ನವದೆಹಲಿ : ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಪತ್ರ ಬರೆದು, ಕಂಗನಾ ರಣಾವತ್ ಅವರ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಬಿಜೆಪಿ ಸಂಸದೆ ರೈತರು ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ತಮ್ಮ ಬೇಜವಾಬ್ದಾರಿ ಹೇಳಿಕೆಯ ಮೂಲಕ ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ನೀವು ರಾಷ್ಟ್ರದ ಅತಿದೊಡ್ಡ ಪಕ್ಷವನ್ನು ಮುನ್ನಡೆಸುವ ಮತ್ತು ಅದರ ಸಿದ್ಧಾಂತವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊಂದಿದ್ದೀರಿ, ಆದರೆ ನಿಮ್ಮ ಪಕ್ಷ ಕಂಗನಾ ರೀತಿಯ ಅಜ್ಞಾನಿಯನ್ನು ಏಕೆ ಸಂಸದೆಯನ್ನಾಗಿ ಮಾಡಿದೆ ಎಂದು ತಮ್ಮ ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಂಗನಾ ಅವರ ವಿವಾದಾತ್ಮಕ ಹೇಳಿಕೆಗಳನ್ನು ಟೀಕಿಸಿದ ಟಿಕೈತ್, 2014 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂದು ನಟಿ ಹೇಳಿಕೊಳ್ಳುವುದು ದೇಶದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕ್ರಾಂತಿಕಾರಿಗಳಿಗೆ ಮಾಡಿದ ಅವಮಾನವಾಗಿದೆ , ಹೀಗಾಗಿ ನಿಮ್ಮ ಸಂಸದೆಯ ತಲೆ ಬುಡವಿಲ್ಲದ ಬೇಜವಾಬ್ದಾರಿಯ ಹೇಳಿಕೆಗಳಿಗೆ ನೀವು ಬ್ರೇಕ್ ಹಾಕಬೇಕು ಎಂದು ಹೇಳಿದ್ದಾರೆ.