• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಬಲಪಂಥೀಯ ಹಿಂಸೆಯೂ ಎಡಪಂಥೀಯ ಪ್ರಜಾತಂತ್ರವೂ

ನಾ ದಿವಾಕರ by ನಾ ದಿವಾಕರ
October 24, 2021
in ಅಭಿಮತ
0
ಬಲಪಂಥೀಯ ಹಿಂಸೆಯೂ ಎಡಪಂಥೀಯ ಪ್ರಜಾತಂತ್ರವೂ
Share on WhatsAppShare on FacebookShare on Telegram

 “ದುಡಿಯುವ ವರ್ಗಗಳ ಅಥವಾ ಶ್ರಮಜೀವಿಗಳ ಕ್ರಾಂತಿಕಾರಿ ಹೋರಾಟದಲ್ಲಿ ಪ್ರಬಲ ಆಳುವ ವರ್ಗಗಳ ವಿರುದ್ಧ ಹೋರಾಡಿ ಅಧಿಕಾರ ಹಿಡಿದು, ಸಮ ಸಮಾಜದ ನಿರ್ಮಾಣದತ್ತ ಸಾಗುವ ಹಾದಿಯಲ್ಲಿ ಬಂಡವಾಳಶಾಹಿ ಮತ್ತು ಸಂಭಾವ್ಯ ಊಳಿಗಮಾನ ವ್ಯವಸ್ಥೆಯ ವಿರುದ್ಧದ ಹೋರಾಟದಲ್ಲಿ, ಖಾಸಗಿ ಆಸ್ತಿಯನ್ನು ನಿರ್ಮೂಲ ಮಾಡಿ ಉತ್ಪಾದನೆಯ ಸಾಧನಗಳನ್ನು ಶ್ರಮಜೀವಿಗಳ ನಿಯಂತ್ರಣಕ್ಕೆ ಪಡೆಯುವ ಮೂಲಕ ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಸಮಾನತೆಯನ್ನು ನೀಡುವ ನಿಟ್ಟಿನಲ್ಲಿ, ಆಳುವ ವರ್ಗಗಳ ಹಿಂಸಾತ್ಮಕ ಪ್ರತಿದಾಳಿಯನ್ನು ಮತ್ತು  ದಬ್ಬಾಳಿಕೆಯನ್ನು ಎದುರಿಸಲು ಮತ್ತು ಸಮತೆಯ ಆಶಯಗಳಿಗೆ ಧಕ್ಕೆ ಉಂಟುಮಾಡುವಂತಹ ಕ್ರಾಂತಿಯನ್ನು ವಿರೋಧಿಸುವ ಶಕ್ತಿಗಳನ್ನು ಮಣಿಸಲು, ಶ್ರಮಜೀವಿಗಳ ಸರ್ವಾಧಿಕಾರದ ಸ್ಥಾಪನೆಗಾಗಿ ಹಿಂಸಾತ್ಮಕ ಮಾರ್ಗವನ್ನೂ ಅನುಸರಿಸಬಹುದು ” ಎನ್ನುವುದು ಮಾರ್ಕ್ಸ್ವಾದದ ಆಶಯ.

ADVERTISEMENT

ಹಿಂಸೆಯ ಮೂಲಕವೇ ಶ್ರಮಜೀವಿಗಳು ಅಧಿಕಾರ ಹಿಡಿಯಲು ಹಂಬಲಿಸುತ್ತಾರೆ ಅಥವಾ ಸಮತಾವಾದವನ್ನು ಸಾಕಾರಗೊಳಿಸಲು ಎಂತಹ ಹಿಂಸಾತ್ಮಕ ಮಾರ್ಗವನ್ನಾದರೂ ಅನುಸರಿಸಲು ಸಜ್ಜಾಗಿರುತ್ತಾರೆ ಎನ್ನುವ ಒಂದು ಕಲ್ಪನೆ ಸಾರ್ವಜನಿಕ ಸಂಕಥನದಲ್ಲಿ ಹಾಸುಹೊಕ್ಕಾಗಿರುವುದರಿಂದ ಇದನ್ನು ಪದೇ ಪದೇ ನೆನಪಿಸಿಕೊಳ್ಳಬೇಕಿದೆ. ವಿಶ್ವದ ಇತಿಹಾಸದಲ್ಲಿ ನಡೆದ ಕ್ರಾಂತಿಕಾರಿ ಹೋರಾಟಗಳನ್ನು ಗಮನಿಸಿದಾಗ ಕೆಲವೊಮ್ಮೆ ಇದು ಅರ್ಧಸತ್ಯ ಎನ್ನುವುದು ಸ್ಪಷ್ಟವಾಗುತ್ತದೆ. ಆದರೂ ಕಮ್ಯುನಿಸ್ಟ್ ಅಥವಾ ಎಡಪಂಥೀಯರು ಎಂದರೆ ಹಿಂಸಾತ್ಮಕ ರಾಜಕಾರಣದ ಹರಿಕಾರರು ಎನ್ನುವ ರೀತಿಯಲ್ಲಿ ಸಾರ್ವಜನಿಕ ಸಂಕಥನಗಳನ್ನು,, ವಿಶೇಷವಾಗಿ ಭಾರತದಲ್ಲಿ ಕಳೆದ ಏಳೆಂಟು ದಶಕಗಳಿಂದಲೂ ಹೆಣೆಯುತ್ತಾ ಬರಲಾಗಿದೆ.

ಸ್ವಾತಂತ್ರ್ಯ ನಂತರದ ಭಾರತೀಯ ಉಪಖಂಡದ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾದಲ್ಲೂ ಎಡಪಂಥೀಯ ಹೋರಾಟಗಳು ಪ್ರಜಾಪ್ರಭುತ್ವದ ಆಶಯಗಳಿಗೆ ಹೋರಾಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇದರ ಮತ್ತೊಂದು ಆಯಾಮವನ್ನು ಗಮನಿಸುವಾಗ ಭಾರತ ಮತ್ತು ನೇಪಾಳದಲ್ಲಿ ನಡೆದ ಮಾವೋವಾದಿಗಳ ಕ್ರಾಂತಿಕಾರಿ ಹೋರಾಟಗಳೂ ಮೇಲಿನ ಪ್ರತಿಪಾದನೆಗಳನ್ನು ಸಮರ್ಥಿಸುವ ರೀತಿಯಲ್ಲಿ ಕಂಡುಬರುತ್ತವೆ. ಭಾರತದ ಛತ್ತೀಸ್‌ಘಡ, ಜಾರ್ಖಂಡ್, ಮಧ್ಯಪ್ರದೇಶ, ಆಂಧ್ರಪ್ರದೇಶ, ಇಂದಿನ ತೆಲಂಗಾಣ ಪ್ರಾಂತ್ಯಗಳಲ್ಲಿ ನಡೆದ ನೂರಾರು ಹೋರಾಟಗಳಲ್ಲಿ ಕ್ರಾಂತಿಯ ಕನಸು ಕಂಡ ನೂರಾರು ಮಂದಿ ಪ್ರಾಣತ್ಯಾಗ ಮಾಡಿದ್ದಾರೆ. ಇಂದಿಗೂ ಸಹ ಈ ರಾಜ್ಯಗಳ ಬುಡಕಟ್ಟು ಸಮುದಾಯಗಳ ಬದುಕು, ಪರಿಸರ, ಅರಣ್ಯ, ನೈಸರ್ಗಿಕ ಸಂಪತ್ತು ಹಾಗೂ ಸಂಪನ್ಮೂಲಗಳ ರಕ್ಷಣೆಗಾಗಿ ಹೋರಾಡುತ್ತಿರುವ ಕ್ರಾಂತಿಕಾರಿ ಗುಂಪುಗಳನ್ನು ಗುರುತಿಸಬಹುದು. ಇಲ್ಲಿ ಸಂಭವಿಸುವ ಹಿಂಸೆ ಮತ್ತು ಪ್ರತಿಹಿಂಸೆಯಲ್ಲಿ ನೂರಾರು ಅಮಾಯಕ ಜೀವಗಳು ಬಲಿಯಾಗಿರುವುದನ್ನು ಅಲಕ್ಷಿಸಲಾಗುವುದಿಲ್ಲ. ಹಾಗೆಯೇ ಕ್ರಾಂತಿಕಾರಿ ಹೋರಾಟಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಪ್ರಭುತ್ವ ಅನುಸರಿಸುವ ಪ್ರತಿಹಿಂಸೆಯ ಮಾರ್ಗಗಳಿಂದಲೂ ನೂರಾರು ಅಮಾಯಕ ಜೀವಗಳು ಬಲಿಯಾಗಿರುವುದನ್ನೂ ಅಲ್ಲಗಳೆಯಲಾಗುವುದಿಲ್ಲ. ಇಲ್ಲಿ ಮಾವೋವಾದಿಗಳು ಅನುಸರಿಸುತ್ತಿರುವ ಮಾರ್ಗ ಪರಾಮರ್ಶೆಗೊಳಗಾಗಬೇಕೇ ಹೊರತು ಮೂಲ ಮಾವೋವಾದ ಅಥವಾ ಮಾರ್ಕ್ಸ್ವಾದ ಅಲ್ಲ.

ಆದರೆ ಸಮಕಾಲೀನ ಸಂದರ್ಭದ ರಾಜಕೀಯ ಬೆಳವಣಿಗೆಗಳನ್ನು ಗಮನಿಸುವಾಗ, ಭಾರತದ ಉಪಖಂಡದಲ್ಲಿ, ವಿಶೇಷವಾಗಿ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಕಳೆದ ಐದಾರು ದಶಕಗಳಲ್ಲಿ ನಡೆದಿರುವ ಹಿಂಸಾತ್ಮಕ ಘಟನೆಗಳನ್ನು ನೇಪಥ್ಯಕ್ಕೆ ಸರಿಸಲಾಗುವುದಿಲ್ಲ. ಈ ಮೂರೂ ದೇಶಗಳಲ್ಲಿ, ಈ ಅವಧಿಯಲ್ಲಿ ಬಲಪಂಥೀಯ ರಾಜಕಾರಣದ ಬೆಳವಣಿಗೆಯೊಂದಿಗೇ, ಬಲಪಂಥೀಯ ಗುಂಪುಗಳು, ಮತೀಯ ಶಕ್ತಿಗಳು, ಮತಾಂಧ ಸಂಘಟನೆಗಳು ಸಾವಿರಾರು ಅಮಾಯಕರ ಹತ್ಯೆಗೆ ಕಾರಣವಾಗಿವೆ. ಅಧಿಕಾರ ರಾಜಕಾರಣದ ಪ್ರಧಾನ ಕೇಂದ್ರಗಳು, ಊಳಿಗಮಾನ್ಯ ವ್ಯವಸ್ಥೆಯ ಪಳೆಯುಳಿಕೆಗಳನ್ನು ಗಟ್ಟಿಗೊಳಿಸುವ ಅಧಿಕಾರಶಾಹಿಗಳು, ನವ ಉದಾರವಾದದ ಶೋಷಕ ಮಾರುಕಟ್ಟೆ ನೀತಿಯ ಪ್ರತಿಪಾದಕರು, ಜಾತಿ ಮತ್ತು ಮತಗಳ ಆಧಿಪತ್ಯವನ್ನು ಸಾಧಿಸಲು ಜನಸಮುದಾಯಗಳನ್ನು ಶಾಶ್ವತ ದಮನಕ್ಕೊಳಪಡಿಸುವ ಮತೀಯ ಶಕ್ತಿಗಳು, ಈ ಮೂರೂ ದೇಶಗಳಲ್ಲಿ ತಮ್ಮ ಪ್ರಾಬಲ್ಯ ಸಾಧಿಸಿವೆ.

ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಈ ಮತಾಂಧ ಗುಂಪುಗಳು ಕೆಲವೊಮ್ಮೆ ನೇರವಾಗಿ, ಕೆಲವೊಮ್ಮೆ ನೇಪಥ್ಯದಲ್ಲಿದ್ದುಕೊಂಡು, ಅಧಿಕಾರ ರಾಜಕಾರಣದ ಮೂಲ ಕೇಂದ್ರಗಳನ್ನು ನಿಯಂತ್ರಿಸಿವೆ, ಇಂದಿಗೂ ನಿಯಂತ್ರಿಸುತ್ತಿವೆ. ಭಾರತದಲ್ಲಿ ಮತಾಂಧತೆಯನ್ನು ಹಂತಹAತವಾಗಿ ಬೆಳೆಸಲಾಗುತ್ತಿದ್ದು ಕಳೆದ ಮೂರು ನಾಲ್ಕು ದಶಕಗಳಲ್ಲಿ ಇದು ಸಾಂಸ್ಕೃತಿಕ ರಾಷ್ಟ್ರೀಯತೆಯ ಹೆಸರಿನಲ್ಲಿ ರಾಜಕೀಯ ಸ್ವರೂಪ ಪಡೆಯುತ್ತಿದೆ. ಬಾಂಗ್ಲಾದೇಶವನ್ನು ಒಂದು ಇಸ್ಲಾಮಿಕ್ ರಾಷ್ಟ್ರ ಎಂದು ಘೋಷಿಸಿದ್ದರೂ ಅಲ್ಲಿನ ಸಂವಿಧಾನ ಜಾತ್ಯತೀತತೆಯನ್ನು ಎತ್ತಿಹಿಡಿಯುತ್ತದೆ. ಅಲ್ಪಸಂಖ್ಯಾತರ ಮೇಲೆ ಧಾಳಿ ಮಾಡುವ ಬಹುಸಂಖ್ಯಾತರ ಮತೀಯ ಗುಂಪುಗಳು ಈ ಮೂರೂ  ದೇಶಗಳಲ್ಲಿ ಸಕ್ರಿಯವಾಗಿದ್ದು, ಕಳೆದ ದಶಕಗಳಲ್ಲಿ ಸಾವಿರಾರು ಹತ್ಯೆಗಳಿಗೆ ಕಾರಣವಾಗಿವೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ  ಹತ್ಯಾಕಾಂಡದಿಂದ ಗುಜರಾತ್-ಮುಜಾಫರ್‌ನಗರ-ದೆಹಲಿಯವರೆಗೆ ಈ ಕರಾಳ ಇತಿಹಾಸ ಚಾಚಿಕೊಂಡಿರುವುದನ್ನು ಗಮನಿಸಬಹುದು. ಈ ಹತ್ಯಾಕಾಂಡಗಳಲ್ಲಿ ಹಂತಕರು ಯಾರು ಎನ್ನುವುದಕ್ಕಿಂತಲೂ ಈ ಹಂತಕ ಮನಸ್ಥಿತಿಯನ್ನು ಸೃಷ್ಟಿಸುವ ಸಾಂಸ್ಕೃತಿಕ ರಾಜಕಾರಣದ ನೆಲೆಗಳು ಮುಖ್ಯವಾಗುತ್ತವೆ.

ಕಳೆದ ಮೂರು ದಶಕಗಳ ಸಾಂಸ್ಕೃತಿಕ ರಾಜಕಾರಣದಲ್ಲಿ, ಶವಗಳ ನಡುವೆ ಮತೀಯ ಅಸ್ಮಿತೆಯನ್ನು ಶೋಧಿಸುವ ಒಂದು ಪರಂಪರೆಯನ್ನೇ ಈ ಮತಾಂಧ ಶಕ್ತಿಗಳು ಬೆಳೆಸಿಕೊಂಡು ಬಂದಿರುವುದರಿಂದ ಬಲಪಂಥೀಯ ಹಿಂಸಾಕೃತ್ಯಗಳಿಗೆ ಬಲಿಯಾಗಿರುವ ಅಮಾಯಕ ಜೀವಗಳು ತಮ್ಮ ಮೂಲ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕಳೆದುಕೊಂಡು ಕೇವಲ ಎಣಿಕೆಯ ಮೆಟ್ಟಿಲುಗಳಾಗಿವೆ. ಭಾರತದಲ್ಲಿ ಒಂದು ಕಾಲಘಟ್ಟದಲ್ಲಿ ಪ್ರಬಲವಾಗಿದ್ದ ನಕ್ಸಲೀಯ ಚಳುವಳಿ ತನ್ನ ಅಂತಿಮ ಗುರಿಯಾಗಿ ಹಿಂಸೆಯನ್ನು ಅನುಕರಿಸಿದರೂ, ಸಾರ್ವಜನಿಕ ಬದುಕಿನಲ್ಲಿ ಹಿಂಸೆಯನ್ನು ಪ್ರಚೋದಿಸಿಲ್ಲ ಎನ್ನುವುದನ್ನು ಈಗಲಾದರೂ ಗಮನಿಸಬೇಕಿದೆ. ತನ್ನ ತತ್ವ ಸಿದ್ಧಾಂತಗಳಿಗನುಗುಣವಾಗಿ ಹಿಂಸಾತ್ಮಕ ಮಾರ್ಗವನ್ನು ಅನುಸರಿಸುತ್ತಿರುವ ಮಾವೋವಾದಿಗಳಿಂದ ಸಮಾಜದಲ್ಲಿ ಸಮುದಾಯಗಳ ನಡುವೆ ದ್ವೇಷ ಬೀಜಗಳನ್ನು ಬಿತ್ತಲಾಗಿಲ್ಲ, ಜಾತಿ ವೈಷಮ್ಯಗಳನ್ನು ಹರಡಲಾಗಿಲ್ಲ, ಮತೀಯ ಭಾವನೆಗಳನ್ನು ಕೆರಳಿಸಲಾಗಿಲ್ಲ. ಹಾಗೆಂದ ಮಾತ್ರಕ್ಕೆ ಮಾವೋವಾದಿಗಳು ಅನುಸರಿಸುತ್ತಿರುವ ಹಿಂಸಾತ್ಮಕ ಮಾರ್ಗವನ್ನು ಸಮ್ಮತಿಸಬೇಕೆಂದಿಲ್ಲ. ಆದರೆ ಜನಸಮುದಾಯಗಳ ನಡುವೆ ದ್ವೇಷದ ಗೋಡೆಗಳನ್ನು ಕಟ್ಟುವ ಕೆಲಸವನ್ನು ಈ ಚಳುವಳಿಯ ಇತಿಹಾಸದಲ್ಲೇ ಕಾಣಲಾಗುವುದಿಲ್ಲ.

ಆದರೂ ಇಡೀ ಎಡಪಂಥೀಯ ಸಿದ್ಧಾಂತವನ್ನೇ ಈ ಮಾವೋವಾದಿಗಳ ಮಾರ್ಗದೊಡನೆ ಸಮೀಕರಿಸುವ ಮೂಲಕ ಕಮ್ಯುನಿಸ್ಟರನ್ನು ಹಿಂಸೆಯ ಪ್ರತಿಪಾದಕರು ಎಂದೇ ಬಿಂಬಿಸುವ ಒಂದು ಧೋರಣೆ ಸಾರ್ವಜನಿಕ ವಲಯದಲ್ಲಿ, ದಲಿತ ಚಳುವಳಿಗಳಲ್ಲಿ, ಅಂಬೇಡ್ಕರ್‌ವಾದಿಗಳ ನಡುವೆಯೂ, ಇಂದಿಗೂ ಕಂಡುಬರುತ್ತದೆ.  ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯನ್ನು ಒಪ್ಪಿಕೊಂಡು, ಸಂವಿಧಾನ ಬದ್ಧತೆಯಿಂದ ಅಧಿಕಾರ ರಾಜಕಾರಣದಲ್ಲಿ ಸಕ್ರಿಯವಾಗಿರುವ ಎಡಪಕ್ಷಗಳಿಂದ ಹಿಂಸೆಯ ಪ್ರತಿಪಾದನೆಯನ್ನು ಎಲ್ಲಿಯೂ ಕಾಣಲಾಗದು ಅಲ್ಲವೇ ? ಎಡಪಕ್ಷಗಳ ಮುಂದಾಳತ್ವದಲ್ಲಿರುವ ಕಾರ್ಮಿಕ ಸಂಘಟನೆಗಳಲ್ಲೂ ಸಹ ಹಿಂಸಾತ್ಮಕ ಧೋರಣೆಯನ್ನು ಗುರುತಿಸಲಾಗುವುದಿಲ್ಲ. ಅಧಿಕಾರ ರಾಜಕಾರಣದ ಚೌಕಟ್ಟಿನಲ್ಲಿ ಕೇರಳ, ಪಶ್ಚಿಮ ಬಂಗಾಲದಲ್ಲಿ ನಡೆದಿರಬಹುದಾದ ಮತ್ತು ನಡೆಯಬಹುದಾದ ಸಾಂಘಿಕ ಹಿಂಸೆಯನ್ನು ಸಮಕಾಲೀನ ರಾಜಕೀಯ ನೆಲೆಯಲ್ಲಿ ಪರಾಮರ್ಶಿಸಬೇಕೇ ಹೊರತು, ಮಾರ್ಕ್ಸ್ವಾದಿ ಸಿದ್ಧಾಂತದ ತಾತ್ವಿಕ ನೆಲೆಯಲ್ಲಿ ಅಲ್ಲ. ಇದಕ್ಕೆ ಪ್ರತಿಯಾಗಿ ಭಾರತದಲ್ಲಿ ಕಳೆದ ಮೂರು ದಶಕಗಳಿಂದ ರಾಜಕೀಯ ಪ್ರಾಬಲ್ಯವನ್ನೂ ಗಳಿಸಿರುವ ಬಲಪಂಥೀಯ ರಾಜಕಾರಣದ ಇತಿಹಾಸವನ್ನೊಮ್ಮೆ ಗಮನಿಸಿದರೆ, ಹಿಂಸೆ-ಪ್ರತಿ ಹಿಂಸೆಯ ಇತಿಹಾಸವೇ ತೆರೆದುಕೊಳ್ಳುತ್ತದೆ. ಈ ಬೆಳವಣಿಗೆಯ ನಡುವೆಯೇ ಶಿಕ್ಷಾರ್ಹ ಹಂತಕರೂ ಇಂದು ಅಭಿನಂದನಾರ್ಹರಾಗಿ ಅಧಿಕಾರ ಪೀಠಗಳಲ್ಲಿ ರಾರಾಜಿಸುತ್ತಿದ್ದಾರೆ.

ಭಾರತದಲ್ಲಿ ಮತ್ತು ವಿಶ್ವದಾದ್ಯಂತ ಬಲಪಂಥೀಯ ರಾಜಕಾರಣ ನವ ಉದಾರವಾದ ಪೋಷಣೆಯೊಂದಿಗೆ ಪ್ರಬಲವಾಗುತ್ತಿದೆ. ಅಮೆರಿಕದಂತಹ ಮುಕ್ತ ಸಮಾಜದಲ್ಲೂ ಕರಿಯರ ವಿರುದ್ಧ ಅವ್ಯಾಹತ ಧಾಳಿ ನಡೆಯುತ್ತಿರುವುದನ್ನು ಜಾರ್ಜ್ ಫ್ಲಾಯ್ಡ್ ಘಟನೆಯಲ್ಲೇ ಕಂಡಿದ್ದೇವೆ. ಉತ್ಪಾದನೆಯ ಮೂಲಗಳ ಮೇಲೆ ಪ್ರಾಬಲ್ಯ ಸಾಧಿಸುವ ಮೂಲಕ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಮಾರುಕಟ್ಟೆ ಆಧಿಪತ್ಯವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಬಹುಸಂಖ್ಯಾತ ಸಮುದಾಯಗಳು ಅಲ್ಪಸಂಖ್ಯಾತರನ್ನು ಸದಾ ಅಂಚಿನಲ್ಲಿರಿಸಲು ಯತ್ನಿಸುವುದು ಜಾಗತಿಕ ವಿದ್ಯಮಾನವೇ ಆಗಿದೆ. ಭಾರತದಂತಹ ಸಾಂಪ್ರದಾಯಿಕ ದೇಶಗಳಲ್ಲಿ, ಜಾತಿ-ಮತದ ಪಾರಮ್ಯವೇ ಪ್ರಧಾನವಾಗಿರುವುದರಿಂದ ಇಲ್ಲಿ ಅಧಿಕಾರಸ್ಥ ರಾಜಕಾರಣದಿಂದ ಮತ್ತು ಮಾರುಕಟ್ಟೆ ಆಧಿಪತ್ಯದಿಂದ ಅಲ್ಪಸಂಖ್ಯಾತರನ್ನು, ಕೆಳಸ್ತರದ ಜಾತಿ ಸಮುದಾಯಗಳನ್ನು ದೂರ ಇರಿಸುವ ಪ್ರಯತ್ನಗಳು ಹೆಚ್ಚು ಹಿಂಸಾತ್ಮಕವಾಗಿ ನಡೆಯುತ್ತವೆ. ಭಾರತದಲ್ಲಿ ಬಲಪಂಥೀಯ ರಾಜಕಾರಣ ನವ ಉದಾರವಾದ ಮತ್ತು ಬಂಡವಾಳಶಾಹಿಯನ್ನು ಪೋಷಿಸುವುದರೊಂದಿಗೇ ಬೆಳೆದುಬಂದಿದ್ದು, ಕಳೆದ ಏಳು ವರ್ಷಗಳಲ್ಲಿ ಅಲ್ಪಸಂಖ್ಯಾತರ ಸಂಸದೀಯ ಪ್ರಾತಿನಿಧ್ಯವನ್ನೂ ಕಡೆಗಣಿಸುತ್ತಿರುವುದನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ.

ಬಾಂಗ್ಲಾದೇಶದಲ್ಲಿ ಈಗ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ದಾಳಿಯನ್ನು ಖಂಡಿಸುತ್ತಲೇ ಅಲ್ಲಿನ ಸರ್ಕಾರ ಗಲಭೆ ನಿಯಂತ್ರಿಸಲು ಮತ್ತು ಸೌಹಾರ್ದತೆಯನ್ನು ಕಾಪಾಡಲು ಕೈಗೊಳ್ಳುತ್ತಿರುವ ಕ್ರಮಗಳನ್ನೂ ಗಮನಿಸಬೇಕು. ಬಾಂಗ್ಲಾದ ಹಿಂದೂಗಳ ರಕ್ಷಣೆಗೆ ಕಟಿಬದ್ಧವಾಗಿರುವ ಅಲ್ಲಿನ ಸರ್ಕಾರ ಹಲ್ಲೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಭಾರತದ ಗುಜರಾತ್ ಗಲಭೆಗಳಲ್ಲಿ, ಮುಝಫರ್‌ನಗರ ಮತ್ತು ಸಿಎಎ ಸಂದರ್ಭದ ದೆಹಲಿ ಗಲಭೆಗಳಲ್ಲಿ ಇದೇ ಸಂಯಮ ಮತ್ತು ಸಂವೇದನೆಯನ್ನು ನಮ್ಮ ಸರ್ಕಾರಗಳು ತೋರಿವೆಯೇ ಎಂದು ಪ್ರಶ್ನಿಸಿಕೊಳ್ಳಬೇಕಿದೆ. ಕರ್ನಾಟಕದ ಕರಾವಳಿಯಲ್ಲೇ ಅವ್ಯಾಹತವಾಗಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳು ಅನಿಯಂತ್ರಿತವಾಗಿವೆ. ನೂತನ ಮುಖ್ಯಮಂತ್ರಿಗಳ ಆಶಯದಂತೆ ಕ್ರಿಯೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ವಿಶ್ವ ಹಿಂದೂ ಪರಿಷತ್‌ನ ನಾಯಕರು “ ಹಿಂದೂಗಳ ಮೇಲೆ ನಡೆಯುವ ಹಲ್ಲೆಗೆ ನಾವು ಪ್ರತಿಕ್ರಿಯೆ ಕೊಡಲು ಕತ್ತಿ ಹಿಡಿದರೆ, ‘ನಿಮಗೆ’ ಶವ ಹೂಳಲೂ ಜಾಗ ಸಿಗುವುದಿಲ್ಲ ” ಎಂದು ಬಹಿರಂಗವಾಗಿಯೇ ಘೋಷಿಸುತ್ತಾರೆ.

ಇಲ್ಲಿ ‘ ನಿಮಗೆ ’ ಎನ್ನುವುದರ ಹಿಂದೆ ವಿಶಾಲಾರ್ಥವಿದೆ. ಹಾಗೆಯೇ ‘ ಹಿಂದೂಗಳ ಮೇಲೆ ನಡೆಯುವ ಹಲ್ಲೆ ‘ ಎನ್ನುವುದಕ್ಕೂ ವಿಶಾಲಾರ್ಥವಿದೆ. ಯಾವುದೇ ಕ್ರಿಯೆ ಪ್ರತಿಕ್ರಿಯೆ ಇಲ್ಲದೆಯೇ ಈ ದೇಶದ ದಲಿತರಿಗೆ, ಅಸ್ಪೃಶ್ಯರಿಗೆ ಶವ ಹೂಳಲು ಜಾಗ ಸಿಗದಂತಹ ಪರಿಸ್ಥಿತಿ ನಮ್ಮ ನಡುವೆಯೇ ಇದೆ. ಕರಂಚೇಡುವಿನಿಂದ ಹಿಡಿದು ಕಂಬಾಲಪಲ್ಲಿ, ಖೈರ್ಲಾಂಜಿ, ಇತ್ತೀಚಿನ ಊನ ವರೆಗೆ ಹಿಂದೂಗಳೆಂದೇ ಭಾವಿಸಲಾಗಿರುವ ಅಸ್ಪೃಶ್ಯರ ಮೇಲೆ ನಡೆಯುತ್ತಿರುವ ಹಲ್ಲೆಗಳು ಈ ವ್ಯಾಖ್ಯಾನಕ್ಕೆ ಅರ್ಹತೆ ಪಡೆಯುವುದಿಲ್ಲ. ಕರ್ನಾಟಕದಲ್ಲಿ ಮನುಜ ಸಂಬಂಧಗಳನ್ನು ಬೆಸೆಯುವ ಪ್ರೀತಿ, ಪ್ರೇಮ ಮತ್ತು ಸ್ನೇಹ ಹಸ್ತಗಳೇ ಅಲ್ಪಸಂಖ್ಯಾತರ ಪಾಲಿಗೆ ‘ ಕ್ರಿಯೆ ’ ಎಂದಾಗಿದೆ. ಇದಕ್ಕೆ ‘ ಪ್ರತಿಕ್ರಿಯೆ’ಯ ರೂಪದಲ್ಲಿ ಬೆಳಗಾವಿಯಲ್ಲಿ, ಉಡುಪಿಯಲ್ಲಿ, ಮಂಗಳೂರಿನಲ್ಲಿ ತ್ರಿಶೂಲ ದೀಕ್ಷೆ, ತಲವಾರು ಮೆರವಣಿಗೆಗಳೂ ನಡೆದಿವೆ. ಈ ಮುಕ್ತ ವಾತಾವರಣದಲ್ಲೇ ವಿಶ್ವಹಿಂದೂ ಪರಿಷತ್ ನಾಯಕರು ಈ ದೇಶದ ಮಸಣಗಳಿಗೂ ಅಸ್ಮಿತೆಯನ್ನು ಸೃಷ್ಟಿಸಲು ಮುಂದಾಗಿದ್ದಾರೆ. ಬಹುಶಃ ನೆಲೆಹೀನರಾಗುತ್ತಿರುವ ಸಮುದಾಯಗಳೇ ಮಸಣಹೀನವೂ ಆಗುವ ಸಾಧ್ಯತೆಗಳಿವೆ.

ಬಲಪಂಥೀಯ ಹಿಂಸೆ ಬೆಳೆಯುವ ವಿಧಾನ ಇದು. ಆಳುವ ವರ್ಗಗಳ ರಕ್ಷಣೆಯೊಂದಿಗೆ, ಮಾರುಕಟ್ಟೆ ಶಕ್ತಿಗಳ ಪೋಷಣೆಯೊಂದಿಗೆ ಮತ್ತು ಭಾರತದಲ್ಲಿ ಬೇರೂರಿರುವ ಜಾತಿ ತಾರತಮ್ಯಗಳ ಚೌಕಟ್ಟಿನಲ್ಲಿ, ಒಂದು ನಿರ್ದಿಷ್ಟ ಮತೀಯ ಅಸ್ಮಿತೆಯನ್ನು ರೂಪಿಸುತ್ತಲೇ, ಅಲ್ಪಸಂಖ್ಯಾತ ಸಮುದಾಯಗಳನ್ನು ಮತ್ತು ಈ ಚೌಕಟ್ಟಿನ ಹೊರಗುಳಿಯುವ – ದಲಿತರು, ಮಹಿಳೆಯರು, ಆದಿವಾಸಿಗಳು, ಶೋಷಿತರು, ಪ್ರಗತಿಪರರು ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಕಮ್ಯುನಿಸ್ಟರನ್ನು- ಈ ಬಲಪಂಥೀಯ ರಾಜಕಾರಣಕ್ಕೆ ಪ್ರಥಮ ಶತ್ರುಗಳಾಗಿ ಕಾಣಲಾಗುತ್ತದೆ. ಮತ್ತೊಂದೆಡೆ ಬಲಪಂಥೀಯ ರಾಜಕಾರಣದಲ್ಲಿ ತಮ್ಮ ಬದುಕಿನ ಮೂಲ ನೆಲೆಯನ್ನೇ ಕಳೆದುಕೊಳ್ಳುತ್ತಿರುವ ಆದಿವಾಸಿಗಳು, ನಿತ್ಯ ದೌರ್ಜನ್ಯ ಎದುರಿಸುತ್ತಿರುವ ಅಸ್ಪೃಶ್ಯರು, ಅತ್ಯಾಚಾರ ಮತ್ತು ದೌರ್ಜನ್ಯದ ನಡುವೆಯೇ ಬದುಕುತ್ತಿರುವ ಶೋಷಿತ ಸಮುದಾಯದ ಮಹಿಳೆಯರು  ‘ಹಿಂದೂ’ ಎನಿಸಿಕೊಳ್ಳುವುದಿಲ್ಲ. ವಿಹಿಂಪ ನಾಯಕರು ಉಲ್ಲೇಖಿಸಿದ “ಶವ ಹೂಳಲೂ ಜಾಗ ದೊರೆಯದವರ” ಸಾಲಿಗೆ ಇವರೆಲ್ಲರನ್ನೂ ಸೇರಿಸಲಾಗುತ್ತದೆ. ಕಂಬಾಲಪಲ್ಲಿಯಲ್ಲಿ ಸುಟ್ಟು ಕರಕಲಾದ ದೇಹಗಳೂ, ಹಾಥ್ರಸ್‌ನಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆಯೂ, ಬೆಳಗಾವಿಯಲ್ಲಿ ಶಿರಚ್ಚೇದನಕ್ಕೊಳಗಾದ ದೇಹವೂ ಯಾವುದೇ ವ್ಯತ್ಯಾಸ ಕಾಣದೆ ಈ ಮಸಣಹೀನರ ಸಾಲಿನಲ್ಲಿ ಸೇರಿಬಿಡುತ್ತವೆ.

ಭಾರತದ ಸಂಸದೀಯ ಎಡಪಕ್ಷಗಳು ಯಾವುದೇ ಸಂದರ್ಭದಲ್ಲೂ ತಮ್ಮ ಕಾರ್ಯಕರ್ತರಿಗೆ  ಶಸ್ತಾಸ್ತ್ರಗಳನ್ನು ಪೂರೈಸುವ ಸಂಘಟನೆಗಳೊಡನೆ ಗುರುತಿಸಿಕೊಂಡಿಲ್ಲ ಎನ್ನುವುದನ್ನು ಗಮನಿಸಬೇಕಿದೆ. ಹಿಂಸೆ ಮತ್ತು ಹಿಂಸಾತ್ಮಕ ರಾಜಕಾರಣದೊಡನೆ ಎಡಪಂಥೀಯರನ್ನು ಸಮೀಕರಿಸುತ್ತಲೇ ಬೆಳೆಯುತ್ತಿರುವ ಬಲಪಂಥೀಯ ರಾಜಕಾರಣ ಇಂತಹ ಅಸಂಖ್ಯಾತ ಸಂಘಟನೆಗಳಿಗೆ ಪೋಷಣೆ ನೀಡುತ್ತಿದೆ. ಸಮರ್ಥನೆಯನ್ನೂ ಒದಗಿಸುತ್ತಿದೆ. ಮಂಗಳೂರಿನಲ್ಲಿ ನಡೆದ ತ್ರಿಶೂಲ ದೀಕ್ಷೆ, ಉಡುಪಿಯಲ್ಲಿ ನಡೆದ ತಲವಾರು ಮೆರವಣಿಗೆ ಮತ್ತು ವಿಶ್ವಹಿಂದೂ ಪರಿಷತ್ತಿನ ನಾಯಕರ ಘೋಷಣೆ ಇದಕ್ಕೆ ಸಾಕ್ಷಿಯಷ್ಟೇ. ಈ ಹಿಂಸಾತ್ಮಕ ಘೋಷಣೆಯನ್ನೂ ಸಹ ತಮ್ಮ ‘ಕ್ರಿಯೆ ಪ್ರತಿಕ್ರಿಯೆ’ ವ್ಯಾಖ್ಯಾನಕ್ಕೊಳಪಡಿಸಿರುವ ರಾಜ್ಯ ಮುಖ್ಯಮಂತ್ರಿಗಳು ತಾವು ಪ್ರಜಾಸತ್ತಾತ್ಮಕ ಸಂವಿಧಾನವನ್ನು ಪ್ರತಿನಿಧಿಸುತ್ತಿರುವುದನ್ನೇ ಮರೆತಂತೆ ಕಾಣುತ್ತಿದೆ. ಬಲಪಂಥೀಯ ರಾಜಕಾರಣದ ಈ ದ್ವಿಮುಖ ನೀತಿಯೇ ಭಾರತವನ್ನು ಇಂದು ದ್ವೇಷ ರಾಜಕಾರಣದ ತವರೂರಿನಂತೆ ಮಾಡಿರುವುದನ್ನು ಗುಜರಾತ್‌ನಿಂದ ಕರ್ನಾಟಕದವರೆಗೆ ಗುರುತಿಸಬಹುದು.

ಇಂದು ಬಾಂಗ್ಲಾದೇಶದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಬಹುಸಂಖ್ಯಾತ ಮತಾಂಧರ ಹೆಜ್ಜೆ ಗುರುತುಗಳನ್ನು ಗಮನಿಸಿದರೆ ಭಾರತದ ನೆಲದಲ್ಲೂ ಇದೇ ಒಳಸುಳಿಗಳು ಇರುವುದನ್ನೂ ಗಮನಿಸಬಹುದು. ಬಹುಶಃ ಇಂದು ಈ ಹೆಜ್ಜೆ ಗುರುತುಗಳು ಬೃಹತ್ ಸ್ಥಾವರಗಳಾಗಲು ಸಜ್ಜಾಗಿವೆ. ಮತಾಂಧತೆ ಮತ್ತು ಕೋಮು ದ್ವೇಷದ ಹಲವು ಪ್ರಯೋಗಶಾಲೆಗಳನ್ನು ಭಾರತದ ಇತಿಹಾಸದಲ್ಲಿ ಕಂಡಿದ್ದೇವೆ. ಕರ್ನಾಟಕ ಈಗ ಮತ್ತೊಂದು ಪ್ರಯೋಗಶಾಲೆಯಾಗಲು ಸಜ್ಜಾಗುವಂತಿದೆ. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯದಲ್ಲಿನ ಮತಾಂಧತೆಯನ್ನು ಹೋಗಲಾಡಿಸುವುದರೊಂದಿಗೇ, ಸೌಹಾರ್ದಯುತ ಸಮಾಜವನ್ನು ರೂಪಿಸುವ ನಿಟ್ಟಿನಲ್ಲಿ ಎಡಪಂಥೀಯ ಚಳುವಳಿಗಳು ಮತ್ತು ಮನಸುಗಳು ಇನ್ನೂ ಹೆಚ್ಚು ಕ್ರಿಯಾಶೀಲತೆಯೊಂದಿಗೆ ಮುನ್ನಡೆಯಬೇಕಿದೆ.  ಶವಗಳನ್ನು ಅಸ್ಮಿತೆಯಾಧಾರದ ಮೇಲೆ ಹೆಕ್ಕಿತೆಗೆಯುವ ಹಂತದಿಂದ ಮಸಣಹೀನವನ್ನಾಗಿ ಮಾಡುವ ಹಂತಕ್ಕೆ ಭಾರತದ ಬಲಪಂಥೀಯ ರಾಜಕಾರಣ ಬೆಳೆದುಬಂದಿರುವ ಸಂದರ್ಭದಲ್ಲಿ, “ ವಿಶ್ವದ ಶ್ರಮಜೀವಿಗಳೇ ಒಂದಾಗಿ” ಎಂಬ ಉದಾತ್ತ ಆಲೋಚನೆಯನ್ನು ಹೊತ್ತ ಎಡಪಂಥೀಯರ ಹೆಜ್ಜೆಗಳು ಮನುಜ ಜೀವಗಳ ರಕ್ಷಣೆಗಾಗಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಿ, ಬೆಳೆಸುವ ಹಾದಿಯಲ್ಲಿ ಮಾನವೀಯ ಜಗತ್ತನ್ನು ನಿರ್ಮಿಸಲು ಮುಂದಾಗಬೇಕಿದೆ.

ಇದೇ ವೇಳೆ ಕಮ್ಯುನಿಸ್ಟರು ಎಂದರೆ ಹಿಂಸೆಯ ಪ್ರತಿಪಾದಕರು ಎಂಬ ಹಳಸಲು ವಾದವನ್ನೇ ಮುಂದಿಟ್ಟುಕೊಂಡು ಈ ದೇಶದ ದಲಿತ ಚಳುವಳಿಗಳೂ, ಅಂಬೇಡ್ಕರ್‌ವಾದಿಗಳೂ ಎಡಪಂಥೀಯ ವಿಚಾರಧಾರೆಯನ್ನು ತಿರಸ್ಕರಿಸುತ್ತಲೇ ಬಂದಿವೆ. ಇದರ ನೇರ ಪರಿಣಾಮ ಎಂದರೆ, ದಲಿತರಲ್ಲಿನ ಯುವ ಪೀಳಿಗೆ, ಅಂಬೇಡ್ಕರ್‌ವಾದಿಗಳ ಕೆಲವು ಗುಂಪುಗಳು ನೇರವಾಗಿ ಹಿಂದುತ್ವದ ಬಲಪಂಥೀಯ ರಾಜಕಾರಣದತ್ತ ವಾಲುತ್ತಿವೆ.  “ ಅಸ್ಪೃಶ್ಯತೆ, ಅಸಮಾನತೆಯನ್ನು ಹೋಗಲಾಡಿಸಿ, ಸಾಮಾಜಿಕ ಸಾಮರಸ್ಯವನ್ನು ಮೂಡಿಸಿ ಹಿಂದೂ ಸಮಾಜವನ್ನು ಸಂಘಟಿಸುವುದು ” ಮೂಲತಃ ಗಾಂಧಿವಾದವಾಗುವುದೇ ಹೊರತು ಬುದ್ಧ ಪ್ರಜ್ಞೆಯ ಮೂಲಕ ಸಮ ಸಮಾಜವನ್ನು ಕಟ್ಟುವ ಅಂಬೇಡ್ಕರ್‌ವಾದ ಆಗುವುದಿಲ್ಲ. ಆದರೂ ಅಂಬೇಡ್ಕರರನ್ನು ಆರಾಧಿಸುತ್ತಾ ಸಂವಿಧಾನವನ್ನು ಎದೆಗಪ್ಪಿಕೊಂಡಿರುವ ನಾಯಕರು ಇಂದು ಬಲಪಂಥೀಯ ರಾಜಕಾರಣದ ಕಾಲಾಳುಗಳಾಗಿದ್ದಾರೆ. ದಲಿತ ಸಮುದಾಯದ ಒಂದು ಇಡೀ ಪೀಳಿಗೆ ಇಂತಹ ನಾಯಕರಿಂದ ಪ್ರಭಾವಿತವಾಗುತ್ತಿದೆ.

ಇಂದು ಭಾರತದಲ್ಲಿ ಜಾತಿ ವ್ಯವಸ್ಥೆಯ ಕ್ರೌರ್ಯ ಮತ್ತು ಮತಾಂಧತೆಯ ಹಿಂಸಾತ್ಮಕ ಮಾರ್ಗವನ್ನು ತಡೆಗಟ್ಟಿ ಸಮಾನತೆಯ ಸೌಹಾರ್ದಯುತ ಸಮಾಜವನ್ನು ನಿರ್ಮಿಸಲು ಜಾತಿ-ಮತಗಳ ಹಂಗು ತೊರೆದ ವರ್ಗ ಪ್ರಜ್ಞೆಯ ಮಾರ್ಕ್ಸ್ ಮತ್ತು ಸಮಾನತೆ ಸೋದರತ್ವ ಬಯಸುವ ಬುದ್ಧಪ್ರಜ್ಞೆಯ ಅಂಬೇಡ್ಕರ್ ನಡುವೆ ಸಂಯೋಗ ಅನಿವಾರ್ಯವಾಗಿದೆ. ಮಾರ್ಕ್ಸ್ವಾದ ದುಡಿಯುವ ವರ್ಗಗಳ, ಶ್ರಮಜೀವಿಗಳ ದನಿಯಾಗಿ ತನ್ನ ರಾಜಕೀಯ ನೆಲೆಗಳನ್ನು ವಿಸ್ತರಿಸಿಕೊಳ್ಳುತ್ತದೆ, ಅಂಬೇಡ್ಕರ್‌ವಾದ ಇದೇ ಶ್ರಮಜೀವಿಗಳನ್ನು ಅಸ್ಪೃಶ್ಯತೆ ಮತ್ತು ಅಸಮಾನತೆಯಿಂದ ಮುಕ್ತಗೊಳಿಸಲು ಬುದ್ಧಪ್ರಜ್ಞೆಯನ್ನಾಧರಿಸಿದ ರಾಜಕೀಯ ನೆಲೆಗಳನ್ನು ನಿರ್ಮಿಸಲು ಬಯಸುತ್ತದೆ. ಮಾನವೀಯ ಸಂವೇದನೆ ಮತ್ತು  ಸಾಮಾಜಿಕ ಸೂಕ್ಷö್ಮತೆಯನ್ನಾಧರಿಸಿದ ಈ ಎರಡು ವಿಚಾರಧಾರೆಗಳು ತಾತ್ವಿಕ ನೆಲೆಯಲ್ಲಿಯಾದರೂ ಒಂದಾದಾಗ ಮಾತ್ರವೇ ಭಾರತವನ್ನು ಮತ್ತೊಂದು ಬಾಂಗ್ಲಾದೇಶ ಅಥವಾ ಪಾಕಿಸ್ತಾನ ಆಗುವುದರಿಂದ ತಪ್ಪಿಸಲು ಸಾಧ್ಯ.

Tags: LeftleftwingPolice attrocityPoliticsRight Wing Politicsrightwing
Previous Post

ಕರ್ನಾಟಕದಲ್ಲಿ ಇನ್ನೂ ಜೀವಂತವಿದೆ ಅಮಾನವೀಯ ಅಸ್ಪೃಶ್ಯತೆ !

Next Post

ಜೆಡಿಎಸ್, ಬಿಜೆಪಿಗೆ ನನ್ನ ಕಂಡ್ರೆ ಭಯ, ಹಾಗಾಗಿ ಇಬ್ಬರಿಗೂ ನಾನೇ ಟಾರ್ಗೆಟ್ – ಸಿದ್ದರಾಮಯ್ಯ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಜೆಡಿಎಸ್, ಬಿಜೆಪಿಗೆ ನನ್ನ ಕಂಡ್ರೆ ಭಯ, ಹಾಗಾಗಿ ಇಬ್ಬರಿಗೂ ನಾನೇ ಟಾರ್ಗೆಟ್ – ಸಿದ್ದರಾಮಯ್ಯ

ಜೆಡಿಎಸ್, ಬಿಜೆಪಿಗೆ ನನ್ನ ಕಂಡ್ರೆ ಭಯ, ಹಾಗಾಗಿ ಇಬ್ಬರಿಗೂ ನಾನೇ ಟಾರ್ಗೆಟ್ – ಸಿದ್ದರಾಮಯ್ಯ

Please login to join discussion

Recent News

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!
Top Story

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

by ಪ್ರತಿಧ್ವನಿ
July 5, 2025
Top Story

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

by ಪ್ರತಿಧ್ವನಿ
July 5, 2025
Top Story

Ranya Rao: ಅಕ್ರಮ ಚಿನ್ನ ಸಾಗಾಟಣೆಯ ನಟಿ ರನ್ಯಾ ರಾವ್ ಗೆ ಸೇರಿದ 34 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

by ಪ್ರತಿಧ್ವನಿ
July 5, 2025
ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,
Top Story

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

by ಪ್ರತಿಧ್ವನಿ
July 5, 2025
Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

July 5, 2025

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada