ಪಂಜಾಬ್ ಕಾಂಗ್ರೆಸ್ಸಿನಲ್ಲಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹಾಗೂ ನವಜೋತ್ ಸಿಂಗ್ ಸಿಧು ನಡುವೆ ಬಿಕ್ಕಟ್ಟು ಉಂಟಾದಾಗ, ಕಾಂಗ್ರೆಸ್ ಹೈಕಮಾಂಡ್ ಅನುಸರಿಸಿದ ಸಂಧಾನ ಸೂತ್ರ ಯಶಸ್ವಿಯಾಗಿತ್ತು. ಸಿಧುಗೆ ಪಿಸಿಸಿ ಅಧ್ಯಕ್ಷ ಸ್ಥಾನ ನೀಡಿ, ಇಬ್ಬರೂ ನಾಯಕರು ಸರಿಸಮಾನರು ಅಂತ ಹೈಕಮಾಂಡ್ ಹೇಳಿತ್ತು. ಆದರೆ, ಇದೇ ಸಂಧಾನ ಸೂತ್ರ ರಾಜಸ್ಥಾನದಲ್ಲಿ ಯಶಸ್ವಿಯಾಗುವುದು ಸಂಶಯವಾಗಿದೆ.
ಕಳೆದ ವರ್ಷದಿಂದ ಕಾಂಗ್ರೆಸನಪ್ರಭಾವಿ ನಾಯಕರಾದ ರಾಜಸ್ಥಾನ್ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವಿನ ವೈಮನಸ್ಸು ಪಕ್ಷವನ್ನು ಮತ್ತಷ್ಟು ಪಾತಾಳಕ್ಕೆ ಕೊಂಡೊಯ್ಯುತ್ತಿದೆ. ಕಳೆದ ಬಾರಿ ಸರ್ಕಾರ ಪತನವಾಗುವುದರಿಂದ ಕೂದಲೆಳೆಯ ಅಂತರದಲ್ಲಿ ಹೈಕಮಾಂಡ್ ಕಾಪಾಡಿತ್ತು. ಈ ಬಾರಿ ಹಠಕ್ಕೆ ಬಿದ್ದಿರುವ ಗೆಹ್ಲೋಟ್ ಹಾಗು ಪೈಲಟ್ ನಡುವಿನ ಹಗ್ಗಜಗ್ಗಾಟ ಮುಂಬರುವ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್’ನ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಲಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿಯಾಗಿರುವ ಅಜಯ್ ಮಾಕೆನ್ ಜೈಪುರದಲ್ಲಿ ಬೀಡು ಬಿಟ್ಟು ಕಾಂಗ್ರೆಸ್ ನಾಯಕರೊಂದಿಗೆ ಸತತ ಎರಡು ದಿನಗಳ ಕಾಲ ಸಭೆ ನಡೆಸಿದ್ದಾರೆ. ಈ ವಾರದಲ್ಲಿ ರಾಜ್ಯ ಸಚಿವ ಸಂಪುಟದ ವಿಸ್ತರಣೆಯನ್ನು ಮಾಡಲಾಗುವುದು ಎಂಬ ಆಶ್ವಾಸನೆ ನೀಡಿದ್ದರೂ, ಅದೂ ಸಫಲವಾಗಿಲ್ಲ.
ಈಗಾಗಲೇ ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನ ಪಡೆದಿರುವ ಸಚಿನ್ ಪೈಲಟ್ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ರಾಜಸ್ಥಾನ ಡಿಸಿಎಂ ಕೂಡಾ ಆಗಿದ್ದ ಅವರು, ಗೆಹ್ಲೋಟ್ ನಾಯಕತ್ವದ ವಿರುದ್ದ ಸಿಡಿದೆದ್ದಿದ್ದಾರೆ.
ರಾಜಸ್ಥಾನದ ಕಾಂಗ್ರೆಸ್ ಶಾಸಕರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿರುವ ಹೈಕಮಾಂಡ್ ಪ್ರತಿನಿಧಿಗಳು, ರಾಜ್ಯದ ಆಡಳಿತ ವ್ಯವಸ್ಥೆಯ ಕುರಿತಾಗಿ ಶಾಸಕರ ಅಭಿಪ್ರಾಯವನ್ನು ಕಲೆ ಹಾಕಿದ್ದಾರೆ. ಮುಂದಿನ ಚುನಾವಣೆಗೆ ಯಾವ ರೀತಿ ಸಜ್ಜಾಗಬೇಕೆಂಬುದರ ಕುರಿತಾಗಿಯೂ ಶಾಸಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಇದಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ಅಜಯ್ ಮಾಕೆನ್, ಸಚಿವ ಸಂಪುಟ ವಿಸ್ತರಣೆ, ಪಕ್ಷದ ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷ ಹಾಗೂ ಬ್ಲಾಕ್ ಅಧ್ಯಕ್ಷರ ಆಯ್ಕೆ ಮತ್ತು ನಿಗಮ ಮಂಡಳಿಗಳ ಅಧ್ಯಕ್ಷರ ಆಯ್ಕೆ ಕುರಿತು ಚರ್ಚೆ ನಡೆಸಲಾಗಿದೆ. ಎಲ್ಲರೂ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ದರಾಗಿರುತ್ತೇವೆ ಎಂದು ಭರವಸೆ ನೀಡಿದ್ದಾರೆಂದು ಹೇಳಲಾಗುತ್ತಿದೆ.
ಕಳೆದ ವರ್ಷ ಸರ್ಕಾರ ಉರುಳುವ ಸ್ಥಿತಿ ಎದುರಾಗಿದ್ದಾಗ, ಪಕ್ಷೇತರ ಶಾಸಕರು ಹಾಗೂ ಆರು ಜನ ಬಿ ಎಸ್ ಪಿ ಶಾಸಕರ ಸಹಾಯದಿಂದ ಸರ್ಕಾರವನ್ನು ಉಳಿಸುವಲ್ಲಿ ಗೆಹ್ಲೋಟ್ ಯಶಸ್ವಿಯಾಗಿದ್ದರು. ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಇವರಿಗೂ ಸ್ಥಾನ ನೀಡಬೇಕಾದ ಅನಿವಾರ್ಯತೆ ಗೆಹ್ಲೋಟ್ ಅವರಿಗೆ ಒದಗಿ ಬಂದಿದೆ. ಇದರೊಂದಿಗೆ ಸಚಿನ್ ಪೈಲಟ್ ಬಣದ ಶಾಸಕರು ಕೂಡಾ ಸಿಂಹಪಾಲಿಗೆ ಬೇಡಿಕೆಯಿಟ್ಟಿದ್ದಾರೆ.
ಸದ್ಯಕ್ಕೆ ಹೈಕಮಾಂಡ್, ಹಿರಿಯ ನಾಯಕರಾದ ಅಶೋಕ್ ಗೆಹ್ಲೋಟ್ ಅವರ ತೀರ್ಮಾನಕ್ಕೆ ವಿರುದ್ದವಾಗಿ ಹೋಗುವ ಸೂಚನೆಗಳು ಕಾಣಿಸುತ್ತಿಲ್ಲ. ಹೆಚ್ಚೆಂದರೆ, ಸಚಿನ್ ಪೈಲಟ್ ಬಣದ ಮೂವರು ಶಾಸಕರಿಗೆ ಸಂಪುಟ ಸೇರುವ ಅವಕಾಶ ಒದಗಿ ಬರಲಿದೆ. ಈ ಮೂವರನ್ನು ಕೂಡಾ ಗೆಹ್ಲೋಟ್ ಅವರೇ ಆಯ್ಕೆ ಮಾಡಲಿದ್ದಾರೆ. ಸದ್ಯಕ್ಕೆ ಪೈಲಟ್ ಪರವಾಗಿ ಹೆಚ್ಚಿನ ಬೆಂಬಲ ಇಲ್ಲದ ಕಾರಣ, ಅವರ ಪಾಲು ಕಡಿಮೆಯಾಗಲಿದೆ.
ಹೀಗಾದಲ್ಲಿ, ಸಚಿನ್ ಪೈಲಟ್ ಅವರ ರಾಜಕೀಯ ಬಲ ಮತ್ತಷ್ಟು ಕುಗ್ಗಲಿದೆ. ಕಳೆದ ವರ್ಷ 18 ಶಾಸಕರೊಂದಿಗೆ ಸರ್ಕಾರದ ವಿರುದ್ದ ಹೋದ ಸಂದರ್ಭದಲ್ಲಿ ಅವರು ಉಪ ಮುಖ್ಯಮಂತ್ರಿಯಾಗಿದ್ದರು ಮತ್ತು ಪಿಸಿಸಿ ಅಧ್ಯಕ್ಷ ಸ್ಥಾನವನ್ನೂ ಹೊಂದಿದ್ದರು. ಇವರ ಪಾಳೆಯದ ಇಬ್ಬರು ಶಾಸಕರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗಿತ್ತು.
ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆದ ಬಳಿಕ, ಈ ಮೂವರನ್ನೂ ಅವರ ಸ್ಥಾನದಿಂದ ವಜಾಗೊಳಿಸಲಾಗಿತ್ತು.
ಸಚಿನ್ ಪೈಲಟ್ ಅವರಿಗೆ ಹೈಕಮಾಂಡ್ ಯಾವುದೇ ರಾಜಕೀಯ ಅಧಿಕಾರವನ್ನು ಇನ್ನೂ ನೀಡಿಲ್ಲ ಎಂಬುದು ಗಮನಿಸಬೇಕಾದ ವಿಚಾರ. ಪರಿಸ್ಥಿತಿ ಹೀಗಿರುವಾಗ, ಗೆಹ್ಲೋಟ್ ಅವರು ತಮ್ಮ ಪಟ್ಟನ್ನು ಇನ್ನಷ್ಟು ಬಿಗಿಗೊಳಿಸಿದ್ದಲ್ಲಿ, ಪೈಲಟ್ ಅವರು ತಮ್ಮ ರಾಜಕೀಯ ಸಾಮರ್ಥ್ಯವನ್ನು ಮತ್ತಷ್ಟು ಕಳೆದುಕೊಳ್ಳುವ ಸಾಧ್ಯತೆಯಿದೆ.
ಪಂಜಾಬ್ ಕಾಂಗ್ರೆಸ್ಸಿನಲ್ಲಿ ಬಿಕ್ಕಟ್ಟು ಉಂಟಾದಾಗ ಇದ್ದಂತಹ ಬೇಡಿಕೆಗಳು ಮತ್ತು ಈಗ ಇರುವಂತಹ ಬೇಡಿಕೆಗಳು ಸಂಪೂರ್ಣ ಭಿನ್ನವಾಗಿವೆ. ಸಿಧು ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ ನಂತರ ಅಲ್ಲಿನ ಬಿಕ್ಕಟ್ಟು ಶಮನವಾಗಿದೆ. ಆದರೆ, ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಸಿಎಂ ಸ್ಥಾನದ ಆಕಾಂಕ್ಷಿ. ಪ್ರಸ್ತುತ ನೆರವೇರದಿರುವ ಬೇಡಿಕೆಯೊಂದನ್ನು ಹೈಕಮಾಂಡ್ ಮುಂದೆ ಇಡಲಾಗಿದೆ.