2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇವೆ. ಇದೇ ಮೇ 10 ರಂದು ಚುನಾವಣೆ ನಡೆಯಲಿದ್ದು, ಪಕ್ಷದ ನಾಯಕರು, ಮುಖಂಡರು ಮತಬೇಟೆಗಿಳಿದಿದ್ದಾರೆ. ಇಂದು ಸ್ಯಾಂಡಲ್ವುಡ್ ನಟಿ ರಮ್ಯಾ ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕಿಯಾಗಿ ಮತಯಾಚಿಸಿದರು. ಪ್ರಚಾರದ ಬಳಿಕ ಮಂಡ್ಯ ರಾಜಕೀಯಕ್ಕೆ ಬರುವ ವಿಚಾರವಾಗಿ ಮಾತ್ನಾಡಿದ ರಮ್ಯಾ, ʻನಾನು ಈಗ ಬಂದಿರೋದು ಮಂಡ್ಯ ಜಿಲ್ಲೆಯ ಅಭ್ಯರ್ಥಿಗಳ ಪರವಾಗಿ. ಅವರ ಪರವಾಗಿ ಮತಯಾಚನೆಗೆ ಬಂದಿದ್ದೇನೆ. ನಾನು ಈಗ ಸ್ಟಾರ್ ಕ್ಯಾಂಪೇನರ್ ಅಷ್ಟೇ. ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ನಾನು ಯೋಚನೆ ಮಾಡಿಲ್ಲ. ಅದಕ್ಕೆ ತುಂಬಾ ಟೈಂ ಇದೆ. ನಾನು ಸಿನಿಮಾಗೆ ಬಂದಿರೋದು.. ಪ್ರೊಡಕ್ಷನ್ ರೆಡಿ ಮಾಡ್ತಾ ಇದೀನಿ. ನಾನು ಸಹ ದುಡಿಯಬೇಕು ಅಲ್ವಾ? ಸಿನಿಮಾ, ರಾಜಕೀಯ ಬಿಟ್ಟು ತುಂಬಾ ವರ್ಷ ಆಗಿದೆ. ಈಗ ನಾನು ಏನಾದ್ರು ದುಡಿಯಬೇಕು ಅಲ್ವಾ? ಅದಕ್ಕೆ ಸಿನಿಮಾ ಕ್ಷೇತ್ರಕ್ಕೆ ಬಂದಿದ್ದೇನೆ. ನಾನು ಉತ್ತರಕಾಂಡ ಸಿನಿಮಾಗೆ ಸಹಿ ಮಾಡಿದ್ದೇನೆʼ ಅಂತ ಹೇಳಿದ್ರು.
ನಂತರ ಮಂಡ್ಯದಲ್ಲಿ ತೊಟ್ಟಿ ಮನೆ ಮಾಡಿ ಇಲ್ಲೇ ಉಳಿಯುತ್ತೇನೆ ಎಂಬ ಭರವಸೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ರಮ್ಯಾ, ʻನಮ್ಮ ತಾತದು ಗೋಪಾಲಪುರದಲ್ಲಿ ತೊಟ್ಟಿ ಮನೆ ಇದೆ. ನನಗೂ ಒಂದು ತೊಟ್ಟಿಮನೆ ಮಾಡಬೇಕು ಎಂಬ ಆಸೆ ಇದೆ. ಅದು ಇವತ್ತು, ನಾಳೆ, ಯಾವಾಗ ಆಗುತ್ತೆ ಅಂತಾ ಗೊತ್ತಿಲ್ಲ. ನನಗೆ ತೊಟ್ಡಿ ಮನೆ ಮಾಡೋಕೆ ಆಸೆ ಇದೆ. ನಾನು ಯಾವಾಗಲೂ ಮಂಡ್ಯದವಳು. ನಾನು ಗೌಡತಿ ಎಂಬುದನ್ನು ಯಾರು ಕಿತ್ತುಕೊಳ್ಳಲು ಆಗಲ್ಲ. ನಮ್ಮ ತಾಯಿ ಊರು ಮಂಡ್ಯ, ನಮ್ಮ ತಂದೆ ಸತ್ತಿದ್ದು ಇಲ್ಲೇ. ನನ್ನ ಅಭ್ಯರ್ಥಿ ಮಾಡಿದ್ದು ಇಲ್ಲೇ. ಮಂಡ್ಯ ಜಿಲ್ಲೆಯ ಜನರು ನನಗೆ ಬೆಂಬಲ ನೀಡಿದ್ದಾರೆ. ಈ ಅಭಿಮಾನವನ್ನು ನಾನು ಯಾವತ್ತು ಮರೆಯಲ್ಲ, ಕಮ್ಮಿಯೂ ಆಗಲ್ಲ. ಮಂಡ್ಯ ಸಂಬಂಧ ಕೇವಲ ರಾಜಕೀಯ ಅಲ್ಲ, ನನಗೆ ಕುಟುಂಬದ ರೀತಿ ಮಂಡ್ಯʼ ಅಂತ ಹೇಳಿದ್ರು.
ಇನ್ನು ಬೇರೆ ಕ್ಷೇತ್ರಗಳಲ್ಲಿ ಚುನಾವಣೆ ಪ್ರಚಾರ ವಿಚಾರವಾಗಿ ಮಾತ್ನಾಡಿದ ಸ್ಯಾಂಡಲ್ವುಡ್ ನಟಿ ರಮ್ಯಾ, ʻನಾನು ಬೇರೆ ಬೇರೆ ಕ್ಷೇತ್ರಗಳಿಗೆ ಸ್ಟಾರ್ ಪ್ರಚಾರಕಿಯಾಗಿ ಹೋಗ್ತಾ ಇದೀನಿ. ಮೈಸೂರು, ವರುಣ, ನಂಜನಗೂಡು, ಹುಬ್ಬಳ್ಳಿ, ಬಿಜಾಪುರ, ಬೆಂಗಳೂರು ಎಲ್ಲಾ ಕಡೆ ಪ್ರಚಾರಕ್ಕೆ ಹೋಗ್ತೀನಿ. ಪ್ರಚಾರದ ಲಿಸ್ಟ್ ಮಾಡಿರೋದು ಲೇಟ್ ಆಗಿದೆ, ಅದಕ್ಕೆ ಪ್ರಚಾರಕ್ಕೆ ಬರೋದು ತಡವಾಗಿದೆ. 224 ಕ್ಷೇತ್ರಗಳಿಗೂ ನಾನು ಹೋಗಲ್ಲ. ಇವತ್ತು ಫಸ್ಟ್ ನಾನು ಪ್ರಚಾರಕ್ಕೆ ಬಂದಿರೋದು. ಮಂಡ್ಯಗೆ ಪ್ರಚಾರಕ್ಕೆ ಮತ್ತೆ ಬರೋಕೆ ಆಗಲ್ಲ, ಇವರು ಎಲ್ಲಾ ಗೆಲ್ತಾರೆ. ನಮ್ಮ ಅಭ್ಯರ್ಥಿಗಳು ಎಲ್ಲಾ ಸ್ಟ್ರಾಂಗ್ ಆಗಿ ಇದ್ದಾರೆʼ ಅಂತ ನಟಿ ರಮ್ಯಾ ವಿಶ್ವಾಸ ವ್ಯಕ್ತಪಡಿಸಿದ್ರು. ಇದೇ ವೇಳೆ ಮದುವೆ ಯಾವಾಗ ಎಂಬ ಅಭಿಮಾನಿಗಳ ಪ್ರಶ್ನೆ ವಿಚಾರವಾಗಿ ಮಾತ್ನಾಡಿದ ರಮ್ಯಾ, ʻನನಗೆ ಫಸ್ಟ್ ಹುಡುಗನನ್ನ ಹುಡುಕಿ. ಗೌಡರ ಹುಡುಗ ಸಿಕ್ತಾರೆ ಅಂದ್ರೆ ನೋಡಿ. ನೀವೆ ಹುಡುಕಿ ನನಗೆ ಒಬ್ಬರು ಕಾಣಿಸ್ತಿಲ್ಲ. ಹುಡುಗನನ್ನ ಹುಡುಕಿ ಕೊಡಿ. ನನಗೂ ಹುಡುಗನನ್ನ ನೋಡಿ ನೋಡಿ ಸಾಕಾಗೋಯ್ತು. ಮಂಡ್ಯದಲ್ಲಿ ಸ್ವಯಂವರನೇ ಮಾಡಿ ಅಂತ ರಮ್ಯಾ ನಸುನಕ್ಕರು.