ರಾಷ್ಟ್ರದಲ್ಲಿ ಲೋಕಸಾಭಾ ಚುನಾವಣೆ ಕಾವು ರಂಗೇರಿದೆ. ಎಲ್ಲ ನಾಯಕರು ಚುನಾವಣಾ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ. ಈ ಮಧ್ಯೆ ಆಗಾಗ ಸರಳತೆ ಮೆರೆಯುತ್ತಿದ್ದ ಕಾಂಗ್ರೆಸ್ ನ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಸರಳತೆಗೆ ಸಾಕ್ಷಿಯಾಗಿದ್ದಾರೆ.

ಕಾಂಗ್ರೆಸ್ ನ ಹಿರಿಯ ನಾಯಕ ರಾಹುಲ್ ಗಾಂಧಿ ಅವರು ಸಾಮಾನ್ಯರಂತೆ ಸಲೂನ್ ಅಂಗಡಿಗೆ ತೆರಳಿ ಕ್ಷೌರ ಮಾಡಿಸಿಕೊಂಡು ಸುದ್ದಿಯಾಗಿದ್ದಾರೆ. ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಅವರು ಸಾಮಾನ್ಯರಂತೆ ಕ್ಷೌರದ ಅಂಗಡಿಗೆ ತೆರಳಿ ಕ್ಷೌರ ಮಾಡಿಸಿಕೊಂಡಿರುವ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಪ್ರಚಾರದ ಮಧ್ಯೆ ಬಿಡುವು ಮಾಡಿಕೊಂಡಿದ್ದ ರಾಹುಲ್ ಗಾಂಧಿ ರಸ್ತೆಯಲ್ಲಿದ್ದ ಕ್ಷೌರದ ಅಂಗಡಿಗೆ ತೆರಳಿ, ಸಾಮಾನ್ಯರಂತೆಯೇ ಕುಳಿತು ಕ್ಷೌರ ಮಾಡಿಸಿಕೊಂಡಿದ್ದಾರೆ. ರಾಹುಲ್ ಅವರ ಈ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೇ, ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗ ಈ ರೀತಿ ಜನ ಸಾಮಾನ್ಯರಂತೆ ಬಂದು ಕ್ಷೌರ ಮಾಡಿಸಿಕೊಳ್ಳುತ್ತಾರೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.

ರಾಹುಲ್ ಗಾಂಧಿ ಅವರು ಕ್ಷೌರದ ಅಂಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೆಲಸಗಾರರನ್ನು ಕೂಡ ಪ್ರೀತಿಯಿಂದ ಮಾತನಾಡಿಸಿ, ಅವರ ನೋವುಗಳನ್ನು ಆಲಿಸಿದ್ದಾರೆ. ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ.

ಉತ್ತರ ಪ್ರದೇಶದಲ್ಲಿನ ರಾಯಬರೇಲಿ ಕ್ಷೇತ್ರ ಗಾಂಧಿ ಕುಟುಂಬದ ತೆಕ್ಕೆಯಲ್ಲಿರುವ ಕ್ಷೇತ್ರ. ಸೋನಿಯಾ ಗಾಂಧಿ ಅವರು ಈ ಕ್ಷೇತ್ರವನ್ನು ಇಂದಿರಾಗಾಂಧಿ ಅವರ ನಂತರ ಪ್ರತಿನಿಧಿಸಲು ಆರಂಭಿಸಿದರು. ಆದರೆ, ಈ ಬಾರಿ ವಯಸ್ಸಿನ ಕಾರಣದಿಂದಾಗಿ ಅವರು ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಯ್ ಬರೇಲಿಯನ್ನು ಬೇರೆಯವರಿಗೆ ಬಿಟ್ಟು ಕೊಡಬಾರದೆಂಬ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದೆ. ಪಕ್ಕದ ಅಮೇಥಿ ಕ್ಷೇತ್ರದಿಂದ ರಾಹುಲ್ ಸ್ಪರ್ಧೆ ಮಾಡುತ್ತಿದ್ದರು. ಆದರೆ, ಕಳೆದ ಬಾರಿಯ ಚುನಾವಣೆಯಲ್ಲಿ ರಾಹುಲ್ ಸ್ಮೃತಿ ಇರಾನಿ ವಿರುದ್ಧ ಅಮೇಥಿಯಲ್ಲಿ ಸೋಲು ಕಂಡಿದ್ದರು.


