೊಳ್ಳಬಾರದು. ಹಿರಿಯರಲ್ಲೂ ತಪ್ಪುಗಳಿವೆ, ಇಂದಿನ ಪೀಳಿಗೆಯಲ್ಲೂ ತಪ್ಪುಗಳಿವೆ. ಹಾಗಾಗಿ ಒಬ್ಬರನ್ನೊಬ್ಬರು ದೂಷಿಸುವುದಕ್ಕಿಂತ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳೋದು ಮುಖ್ಯ.

ಹಿರಿಯರು ಹೊಸ ಪೀಳಿಗೆಯ ಬದಲಾವಣೆಯನ್ನು ಒಪ್ಪಿಕೊಳ್ಳಬೇಕು. ಹೊಸ ಪೀಳಿಗೆ ಹಿರಿಯರ ಅನುಭವವನ್ನ ಗೌರವಿಸಬೇಕು. ಆಗ ಮಾತ್ರ ಎರಡು ತಲೆಮಾರುಗಳ ನಡುವೆ ಇರುವ ಅಂತರ ಕಡಿಮೆಯಾಗುತ್ತೆ. ಕೊನೆಗೆ ಇಂದಿನ ಪೀಳಿಗೆ ಕೆಟ್ಟ ಪೀಳಿಗೆ ಅಲ್ಲ. ಅವರಿಗೆ ಮಾಹಿತಿ ಜಾಸ್ತಿ, ಆದರೆ ಕೆಲವೊಮ್ಮೆ ವಿವೇಕ ಕಡಿಮೆ. ಅವಕಾಶಗಳು ಜಾಸ್ತಿ, ಆದರೆ ಸಹನೆ ಕಡಿಮೆ. ಸಂಪರ್ಕ ಜಾಸ್ತಿ, ಆದರೆ ಆತ್ಮೀಯತೆ ಕೆಲವೊಮ್ಮೆ ಕಡಿಮೆ. ಅದಕ್ಕೆ ಇಂದಿನ ಪೀಳಿಗೆಗೆ ಬೇಕಾಗಿರೋದು ಮತ್ತಷ್ಟು ತಂತ್ರಜ್ಞಾನ ಅಲ್ಲ ಸ್ವಲ್ಪ ಮಾನವೀಯತೆ, ಸ್ವಲ್ಪ ಸಹನೆ, ಸ್ವಲ್ಪ ಸಂಬಂಧಗಳ ಬೆಲೆ ಅರಿವು. ಏಕೆಂದರೆ ಬದುಕು ಅಂದ್ರೆ ಕೇವಲ ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳೋದು ಅಲ್ಲ..ನಮ್ಮನ್ನು ನಿಜವಾಗಿ ಪ್ರೀತಿಸುವವರ ಹೃದಯದಲ್ಲಿ ಜಾಗ ಮಾಡಿಕೊಳ್ಳೋದು.

ಬರಹ: ನವೀನ ಹೆಚ್.ಎ, ಹನುಮನಹಳ್ಳಿ







