ದಾಖಲೆಯ ರಣಜಿ ಚಾಂಪಿಯನ್ ಮುಂಬೈ ತಂಡ 725 ರನ್ ಗಳಭಾರೀ ಅಂತರದಿಂದ ಉತ್ತರಾಖಂಡ್ ತಂಡವನ್ನು ಬಗ್ಗುಬಡಿದು ಪ್ರಥಮದರ್ಜೆ ಕ್ರಿಕೆಟ್ ಇತಿಹಾಸದಲ್ಲೇ ಅತೀ ದೊಡ್ಡ ಗೆಲುವಿನ ದಾಖಲೆ ಬರೆದಿದೆ.
ನಾಲ್ಕು ದಿನಗಳ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ತಂಡ ಸುಲಭ ಗೆಲುವು ದಾಖಲಿಸಿ ಸೆಮಿಫೈನಲ್ ಪ್ರವೇಶಿಸಿತು. ಅಲ್ಲದೇ 92 ವರ್ಷಗಳ ಹಿಂದೆ ನ್ಯೂ ಸೌಥ್ ವೇಲ್ಸ್ ತಂಡ 685 ರನ್ ಗಳಿಂದ ಕ್ವಿನ್ಸ್ ಲ್ಯಾಂಡ್ ತಂಡವನ್ನು ಸೋಲಿಸಿದ್ದು ಇದುವರೆಗಿನ ಅತೀ ದೊಡ್ಡ ಗೆಲುವಿನ ದಾಖಲೆಯನ್ನು ಮುರಿಯಿತು.
ರಣಜಿ ಇತಿಹಾಸದಲ್ಲೇ ಅತೀ ಗೆಲುವು ದಾಖಲಿಸಿದ ಕೀರ್ತಿ ಬಂಗಾಳ ತಂಡಕ್ಕೆ ಇತ್ತು. ಈ ತಂಡ 1954-55ರಲ್ಲಿ ಒಡಿಶಾ ವಿರುದ್ಧ 540 ರನ್ ಗಳಿಂದ ಸೋಲಿಸಿ ದಾಖಲೆ ಬರೆದಿತ್ತು. ಈ ಎರಡೂ ದಾಖಲೆಗಳನ್ನು ಮುಂಬೈ ಮುರಿದಿದೆ.

41 ಬಾರಿಯ ರಣಜಿ ಚಾಂಪಿಯನ್ ಮುಂಬೈ ಎರಡನೇ ಇನಿಂಗ್ಸ್ ನಲ್ಲಿ 3 ವಿಕೆಟ್ ಗೆ 261 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. 794 ರನ್ ಗಳ ಅಸಾಧ್ಯ ಗುರಿ ಬೆಂಬತ್ತಿದ ಉತ್ತರಾಖಂಡ್ 69 ರನ್ ಗೆ ಆಲೌಟಾಗಿ ಹೀನಾಯ ಸೋಲುಂಡಿತು.