ಹುಬ್ಬಳ್ಳಿ: ಏಳನೇ ವೇತನ ಆಯೋಗ ಜಾರಿಯ ಮಧ್ಯಂತರ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ವರದಿ ಬಂದ ಬಳಿಕ, 2023–24ನೇ ಸಾಲಿನಲ್ಲೇ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಆದರ್ಶ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್’ನಲ್ಲಿ ಏಳನೇ ವೇತನ ಆಯೋಗ ಜಾರಿಗೆ ಹಣ ತೆಗೆದಿಟ್ಟಿದ್ದೇವೆ. ಈ ಕುರಿತು ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ. ನೌಕರರ ಬೇಡಿಕೆಗಳನ್ನು ಈಡೇರಿಸಲು ಸಿದ್ದರಿರುವುದಾಗಿ ತಿಳಿಸಿದರು.
ಅಮಿತ್ ಶಾ ಸೇರಿದಂತೆ ಅನೇಕ ನಾಯಕರು ಬಿಜೆಪಿಯ ಚುನಾವಣಾ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯಿಂದ ಕಾಂಗ್ರೆಸ್ ನಾಯಕರು ಭ್ರಮನಿರಸನಗೊಂಡಿದ್ದಾರೆ. ಬಿಜೆಪಿಗೆ ಸಿಗುತ್ತಿರುವ ಜನ ಬೆಂಬಲದಿಂದ ಸಿದ್ದರಾಮಯ್ಯ ವಿಚಲಿತರಾಗಿದ್ದಾರೆ ಎಂದ ಅವರು, ರಾಹುಲ್ ಗಾಂಧಿ ಅವರು ಕೂಡ ಕಾಂಗ್ರೆಸ್ ಏಜೆಂಟರಾ? ಎಂದು ಪ್ರಶ್ನಿಸಿದರು.

ಪಕ್ಷ ಬಲವರ್ಧನೆ ದೃಷ್ಟಿಯಿಂದ ಮೋದಿ, ಅಮಿತ್ ಶಾ ಸೇರಿದಂತೆ ಅನೇಕ ನಾಯಕರು ಮತ್ತೆ ಮತ್ತೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಮಾರ್ಚ್ ತಿಂಗಳಲ್ಲಿ ದಾವಣಗೆರೆಯಲ್ಲಿ ರಥಯಾತ್ರೆ ಆರಂಭಿಸಲಾಗುವುದು ಎಂದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರದ್ದು ನಿವೃತ್ತಿಯಾಗುವ ವಯಸ್ಸಲ್ಲ. ಅವರಿನ್ನೂ ಸೇವೆ ಮಾಡಬೇಕಿದೆ. ಚುನಾವಣೆ ಸಂದರ್ಭದಲ್ಲಿ ಇಂತಹದ್ದೆಲ್ಲಾ ನಡೆಯುತ್ತಿರುತ್ತದೆ. ಚುನಾವಣೆಯಿಂದ ಚುನಾವಣೆಗೆ ಪ್ರಬುದ್ಧರಾಗುವ ಜನ, ಎಲ್ಲವನ್ನೂ ಗಮನಿಸುತ್ತಾರೆ. ನಮ್ಮ ಮಾತಿನ ಹಿಂದಿನ ಮತ್ತು ಮುಂದಿನ ಕಲ್ಪನೆಯೂ ಇರಬೇಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಬನವಾಸಿಯಲ್ಲಿ ಗೋ ಬ್ಯಾಕ್ ಸಿ.ಎಂ ಘೋಷಣೆ ಕುರಿತು ಪ್ರತಿಕ್ರಿಯಿಸಿದ ಅವರು, ನಾಲ್ಕು ಮಂದಿ ಗೋ ಬ್ಯಾಕ್ ಅಂದರೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಇಂತಹ ಅಭಿಯಾನ ಮಾಮೂಲಿಯಾಗಿದೆ ಎಂದರು.
ಬಿ.ಎಸ್. ಯಡಿಯೂರಪ್ಪ ಅವರು ಜೈಲಿನಲ್ಲಿದ್ದಾಗ ಡೈರಿ ಬರೆದ ವಿಷಯ ಮತ್ತು ಹಿರಿಯ ನಾಯಕರ ಕಾಲಿಗೆ ಬಿದ್ದಿದ್ದರೆ ನಾನೂ ಮುಖ್ಯಮಂತ್ರಿಯಾಗುತ್ತಿದ್ದೆ ಎಂಬ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೇಳಿಕೆ ಕುರಿತು ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.







