ನಟ ದರ್ಶನ್ ಅವರ ಹೆಸರಿನಲ್ಲಿ ಸಾರ್ವಜನಿಕ ಸಮಾರಂಭಗಳು, ದೇವಾಲಯಗಳು, ವಿವಾಹ ಮಂಟಪಗಳು ಹಾಗೂ ಇತರ ನಟರ ಕಾರ್ಯಕ್ರಮಗಳಲ್ಲಿ ಕೆಲ ಅಭಿಮಾನಿಗಳು ಮಾಡುತ್ತಿರುವ ಅತಿರೇಕದ ವರ್ತನೆಗೆ ಕಡಿವಾಣ ಹಾಕಲು ಸ್ವತಃ ದರ್ಶನ್ ಅವರ ಅಧಿಕೃತ ಬಳಗ ಮುಂದಾಗಿದೆ. ಇತರ ನಟರು ಹಾಗೂ ಗಣ್ಯರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಅನಗತ್ಯವಾಗಿ ‘ಡಿ ಬಾಸ್’ ಎಂದು ಕೂಗಿ ಗದ್ದಲ ಸೃಷ್ಟಿಸಬಾರದು ಎಂದು ದರ್ಶನ್ ಅವರ ಅಧಿಕೃತ ‘ಡಿ ಕಂಪನಿ’ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಖಡಕ್ ಎಚ್ಚರಿಕೆ ನೀಡಿದೆ.
ನಟರ ವೇದಿಕೆ, ಸಿನಿಮಾ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಸಭೆಗಳಲ್ಲಿ ದರ್ಶನ್ ಅವರ ಹೆಸರನ್ನು ಅನಗತ್ಯವಾಗಿ ಕೂಗಬಾರದು. ನೆಚ್ಚಿನ ನಟನ ಮೇಲಿನ ಪ್ರೀತಿ ಮತ್ತು ಅಭಿಮಾನವನ್ನು ತಾಳ್ಮೆಯಿಂದ ವ್ಯಕ್ತಪಡಿಸಬೇಕು. ದರ್ಶನ್ ಅವರ ಪ್ರಸ್ತುತ ಕಾನೂನು ಪರಿಸ್ಥಿತಿಯನ್ನು ಪ್ರತಿಯೊಬ್ಬ ಅಭಿಮಾನಿಯೂ ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕು ಎಂದು ಡಿ ಕಂಪನಿ ಮನವಿ ಮಾಡಿದೆ.

ಕಳೆದ ಭಾನುವಾರ ಮಂಡ್ಯದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನಟ ಧ್ರುವ ಸರ್ಜಾ ಹಾಗೂ ಶಾಸಕ ರವಿ ಗಣಿಗ ವೇದಿಕೆಯಲ್ಲಿದ್ದ ಸಂದರ್ಭದಲ್ಲಿ ಕೆಲವರು ನಿರಂತರವಾಗಿ ‘ಡಿ ಬಾಸ್… ಡಿ ಬಾಸ್’ ಎಂದು ಘೋಷಣೆ ಕೂಗಿ ಗದ್ದಲ ಸೃಷ್ಟಿಸಿದ್ದರು. ಇದರಿಂದ ಅಸಮಾಧಾನಗೊಂಡ ಶಾಸಕ ರವಿ ಗಣಿಗ, ಅಭಿಮಾನಿಗಳ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ‘ನೀವೆಲ್ಲ ಈ ರೀತಿ ಅತಿಯಾಗಿ ಕಿರುಚಾಡಿ, ಅತಿರೇಕ ತೋರಿದ್ದರಿಂದಲೇ ದರ್ಶನ್ ಇವತ್ತು ಜೈಲು ಸೇರುವಂತಾಯಿತು’ ಎಂದು ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಇದಕ್ಕೂ ಮೊದಲು ರಾಮನಗರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯಲ್ಲೂ ಕೆಲವರು ಇದೇ ರೀತಿ ‘ಡಿ ಬಾಸ್’ ಘೋಷಣೆ ಕೂಗಿದ್ದರು. ಆಗ ಡಿ.ಕೆ. ಶಿವಕುಮಾರ್ ಕೂಡ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.ಇನ್ನು, ಮದುವೆ ಸಮಾರಂಭವೊಂದಕ್ಕೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಆಗಮಿಸಿದ್ದಾಗಲೂ ಅಭಿಮಾನಿಗಳು ‘ಡಿ ಬಾಸ್’ ಎಂದು ಕೂಗಿದ್ದರು. ಈ ಸಂದರ್ಭದಲ್ಲಿ ವಿಜಯಲಕ್ಷ್ಮಿ ಅವರೇ ಅಭಿಮಾನಿಗಳಿಗೆ ಬುದ್ಧಿವಾದ ಹೇಳಿದ್ದರು. ‘ದಯವಿಟ್ಟು ಹೀಗೆಲ್ಲ ಕೂಗಬೇಡಿ. ಇಂಥ ನಡವಳಿಕೆಗಳಿಂದಲೇ ಅವರಿಗೆ ತೊಂದರೆಯಾಗುತ್ತಿದೆ’ ಎಂದು ಮನವಿ ಮಾಡಿದ್ದರು.

ಈ ಎಲ್ಲ ಘಟನೆಗಳ ಬೆನ್ನಲ್ಲೇ ಇದೀಗ ದರ್ಶನ್ ಅವರ ಅಧಿಕೃತ ಬಳಗವೇ ಅಭಿಮಾನಿಗಳಿಗೆ ಶಿಸ್ತು ಪಾಲಿಸುವಂತೆ ಸೂಚಿಸಿರುವುದು ಗಮನ ಸೆಳೆದಿದೆ. ನೆಚ್ಚಿನ ನಟನ ಮೇಲಿನ ಅಭಿಮಾನವನ್ನು ಇತರರಿಗೆ ಮುಜುಗರವಾಗದ ರೀತಿಯಲ್ಲಿ ವ್ಯಕ್ತಪಡಿಸುವಂತೆ ಮನವಿ ಮಾಡಿದೆ.





