ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ… ಹೌದು, ಈ ಕರಾಳ ಶುಕ್ರವಾರ ಕನ್ನಡಿಗರ ಪಾಲಿನ ದೊಡ್ಡ ಬೆಳಕು ಮರೆಯಾಗಿದೆ.
ಪುನೀತ್ ರಾಜ್ ಕುಮಾರ್ ಎಂಬ ಬೆಳಕು ಹೀಗೆ ಬದುಕಿನ ನಡುಹಗಲಲ್ಲೇ ಆರಿಹೋಗಿ, ಆಘಾತ ನೀಡುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಪುನೀತ್ ಕೇವಲ ಒಬ್ಬ ಸ್ಟಾರ್ ನಟನಾಗಿ, ಬಹುಬೇಡಿಕೆಯ ಸ್ಟಾರ್ ಆಗಿ ಮಾತ್ರ ಇದ್ದಿದ್ದರೆ, ಬಹುಶಃ ಅವರನ್ನು ಹೀಗೆ ಬಾನ ದಾರಿಯ ಬೆಳಕು ಎಂದು ಇಡೀ ನಾಡು ಮೆಚ್ಚಿ ಮಿಡಿಯುತ್ತಿರಲಿಲ್ಲವೇನೋ. ಅವರೊಳಗೊಬ್ಬ ಅಸಲೀ ಯೂತ್ ಐಕಾನ್ ಇದ್ದರು, ಎಲ್ಲ ತಂದೆ-ತಾಯಿಗಳು ಹಂಬಲಿಸುವ ಮಗನಿದ್ದ, ಎಲ್ಲಾ ಮಕ್ಕಳು ಹಂಬಲಿಸುವ ಗೆಳೆಯನಿದ್ದ. ಪುಟಾಣಿಗಳ ಪಾಲಿನ ಮಾಸ್ಟರ್ ಲೋಹಿತ್ ಇದ್ದರು.
ತೆರೆಯ ಮೇಲಿನ ಕಾಲ್ಪನಿಕ ಕಥಾನಾಯಕ ಪುನಿತ್ ತಮ್ಮ ನಟನೆ, ಡಾನ್ಸ್ ಮತ್ತು ಫೈಟ್ ಮೂಲಕ ಮೂಲಕ ಹೇಗೆ ಕೋಟ್ಯಂತರ ಜನರನ್ನು ಸೆಳೆದಿದ್ದರೋ ಹಾಗೇ ತೆರೆಯ ಆಚೆಯ ನಿಜ ಬದುಕಿನ ಪುನೀತ್ ತಮ್ಮ ನಡೆ-ನುಡಿಯ ಸಭ್ಯತೆ ಮತ್ತು ವಿಧೇಯತೆಯ ಮೂಲಕ ಕನ್ನಡ ಮತ್ತು ಕನ್ನಡದಾಚೆಯ ಜಗತ್ತಿನ ಕಣ್ಮಣಿಯಾಗಿದ್ದರು. ಹಾಗಾಗಿಯೇ ಅವರು ಸಿನಿಮಾ ಜಗತ್ತಿನ ಆಚೆಗೆ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದರು. ಹಲವರ ‘ಇದ್ದರೆ ಹೀಗಿರಬೇಕು’ ಎಂಬ ಬದುಕಿನ ಮಾಡೆಲ್ ಆಗಿದ್ದರು. ನೆಚ್ಚಿನ ಅಪ್ಪು ಆಗಿದ್ದರು.
‘ಬೆಟ್ಟದ ಹೂವು’ನಂತಹ ಸಿನಿಮಾದ ಬಾಲನಟನಾಗಿ ಸ್ವರ್ಣ ಕಮಲ ರಾಷ್ಟ್ರಪ್ರಶಸ್ತಿ ಪಡೆಯುವ ಹೊತ್ತಿಗಾಗಲೇ ಕನ್ನಡಿಗರ ಎದೆಯಲ್ಲಿ ಮಾಸ್ಟರ್ ಲೋಹಿತ್ ಎಂದೆಂದೂ ಬಾಡದ ಹೂವಾಗಿ ಅರಳಿದ್ದರು. ಹಾಗೇ ‘ಯಾರಿವನು’, ‘ಚಲಿಸುವ ಮೋಡಗಳು’, ‘ಭಕ್ತ ಪ್ರಹ್ಲಾದ’, ‘ಎರಡು ನಕ್ಷತ್ರಗಳು’, ‘ಭಾಗ್ಯವಂತ’ದಂತಹ ಸಿನಿಮಾಗಳ ಮೂಲಕ ಬಾಲನಟನಾಗಿಯೇ ಸ್ಟಾರ್ ಪಟ್ಟಕ್ಕೇರಿದ್ದರು ಮಾಸ್ಟರ್ ಲೋಹಿತ್.
ಆ ಬಳಿಕ ಸುಮಾರು ಒಂದೂವರೆ ದಶಕದ ಕಾಲ ಬೆಳ್ಳಿತೆರೆಯಿಂದ ದೂರವೇ ಉಳಿದಿದ್ದ ಲೋಹಿತ್, 2002ರಲ್ಲಿ ‘ಅಪ್ಪು’ ಮೂಲಕ ಕನ್ನಡ ಚಿತ್ರರಂಗದ ಹೊಸ ಹೀರೋ ಪುನೀತ್ ರಾಜ್ ಕುಮಾರ್ ಆಗಿ ಮರಳಿದರು. ಆ ಬಳಿಕ ಈ ಎರಡು ದಶಕದಲ್ಲಿ ಅಪ್ಪು ಕನ್ನಡ ಚಿತ್ರರಂಗವಷ್ಟೇ ಅಲ್ಲದೆ, ಕನ್ನಡ ಪ್ರಜ್ಞೆಯ ಭಾಗವಾಗಿ ಬೆಳೆದ ರೀತಿ ನಿಜಕ್ಕೂ ಅಚ್ಚರಿಯ ಸಂಗತಿ. ಏಕೆಂದರೆ, ಆರಂಭದ ಒಂದೆರಡು ಸಿನಿಮಾಗಳನ್ನು ಬಿಟ್ಟರೆ, ಅಪ್ಪು ಸಿನಿಮಾಗಳೆಂದರೆ ಅವು ಇಡೀ ಕುಟುಂಬ ಒಟ್ಟಾಗಿ ಕುಳಿತು ನೋಡುವ ಸಿನಿಮಾಗಳು, ಕೌಟುಂಬಿಕ ಮೌಲ್ಯ, ಸಾಮಾಜಿಕ ಮೌಲ್ಯಗಳಿಗೆ ಆದ್ಯತೆ ಕೊಡುವ ಸಿನಿಮಾ ಎಂಬ ಸಾರ್ವತ್ರಿಕ ಅಭಿಪ್ರಾಯ ರೂಪುಗೊಂಡಿತ್ತು.
ಒಂದು ಕಡೆ ಹಸಿಬಿಸಿ ಪ್ರಣಯ, ಮಚ್ಚು ಲಾಂಗಿನ ಹೊಡೆದಾಟ, ಶೌರ್ಯ ಪರಾಕ್ರಮದ ಪ್ರದರ್ಶನದ ಸಿನಿಮಾಗಳ ಮೂಲಕ ತಮ್ಮ ಸಮಕಾಲೀನ ನಟರು ವಿಜೃಂಭಿಸುತ್ತಿರುವಾಗಲೂ ಪುನೀತ್ ರಾಜಕುಮಾರ, ಮೈತ್ರಿ, ಪೃಥ್ವಿಯಂತಹ ಸಿನಿಮಾಗಳ ಮೂಲಕ ತಮ್ಮದೇ ಆದ ಭಿನ್ನ ಹಾದಿಯನ್ನು ತುಳಿದಿದ್ದರು. ಆ ಮೂಲಕ ಕಳೆದಹೋಗುತ್ತಿರುವ ಮಾನವೀಯ ಮೌಲ್ಯಗಳ ಮಹತ್ವವನ್ನು ಸಿನಿಮಾದಂತಹ ಜನಪ್ರಿಯ ಮಾಧ್ಯಮದ ಮೂಲಕವೂ ಸಾರುವ ಪ್ರಯತ್ನ ಮಾಡಿದ್ದರು. ಆ ಕಾರಣಕ್ಕೇ ಕಳೆದ ಒಂದು ದಶಕದ ಅವರ ಸಿನಿಮಾ ಯಾನ, ಬಹುತೇಕ ಕನ್ನಡಕ್ಕೆ ಮತ್ತೊಬ್ಬ ಅಣ್ಣಾವ್ರನ್ನು ಕೊಡುವ ಹಾದಿಯಲ್ಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ದೊಡ್ಡಮನೆಯ ನಿಜವಾದ ವಾರಸುದಾರ ಪುನೀತ್, ತಂದೆಗೆ ತಕ್ಕ ಮಗ ಎಂಬ ಮಾತುಗಳು ಸಾಮಾನ್ಯವಾಗಿದ್ದವು.
ತೆರೆಯ ಆಚೆ ಸಾರ್ವಜನಿಕ ಕಾರ್ಯಕ್ರಮಗಳು, ಸಭೆ ಸಮಾರಂಭಗಳು, ಖಾಸಗೀ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಾಗ ಪುನೀತ್ ನಡೆ ನುಡಿ, ಅವರ ವಿನೀತ ಸ್ವಭಾವ, ಯಾವ ಹಮ್ಮುಬಿಮ್ಮು ಇರದ ಸರಳತೆ, ದೊಡ್ಡಮನೆಯ ಮಗನಾಗಿ, ಸೂಪರ್ ಸ್ಟಾರ್ ಮಗನಾಗಿ, ಸ್ವತಃ ಸೂಪರ್ ಸ್ಟಾರ್ ಆಗಿಯೂ ಪುನೀತ್ ಪುಟ್ಟ ಮಗುವಿನೆದರೂ ತಲೆಬಾಗಿ ಮಾತನಾಡುವ ವಿನಯ ನಾಡಿನ ಉದ್ದಗಲಕ್ಕೂ ಅವರನ್ನು ಜನರೆದೆಯ ‘ರಾಜಕುಮಾರ’ನನ್ನಾಗಿ ಮಾಡಿದ್ದವು. ಅವರು ನಡೆಸುತ್ತಿದ್ದ ಅನಾಥಾಶ್ರಮಗಳು, ವೃದ್ಧಾಶ್ರಮಗಳು, ಗೋಶಾಲೆಗಳು, ಬಡಮಕ್ಕಳ ಉಚಿತ ಶಿಕ್ಷಣ ಶಾಲೆಗಳು, ಹಲವು ಸಂಕಷ್ಟದ ಹೊತ್ತಲ್ಲಿ ಜನರಿಗೆ ಚಾಚುತ್ತಿದ್ದ ನೆರವಿನ ಹಸ್ತ,.. ಎಲ್ಲವೂ ಅವರನ್ನು ಸಿನಿಮಾದ ಆಚೆಗೂ ರಿಯಲ್ ಸ್ಟಾರ್ ಆಗಿಸಿದ್ದವು. ‘ಯುವರತ್ನ’ ಎಂಬ ಮೆಚ್ಚುಗೆ ಮಾತಿಗೆ ಪಾತ್ರವಾಗಿಸಿದ್ದವು.
ಡಾ ರಾಜ್ ಕುಮಾರ್ ಅವರಂಥ ಮಹಾ ನಟ ಮತ್ತು ಮೇರು ವ್ಯಕ್ತಿತ್ವದ ನೆರಳಲ್ಲಿ, ಅವರ ಮಗನಾಗಿ ಬೆಳೆದರೂ, ಅವರ ನೆರಳಿಂದ ಆಚೆ ಬಂದು ತಮ್ಮದೇ ಸ್ವಂತ ಪ್ರತಿಭೆ, ಘನತೆಯ ಮೂಲಕ ಒಂದು ಪ್ರತ್ಯೇಕ ವ್ಯಕ್ತಿತ್ವ, ಒಂದು ಸ್ಟಾರ್ ಗಿರಿ ಕಟ್ಟಿಕೊಳ್ಳುವುದು ಸರಳವಾಗಿರಲಿಲ್ಲ. ಆದರೆ, ಪುನೀತ್ ಹೀರೋ ಆಗಿ ನಟನೆ ಆರಂಭಿಸಿದ ಕೆಲವೇ ವರ್ಷಗಳಲ್ಲಿ ಅಂತಹದ್ದೊಂದು ವಿಶಿಷ್ಟ ಸ್ಥಾನವನ್ನು ಸ್ವಂತ ಪರಿಶ್ರಮ ಮತ್ತು ಪ್ರತಿಭೆಯ ಮೂಲಕ ಕಟ್ಟಿಕೊಂಡರು. ದೊಡ್ಡಮನೆಯ ಪ್ರಭಾ ವಲಯದ ಆಚೆಗೆ ಬೆಳೆದು ನಿಂತರು. ‘ಪ್ರೇಮದ ಕಾಣಿಕೆ’ ಸಿನಿಮಾದಲ್ಲಿ ಆರು ತಿಂಗಳ ಮಗುವಾಗಿದ್ದಾಗಲೇ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡ ಅಪ್ಪು, ಇತ್ತೀಚಿನ ‘ಯುವರತ್ನ’ದವರೆಗೆ ಬರೋಬ್ಬರಿ ಅವರ ವಯಸ್ಸಿನಷ್ಟೇ (46 ವರ್ಷ) ವಿಸ್ತರಿಸಿರುವ ಅವರ ಸಿನಿ ಪಯಣದ ಉದ್ದಕ್ಕೂ ‘ಪವರ್’ ಸ್ಟಾರ್ ಆಗಿಯೇ ನಟಿಸಿದ್ದಾರೆ. ತೆರೆಯ ಮೇಲೆ ಅವರಿದ್ದರೆ, ಆ ದೃಶ್ಯಕ್ಕೇ ಒಂದು ಪಾಸಿಟಿವ್ ಎನರ್ಜಿ ಎಂಬಂತೆ ಅವರ ಇರುವಿಕೆ ಇರುತ್ತಿತ್ತು. ಹಾಗಾಗಿಯೇ ಅವರು ಅಭಿಮಾನಿಗಳ ಪಾಲಿಗೆ ಪವರ್ ಸ್ಟಾರ್ ಆಗಿದ್ದರು.
ನಟನಾಗಿ ಅಷ್ಟೇ ಅಲ್ಲದೆ, ಹಾಡುಗಾರನಾಗಿ, ನಿರ್ಮಾಪಕನಾಗಿಯೂ ಅವರು ಕನ್ನಡ ಸಿನಿಮಾ ರಂಗದಲ್ಲಿ ಎಂದೆಂದೂ ಅಳಿಯ ಛಾಪು ಮೂಡಿಸಿದ್ದಾರೆ. ‘ಬೆಟ್ಟದ ಹೂವು’ ಸಿನಿಮಾದ “ಬಿಸಿಲೇ ಇರಲಿ, ಮಳೆಯೇ ಬರಲಿ, ಕಾಡಲ್ಲಿ ಮೇಡಲ್ಲಿ ಅಲೆವೇ.. ಶೆರ್ಲಿ ಮೇಡಂಗಾಗಿ ಕೊಡಲು ಬೆಟ್ಟದ ಹೂವ ತರುವೆ..” ಗೀತೆಯಂತೂ ಎಂದೆಂದೂ ಬಾಡದ ಹೂವೇ.
ಯಶಸ್ವಿ ಸಿನಿಮಾ ಕಥೆ ಮತ್ತು ಅದಕ್ಕೆ ತಕ್ಕ ನಟನೆಯ ಮೂಲಕ ಒಬ್ಬ ಸ್ಟಾರ್ ಆಗಿ ಬೆಳೆಯುವುದು ಸಿನಿಮಾ ಪ್ರಪಂಚದಲ್ಲಿ ಒಂದು ಸಾಧನೆಯೇ. ಆದರೆ, ತೆರೆಯ ಮೇಲಿನ ನಟನೆಯ ಆಚೆಗೆ ನಿಜ ಬದುಕಿನಲ್ಲಿ ಸ್ಟಾರ್ ಆಗಿ ಬೆಳೆಯುವುದು, ಜಾತಿ, ಧರ್ಮ, ಮತಗಳ ಕೂಪದಲ್ಲಿ ಕೊಳೆಯುತ್ತಿರುವ ಸಮಾಜದಲ್ಲಿ ಎಲ್ಲವನ್ನೂ ಮೀರಿ ಒಬ್ಬ ಐಕಾನ್ ಆಗಿ ಬೆಳೆಯುವುದು; ಯಾವ ವಿವಾಧಗಳಿಲ್ಲದೇ, ಗಾಸಿಪ್ ಗಳಿಲ್ಲದೇ ಎಲ್ಲರ ಮೆಚ್ಚಿನ ಮನೆಮಗನಾಗಿ ಬೆಳೆಯುವುದು ಸರಳವಲ್ಲ. ಹಾಗೆ ಬೆಳೆದದ್ದು ಪುನೀತ್ ಹೆಚ್ಚುಗಾರಿಕೆ! ಅದು ಸಾಧನೆಯನ್ನೂ ಮೀರಿದ ಸಾಧನೆ. ತಮ್ಮ ವ್ಯಕ್ತಿತ್ವದ ಘನತೆ ಮತ್ತು ಸರಳತೆಯ ಮೂಲಕ ಪುನೀತ್ ಎಂಬ ‘ಬೆಟ್ಟದ ಹೂವು’ ಹಾಗೆ ಎಲ್ಲರ ಎದೆಯ ಹೂವಾಗಿ ಅರಳಿತ್ತು.
ಪುನೀತ್ ದಿಢೀರನೇ ನಿರ್ಗಮಿಸಿದ್ದಾರೆ. ಇಡೀ ನಾಡು ಆಘಾತ ಮತ್ತು ಆತಂಕದಿಂದ ಮಿಡಿಯುತ್ತಿದೆ. ‘ಬೆಟ್ಟದ ಹೂವು’ ಈಗ ಎಲ್ಲರೆದೆಯ ನೆನಪು ಮಾತ್ರ. ‘ರಾಜಕುಮಾರ’ನಿಗೆ ಹೀಗೆ ಅರ್ಧ ದಾರಿಯಲ್ಲೇ ವಿದಾಯ ಹೇಳುವ ಸಂಕಟ ಕನ್ನಡಿಗರದ್ದು. ಶಂಕರ್ ನಾಗ್ ಅವರಂತಹ ಕನಸುಗಾರನ ಕಳೆದುಕೊಂಡಂತಹದ್ದೇ ಆಘಾತಕ್ಕೆ ಮತ್ತೊಮ್ಮೆ ಕನ್ನಡಿಗರು ಎದೆ ಗಟ್ಟಿ ಮಾಡಿಕೊಂಡು ಒಡ್ಡಿಕೊಂಡಿದ್ದಾರೆ. ಹೀಗೆ ಅಚಾನಕ್ಕಾಗಿ ಕಳಚಿದ ತಾರೆಗಳು ಮತ್ತೆ ಈ ನೆಲದಲ್ಲಿ ಮೊಳೆಯಲಿ, ಹೊಸ ಭರವಸೆಗಳು ಚಿಗುರಲಿ.. ಎಂಬುದು ಭಾವನಾತ್ಮಕವೆನಿಸಿದರೂ, ಸದ್ಯಕ್ಕೆ ಅದೊಂದೂ ಸಮಾಧಾನಪಟ್ಟುಕೊಳ್ಳಲು ಇರುವ ದಾರಿ..! ಅಲ್ಲವೆ?.
ಕಾರ್ಟೂನ್ – ಸತೀಶ್ ಆಚಾರ್ಯ