ಬಳ್ಳಾರಿ : ಬೇರೆ ಹಬ್ಬಗಳನ್ನು ಕೇವಲ ಮೂರ್ನಾಲ್ಕು ದಿನ ಆಚರಿಸಿದರೆ, ಕರ್ನಾಟಕ ರಾಜ್ಯೋತ್ಸವವನ್ನು (Karnataka Rajyotsava) ರಾಜ್ಯಾದ್ಯಂತ ತಿಂಗಳ ಪೂರ್ತಿ ಹಬ್ಬದಂತೆ ಆಚರಿಸಲಾಗುತ್ತದೆ. ಎರಡು ಸಾವಿರಕ್ಕೂ ಹೆಚ್ಚು ವರ್ಗಗಳ ಭವ್ಯ ಇತಿಹಾಸವಿರುವ ಕರ್ನಾಟಕದಲ್ಲಿ ಸರ್ವ ಧರ್ಮೀಯರು ಅಣ್ಣ-ತಮ್ಮಂದಿರಂತೆ ಬದುಕುತ್ತಿರುವುದು ಈ ನಾಡಿನ ದೊಡ್ಡ ಹೆಮ್ಮೆ ಎಂದು ವಸತಿ ಸಚಿವರಾದ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ (Zameer Ahmed Khan) ಅವರು ಹೇಳಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಸರ್ಕಾರಿ (ಮಾಜಿ ಪುರಸಭೆ) ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿದ್ದ 71ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಶ್ರೀ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಕರ್ನಾಟಕ ರಾಜ್ಯೋತ್ಸವ ಸಂದೇಶ ನೀಡಿ ಅವರು ಮಾತನಾಡಿದರು.
ಕನ್ನಡ ಅತ್ಯಂತ ಸರಳ ಮತ್ತು ಸುಂದರವಾದ ಭಾಷೆಯಾಗಿದ್ದು, ಹೊರರಾಜ್ಯಗಳಿಂದ ಬಂದವರೂ ಇದನ್ನು ಸುಲಭವಾಗಿ ಕಲಿತು ಮಾತನಾಡುತ್ತಿದ್ದಾರೆ. ಯುವಕರು ಸಿರಿತನಕ್ಕೆ ಹಿಗ್ಗದೆ, ಬಡತನಕ್ಕೆ ಕುಗ್ಗದೆ ಶ್ರಮವಹಿಸಿ ಬೆಳೆಯಬೇಕು, ಅವರೇ ನಾಡಿನ ಭವ್ಯ ಭವಿಷ್ಯ ಎಂದು ಕರೆ ನೀಡಿದರು.
ಬಡವರಿಗಾಗಿ ‘ಆರನೇ ಗ್ಯಾರಂಟಿ’ ಮನೆಗಳ ಯೋಜನೆ:
ಕರ್ನಾಟಕ ಸರ್ಕಾರವು ಬಡವರ ಕಲ್ಯಾಣಕ್ಕೆ ಬದ್ಧವಾಗಿದ್ದು, ಈಗಾಗಲೇ ಜಾರಿಗೆ ತಂದಿರುವ ಐದು ಪ್ರಮುಖ ಗ್ಯಾರಂಟಿಗಳ ಜೊತೆಗೆ ಬಡವರಿಗೆ ಸೂರು ಕಲ್ಪಿಸುವುದು ನಮ್ಮ ಸರ್ಕಾರದ ‘ಆರನೇ ಗ್ಯಾರಂಟಿ’ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಪ್ರತಿಪಾದಿಸಿದರು.
ಬಡವರ ಮನೆಗಳಿಗೆ ಸರ್ಕಾರದ ವಿಶೇಷ ಅನುದಾನ:
ಹಿಂದಿನ ಸರ್ಕಾರದ ಅವಧಿಯಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿAದ ಮಂಜೂರಾಗಿದ್ದ 1,80,280 ಮನೆಗಳು ಫಲಾನುಭವಿಗಳು ವಂತಿಕೆ ಹಣ ಕಟ್ಟಲಾಗದೆ ಅರ್ಧಕ್ಕೆ ನಿಂತಿದ್ದವು. ಪ್ರತಿ ಮನೆಗೆ ತಗಲುವ ವೆಚ್ಚದಲ್ಲಿ ಫಲಾನುಭವಿಗಳು ರೂ. 4.5 ಲಕ್ಷ ಭರಿಸಬೇಕಾಗಿದ್ದು, ಬಡವರಿಗೆ ಇದು ಅಸಾಧ್ಯವಾಗಿತ್ತು. ಈ ಸಮಸ್ಯೆಯನ್ನು ಅರಿತ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟವು ಬಡವರ ಪಾಲಿನ ಹಣವನ್ನು ಭರಿಸಲು 4,700 ಕೋಟಿ ರೂ. ಅನುಮೋದನೆ ನೀಡಿದೆ ಎಂದರು.
ಹಂತ ಹಂತವಾಗಿ ಮನೆಗಳ ವಿತರಣೆ:
2024ರ ಮಾರ್ಚ್ನಲ್ಲಿ ರಾಜ್ಯಾದ್ಯಂತ 36,789 ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 42,345 ಮನೆಗಳನ್ನು ವಿತರಿಸಲಾಗಿದ್ದು, ಒಟ್ಟಾರೆ ಸರ್ಕಾರದಿಂದ 79,000 ಮನೆಗಳನ್ನು ಪೂರ್ಣಗೊಳಿಸಿ ಕೊಡಲಾಗಿದೆ. ಉಳಿದ 33,000 ಮನೆಗಳನ್ನು ಮುಂಬರುವ ವರ್ಷದ ಫೆಬ್ರವರಿ 27ರೊಳಗೆ ಪೂರ್ಣಗೊಳಿಸಿ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ‘1 ಲಕ್ಷ ವಸತಿ ಯೋಜನೆ
ಬೆಂಗಳೂರಿನಲ್ಲಿ ಆಟೋ ಚಾಲಕರು, ಬೀದಿಬದಿ ವ್ಯಾಪಾರಿಗಳು ಹಾಗೂ ಬಡವರಿಗಾಗಿ ರೂಪಿಸಲಾದ ಯೋಜನೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ದರ ಏರಿಕೆ ಮಾಡಲಾಗಿತ್ತು. ನಮ್ಮ ಸರ್ಕಾರ ಬಂದ ಬಳಿಕ ರೂ. 1,600 ಕೋಟಿ ಒದಗಿಸುವ ಮೂಲಕ ಬಡವರ ಮೇಲಿನ ಹೊರೆ ತಪ್ಪಿಸಿ, ನವೆಂಬರ್ 29ರಂದು 6,000 ಮನೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಶಾಸಕ ನಾರಾ ಭರತ್ ರೆಡ್ಡಿ ಅವರ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರ ಹಿಂದಿನ ಅವಧಿಯಲ್ಲಿ ಮಂಜೂರಾಗಿದ್ದ ಮನೆಗಳಿಗೂ ಸರ್ಕಾರದ ವತಿಯಿಂದಲೇ ಹಣ ಒದಗಿಸಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯ ಸುಮಾರು 2,000 ಮನೆಗಳು ಸಿದ್ಧವಾಗಿದ್ದು, ಶೀಘ್ರದಲ್ಲೇ ಕ್ಯಾಬಿನೆಟ್ ಒಪ್ಪಿಗೆ ಪಡೆದು ಬಡವರಿಗೆ ಹಸ್ತಾಂತರಿಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯೋತ್ಸವ ಒಂದು ದಿನದ ಸಂಭ್ರಮವಲ್ಲ, ತಿಂಗಳ ಪೂರ್ತಿ ಹಬ್ಬ: ಸಚಿವ ಜಮೀರ್ ಅಹ್ಮದ್ ಖಾನ್






