ಬೆಂಗಳೂರು : ಮಾರ್ಚ್ ತಿಂಗಳಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಏಪ್ರಿಲ್ 21ರ ಬೆಳಗ್ಗೆ ಪ್ರಕಟಿಸಲು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿ ನಿರ್ಧರಿಸಿದೆ. ವಿದ್ಯಾರ್ಥಿಗಳು ನಾಳೆ ಫಲಿತಾಂಶವನ್ನು https://karresults.nic.in/ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ.
ನಾಳೆ ಬೆಳಗ್ಗೆ 10 ಗಂಟೆಗೆ ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯು ಸುದ್ದಿಗೋಷ್ಠಿ ನಡೆಸಲಿದೆ. ಸುದ್ದಿಗೋಷ್ಠಿಯಲ್ಲಿ ಜಿಲ್ಲಾವಾರು ಫಲಿತಾಂಶ ಸೇರಿದಂತೆ ಟಾಪರ್ಗಳ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಫಲಿತಾಂಶವನ್ನು ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ ಎಂದು ಮಂಡಳಿ ಮಾಹಿತಿ ನೀಡಿದೆ.
ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯು ರಾಜ್ಯಾದ್ಯಂತ ಮಾರ್ಚ್ 9 ರಿಂದ ಮಾರ್ಚ್ 29ರವರೆಗೆ ನಡೆದಿತ್ತು. ದ್ವಿತೀಯ ಪಿಯುಸಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ ಒಟ್ಟೂ 7.26 ಲಕ್ಷ ವಿದ್ಯಾರ್ಥಿಗಳಲ್ಲಿ ಶೇಕಡಾ 6ರಷ್ಟು ವಿದ್ಯಾರ್ಥಿಗಳು ಗೈರಾಗಿದ್ದರು. ರಾಜ್ಯದಲ್ಲಿ ಕೋವಿಡ್ ಬಳಿಕ ನಡೆದ ಮೊದಲ ಪೂರ್ಣ ಪ್ರಮಾಣದ ದ್ವಿತೀಯ ಪಿಯುಸಿ ಪರೀಕ್ಷೆ ಇದಾಗಿದೆ.