ಸಿಂಹಾಸನದಲ್ಲಿ ಗಜ ಗಾಂಭೀರ್ಯದಿಂದ ವಿರಾಜಮಾನ್ ಮಹಾರಾಜ ತನ್ನ ಮಂತ್ರಿಯನ್ನು ಕುರಿತು ಹೀಗೆ ಪ್ರಶ್ನಿಸುತ್ತಾನೆ:
ಮಹಾರಾಜಾ: ರಾಜ್ಯದಲ್ಲಿ ಎಲ್ಲರೂ ಸೌಖ್ಯವೇ ಮಂತ್ರಿ?
ಮಂತ್ರಿ: ಎಲ್ಲಾ ಜನರು ಸುಖವಾಗಿದ್ದಾರೆ ಪ್ರಭು. ಪ್ರತಿಯೊಬ್ಬ ನಾಗರಿಕನು ಗರಿಷ್ಠ ತೆರಿಗೆ ಪಾವತಿಸಿ ಕನಿಷ್ಠ ಗಾಳಿ ಉಸಿರಾಡುತ್ತಿದ್ದಾನೆ.
ಮಹಾರಾಜಾ: ಮಂತ್ರಿ ˌ ಜನರು ಮೊದಲು ತೆರಿಗೆ ಕಟ್ಟುತ್ತಿದ್ದಾರೊ ಅಥವ ಮೊಡಲು ಉಸಿರಾಡುತ್ತಿದ್ದಾರೊ?
ಮಂತ್ರಿ: ಇಲ್ಲ ಮಹಾರಾಜಾˌ (ನಗುತ್ತ) ಜನರು ಮೊದಲು ತೆರಿಗೆ ಕಟ್ಟಿ ಆಮೇಲೆ ಉಸಿರಾಡುತ್ತಿದ್ದಾರೆ. ನಿಮ್ಮ ರಾಜ್ಯದಲ್ಲಿ ಮೊದಲು ಉಸಿರಾಡುವುದು ಸಾಧ್ಯವೇ ಪ್ರಭು!? (ಸೆಕ್ಯೂರಿಟಿ ಕಡೆಗೆ ಕೈಮಾಡಿ) ನಿಮ್ಮ ರಾಜ್ಯದಲ್ಲಿ ಈ ರೀತಿಯ ಜನರು ಇರುವಾಗ ಜನರು ತೆರಿಗೆ ಕಟ್ಟದೆ ಉಸಿರಾಡುವುದು ಹೇಗೆ ಸಾಧ್ಯ ಪ್ರಭು?
ಮಹಾರಾಜಾ: ಈ ರೀತಿಯ ಜನರು ಅಂದರೇನು ಮಂತ್ರಿ?
ಮಂತ್ರಿ: ಮಹಾರಾಜಾˌ ಈ ಸೆಕ್ಯೂರಿಟಿ ಗಾರ್ಡ್ ನನ್ನು ಸೆಕ್ಯೂರಿಟಿ ಎಡ್ವೈಜರ್ ಎಂದು ಕರೆಯುವ ತಮ್ಮ ಅದ್ಭುತ ಕಲೆ ಜಗತ್ತಿನಲ್ಲಿ ಯಾರಲ್ಲೂ ಇಲ್ಲ. ಸಣ್ಣ ಕೆಲಸˌ ಹುದ್ದೆಯ ಹೆಸರು ದೊಡ್ಡದು, ಆತ ಮುಂದೆಂದೂ ಬಡ್ತಿ ˌ ಇನ್ಕ್ರಿಮೆಂಟ್ ಕೇಳಲು ಸಾಧ್ಯವೇಯಿಲ್ಲ.

ಮಹಾರಾಜಾ: ಮಂತ್ರಿ, ನಿಮ್ಮೊಳಗೆ ಆ ಕೌಟಿಲ್ಯನಿಗಿಂತ ಶ್ರೇಷ್ಠ ಅರ್ಥಶಾಸ್ತ್ರಜ್ಞನಿದ್ದಾನೆ ನೋಡಿ. ಅಂದ್ಹಾಗೆˌ ರಾಜ್ಯದಲ್ಲಿ ಮಾಧ್ಯಮಗಳು ಹೇಗೆ ಕಾರ್ಯ ನಿರ್ವಹಿಸುತ್ತಿವೆ ಮಂತ್ರಿ?
ಮಂತ್ರಿ: ಮಾಧ್ಯಮಗಳು ಬಹಳ ಚನ್ನಾಗಿ ಕೆಲಸ ಮಾಡ್ತಿವೆ ಪ್ರಭು. ಅವು ಸತ್ಯವನ್ನೇ ಪ್ರಸಾರ ಮಾಡ್ತಿವೆ. ಅವುಗಳನ್ನು ನೀವು ಶಂಖಗಳಾಗಿ ಪರಿವರ್ತಿಸಿದ್ದಿರಿ. ನೀವು ಊದಿದಾಗಲೇ ಅವುಗಳ ಧ್ವನಿ ಹೊರಡುತ್ತದೆ ಪ್ರಭು.
ಮಹಾರಾಜಾ: ದೇಶದ ಆರ್ಥಿಕತೆ ಹೇಗಿದೆ ಮಂತ್ರಿ?
ಮಂತ್ರಿ: ದೇಶದ ಆರ್ಥಿಕತೆಯ ಸಂಕೇತವಾಗಿರುವ ಮತ್ತು ತಮ್ಮನ್ನು ರಾಜ ಸಿಂಹಾಸನದ ಮೇಲೆ ತಂದು ಪ್ರತಿಷ್ಠಾಪಿಸಿರುವ ಇಬ್ಬರು ಕುಬೇರೋದ್ಯಮಿಗಳ ಆರ್ಥಿಕ ಸ್ಥಿತಿ ದ್ವಿಗುಣವಾಗಿದೆ ಪ್ರಭು.
ಮಹಾರಾಜಾ: (ಸಿಟ್ಟಿನಿಂದ ತನ್ನ ಬಿಳಿ ಗಡ್ಡದ ಮೇಲೆ ಕೈಯಾಡಿಸುತ್ತ) ಕೇವಲ ದ್ವಿಗುಣವಾಗಿದೆಯೆ ಮಂತ್ರಿ? ನಾನು ಅಧಿಕಾರದ ಗದ್ದುಗೆ ಏರಿದರೆ ಅವರ ಆರ್ಥಿಕತೆಯನ್ನು ಹತ್ತು ಪಟ್ಟು ಹೆಚ್ಚಿಸುತ್ತೇನೆಂದು ಆಶ್ವಾಸನೆ ಕೊಟ್ಟಿದ್ದೇನೆ.
ಮಂತ್ರಿ: ಆದರೆ ಮಹಾರಾಜಾˌ ತಮ್ಮ ಶರವೇಗದ ಆರ್ಥಿಕ ಪ್ರಗತಿಯ ಪಥದಲ್ಲಿ ದೇಶದ ರೈತರು ಟ್ರ್ಯಾಕ್ಟರ್ ಗಳನ್ನು ತಂದು ನಿಲ್ಲಿಸದಿದ್ದರೆ ದೇಶದ ಆ ಇಬ್ಬರು ಕುಬೇರರ ಆರ್ಥಿಕತೆ ಈಗಾಗಲೇ ಹತ್ತು ಪಟ್ಟು ಹೆಚ್ಚುತ್ತಿತ್ತು.
ಮಹಾರಾಜಾ: ಅದು ಹೇಗೆ ಮಂತ್ರಿ?
ಮಂತ್ರಿ: ಪ್ರಭುˌ ಕೃಷಿ ಮಸೂದೆ ಅಂಗಿಕಾರಗೊಳ್ಳುವ ಮೊದಲೆ ಆ ಇಬ್ಬರು ಕುಬೇರೋದ್ಯಮಿಗಳು ಅಸಂಖ್ಯಾತ ಗೋದಾಮುಗಳನ್ನು ಕಟ್ಟಿಸಿ ರಾಜ್ಯದ ಆಹಾರ-ಧಾನ್ಯ ಮಾರುಕಟ್ಟೆ ವಶಪಡಿಸಿಕೊಳ್ಳಲು ಸಿದ್ದಗೊಂಡಿದ್ದರು. ಆ ರಾಜದ್ರೋಹಿ ರೈತರು ನಿಮ್ಮ ಯೋಜನೆಗೆ ಎಳ್ಳು-ನೀರು ಬಿಟ್ಟರು.
ಮಹಾರಾಜಾ: ಇದರಿಂದ ನನ್ನ ಭಕ್ತರು ನನ್ನ ಮೇಲಿಟ್ಟಿರುವ ಶ್ರದ್ಧೆಗೆ ಕೊರತೆಯಾಗಿದೆಯೆ ಮಂತ್ರಿ?
ಮಂತ್ರಿ: ಇಲ್ಲ ಪ್ರಭು. ಭಕ್ತರು ತಮ್ಮ ಮೇಲಿಟ್ಟಿರುವ ಶ್ರದ್ಧೆಯಲ್ಲಿ ಸಾಸಿವೆ ಕಾಳಿನಷ್ಟೂ ಕಡಿಮೆಯಾಗಿಲ್ಲ. ಏಕೆಂದರೆˌ ೧೦೦೦ ರೂಪಾಯಿ ನೋಟು ನಿಷೇಧಿಸಿ ೨೦೦೦ ರೂಪಾಯಿ ನೋಟು ಜಾರಿಗೆ ತರುವ ಮೂಲಕ ಕಪ್ಪು ಹಣ ಕೊನೆಗೊಳಿಸಬಹುದೆಂದು ಹಾಗು ನೀವೇ ಪರಿಚಯಿಸಿದ ೨೦೦೦ ರೂಪಾಯಿ ನೋಟನ್ನು ನೀವೇ ನಿಷೇಧಿಸಿˌ ಅದಕ್ಕೂ ಕಪ್ಪುಹಣ ಕೊನೆಗೊಳಿಸಲೆಂದೇ ನೋಟನ್ನು ನಿಷೇಧಿಸಿಲಾಗುತ್ತಿದೆ ಎಂದು ಭಕ್ತರ ತಲೆಯಲ್ಲಿ ಗಿಡ ನೆಟ್ಟವರು ತಮ್ಮನ್ನು ಬಿಟ್ಟರೆ ಜಗತ್ತಿನಲ್ಲಿ ಬೇರೆ ಯಾರೂ ಇಲ್ಲ ಪ್ರಭು.
ಮಹಾರಾಜಾ: (ಟಿವಿ ನೋಡುತ್ತ) ಇದೇನಿದು ಮಂತ್ರಿ ˌ ಒಬ್ಬ ಯುವಕ ಚಪ್ಪಲಿಗಳನ್ನು ಕೊರಳಿನಲ್ಲಿ ನೇತಾಕಿಕೊಂಡು ಬರಿಗಾಲಲ್ಲಿ ರಸ್ತೆಯಲ್ಲಿ ಓಡುತ್ತಿರುವುದನ್ನು ಟಿವಿಯವರು ಏಕೆ ತೋರಿಸುತ್ತಿದ್ದಾರೆ? ನನ್ನನ್ನು ಬಿಟ್ಟು ಟಿವಿಯಲ್ಲಿ ಬೆರೆಯವರನ್ನು ತೋರಿಸಬಾರದೆಂದು ಮಾಧ್ಯಮದವರಿಗೆ ನೀವು ತಿಳಿಸಿಲ್ಲವೆ?
ಮಂತ್ರಿ: ಆತ ಒಬ್ಬ ಯುವ ಸೆಲೆಬ್ರಿಟಿ ಪ್ರಭು. ಯಾವುದೊ ಉತ್ಪನ್ನಗಳ ಜಾಹಿರಾತಿನಲ್ಲಿ ನಟಿಸಿದ್ದಾನೆ. ಆತ ತಾನು ಯಾವತ್ತೂ ಉಪಯೋಗಿಸದ ವಸ್ತುಗಳ ಕುರಿತೇ ಹೆಚ್ಚು ಜಾಹಿರಾತು ನೀಡ್ತಾನೆ. ನೀವು ಹೇಗೆ ನಿಮ್ಮ ಭಾಷಣದಲ್ಲಿ ಸತ್ಯವನ್ನು ಪ್ರತಿಪಾದನೆ ಮಾಡ್ತಿರಿ ಮತ್ತು ಅದನ್ನು ಯಾವತ್ತು ಪಾಲಿಸುವುದಿಲ್ಲವೊ ಥೇಟ್ ಅದೇ ರೀತಿ ಆ ಸೆಲೆಬ್ರಿಟಿ ಪ್ರಭು!
ಮಹಾರಾಜ: ಅರ್ಥವಾಯಿತು ಬಿಡಿ ಮಂತ್ರಿ!
~ಡಾ. ಜೆ ಎಸ್ ಪಾಟೀಲ.