ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು 50 ಮೂಲ ಅಂಶಗಳಷ್ಟು (ಶೇ.0.50) ಏರಿಕೆ ಮಾಡಿದೆ. ಮೇ ತಿಂಗಳಲ್ಲಿ ಅಕಾಲಿಕವಾಗಿ ರೆಪೊದರ ಶೇ.0.40ರಷ್ಟು ಏರಿಕೆ ಮಾಡಿತ್ತು. ಆಗಲೇ ಮತ್ತಷ್ಟು ದರ ಏರಿಕೆಯ ನಿರೀಕ್ಷೆ ಇತ್ತು.
ಪೂರ್ವಭಾವಿಯಾಗಿ ನಡೆದ ಸಮೀಕ್ಷೆಗಳಲ್ಲಿ ಕೆಲವು ಆರ್ಥಿಕತಜ್ಞರು ಶೇ.0.75ರಷ್ಟು ಬಡ್ಡಿದರ ಏರಿಕೆ ನಿರೀಕ್ಷಿಸಿದ್ದರು. ಬಹುತೇಕ ಮಂದಿ ಶೇ.0.50ರಷ್ಟು ದರ ಏರಿಕೆ ನಿರೀಕ್ಷಿಸಿದ್ದರು. ನಿರೀಕ್ಷೆಗೆ ತಕ್ಕಂತೆ ಶೇ.0.50ರಷ್ಟು ಬಡ್ಡಿದರ ಏರಿಕೆ ಮಾಡಿದೆ.
ಬಡ್ಡಿದರ ಏರಿಕೆಯ ಪರ್ವ ಇದೀಗ ಆರಂಭವಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಬಡ್ಡಿದರ ಏರಿಕೆ ಆಗಲಿದೆ. ಅಂದರೆ ಗ್ರಾಹಕರು ತಮ್ಮ ಗೃಹಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಸೇರಿದಂತೆ ಎಲ್ಲಾ ಸಾಲಗಳ ಮೇಲೆ ಹೆಚ್ಚು ಬಡ್ಡಿ ತೆರಲು ಸಿದ್ಧರಾಗಬೇಕು.
ಬಡ್ಡಿದರ ಏರಿಕೆ ನಿಶ್ಚಿತ ಏಕೆ?
ಪ್ರಸಕ್ತ ವಿತ್ತೀಯ ವರ್ಷ 2022-23ರಲ್ಲಿ ಒಟ್ಟಾರೆ ಸರಾಸರಿ ಹಣದುಬ್ಬರವು ಶೇ.6.7ರಷ್ಟು ಇರಲಿದೆ. ಸಾಮಾನ್ಯ ಮಾನ್ಸೂನ್ ಮಳೆ ಮತ್ತು ಪ್ರತಿ ಬ್ಯಾರೆಲ್ ಗೆ 105 ಡಾಲರ್ ಆಧಾರದಲ್ಲಿ 2022-23ನೇ ಸಾಲಿನಲ್ಲಿ ಒಟ್ಟಾರೆ ಸರಾಸರಿ ಹಣದುಬ್ಬರವು ಶೇ.6.7ರಷ್ಟು ಇರಲಿದೆ ಎಂಬ ಊಹೆಯ ಮೇಲೆ ಹಣಕಾಸು ಸಮಿತಿ ಹಣದುಬ್ಬರ ಮುನ್ನಂದಾಜು ಮಾಡಿದೆ. ಅಂದರೆ ಹಣದುಬ್ಬರ ಮಟ್ಟಕ್ಕೆ ರೆಪೊದರ ಏರಿದಾಗ ಮಾತ್ರ ಹಣದ ಹರಿವು ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ಬಂದು ಹಣದುಬ್ಬರ ನಿಧಾನವಾಗಿ ತಗ್ಗುತ್ತದೆ. ಆ ಪ್ರಕ್ರಿಯೆ ಸುಧೀರ್ಘವಾದುದು. ಮೇ ಮತ್ತು ಜೂನ್ ತಿಂಗಳಲ್ಲಿ ಎರಡು ಬಾರಿ ಏರಿಕೆ ಮಾಡಿದ ನಂತರ ರೆಪೊದರ ಶೇ.4.90ಕ್ಕೆಮುಟ್ಟಿದೆ.

ಪ್ರಸ್ತುತ ಅಂದಾಜಿಸಿರುವ ಸರಾಸರಿ ಹಣದುಬ್ಬರದ ಮಟ್ಟಕ್ಕೆ ಬಡ್ಡಿದರ ಏರಬೇಕಾದರೆ ಇನ್ನೂ ಶೇ.1.80ರಷ್ಟು ಬಡ್ಡಿದರ ಏರಿಕೆ ಆಗಬೇಕು. ದ್ವೈಮಾಸಿಕ ಹಣಕಾಸು ನೀತಿ ಸಮಿತಿ ಸಭೆಯ ನಂತರ ಹಂತಹಂತವಾಗಿ ಬಡ್ಡಿದರ ಏರಿಸುವ ಇರಾದೆ ಆರ್ಬಿಐಗೆ ಇದೆ. ಒಂದು ವೇಳೆ ಜೂನ್ ತಿಂಗಳಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬಂದಿಲ್ಲ ಎಂದಾದರೆ ಜುಲೈ ತಿಂಗಳಲ್ಲಿ ಆಕಾಲಿಕವಾಗಿ ಬಡ್ಡಿದರ ಏರಿಸುವ ಸಾಧ್ಯತೆ ಇದೆ. ಏಕಾಏಕಿ ಬಡ್ಡಿದರ ಏರಿಕೆ ಮಾಡಿದರೆ ಆರ್ಥಿಕ ವ್ಯವಸ್ಥೆಗೆ ಹಿನ್ನಡೆಯಾಗುವ ಅಪಾಯವೂ ಇದೆ. ಆರ್ಬಿಐ ಮುನ್ನಂದಾಜನ್ನೇ ಪರಿಗಣಿಸುವುದಾದರೆ ಈ ವರ್ಷಾಂತ್ಯಕ್ಕೆ ಬಡ್ಡಿದರ ಶೇ.6ಕ್ಕಿಂತ ಹೆಚ್ಚಿರುತ್ತದೆ. ಅಂದರೆ ಇನ್ನೂ ಶೇ.1.2ರಿಂದ ಶೇ.1.5ರಷ್ಟು ಬಡ್ಡಿ ಏರುವ ಸಾಧ್ಯತೆ ನಿಚ್ಚಳವಾಗಿದೆ.
ಜಿಡಿಪಿ ಮುನ್ನಂದಾಜು ಯಥಾಸ್ಥಿತಿ
2022-23ನೇ ಸಾಲಿನ ವಿತ್ತೀಯ ವರ್ಷದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಶೇ.7.2ರಷ್ಟು ಇರಲಿದೆ ಎಂದು ಆರ್ಬಿಐ ಮುನ್ನಂದಾಜು ಮಾಡಿದೆ. ಅಂದರೆ, ಹಿಂದಿನ ಎಂಪಿಸಿ ಸಭೆಯಲ್ಲಿ ಘೋಷಿಸಿದ್ದ ಮುನ್ನಂದಾಜನ್ನು ಯಥಾಸ್ಥಿತಿ ಕಾಯ್ದುಕೊಂಡಿದೆ. ಆರ್ಬಿಐ ಮುನ್ನಂದಾಜಿನ ಪ್ರಕಾರ, ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 16.2 ರಷ್ಟು ಬೆಳವಣಿಗೆ ನಿರೀಕ್ಷಿಸಿದೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ. 6.2, ಅಕ್ಟೋಬರ್- ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ. 4.1 ಮತ್ತು 2023 ರ ಜನವರಿ- ಮಾರ್ಚ್ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 4.0 ಬೆಳವಣಿಗೆಯಾಗುವ ನಿರೀಕ್ಷೆ ಆರ್ಬಿಐಗೆ ಇದೆ.
ಯುಪಿಐ ವ್ಯಾಪ್ತಿಗೆ ಕ್ರೆಡಿಟ್ ಕಾರ್ಡ್
ಹಣಕಾಸು ನೀತಿ ಸಮಿತಿ ಕೈಗೊಂಡಿರುವ ಮತ್ತೊಂದು ಪ್ರಮುಖ ನಿರ್ಧಾರ ಎಂದರೆ ಯುಪಿಐ ವ್ಯಾಪ್ತಿಗೆ ಕ್ರಿಡಿಟ್ ಕಾರ್ಡ್ ಗಳನ್ನು ಸಂಪರ್ಕಿಸುವುದು. ಆರಂಭದಲ್ಲಿ ದೇಶೀಯ ರೂಪೇ ಕ್ರೆಡಿಟ್ ಕಾರ್ಡ್ ಅನ್ನು ಯುಪಿಐಗೆ ಸಂಪರ್ಕಿಸಲಾಗುತ್ತದೆ. ಅದರ ಸಾದಕ ಬಾಧಕಗಳನ್ನು ಅನುಲಕ್ಷಿಸಿ ಇತರ ಕ್ರೆಡಿಟ್ ಕಾರ್ಡ್ ಗಳನ್ನು ಯುಪಿಐ ವ್ಯಾಪ್ತಿಗೆ ತರಲಿದೆ. ಈಗಾಗಲೇ ಎಲ್ಲಾ ಮಾದರಿಯ ಡೆಬಿಟ್ ಕಾರ್ಡ್ ಗಳೂ ಯುಪಿಐ ವ್ಯಾಪ್ತಿಗೆ ಸಂಪರ್ಕಿಸಲಾಗಿದೆ. ಡಿಜಿಟಲ್ ಪಾವತಿ ವ್ಯವಹಾರಗಳು ತ್ವರಿತಗತಿಯಲ್ಲಿ ಹೆಚ್ಚಿವೆ.
ನಗದು ಮೀಸಲು ನಿಧಿಯನ್ನು ಯಥಾಸ್ಥಿತಿ ಕಾಯ್ದುಕೊಂಡಿರುವ ಆರ್ಬಿಐ ಸ್ಟ್ಯಾಂಡಿಂಗ್ ಡಿಪಾಸಿಟ್ ಫೆಸಿಲಿಟಿ ಮತ್ತು ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ದರಗಳನ್ನು ಶೇ.0.50 ರಷ್ಟು ಏರಿಕೆ ಮಾಡಿದೆ. ಈ ದರವೀಗ ಕ್ರಮವಾಗಿ ಶೇ. 4.65 ಮತ್ತು ಶೇ. 5.15ಕ್ಕೆ ಏರಿದೆ. ಕೋವಿಡ್ ಸಂಕಷ್ಟದಿಂದ ಉದ್ಭವಿಸಿರುವ ಸಮಸ್ಯೆಗಳ ನಿವಾರಣೆಗಾಗಿ ಬ್ಯಾಂಕುಗಳಲ್ಲಿ ಸಾಕಷ್ಟು ನಗದು ಹರಿವು ಕಾಯ್ದುಕೊಳ್ಳುವುದಾಗಿಯೂ ಆರ್ಬಿಐ ತಿಳಿಸಿದೆ. ಬಾಂಡ್ ಮಾರುಕಟ್ಟೆಯಲ್ಲಾಗುವ ಏರಿಳಿತ ನಿಯಂತ್ರಿಸಲು ಸತತ ನಿಗಾ ಇಡಲಿದೆ.
ಇತ್ತೀಚೆಗೆ ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿಯುತ್ತಿದೆ. ತತ್ಪರಿಣಾಮ ವಿದೇಶಿ ಮೀಸಲು ನಿಧಿಯ ಪ್ರಮಾಣವು 600 ಬಿಲಿಯನ್ ಡಾಲರ್ ಗಳಿಗಿಂತ ಕೆಳ ಮಟ್ಟಕ್ಕೆ ಇಳಿದಿತ್ತು. ಇದೀಗ ಜೂನ್ 3ರಂದು ಇದ್ದಂತೆ ವಿದೇಶಿ ವಿನಿಮಯ ಮೀಸಲು ನಿಧಿಯು 601.1 ಬಿಲಿಯನ್ ಡಾಲರ್ ಗಳಿಗೆ ಏರಿದೆ.