ಯಾದಗಿರಿ: ಇಂದಿನಿಂದ ರಾಜ್ಯಾದ್ಯಂತ ಪ್ರಸಕ್ತ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನೇತೃತ್ವದಲ್ಲಿ ಒಟ್ಟು ರಾಜ್ಯದ 1,217 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಈಗಾಗಲೇ ಮೊದಲ ವಿಷಯದ ಪರೀಕ್ಷೆ ಆರಂಭವಾಗಿದೆ.

ಪ್ರಶ್ನೆ ಪತ್ರಿಕೆ ಲೀಕ್ ಸೇರಿದಂತೆ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಈ ಬಾರಿ ಯಾವುದೇ ಸಮಸ್ಯೆಗಳು ಇರಬಾರದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಲ್ಲಾ ರೀತಿಯ ಕ್ರಮ ಕೈಗೊಂಡರೂ ಕೂಡ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

ವಿದ್ಯಾರ್ಥಿಗಳಿಗೆ ನೀಡಿದ ಹಾಲ್ ಟಿಕೆಟ್‌ನಲ್ಲಿ ನಮೂದಿಸಿರುವ ವಿಳಾಸವೇ ಬೇರೆ ಹಾಗೂ ಪರೀಕ್ಷಾ ಕೇಂದ್ರ ಇರುವ ಸ್ಥಳವೇ ಬೇರೆಯಾದ ಕಾರಣ ದ್ವೀತಿಯ ಪಿಯುಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು ಪರದಾಡಿದ್ದಾರೆ. ಯಾದಗಿರಿ ನಗರ ಸಬಾ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದ ವಿಚಾರವಾಗಿ ಗೊಂದಲ ಉಂಟಾಗಿದ್ದು, ಬೇರೆ ಬೇರೆ ಊರುಗಳಿಂದ ಬಂದ ವಿದ್ಯಾರ್ಥಿಗಳು ಕೆಲ ಕಾಲ ಆತಂಕ್ಕೆ ಒಳಗಾಗಿದ್ದಾರೆ.

ಕಾಲೇಜ್ ಇರುವುದು ಲುಂಬಿನಿ ಪಾರ್ಕ್ ಹತ್ತಿರವಾದರೆ, ಹಾಲ್ ಟಿಕೆಟ್‌ನಲ್ಲಿ ಗಂಜ್ ರೋಡ್ ಎಂದು ನಮೂದಿಸಲಾಗಿದೆ. ಹೀಗಾಗಿ ಗಂಟೆಗಳ ಕಾಲ ಪರೀಕ್ಷಾ ಕೇಂದ್ರಕ್ಕಾಗಿ ಹುಡುಕಾಡಿರುವ ವಿದ್ಯಾರ್ಥಿಗಳು ಅಂತಿಮವಾಗಿ ಸ್ಥಳೀಯರ ಸಹಾಯದಿಂದ ಸಬಾ ಪಿಯು ಕಾಲೇಜು ತಲುಪಿದ್ದಾರೆ. ಪರೀಕ್ಷೆಗೆ ಸಿದ್ಧರಾಗಿ ಬಂದ ವಿದ್ಯಾರ್ಥಿಗಳಿಗೆ ಈ ರೀತಿಯ ಗೊಂದಲ ಸೃಷ್ಟಿಸಿದ ಪಿಯು ಬೋರ್ಡ್ ಹಾಗೂ ಕಾಲೇಜು ಆಡಳಿತ ಮಂಡಳಿ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.







