ಶನಿವಾರವಷ್ಟೇ 424 ಮಂದಿಯ ಭದ್ರತೆಯನ್ನು ಪಂಜಾಬ್ ಸರ್ಕಾರ ಹಿಂಪಡೆದ ಮಾರನೇ ದಿನವೇ ಪಂಜಾಬಿ ಗಾಯಕ ಸಿಧು ಮೂಸೇವಾಲರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.
ಮಾನ್ಸ ಜಿಲ್ಲೆಯ ಜವಾಹರ್ಕೆ ಮೂಲದ ಸಿಧು ಈ ವರ್ಷದ ಆರಂಭದಲ್ಲಿ ನಡೆದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಮಾನ್ಸ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಎಎಪಿ ಅಭ್ಯರ್ಥಿ ವಿಜಯ್ ಸಿಂಗ್ಲಾ ವಿರುದ್ಧ 63,000 ಮತಗಳ ಅಂತರದಿಂದ ಸೋಲನ್ನು ಕಂಡಿದ್ದರು.
ಕಳೆದ ತಿಂಗಳು ಬಿಡುಗಡೆಯಾಗಿದ್ದ ಅವರ ನೂತನ ಆಲ್ಬಮ್ ಹಾಡಿನಲ್ಲಿ ಆಮ್ ಆದ್ಮಿ ಸರ್ಕಾರವನ್ನು ಗುರಿಯಾಗಿಸಿ ಹಾಡಿದ್ದರು. ತಮ್ಮ ಹಾಡಿನಲ್ಲಿ ಎಎಪಿ ನಾಯಕರನ್ನು ದ್ರೋಹಿಗಳೆಂದು ಹೇಳುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಸಿಧು ಮೂಸೇವಾಲ ಹತ್ಯೆ ತೀವ್ರ ನೋವು ಹಾಗೂ ಆಘಾತ ಮಾಡಿದೆ. ಒಬ್ಬ ಪ್ರತಿಭಾನ್ವಿತ ಕಲಾವಿದನನ್ನು ಪಂಜಾಬಿಗರು ಕಳೆದುಕೊಂಡಿದ್ದಾರೆ ಅವರ ಸಾವಿನ ನೋವನ್ನು ಬಾರಿಸುವ ಶಕ್ತಿ ಆ ದೇವರು ಅವರ ಕುಟುಂಬ ಹಾಗೂ ಅಭಿಮಾನಿ ವರ್ಗಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಇನ್ನು ಘಟನೆ ಕುರಿತು ಪ್ರತಿಕ್ರಯಿಸಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಸಿದುರವರ ಸಾವು ಆಘಾತವನ್ನುಂಟುಮಾಡಿದೆ. ಘಟನೆಯಲ್ಲಿ ಯಾರ ಕೈವಾಡವಿದ್ದರು ಅಂಥವರನ್ನು ಸುಮ್ಮನೆ ಬಿಡುವುದಿಲ್ಲ. ಅವರ ಕುಟುಂಬ ಹಾಗೂ ಅಭಿಮಾನಿ ವರ್ಗಕ್ಕೆ ನೋವು ಬಾರಿಸುವ ಶಕ್ತಿ ಆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.






