ರಾಜ್ಯಸಭಾ ಚುನಾವಣೆಯಲ್ಲಿ ಜಾತ್ಯತೀತ ಜನತಾದಳದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಉದ್ಯಮಿ ಕುಪೇಂದ್ರ ರೆಡ್ಡಿ ರಾಜಕಾರಣಿಗಳಿಗೆ ಕೋಟಿ ಕೋಟಿ ಸಾಲ ಕೊಡುವ ಕುಬೇರ ಎನಿಸಿಕೊಂಡಿದ್ದಾರೆ.
ರಾಜ್ಯಸಭೆಗೆ ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿರುವ ಕುಪೇಂದ್ರ ರೆಡ್ಡಿ, ತಾವು ಯಾರಿಗೆಲ್ಲಾ ಸಾಲ ನೀಡಿದ್ಧೇವೆ ಎಂಬ ಪಟ್ಟಿಯನ್ನೂ ನೀಡಿ ಅಚ್ಚರಿ ಮೂಡಿಸಿದ್ದಾರೆ.
ವಿಶೇಷ ಅಂದರೆ ಸಾಲ ಪಡೆದವರ ಪೈಕಿ ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರ ಕುಟುಂಬದ ಹಲವಾರು ಮಂದಿ ಸಾಲ ಪಡೆದಿದ್ದಾರೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರದಲ್ಲಿ ಕುಪೇಂದ್ರ ರೆಡ್ಡಿ 63 ಕೋಟಿ ರೂ. ಒಟ್ಟು ಆಸ್ತಿ ಹೊಂದಿದ್ದಾರೆ. ಇದರಲ್ಲಿ 3.51 ಕೋಟಿ ಮೌಲ್ಯದ ಚಿನ್ನಾಭರಣ, 1.50 ಕೋಟಿ ರೂ.ಮೌಲ್ಯದ ಬೆಳ್ಳಿ ಸಾಮಾನು, 18 ಲಕ್ಷ ಮೌಲ್ಯದ ವಜ್ರ ಹಾಗೂ ಹರಳು ಇರುವುದಾಗಿ ಘೋಷಿಸಿಕೊಂಡಿದ್ದಾರೆ.
ಇದೇ ವೇಳೆ ರಾಜಕಾರಣಿಗಳಿಗೆ ಕೂಡ ಕೋಟ್ಯಂತರ ರೂಪಾಯಿ ಸಾಲ ನೀಡಿದ್ದು, ಶಾಸಕ ಪಿ.ಎಸ್. ಪುಟ್ಟರಾಜು ಪುತ್ರನಿಗೆ 6.5 ಕೋಟಿ ರೂ., ಭವಾನಿ ರೇವಣ್ಣಗೆ 2 ಕೋಟಿ ರೂ., ಸೂರಜ್ ರೇವಣ್ಣ 5.80, ಸೂರಜ್ ರೇವಣ್ಣಗೆ 2 ಕೋಟಿ ರೂ., ಪ್ರಜ್ಞಲ್ ರೇವಣ್ಣಗೆ 1 ಕೋಟಿ ರೂ. ಸಾಲ ನೀಡಿದ್ದಾರೆ.
ಅಲ್ಲದೇ ವಿಧಾನ ಪರಿಷತ್ ಸದಸ್ಯ ಯುಬಿ ವೆಂಕಟೇಶ್ ಗೆ 3.25 ಕೋಟಿ ರೂ., ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಗೆ 1 ಕೋಟಿ ರೂ., ಎಚ್.ಡಿ.ಕುಮಾರಸ್ವಾಮಿ ಅವರ ಚನ್ನಾಂಬಿಕಾ ಫಿಲ್ಮ್ಸ್ ಸಂಸ್ಥೆಗೆ 4 ಕೋಟಿ ರೂ. ವಿಧಾನ ಪರಿಷತ್ ಸದಸ್ಯ ಕೆಸಿ ಕೊಂಡಯ್ಯಗೆ 5 ಲಕ್ಷ ರೂ. ಸೇರಿದಂತೆ ಹಲವು ಬಿಲ್ಡರ್ಸ್ ಹಾಗೂ ಕಂಪನಿ ಹಾಗೂ ವ್ಯಕ್ತಿಗಳಿಗೆ ಸಾಲ ನೀಡಿರುವುದಾಗಿ ಪ್ರಮಾಣಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.






