ಮೈನಿಂಗ್ ಮಾಫಿಯಾದಿಂದ ಸದ್ದು ಮಾಡಿದ್ದ ಬಳ್ಳಾರಿ ಜಿಲ್ಲೆ ಸದ್ಯ ಮರಳು ಮಾಫಿಯಾದ ಕಪಿಮುಷ್ಠಿಗೆ ಸಿಲುಕಿದೆ. ಅಕ್ರಮ ತಡೆಯಲು ಹೋದ ಅಧಿಕಾರಿ ಮೇಲೆಯೇ ದುಷ್ಟರು ಅಟ್ಟಹಾಸ ಮೆರೆದಿದ್ದಾರೆ. ಮರಳು ಮಾಫಿಯಾದ ಹಿಡಿತ ಬಿಗಿಯಾಗುತ್ತಿದ್ದು, ಸರ್ಕಾರಿ ಅಧಿಕಾರಿಗೆ ಹೀಗಾದ್ರೆ ಜನಸಾಮಾನ್ಯರ ಗತಿಯೇನು ಅನ್ನೋ ಪ್ರಶ್ನೆಯೂ ಹುಟ್ಟಿಕೊಂಡಿದೆ.
ಗಾಯಗೊಂಡಿರೋ ಕೈಗೆ ಬ್ಯಾಂಡೇಜ್ ಸುತ್ತಿಕೊಂಡು ಆಸ್ಪತ್ರೆ ಬೆಡ್ ಪಾಲಾಗಿರೋ ಇವರು ಬಳ್ಳಾರಿಯ ಪ್ರಭಾರ ಕಂದಾಯ ನಿರೀಕ್ಷಕ ವೆಂಕಟಸ್ವಾಮಿ. ಇನ್ನೊಂದು ಬೆಡ್ ಮೇಲೆ ಮಲಗಿರೋ ಮಹಿಳೆ, ವೆಂಕಟಸ್ವಾಮಿ ಅವರ ಪತ್ನಿ ಸರಸ್ವತಿ. ವೆಂಕಟಸ್ವಾಮಿ ಅವರ ಪ್ರಾಮಾಣಿಕ ಸೇವೆಯೇ ಇಂದು ಈ ದಂಪತಿಯನ್ನು ಆಸ್ಪತ್ರೆ ಬೆಡ್ ಮೇಲೆ ಮಲಗುವಂತೆ ಮಾಡಿದೆ.
ಬಳ್ಳಾರಿ ತಾಲೂಕಿನ ತೋಳಮಾಮಿಡಿ ಬಳಿ ಅಕ್ರಮ ಮರಳು ದಂಧೆ ನಡೆಯುತ್ತಿತ್ತು. ಹೀಗಾಗಿ ಪ್ರಭಾರ ಕಂದಾಯ ನಿರೀಕ್ಷಕ ವೆಂಕಟಸ್ವಾಮಿ ಅಕ್ರಮ ಮರಳುಗಾರಿಕೆ ತಡೆಯಲು ಮುಂದಾಗಿದ್ದಾರೆ. ಮರಳು ಸಾಗಾಟಕ್ಕೆ ಬಳಸುತ್ತಿದ್ದ ಟ್ರ್ಯಾಕ್ಟರ್ ಸೀಜ್ ಮಾಡಿದ್ದಾರೆ. ಟ್ರ್ಯಾಕ್ಟರ್ ಸೀಜ್ ಮಾಡಿದ್ದಕ್ಕೆ ಕೋಪಗೊಂಡ ಮಾಫಿಯಾ ಗ್ಯಾಂಗ್ ವೆಂಕಟಸ್ವಾಮಿ ಮೇಲೆ ದಾಳಿ ಮಾಡಿದೆ. ಮನೆಗೆ ನುಗ್ಗಿ ವೆಂಕಟಸ್ವಾಮಿ ಹಾಗೂ ಕುಟುಂಬಸ್ಥರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

ಕಂದಾಯ ನಿರೀಕ್ಷಕ ವೆಂಕಟಸ್ವಾಮಿ ಮೇಲೆ ನಡೆದಿರುವ ದಾಳಿಯನ್ನು ನೌಕರರ ಸಂಘಟನೆಗಳು ಖಂಡಿಸಿವೆ. ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಹಲ್ಲೆ ಮಾಡಿರೋ ಮಾಫಿಯಾ ಗ್ಯಾಂಗ್ ಬಂಧನಕ್ಕೆ ಆಗ್ರಹಿಸಿವೆ. ಈ ರೀತಿ ದಾಳಿ ನಡೆದ್ರೆ ಅಧಿಕಾರಿಗಳ ಆತ್ಮಸ್ಥೈರ್ಯವೇ ಕುಗ್ಗಲಿದೆ ಅಂತಾರೆ ಬಳ್ಳಾರಿ ತಹಶೀಲ್ದಾರ್ ರೆಹಾನ್ ಭಾಷಾ.
ಹಲ್ಲೆ ಸಂಬಂಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಅಧಿಕಾರಿಗಳ ಮೇಲೆಯೇ ದಾಳಿ ನಡೆಸುವಷ್ಟು ಮರಳು ಮಾಫಿಯಾ ಪ್ರಬಲವಾಗಿದೆ. ಈ ಮಾಫಿಯಾಗೆ ಜನಪ್ರತಿನಿಧಿಗಳ ಕುಮ್ಮಕ್ಕಿರೋ ಶಂಕೆಯನ್ನೂ ವ್ಯಕ್ತಪಡಿಸಲಾಗುತ್ತಿದೆ. ಅದೆಷ್ಟೇ ಪ್ರಭಾವಿಗಳು ಇದರ ಹಿಂದಿದ್ರೂ ಲೆಕ್ಕಿಸದೇ ನದಿಯ ಒಡಲಿಗೆ ಕನ್ನ ಹಾಕೋ ದಂಧೆಕೋರರನ್ನ ಮಟ್ಟ ಹಾಕಬೇಕಿದೆ.