ಚುನಾವಣೆ ಸೋತ ಕಾರಣಕ್ಕೆ ಕರೋನಾ ಬಗ್ಗೆ ತಲೆಕೆಡಿಸಿಕೊಂಡಿರುವ ಬಿಜೆಪಿ ಮತ್ತು ಆರ್‌ಎಸ್‌ಎಸ್!

ದೇಶವನ್ನು ದುರ್ದಿನಗಳಿಗೆ ದೂಡಿದ ಕರೋನಾ ಎಂಬ‌ ಕರಾಳತೆ ಬಗ್ಗೆ‌ ಬಿಜೆಪಿ ಮತ್ತು ಅದರ ಮಾರ್ಗದರ್ಶಕ ಸಂಸ್ಥೆ ಆರ್‌ಎಸ್‌ಎಸ್ ಇಷ್ಟೆಲ್ಲಾ ಅನಾಹುತ ಆದ ಬಳಿಕ ಈಗ ಆತ್ಮಾವಲೋಕನ ಮಾಡಿಕೊಳ್ಳತೊಡಗಿವೆ. ಈಗಲೂ ಬಿಜೆಪಿ ಮತ್ತು ಆರ್‌ಎಸ್‌ಎಸ್ ಇಂಥದೊಂದು‌ ಚರ್ಚೆಗೆ ಅಥವಾ ಪರಮಾರ್ಶೆಗೆ ತೆರೆದುಕೊಂಡಿರುವುದು ಕರೋನಾ ಸೋಂಕು ಪ್ರತಿ ದಿನ ಲಕ್ಷಾಂತರ ಜನರನ್ನು ವಕ್ಕರಿಸಿ ದೇಶಕ್ಕೆ ದೇಶವನ್ನೇ ನಡುಗಿಸುತ್ತಿದೆ ಎಂಬ ಕಾರಣಕ್ಕಲ್ಲ. ಪ್ರತಿ ದಿನ ನಾಲ್ಕೈದು ಸಾವಿರ ಜನ ಸಾಯುತ್ತಿದ್ದಾರೆ ಎಂಬ ಕಾರಣಕ್ಕಲ್ಲ.‌ ಕರೋನಾ ಕಷ್ಟ ಕಾಲದಲ್ಲಿ ನಡೆದ ಚುನಾವಣೆಗಳಲ್ಲಿ ಬಿಜೆಪಿ ಸೋತಿದೆ ಎಂಬ ಕಾರಣಕ್ಕೆ!

ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು ಪಶ್ಚಿಮ ಬಂಗಾಳದಲ್ಲಿ ಗೆದ್ದೇ ಬಿಟ್ಟಿದ್ದೇವೆ ಎಂದು ಬೀಗಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಸ್ಥಾನದ ಘನತೆ ಮರೆತು ಚುನಾವಣಾ ಪ್ರಚಾರದ ವೇಳೆ ಮಮತಾ ಬ್ಯಾನರ್ಜಿ ಅವರನ್ನು ‘ದೀದಿ ಓ ದೀದಿ, ಸೋಲು ನಿಮ್ಮ ಮುಂದಿದೆ…’ ಎಂದು ಮೂದಲಿಸಿದ್ದರು. ‘ಬಂಗಾಳದಲ್ಲಿ ಬಿಜೆಪಿ ಮೂರಂಕಿ ದಾಟುವುದಿಲ್ಲ, ಒಂದೊಮ್ಮೆ ದಾಟಿದರೆ ತಾನು ಈ ಕೆಲಸವನ್ನೇ ಬಿಟ್ಟುಬಿಡುತ್ತೇನೆ’ ಎಂದು ಭವಿಷ್ಯ ನುಡಿದಿದ್ದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರನ್ನು ‘ಪ್ಯಾಕಪ್ ಮಾಡಿ, ಗೆಲುವು ನಮ್ಮದೇ’ ಎಂದು ಅಣಕಿಸಿದ್ದರು. ದಕ್ಷಿಣ ಭಾರತದಲ್ಲಿ ಈ ಬಾರಿ ಮೋದಿ-ಶಾ ನೇತೃತ್ವದಲ್ಲಿ ಬಿಜೆಪಿ ‘ಘನ ಸಾಧನೆ’ ಮಾಡಲಿದೆ ಎಂದುಕೊಂಡಿದ್ದರು. ಅಲ್ಲದೆ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ‘ಹಿಂದುತ್ವದ ಐಕಾನ್’ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಭರ್ಜರಿ ಜಯ ಸಾಧಿಸಿ ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಗೆ ಅಣಿಯಾಗುವ ಆಲೋಚನೆ ಇತ್ತು.‌ ಆದರೆ ಎಲ್ಲೆಡೆಯೂ ಸಂಭವಿಸಿದ್ದು ಮರ್ಮಾಘಾತ. ಇದೇ ಈಗ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರನ್ನು ‘ಚಿಂತನ-ಮಂಥನ’ಕ್ಕೆ ಹಚ್ಚಿರುವುದು.

ಬಿಜೆಪಿ ಮತ್ತು ಆರ್‌ಎಸ್‌ಎಸ್  ನಾಯಕರಿಗೆ ತಮ್ಮ ಸೋಲಿಗೆ ಕರೋನಾವೇ ಕಾರಣ ಎನಿಸಿದೆ. ಕರೋನಾ ಎರಡನೇ ಅಲೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಿಭಾಯಿಸುತ್ತಿರುವ ರೀತಿ ಸರಿ ಇಲ್ಲ‌. ಇದೇ ಕಾರಣಕ್ಕೆ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಬಿಜೆಪಿ ಸೋತಿದೆ ಎಂಬುದು ಆರ್‌ಎಸ್‌ಎಸ್ ಅಸಮಾಧಾನ ಎಂದು ದೇಶದ ಪ್ರಮುಖ ವಾಹಿನಿಯಾದ ‘ಎನ್ ಡಿ ಟಿವಿ’ ವರದಿ ಮಾಡಿದೆ. ‌ನರೇಂದ್ರ ಮೋದಿ ಪ್ರಧಾನ ಮಂತ್ರಿ ಆದ ಬಳಿಕ ಏಳು ವರ್ಷಗಳಿಂದ ಯಾವೊಂದು ವಿಚಾರದಲ್ಲೂ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡುವೆ ಈ ಪರಿ ಅಸಮಾಧಾನ ಇರಲಿಲ್ಲ. ಈಗ ಇದೇ ಮೊದಲ ಬಾರಿಗೆ ಆರ್‌ಎಸ್‌ಎಸ್ ಪ್ರಧಾನಿ ಮೋದಿ, ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಡೆಗಳ ಬಗ್ಗೆ ತೀವ್ರ ತೆರನಾದ ಅಸಮಾಧಾನವನ್ನು ಹೊರಹಾಕಿದೆ ಎಂದು ಮೂಲಗಳು ತಿಳಿಸಿರುವುದಾಗಿ ಕೂಡ ‘ಎನ್ ಡಿ ಟಿವಿ’ ವರದಿ ಮಾಡಿದೆ. 

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈಗ ತನ್ನ ವೈಫಲ್ಯಗಳಿಗೆಲ್ಲಾ ಕೋವಿಡ್ ಪರಿಸ್ಥಿತಿಯ ಕಾರಣ ಕೊಡುತ್ತಿದೆ. ಆದರೆ ವಾಸ್ತವವಾಗಿ ಕೋವಿಡ್ ಪರಿಸ್ಥಿತಿ ನಿರ್ವಹಿಸುವುದರಲ್ಲಿ ತನ್ನ ಜವಾಬ್ದಾರಿಯನ್ನು ಮರೆತಿದೆ. ಪರಿಣಾಮವಾಗಿ ಬಿಜೆಪಿಯ ಮತಬ್ಯಾಂಕ್ ಎಂದೇ ಹೇಳಲಾಗುವ ಮಧ್ಯಮ ವರ್ಗದವರು ಹೆಚ್ಚು ಹಾನಿಗೊಳಗಾಗಿದ್ದಾರೆ. ಕರೋನಾ ಸೋಂಕು ಹಳ್ಳಿಗಳಿಗೂ ಹರಡಿದೆ. ವಿಶೇಷವಾಗಿ ಅತಿಹೆಚ್ಚು ಜನಸಂಖ್ಯೆ ಇರುವ ಮತ್ತು ಬಿಜೆಪಿ ಆಡಳಿತ ಇರುವ ಉತ್ತರ ಪ್ರದೇಶ ಹಾಗೂ ಬಿಹಾರದ ಹಳ್ಳಿಗಳಿಗೆ ಹರಡಿದೆ. ಇದಕ್ಕೆ ಯಾರು ಕಾರಣ ಎಂದು ಆರ್‌ಎಸ್‌ಎಸ್ ಅಸಮಾಧಾನ ಹೊರಹಾಕಿರುವ ಮಾಹಿತಿಗಳು ಲಭಿಸುತ್ತಿವೆ. ಕರೋನಾದಿಂದ ತಮ್ಮವರನ್ನು ಕಳೆದುಕೊಂಡವರ ದುಃಖ ಮತ್ತು ಕೋಪ ದೀರ್ಘಕಾಲದವರೆಗೆ ಇರುತ್ತದೆ. ಅದು ಯಾವುದೇ ರೂಪದಲ್ಲಾದರೂ ವ್ಯಕ್ತವಾಗಬಹುದು. ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಬಿಜೆಪಿಗೆ ಉಂಟಾಗಿರುವ ಹಿನ್ನಡೆಯೂ ನಿಜಕ್ಕೂ ಕೂಡ ಗಂಭೀರವಾದುದಾಗಿದೆ. ಇದು ಚಿಂತೆಗೆ ಕಾರಣವಾಗಿದೆ ಇದೆ ಎಂದು ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.

ಇಂಥದೊಂದು ‘ಚಿಂತೆ’ ಹುಟ್ಟಿಕೊಳ್ಳುವುದಕ್ಕೆ ಕಾರಣಗಳೂ ಇವೆ. 2024ಕ್ಕೆ ಲೋಕಸಭಾ ಚುನಾವಣೆ ಬರಲಿದೆ. ಉಳಿದಿರುವುದು ಮೂರು ವರ್ಷ. ಮೂರು ವರ್ಷದ ಬಳಿಕ ಪ್ರಧಾನಿ ಮೋದಿ ಮೂರನೇ ಅವಧಿಗೆ ಪ್ರಯತ್ನಿಸಲಿದ್ದಾರೆ. ಆದರೆ ಅದಕ್ಕೂ ಮೊದಲೇ ದೇಶದ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಆದರೀಗ ಉತ್ತರ ಪ್ರದೇಶದ ಪಂಚಾಯತ್ ಚುನಾವಣೆ ಫಲಿತಾಂಶ ವಿಧಾನಸಭಾ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು.‌ ವಿಧಾನಸಭಾ ಚುನಾವಣೆಯ ಫಲಿತಾಂಶ ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ. ಕರೋನಾ ವ್ಯಾಪಕವಾಗಿ ಹರಡುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಪ್ರಚಾರ ನಡೆಸಿದ್ದು ದೇಶಾದ್ಯಂತ ಬಿಜೆಪಿ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳಲು ಕಾರಣವಾಯಿತು. ಇದರಿಂದ ದೇಶದೊಳಗೆ ಮಾತ್ರವಲ್ಲ ಅಂತಾರಾಷ್ಟ್ರೀಯ ಸಮುದಾಯ ಕೂಡ ಭಾರತದತ್ತ ಬೊಟ್ಟು ಮಾಡಿತು. ಆ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವರು ಆಮ್ಲಜನಕ, ಲಸಿಕೆ ಮತ್ತಿತರ ಔಷಧೀಯ ಸಾಮಗ್ರಿಗಳ ಕೊರತೆ ಬಗ್ಗೆ ಗಮನ ಹರಿಸಬೇಕಾಗಿತ್ತು ಎಂದು ಆರ್‌ಎಸ್‌ಎಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಒಂದೆಡೆ ಹೀಗೆ ಆರ್‌ಎಸ್‌ಎಸ್ ನಾಯಕರು ಪ್ರಧಾನಿ ಮೋದಿಯಿಂದ ಹಿಡಿದು ಬಿಜೆಪಿಯ ಹಿರಿಯ-ಕಿರಿಯ ಮುಖಂಡರ ಮೇಲೆ‌ ಮುಗಿಬಿದ್ದಿದ್ದರೆ ಇನ್ನೊಂದೆಡೆ ಬಿಜೆಪಿ ನಾಯಕರು ತಮ್ಮ ನಡೆಗಳನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಕೂಡ ತಿಳಿದುಬಂದಿದೆ. ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ. ವಿಜಯ ರಾಘವನ್ ಈಗ ಕರೋನಾ ಮೂರನೇ ಅಲೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ಅವರು ಎರಡನೇ ಅಲೆ ಬಗ್ಗೆ ಎಂದಿಗೂ ಮಾತನಾಡಿರಲಿಲ್ಲ. ಯಾವುದೇ ‌ಮುನ್ಸೂಚನೆ ಇಲ್ಲದ ಕಾರಣ ಎರಡನೇ ಅಲೆ ಎದುರಿಸಲು ಸರ್ಕಾರ ಸಿದ್ಧವಾಗಿರಲಿಲ್ಲ ಎಂಬುದು ಸತ್ಯ. ಆದುದರಿಂದ ಪರಿಸ್ಥಿತಿ ಕೈಮೀರಿದೆ ಎಂದು ಸಚಿವರೊಬ್ಬರು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಪ್ರಧಾನಿ ಮೋದಿ ತಮ್ಮ ಗಮನಕ್ಕೆ ಬಂದ ಕೂಡಲೇ ಬಂಗಾಳ ಪ್ರವಾಸವನ್ನು ಮೊಟಕುಗೊಳಿಸಿದರು. ಕರೋನಾ ಸೂಪರ್ ಸ್ಪ್ರೆಡ್ಡರ್ ಆದ ಕುಂಭ ಮೇಳವನ್ನು ನಿಲ್ಲಿಸಲು ಸಂಬಂಧಪಟ್ಟವರನ್ನು ಮನವೊಲಿಸಿದರು. ವಿರೋಧ ಪಕ್ಷ ಆಡಳಿತ ಇರುವ ರಾಜ್ಯಗಳು ರಾಜಕೀಯ ಮಾಡುತ್ತಿವೆ.‌ ಆರೋಗ್ಯವು ರಾಜ್ಯ ಸರ್ಕಾರ ನಿಭಾಯಿಸಬೇಕಾದ ವಿಷಯ.‌ ಆದರೂ ರಾಷ್ಟ್ರಮಟ್ಟದ ಸಮನ್ವಯ ಮತ್ತು ಗಣನೀಯ ಸಂಪನ್ಮೂಲಗಳು ಬೇಕಾಗಿರುವುದರಿಂದ ಕೇಂದ್ರ ಸರ್ಕಾರವು ಕೋವಿಡ್ ನಿರ್ವಹಣೆಯಲ್ಲಿ ಯಶಸ್ವಿಯಾಗಿ ತೊಡಗಿಸಿಕೊಂಡಿದೆ ಎಂದು ಇನ್ನೊಬ್ಬರು ಸಮರ್ಥಿಸಿಕೊಂಡಿರುವುದಾಗಿ ತಿಳಿದುಬಂದಿದೆ. ಒಟ್ಟಿನಲ್ಲಿ ಚುನಾವಣೆ ಗೆಲ್ಲದ ಕಾರಣಕ್ಕಾದರೂ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕರೋನಾ ಬಗ್ಗೆ ಗಮನಹರಿಸಿರುವುದೇ ಸದ್ಯದ ಪುಣ್ಯ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...