ಬೆಂಗಳೂರು: ಹಿರಿಯ ಭೂ ವಿಜ್ಞಾನಿ ಪ್ರತಿಮಾ ಕೆ.ಎಸ್.(45) ಹತ್ಯೆ ಪ್ರಕರಣಕ್ಕೆ ಸಂಬಂಧ ಓರ್ವ ವ್ಯಕ್ತಿಯನ್ನು ಸುಬ್ರಹ್ಮಣ್ಯಪುರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಹಿಂದೆ ಪ್ರತಿಮಾ ಅವರ ಕಾರು ಚಾಲಕನಾಗಿದ್ದ ಕಿರಣ್ ಎಂಬಾತ ಸದ್ಯ ಪೊಲೀಸ್ ವಶದಲ್ಲಿದ್ದು, ತನಿಖೆ ನಡೆಯುತ್ತಿದೆ. ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಪ್ರತಿಮಾ ಅವರ ಕಾರು ಚಾಲಕನಾಗಿ ಕಿರಣ್ ಕೆಲಸ ಮಾಡುತ್ತಿದ್ದರು. ಕಿರಣ್ ತಂದೆ ಸಹ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ಆರೋಪಿ ಕಿರಣ್ ಹಾಗೂ ಪ್ರತಿಮಾ ನಡುವೆ ಇತ್ತೀಚೆಗೆ ಕೆಲ ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯವುಂಟಾಗಿತ್ತು. ಹೀಗಾಗಿ ಕೆಲ ದಿನಗಳ ಹಿಂದಷ್ಟೇ ಕಿರಣ್ ನನ್ನ ಚಾಲಕನ ಕೆಲಸದಿಂದ ಪ್ರತಿಮಾ ತೆಗೆದು ಹಾಕಿದ್ದರು. ಮರಳಿ ಕೆಲಸಕ್ಕೆ ನೇಮಿಸಿಕೊಳ್ಳುವಂತೆ ಶನಿವಾರ ರಾತ್ರಿ ಪ್ರತಿಮಾ ಮನೆಗೆ ಕಿರಣ್ ಬಂದಿದ್ದ ಎಂದು ತಿಳಿದುಬಂದಿದೆ.

ಈ ಅನುಮಾನದ ಮೇರೆಗೆ ಚಾಮರಾಜನಗರ ಬಳಿ ತೆರಳುತ್ತಿದ್ದ ಕಿರಣ್ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಯಿತು. ಸದ್ಯ ಆರೋಪಿಯ ಪ್ರಾಥಮಿಕ ವಿಚಾರಣೆ ಪೂರ್ಣಗೊಳಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲು ಸಿದ್ಧತೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಿರಣ್ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದ್ರೆ ಕಿರಣ್ ಒಬ್ಬನೇ ಆರೋಪಿ ಎಂಬುದು ವಿಚಾರಣೆಯಲ್ಲಿ ಗೊತ್ತಾಗಿದೆ.

ಉತ್ತಮ ಅಧಿಕಾರಿಯಾಗಿದ್ದ ಪ್ರತಿಮಾ, ಇಲಾಖೆಗೆ ಸಂಬಂಧಿಸಿದಂತೆ ಕೆಲವೆಡೆ ದಾಳಿ ನಡೆಸಿ ದಿಟ್ಟತನ ಪ್ರದರ್ಶಿಸಿದ್ದರು. ಆದರೆ ಯಾವುದೇ ವೈರಿಗಳನ್ನೂ ಹೊಂದಿರಲಿಲ್ಲ. ಇಲಾಖೆಯಲ್ಲಿನ ನಿಯಮಗಳನುಸಾರ ಕರ್ತವ್ಯ ನಿರ್ವಹಿಸುತ್ತಾ ಉತ್ತಮ ಹೆಸರು ಸಂಪಾದಿಸಿದ್ದರು ಎಂದು ಅವರ ಸಹೋದ್ಯೋಗಿಗಳು ಹೇಳಿದ್ದಾರೆ.