ಮುಂದಿನ ತಿಂಗಳು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಪಂಜಾಬ್ ನಲ್ಲಿ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಮಧ್ಯೆ ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರು ಚುನಾವಣಾ ಆಯೋಗದ ಮುಖ್ಯಸ್ಥರಿಗೆ ಪತ್ರ ಬರೆದು , ಚುನಾವಣೆಯನ್ನು ಒಂದು ವಾರ ಮೊದಲೇ ನಡೆಸುವಂತೆ ಕೋರಿದ್ದಾರೆ.
ಈ ಕುರಿತು ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿರುವ ಅವರು, ರಾಜ್ಯದ ಶೇ.32ರಷ್ಟು ಜನಸಂಖ್ಯೆ ಹೊಂದಿರುವ ಪರಿಶಿಷ್ಟ ಜಾತಿ ಸಮುದಾಯದ ಗುರು ರವಿದಾಸ ಜಯಂತಿ ಫೆಬ್ರವರಿ 16 ರಂದು ಇದೆ. ರಾಜ್ಯದಲ್ಲಿ ನೆಲೆಸಿರುವ ಎಸ್ಸಿ ಭಕ್ತರು ಫೆಬ್ರವರಿ 10ರಿಂದ-16ರವರೆಗೆ ಉತ್ತರಪ್ರದೇಶದ ಬನಾರಸ್ಗೆ ಭೇಟಿ ನೀಡುವುದರಿಂದ ಅವರು ರಾಜ್ಯ ವಿಧಾನಸಭೆ ಚುನಾವಣೆಗೆ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ ಎಂದು ತಾವು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಸಮುದಾಯದ ಮುಖಂಡರು ನನ್ನ ಬಳಿ ಬಂದು ಚುನಾವಣೆ ಸಮಯದಲ್ಲಿ ಜಯಂತಿ ಇರುವ ಕಾರಣ ನಾವು ಮತದಾನ ಮಾಡಲು ಕಷ್ಟವಾಗುತ್ತದೆ. ಮುಖ್ಯಮಂತ್ರಿಗಳಾದ ನೀವು ದಯವಿಟ್ಟು ಈ ವಿಚಾರವನ್ನ ಪ್ರಸ್ತಾಪಿಸಿ ಚುನಾವಣೆಯನ್ನು ಒಂದು ವಾರಗಳ ಕಾಲ ಹಿಂದೆ ಹಾಕಿಸಿ ಎಂದು ವಿನಂತಿಸಿಕೊಂಡರು ಎಂದು ಚನ್ನಿ ಹೇಳಿದ್ದಾರೆ.
ಒಂದು ವೇಳೆ ಮತದಾನದ ದಿನಾಂಕವನ್ನು ಒಂದುವಾರಗಳ ಹಿಂದಕ್ಕೆ/ಮುಂದೂಡಿದರೆ 20ಲಕ್ಷ ಜನರು ತಮ್ಮ ಮತದಾನವನ್ನ ಮಾಡಲಿದ್ದಾರೆ. ಈ ಹಿಂದೆ ಪಂಜಾಬ್ ಬಿಎಸ್ಪಿ ಅಧ್ಯಕ್ಷ ಜಸಬೀರ್ ಸಿಂಗ್ ಚುನಾವಣೆಯನ್ನು ಮುಂದೂಡುವಂತೆ ಆಯೋಗಕ್ಕೆ ಪತ್ರ ಬರೆದಿದ್ದರು.