ಸದನದಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು, ವಿಧಾನಸಭೆ ವಿಸರ್ಜಿಸಿ ಸಾಮಾನ್ಯ ಚುನಾವಣೆ ಎದುರಿಸುವಂತೆ ಆಡಳಿತರೂಢ ಬಿಜೆಪಿಗೆ ಸವಾಲು ಹಾಕಿದ್ದಾರೆ.
ಬಜೆಟ್ ಕುರಿತಂತೆ ಸಿದ್ದರಾಮಯ್ಯ ಅವರ ಟೀಕೆಗಳಿಗೆ ಉತ್ತರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ʼನೀವು ಅಧಿಕಾರಕ್ಕೆ ಬರುತ್ತೀರೆಂದು ತಿರುಕನ ಕನಸು ಕಾಣುತ್ತಿದ್ದೀರಿ (ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ). ನನ್ನ ಬಜೆಟ್ ರಾಜ್ಯಾದಾದ್ಯಂತ ಜನರು ಒಪ್ಪಿಕೊಂಡಿದ್ದಾರೆ. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ (ಬಜೆಟ್) ಆಧಾರದ ಮೇಲೆ ಮುಂದಿನ ಮೂರು ಉಪಚುನಾವಣೆಯನ್ನು ಎದುರಿಸಿ ಲೋಕಸಭೆಗೆ ಹೋಗುತ್ತೇವೆ. ಚುನಾವಣೆಯಲ್ಲಿ ನೀವು ಇದೇ ವಿಷಯವನ್ನು ಮಾತನಾಡಿ, ನಾವೂ ಇದೇ ವಿಷಯವನ್ನ ಮಾತನಾಡುತ್ತೇವೆ. ನಾವು ಮೂರು ಕ್ಷೇತ್ರವನ್ನು ಗೆಲ್ಲುತ್ತೇವೆ. ಆಗ ಬಂದು ಇಲ್ಲಿ (ವಿಧಾನಸಭೆಯಲ್ಲಿ) ಮಾತನಾಡೋಣ ಎಂದು ಸವಾಲು ಹಾಕಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದಕ್ಕೆ ಮರು ಸವಾಲು ಹಾಕಿದ ಸಿದ್ದರಾಮಯ್ಯ, ಉಪಚುನಾವಣೆ ಯಾಕೆ, ವಿಧಾನಸಭೆ ವಿಸರ್ಜಿಸಿ ಸಾರ್ವತ್ರಿಕ ಚುನಾವಣೆಗೆ ಹೋಗೋಣ ಬನ್ನಿ ಎಂದು ಪಂಥಾಹ್ವಾನ ನೀಡಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದಾಗ ನಾವೂ ಉಪಚುನಾವಣೆಗಳನ್ನು ಗೆದ್ದಿದ್ದೇವೆ. ಆಡಳಿತದಲ್ಲಿರುವಾಗ ಉಪಚುನಾವಣೆ ಗೆಲ್ಲುವುದು ದೊಡ್ಡ ವಿಷಯವಲ್ಲ. ಸಾರ್ವತ್ರಿಕ ಚುನಾವಣೆ ಎದುರಿಸೋಣ, ಜನ ಯಾರಿಗೆ ಬಹುಮತ ಕೊಡುತ್ತಾರೆ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಬೈ ಎಲೆಕ್ಷನ್ನಲ್ಲಿ ಕುಸ್ತಿ ಮಾಡೋಣ ಎಂದು ಕರೆಯುತ್ತೀರಿ, ಹೆಬ್ಬಾಳ ಒಂದು ಬಿಟ್ಟರೆ ಉಳಿದ ಕ್ಷೇತ್ರದ ಉಪಚುನಾವಣೆಯಲ್ಲಿ ನಾವೂ ಗೆದ್ದಿದ್ದೇವೆ. ಬನ್ನಿ ಸಾರ್ವತ್ರಿಕ ಚುನಾವಣೆಗೆ ಇಳಿಯೋಣ ಎಂದು ಕರೆ ನೀಡಿದ್ದಾರೆ. ಇದು ಸದನದಲ್ಲಿ ಕೆಲಕಾಲ ಲಘು ಚರ್ಚೆಗೆ ಕಾರಣವಾಯಿತು.