ಭಾರತದ ಸಂವಿಧಾನ ಮತ್ತು ಗಣತಂತ್ರ ವ್ಯವಸ್ಥೆ ಸಮ ಸಮಾಜದ ಕಲ್ಪನೆಯೊಂದಿಗೇ ಎಂಟು ದಶಕಗಳನ್ನು ಪೂರೈಸಿದ್ದರೂ ತಳಸಮಾಜಕ್ಕೆ ಸೇರಿದ ಸಾಮಾನ್ಯ ಜನತೆಯ ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ಇಂದಿಗೂ ಸಹ ಸಾಮೂಹಿಕ ಹಕ್ಕೊತ್ತಾಯ ಚಳುವಳಿಗಳು ಅತ್ಯವಶ್ಯವಾಗಿವೆ. ಕಳೆದ ಐದು ದಶಕಗಳಲ್ಲಿ ಹೀಗೆ ಸಂಪಾದಿಸಲಾಗಿರುವ ಹಕ್ಕುಗಳನ್ನೂ ಹಂತಹಂತವಾಗಿ ಕಸಿದುಕೊಳ್ಳುವ ಒಂದು ಕ್ರೂರ ಆಳ್ವಿಕೆಯನ್ನು ಈಗ ಎದುರಿಸುತ್ತಿದ್ದೇವೆ. ಈ ಸಂದಿಗ್ಧ ಸನ್ನಿವೇಶದಲ್ಲಿ “ ಶಾಸನ ಸಭೆಗಳಲ್ಲಿ (ಮೇಲ್ಮನೆಗಳನ್ನು ಹೊರತುಪಡಿಸಿ) ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ಕಲ್ಪಿಸುವ ” ಮಸೂದೆಯೊಂದು ಕಳೆದ ಮೂರು ದಶಕಗಳಿಂದ ರಾಜಕೀಯ ಮೇಲಾಟಕ್ಕೆ ಸಿಲುಕಿ ಹೊಯ್ದಾಡುತ್ತಿದೆ.

ಮೂಲತಃ ಸರ್ಕಾರಗಳು ಮಹಿಳಾ ಮೀಸಲಾತಿಯನ್ನು ಆಡಳಿತಾರೂಢ ಪಕ್ಷ ಕೊಡುವಂತಹ ಒಂದು ಸಾಂವಿಧಾನಿಕ ಸವಲತ್ತು ಎಂದೇ ಭಾವಿಸುವುದನ್ನು ಗಮನಿಸುತ್ತಲೇ ಬಂದಿದ್ದೇವೆ. ನಾವೇ ಮಸೂದೆ ಪರಿಚಯಿಸಿದ್ದು ಎನ್ನುವ ಒಂದು ರಾಜಕೀಯ ದನಿಗೆ ಸಮಾನಾಂತರವಾಗಿ ನಮ್ಮ ಸರ್ಕಾರವೇ ಅದಕ್ಕೆ ಶಾಸನಾತ್ಮಕ ರೂಪ ಕೊಟ್ಟಿರುವುದು ಎಂಬ ಮತ್ತೊಂದು ದನಿ ಕೇಳಿಸುತ್ತದೆ. ಈ ಎರಡೂ ದನಿಗಳಲ್ಲಿ ಕಾಣುವ ಸಾಮ್ಯತೆ ಅದೇ ಪ್ರಾಚೀನ ಪುರುಷಾಧಿಪತ್ಯದ ಲಕ್ಷಣ. “ ನಮ್ಮ ಸರ್ಕಾರ ಮಹಿಳಾ ಮೀಸಲಾತಿ ಜಾರಿಗೊಳಿಸುವ ಮೂಲಕ ದೇಶದ ಮಹಿಳೆಯರಿಗೆ ಮಹದುಪಕಾರ ಮಾಡುತ್ತಿದೆ “ ಎನ್ನುವ ಧೋರಣೆಯೊಂದಿಗೇ ಕೇಂದ್ರ ಎನ್ಡಿಎ ಸರ್ಕಾರ 2023ರಲ್ಲಿ” ನಾರಿ ಶಕ್ತಿ ವಂದನ್ ಅಧಿನಿಯಮ “ (ಮಹಿಳಾ ಮೀಸಲಾತಿ ಕಾಯ್ದೆ, 2023) ಸಂಸತ್ತಿನಲ್ಲಿ ಮಂಡಿಸಿದೆ.
ಭಾರತದ ಪ್ರಜಾತಂತ್ರ ಸಮಸ್ತ ನಾರಿ ಸಮೂಹಕ್ಕೆ ಯಾವ ಯಾವ ರೀತಿ, ಯಾವ ನೆಲೆಯಲ್ಲಿ ʼ ವಂದಿಸುತ್ತಿದೆ ʼ ಎನ್ನುವುದಕ್ಕೆ ಸಾಕ್ಷಿಯೇ ಬೇಕಿಲ್ಲ. ಏಕೆಂದರೆ ಹೀಗೆ ವಂದಿಸಲ್ಪಡುವ ನಾರಿ ಕುಲದ ಒಳಗಿನಿಂದಲೇ ಮಥುರ-ಭವಾರಿ ದೇವಿ-ಬಿಲ್ಕಿಸ್ಬಾನು-ನಿರ್ಭಯ-ಸೌಜನ್ಯ-ಹಾಥ್ರಸ್ ಮೊದಲಾದವರ ನೋವಿನ ಕೂಗು ನಿರಂತರವಾಗಿ ಕೇಳಿಬರುತ್ತಲೇ ಇದೆ. ವಂದಿಸುವ ಭೌತಿಕ ಕ್ರಿಯೆಗೂ ಸ್ವಾಭಾವಿಕ ಹಕ್ಕುಗಳನ್ನು ಮಾನ್ಯ ಮಾಡುವ ಬೌದ್ಧಿಕ ಚಿಂತನೆಗೂ ಅಂತರ ಹೆಚ್ಚಾಗುತ್ತಾ ಹೋಗುತ್ತಿರುವ ಹೊತ್ತಿನಲ್ಲಿ ಮಹಿಳಾ ಮೀಸಲಾತಿ, ಆಳುವವರ ಪಾಲಿಗೆ ಒಂದು ರಾಜಕೀಯ ಚದುರಂಗವಾಗಿದೆ. ಅವಕಾಶವಂಚಿತ ಮಹಿಳಾ ಸಂಕುಲದ ಸದಸ್ಯರು ರಾಜಕೀಯ ಪಕ್ಷಗಳಿಗೆ ಆಟಕಾಯಿಗಳಂತೆ ಕಾಣುತ್ತಿದ್ದಾರೆ. ಈ ನಡುವೆ ತಮ್ಮ ಸಾಂವಿಧಾನಿಕ ಹಕ್ಕು ಪಡೆಯಲು ಅಹರ್ನಿಶಿ ಹೋರಾಡಿದ/ಹೋರಾಡುತ್ತಿರುವ/ಹೋರಾಡಬೇಕಾದ ಹಕ್ಕುದಾರ ಮಹಿಳಾ ಸಂಕುಲದ ಒಕ್ಕೊರಲ ದನಿಗೆ ದಿನೇದಿನೇ ಗಟ್ಟಿಯಾಗುತ್ತಿದೆ.

ರಾಜಕೀಯ ಹಿತಾಸಕ್ತಿಯ ನೆಲೆಯಲ್ಲಿ
2024ರ ಮಹಾ ಚುನಾವಣೆಗಳಿಗೂ ಮುನ್ನ, ಕೇಂದ್ರ ಬಿಜೆಪಿ ಸರ್ಕಾರ ಸೆಪ್ಟಂಬರ್ 2023ರಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸುವ ಸಲುವಾಗಿ “ ನಾರಿ ಶಕ್ತಿ ವಂದನ್ ಅಧಿನಿಯಮ್ ” ಮಸೂದೆಯನ್ನು ಮಂಡಿಸಿತು. 2010ರಲ್ಲಿ ರಾಜ್ಯಸಭೆಯಲ್ಲಿ ಅನುಮೋದಿಸಲ್ಪಟ್ಟಿದ್ದ ಮಸೂದೆಯನ್ನೇ ಸಂಸತ್ತಿನಲ್ಲಿ ಪುನಃ ಮಂಡಿಸಿದ್ದರೆ 2024ರ ಚುನಾವಣೆಗಳಲ್ಲೇ ಮಹಿಳಾ ಮೀಸಲಾತಿಯನ್ನು ಅಳವಡಿಸಬಹುದಿತ್ತು. ಏಕೆಂದರೆ ಈ ಮಸೂದೆಯು ಹಲವು ಬಾರಿ ಸಂಸದೀಯ ಪರಿಶೀಲನೆಗೊಳಗಾಗಿತ್ತು. ಆದರೆ ನರೇಂದ್ರ ಮೋದಿ ಸರ್ಕಾರವು ಮತ್ತೊಮ್ಮೆ ಸಂವಿಧಾನ ತಿದ್ದುಪಡಿ 131ರ ಮೂಲಕ ಹೊಸ ಮಸೂದೆಯನ್ನು ಮಂಡಿಸಿತ್ತು. ಈ ಮಸೂದೆಯನ್ವಯ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ, ಎಸ್ಸಿ ಮತ್ತು ಎಸ್ಟಿ ಸಮುದಾಯವನ್ನೂ ಒಳಗೊಂಡಂತೆ, ಮಹಿಳಾ ಮೀಸಲಾತಿಯನ್ನು ಕಲ್ಪಿಸಲು ಸಮ್ಮತಿಸಲಾಗಿತ್ತು. ಆದರೆ ಈ ಮಸೂದೆಯೊಂದಿಗೆ .ವಿವಾದಾತ್ಮಕವಾಗಿರುವ ಕ್ಷೇತ್ರ ಮರುವಿಂಗಡನೆ (ಡಿ ಲಿಮಿಟೇಷನ್ ) ಮತ್ತು ಮುಂದಿನ ಜನಗಣತಿಯನ್ನೂ ಸೇರಿಸಿರುವುದರಿಂದ ಪುನಃ ಸಂಸದೀಯ ಅನುಮೋದನೆ ದೊರೆಯದೆ ಹೋಯಿತು.

ಈ ಎರಡು ನಿಬಂಧನೆಗಳನ್ನು ಮಹಿಳಾ ಮೀಸಲಾತಿಗೆ ಜೋಡಿಸುವುದರ ಪರಿಣಾಮ ಮಹಿಳಾ ಮೀಸಲಾತಿ ಮತ್ತಷ್ಟು ವಿಳಂಬವಾಗುತ್ತದೆ ಎಂಬ ಮಹಿಳಾ ಸಂಘಟನೆಗಳ ಆತಂಕ ಈಗ ಬಹುಮಟ್ಟಿಗೆ ನಿಜವಾಗುತ್ತಿದೆ. ಈ ಮಸೂದೆಯನ್ನು ಮಂಡಿಸಿದಾಗ ಕೇಂದ್ರ ಸರ್ಕಾರವು 2024ರ ಚುನಾವಣೆಗಳು ಮುಗಿದ ಕೂಡಲೇ ಕ್ಷೇತ್ರ ಮರುವಿಂಗಡನೆಗಾಗಿ ಆಯೋಗವನ್ನು ರಚಿಸುವುದಾಗಿಯೂ, ಜನಗಣತಿಯನ್ನು ಸಕಾಲಿಕವಾಗಿ ಪೂರ್ಣಗೊಳಿಸುವುದಾಗಿಯೂ ಭರವಸೆ ನೀಡಿತ್ತು. ಆದರೆ ಈವರೆಗೂ ಇದು ಸಾಧ್ಯವಾಗಿಲ್ಲ. ಬದಲಾಗಿ 2024ರ ಚುನಾವಣೆಗಳ ನಂತರ ಸಂಸತ್ತಿನಲ್ಲಿ ಮಹಿಳೆಯರ ಸಂಖ್ಯೆ 78 ರಿಂದ 74ಕ್ಕೆ (ಶೇಕಡಾ 13.6) ಕುಸಿಯಿತು. ಬಹುತೇಕ ಎಲ್ಲ ರಾಜ್ಯಗಳ ವಿಧಾನಸಭೆಗಳಲ್ಲೂ ಈ ಮಿತಿಯನ್ನು ದಾಟಿ ಹೋಗದಿರುವುದು ವ್ಯವಸ್ಥೆಯ ಪಿತೃಪ್ರಧಾನ ಲಕ್ಷಣಗಳನ್ನು ಎತ್ತಿ ತೋರಿಸುತ್ತದೆ.

ಪ್ರಾತಿನಿಧ್ಯದ ಸೋಗಿನ ರಾಜಕೀಯ
2024ರ ನಂತರದಲ್ಲಿ ನಡೆದ ಬಿಹಾರ ಚುನಾವಣೆಗಳಲ್ಲಿ 243 ಶಾಸಕರ ಪೈಕಿ 29 ಮಹಿಳೆಯರಿದ್ದಾರೆ (ಶೇಕಡಾ 11.9). ಈ ಚುನಾವಣೆಗಳಲ್ಲಿ ಮಹಿಳಾ ಮತದಾರರ ಭಾಗವಹಿಸುವಿಕೆ ಹೆಚ್ಚಾಗಿದ್ದರೂ ಆಯ್ಕೆಯಾದವರ ಸಂಖ್ಯೆ ಕಡಿಮೆಯಾಗಿದೆ. 2025ಕ್ಕೆ ಹೋಲಿಸಿದರೆ, ವಿಧಾನಸಭೆಯಲ್ಲಿ ಮಹಿಳೆಯರ ಸಂಖ್ಯೆ 15ರಿಂದ 29ಕ್ಕೆ ಹೆಚ್ಚಾಗಿರುವುದು ಸಮಾಧಾನಕರ ಅಂಶ. ತಮಿಳುನಾಡು ಚುನಾವಣೆಗಳಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿಕೆವಿ) ಪಕ್ಷದಿಂದ ಹೆಚ್ಚಿನ ಮಹಿಳೆಯರಿಗೆ ಟಿಕೆಟ್ ನೀಡಲಾಗಿದ್ದರೂ, ಒಟ್ಟು ಚುನಾಯಿತ ಮಹಿಳೆಯರ ಸಂಖ್ಯೆ 23 ಮಾತ್ರ. ಇದು 234ರ ವಿಧಾನಸಭೆಯಲ್ಲಿ ಶೇಕಡಾ 10ರಷ್ಟಿದೆ. ಹಿಂದಿನ ವಿಧಾನಸಭೆಯಲ್ಲಿ 12 ಮಹಿಳೆಯರಿದ್ದರು. ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಸರ್ಕಾರದಲ್ಲಿ 40 ಮಹಿಳಾ ಶಾಸಕರಿದ್ದರು (ಶೇಕಡಾ 13.5), ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ಇದು 36ಕ್ಕೆ ಕುಸಿದಿದೆ (ಶೇಕಡಾ 12.5). ಅಸ್ಸಾಂ ವಿಧಾನಸಭೆಗೆ 126 ಶಾಸಕರ ಪೈಕಿ 7 ಮಹಿಳೆಯರು ಆಯ್ಕೆಯಾಗಿದ್ದಾರೆ.

ಇದು ಏನನ್ನು ಸೂಚಿಸುತ್ತದೆ ? 2023ರಲ್ಲಿ ನಾರಿ ವಂದನ್ ಅಧಿನಿಯಮವನ್ನು ಜಾರಿಗೊಳಿಸುವಾಗ ಕೇಂದ್ರ ಸರ್ಕಾರ ನೀಡಿದ ಭರವಸೆ, ಯಾವ ರಾಜ್ಯದಲ್ಲೂ ಸಹ ಸಾಕಾರಗೊಂಡಿಲ್ಲ. ಮಹಿಳಾ ಮೀಸಲಾತಿಗೆ ಒಂದು ಶಾಸನಬದ್ಧ ನಿಬಂಧನೆ ಇರಲೇಬೇಕು ಎಂದು ಅಪೇಕ್ಷಿಸುವ ವಿಕೃತ ರಾಜಕಾರಣವನ್ನು ಇಲ್ಲಿ ಗಮನಿಸಬಹುದು. ಈ ಚುನಾವಣೆಗಳಲ್ಲಿ, ಮಹಿಳಾ ಮೀಸಲಾತಿಯ ಪರ ದನಿ ಎತ್ತಿದ್ದ ಯಾವ ಪಕ್ಷಗಳೂ ಶೇಕಡಾ 33ರಷ್ಟು ಸ್ಥಾನಗಳಿಗೆ ಮಹಿಳೆಯರಿಗೆ ಟಿಕೆಟ್ ನೀಡದಿರುವುದು, ಪಿತೃಪ್ರಧಾನತೆಯ ರಾಜಕೀಯ ಆಯಾಮವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಕಾಂಗ್ರೆಸ್-ಕಮ್ಯುನಿಸ್ಟ್ ಪಕ್ಷಗಳನ್ನೂ ಒಳಗೊಂಡಂತೆ ಎಲ್ಲ ವಿರೋಧ ಪಕ್ಷಗಳನ್ನೂ ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಬಹುದು. ರಾಜಕೀಯ ಪಕ್ಷಗಳ ಈ ಪುರುಷಾಧಿಪತ್ಯದ ಮನಸ್ಥಿತಿಯೇ ಮಹಿಳಾ ಮೀಸಲಾತಿಯನ್ನು ಕಳೆದ ಮೂರು ದಶಕಗಳಿಂದ ಕೈಗೆಟುಕದ ಹಾಗೆ ಮಾಡಿರುವುದು ವಾಸ್ತವ.

ಈ ದೃಷ್ಟಿಯಿಂದ ಕೆಲವು ಅನ್ಯ ರಾಷ್ಟ್ರಗಳ ಚಿತ್ರಣವನ್ನು ಗಮನಿಸಿದಾಗ, ಭಾರತ ಇನ್ನೂ ಬಹುದೂರ ಕ್ರಮಿಸಬೇಕಿದೆ ಎನಿಸದಿರದು. ಸರ್ಕಾರಗಳಲ್ಲಿ ಮಹಿಳೆಯರ ಸಂಖ್ಯೆ ರವಾಂಡದಲ್ಲಿ 64 %, ಕ್ಯೂಬಾ 57 % , ನಿಕಾರಾಗುವಾ 55 %, ಬೊಲಿವಿಯಾ 51 %, ಆಂಡೋರಾ, ಮೆಕ್ಸಿಕೋ ಮತ್ತು ಯುಎಇ 50 % , ಈ ದೇಶಗಳು ಮಹಿಳಾ ಪ್ರಾತಿನಿಧ್ಯದಲ್ಲಿ ನಿದರ್ಶನಪ್ರಾಯವಾಗಿವೆ. ಸಣ್ಣ ದೇಶಗಳಾದ ಟೈವಾನ್ 41 % , ನೇಪಾಲ 33 % , ಇಂಡೋನೇಷಿಯಾ 22 % , ಪಾಕಿಸ್ತಾನ 20 %, ಬಾಂಗ್ಲಾದೇಶ 21 % ಪ್ರಾತಿನಿಧ್ಯವನ್ನು ಹೊಂದಿವೆ. ಈ ದೇಶಗಳಿಗೆ ಹೋಲಿಸಿದರೆ ಭಾರತ 13.6 % ಮತ್ತು ಜಪಾನ್ 11 % ಪ್ರಾತಿನಿಧ್ಯದೊಂದಿಗೆ ಕೊನೆಯ ಸ್ಥಾನದಲ್ಲಿವೆ. ಈ ದೇಶಗಳ ಸಾಮಾಜಿಕ-ರಾಜಕೀಯ ಸನ್ನಿವೇಶಗಳು ಏನೇ ಇರಲಿ, ಅಲ್ಲಿ ಮಹಿಳೆಯರಿಗೆ ಸಮಾನ ಅಲ್ಲದಿದ್ದರೂ ಉತ್ತಮ ಪ್ರಾತಿನಿಧ್ಯ ಕಲ್ಪಿಸಿರುವುದು ಭಾರತದ ರಾಜಕೀಯ ಪಕ್ಷಗಳನ್ನು ಜಾಗೃತಗೊಳಿಸಬೇಕಿದೆ.

ನಿಬಂಧನೆಗಳ ಸಂಕೋಲೆಗಳಲ್ಲಿ ಪ್ರಾತಿನಿಧ್ಯ
ದುರದೃಷ್ಟವಶಾತ್ ಭಾರತದಲ್ಲಿ ಮಹಿಳಾ ಪ್ರಾತಿನಿಧ್ಯದ ಸಾಂವಿಧಾನಿಕ ಹಕ್ಕು ಶಾಸನದ ಮೂಲಕವೇ ಸಾಕಾರಗೊಳ್ಳಬೇಕಿದೆ. 2023ರ ನಾರಿ ವಂದನ್ ಅಧಿನಿಯಮವನ್ನು ಶಾಸನವಾಗಿ ಸ್ವೀಕರಿಸುವ ಮೂಲಕ ಕೇಂದ್ರ ಸರ್ಕಾರ ತನ್ನ ಮೂರು ಗುರಿಗಳನ್ನು ಒಮ್ಮೆಲೆ ತಲುಪಲು ಯೋಚಿಸುತ್ತಿದೆ. ಮೊದಲನೆಯದಾಗಿ ಕ್ಷೇತ್ರ ಮರುವಿಂಗಡನೆಯನ್ನು ವರ್ತಮಾನದ ಜನಸಂಖ್ಯೆಯ ಆಧಾರದಲ್ಲಿ ನಡೆಸದೆ 2011ರ ಜನಗಣತಿಯ ಆಧಾರದಲ್ಲಿ ಕೈಗೊಂಡು ಮರುವಿಂಗಡನೆಯ ಕಲ್ಪನೆಯನ್ನೇ ವಿಕೃತಗೊಳಿಸುತ್ತಿದೆ. ಎರಡನೆಯದಾಗಿ 2011ರ ಗಣತಿಯನ್ನು ಅವಲಂಬಿಸುವ ಮೂಲಕ ಈಗ ನಡೆಸಬೇಕಾದ ಜನಗಣತಿಯನ್ನು ಮುಂದೂಡುವ ಸುಲಭ ಮಾರ್ಗವನ್ನು ಹುಡುಕುತ್ತಿದೆ. ಮೂರನೆಯದಾಗಿ ಕ್ಷೇತ್ರ ಮರುವಿಂಗಡನೆಯ ಒಂದು ಭಾಗವಾಗಿ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸುವ ಮೂಲಕ ಲೋಕಸಭಾ ಸ್ಥಾನಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಮರುನಿರ್ಮಿಸಲು ಮುಂದಾಗಿದೆ.

ಭಾರತದಲ್ಲಿ ಈ ಹಿಂದೆ ನಡೆದ ಕ್ಷೇತ್ರ ಮರುವಿಂಗಡನೆ ಪ್ರಕ್ರಿಯೆಗಳೆಲ್ಲವೂ ಅದಕ್ಕೂ ಹಿಂದಿನ ಜನಗಣತಿಯನ್ನು ಆಧರಿಸಿಯೇ ನಡೆದಿವೆ. ಎಸ್ಸಿ/ಎಸ್ಟಿ ಸಮುದಾಯಗಳ ಪ್ರಾತಿನಿಧ್ಯದ ಪ್ರಮಾಣವನ್ನು ಜನಗಣತಿಯ ಆಧಾರದ ಮೇಲೆ ನಿಗದಿಪಡಿಸಲಾಗುತ್ತದೆ. 1971ರ ಗಣತಿಯ ಆಧಾರದಲ್ಲಿ ಪರಿಶಿಷ್ಟ ಜಾತಿಗಳಿಗೆ 79, ಪರಿಶಿಷ್ಟ ಪಂಗಡಗಳಿಗೆ 41 ಸ್ಥಾನಗಳನ್ನು ನಿಗದಿಪಡಿಸಲಾಗಿತ್ತು. 2001ರ ಗಣತಿ ಮತ್ತು ತದನಂತರದ ಕ್ಷೇತ್ರ ಮರುವಿಂಗಡನೆಯ ಆಧಾರದಲ್ಲಿ ಇದನ್ನು ಕ್ರಮವಾಗಿ 84 ಮತ್ತು 47 ಸ್ಥಾನಗಳಿಗೆ ಹೆಚ್ಚಿಸಲಾಯಿತು. ಆಗ ಈ ಎರಡೂ ಸಮುದಾಯಗಳ ಒಟ್ಟು ಸಂಖ್ಯೆ 24.6% ಇತ್ತು. 2001 -2026ರ 25 ವರ್ಷಗಳಲ್ಲಿ ಈ ಸಮುದಾಯಗಳ ಜನಸಂಖ್ಯೆ ಖಚಿತವಾಗಿಯೂ ಹೆಚ್ಚಾಗಿರುತ್ತದೆ. ಈ ದೃಷ್ಟಿಯಿಂದ ನೋಡಿದಾಗ, 2011ರ ಜನಗಣತಿಯನ್ನು ಆಧರಿಸಿ ಕ್ಷೇತ್ರ ಮರುವಿಂಗಡನೆ ಮಾಡುವುದು ಮತ್ತು ಅದಕ್ಕೆ ಪೂರಕವಾಗಿ ಮಹಿಳಾ ಮೀಸಲಾತಿಯನ್ನು ನಿರ್ಧರಿಸುವುದು ಶೋಷಿತ, ಅವಕಾಶವಂಚಿತ ಜನಸಮುದಾಯಗಳನ್ನು ವಂಚಿಸುವ ಕ್ರಮವಾಗಿಯೇ ಕಾಣುತ್ತದೆ.

ಕ್ಷೇತ್ರ ಮರುವಿಂಗಡನೆ (ಡಿ ಲಿಮಿಟೇಷನ್) ಒಂದು ಸುದೀರ್ಘ ಸಾಂವಿಧಾನಿಕ ಪ್ರಕ್ರಿಯೆಯಾಗಿದ್ದು 2002ರಲ್ಲಿ ಕೈಗೊಂಡ ಈ ಕಾರ್ಯ 2008ರಲ್ಲಿ ಪೂರ್ಣವಾಗಿತ್ತು. 2002ರ ಕ್ಷೇತ್ರ ಮರುವಿಂಗಡನೆ ಕಾಯ್ದೆ (De limitation Act 2002) ಅನ್ವಯ ಕೈಗೊಳ್ಳಬೇಕಾದ ಈ ಉಪಕ್ರಮಕ್ಕೆ ಬಹಳಷ್ಟು ಪೂರ್ವಸಿದ್ಧತೆಗಳು ಬೇಕಾಗುತ್ತವೆ. 2009ರ ನಂತರ ಅಸ್ಸಾಂ ಮತ್ತು ಜಮ್ಮು-ಕಾಶ್ಮೀರದಲ್ಲಿ ಅವಸರದಲ್ಲಿ ನಡೆಸಿದ ಮರುವಿಂಗಡನೆ ತೀವ್ರ ಟೀಕೆಗಳಿಗೆ ಗುರಿಯಾಗಿದೆ. ಎರಡೂ ರಾಜ್ಯಗಳಲ್ಲಿ ನಿರ್ದಿಷ್ಟ ಸಮುದಾಯಗಳ ಮತದಾರರ ಸಂಖ್ಯೆಯ ಮೇಲೆ ಪ್ರಭಾವ ಬೀರುವಂತೆಯೇ ಮರುವಿಂಗಡನೆ ನಡೆಸಿದ್ದು, ಇದು ಆಡಳಿತಾರೂಢ ಪಕ್ಷಗಳಿಗೆ ಅನುಕೂಲಕರವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಪ್ರಸ್ತುತ ಮರುವಿಂಗಡನೆಯನ್ನೂ ಸಹ ವಿಭಿನ್ನ ಆಯಾಮಗಳಲ್ಲಿ ಪ್ರಶ್ನಿಸಲಾಗುತ್ತದೆ. ಹೀಗಿರುವಾಗ ಮಹಿಳಾ ಮೀಸಲಾತಿಯೊಡನೆ ಮರುವಿಂಗಡನೆಯನ್ನು ಜೋಡಿಸುವುದರ ಔಚಿತ್ಯವೇನು ?

ಮಹಿಳಾ ಚಳುವಳಿಗಳ ಸಂದಿಗ್ಧತೆಗಳು
ಮಹಿಳಾ ಚಳುವಳಿಗಳನ್ನು ಹಾಗೂ ಪ್ರಜಾಪ್ರಭುತ್ವವನ್ನು ಗೌರವಿಸುವ ಜನತೆಯನ್ನು ಕಾಡುತ್ತಿರುವ ಮತ್ತೊಂದು ಜಟಿಲ ಸಮಸ್ಯೆ , ಮಹಿಳಾ ಮೀಸಲಾತಿಯಲ್ಲಿ ಇತರ ಹಿಂದುಳಿದ ವರ್ಗಗಳನ್ನು (OBCs), ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು (EBC), ತೃತೀಯಲಿಂಗಿ ಅಥವಾ ಅನ್ಯಲಿಂಗಿ (Transgender) ಸಮುದಾಯಗಳನ್ನು ಒಳಗೊಳ್ಳುವುದು. ಇದರೊಂದಿಗೆ ಅನೇಕ ಅಂಚಿನಲ್ಲಿರುವ ಸಮುದಾಯಗಳೂ (Marginalised Communities) ಸಹ ಮೀಸಲಾತಿಯ ಚೌಕಟ್ಟಿನೊಳಗೆ ಸೇರಬೇಕಾಗುತ್ತದೆ. 2023ರ ನಾರಿವಂದನ ಅಧಿನಿಯಮ ಈ ಕುರಿತು ಏನನ್ನೂ ಹೇಳುವುದಿಲ್ಲ. ಒಂದು ವೇಳೆ ಪ್ರಸ್ತುತ ಮಸೂದೆಯು ಕ್ಷೇತ್ರ ಮರುವಿಂಗಡನೆ ಮತ್ತು ಜನಗಣತಿಯನ್ನು ಹೊರತುಪಡಿಸಿ ಜಾರಿಯಾದರೂ, ಭವಿಷ್ಯದಲ್ಲಿ ಈ ಅವಕಾಶವಂಚಿತ ಸಮುದಾಯಗಳ ಅಸಮಾಧಾನ, ಆಕ್ರೋಶವನ್ನು ಎದುರಿಸಬೇಕಾಗುತ್ತದೆ.

ಮಹಿಳಾ ಚಳುವಳಿಗಳಲ್ಲೂ ಈ ಕುರಿತು ಭಿನ್ನ ಆಯಾಮಗಳ ಸಂಕಥನಗಳು ನಡೆಯುತ್ತಿವೆ. ಈ ಸಮುದಾಯಗಳನ್ನು ಹೊರಗಿಟ್ಟು ಮಹಿಳಾ ಮೀಸಲಾತಿ ಜಾರಿಯಾದರೆ, ಇವರ ಒಳಗೊಳ್ಳುವಿಕೆಗಾಗಿ ಸುದೀರ್ಘ ಹೋರಾಟಗಳನ್ನು ನಡೆಸಬೇಕಾಗುತ್ತದೆ. ಮೀಸಲಾತಿಯಿಂದ ವಂಚಿತರಾಗುವ ಒಬಿಸಿ ಮತ್ತು ಅಲ್ಪಸಂಖ್ಯಾತ ಮಹಿಳೆಯರು ಸಾಂವಿಧಾನಿಕ ಪ್ರಾತಿನಿಧ್ಯಕ್ಕಾಗಿ ಹೋರಾಡುವಾಗ, ಶೇಕಡಾ 33ರಷ್ಟು ಶಾಸನ ಸಭೆಯ ಮಹಿಳಾ ಸದಸ್ಯರೂ ಈ ಹೋರಾಟ್ಕಕ್ಕೆ ದನಿಗೂಡಿಸಬೇಕಾಗುತ್ತದೆ. ಆದರೆ ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ಯಾವುದೇ ಸಮುದಾಯವಾದರೂ ಒಮ್ಮೆ ಪಡೆದ ಸಾಂವಿಧಾನಿಕ ಸ್ಥಾನಮಾನಗಳನ್ನು ಅಥವಾ ಹಕ್ಕುಗಳನ್ನು ಮರುವಿಂಗಡಿಸಲು ಅಥವಾ ಹಂಚಿಕೊಳ್ಳಲು ಸುಲಭವಾಗಿ ಒಪ್ಪುವುದಿಲ್ಲ. .ಕರ್ನಾಟಕದ ಒಳಮೀಸಲಾತಿ ಹೋರಾಟಗಳಲ್ಲಿ ಇದನ್ನು ಕಂಡಿದ್ದೇವೆ.

ಭವಿಷ್ಯದಲ್ಲಿ ಮಹಿಳಾ ಚಳುವಳಿಗಳೂ ಇದೇ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಈ ವಂಚಿತ ಸಮುದಾಯಗಳನ್ನೂ ಒಳಗೊಂಡು ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಬೇಕಾದಲ್ಲಿ ಪುನಃ ಸಂವಿಧಾನ ತಿದ್ದುಪಡಿಯ ಮೂಲಕವೇ ಸಾಧ್ಯವಾಗುತ್ತದೆ. ಕ್ಷೇತ್ರ ಮರುವಿಂಗಡನೆ ಮತ್ತು ಜನಗಣತಿಯನ್ನು ಹೊರತುಪಡಿಸುವುದಕ್ಕೂ ತಿದ್ದುಪಡಿ ಅವಶ್ಯವಾಗುತ್ತದೆ. ಇಲ್ಲಿ ಸಮಸ್ಯೆ ಎದುರಾಗುವುದು ಈ ಸಮುದಾಯಗಳ ನಿರ್ದಿಷ್ಟ ಜನಸಂಖ್ಯಾ ಪ್ರಮಾಣವನ್ನು ಅಳೆಯಲು ಜನಗಣತಿ ನಡೆಯಲೇಬೇಕಾಗುತ್ತದೆ. 2011ರ ಗಣತಿಯನ್ನು ಆಧರಿಸಿದರೆ ಪುನಃ ಅಲ್ಲಿ ಪ್ರಾದೇಶಿಕ ಅಸಮಾನತೆಗಳು ತಲೆದೋರುತ್ತವೆ. ಮಹಿಳಾ ಮೀಸಲಾತಿಗಾಗಿ ಹೋರಾಡುತ್ತಿರುವ ಸಂಘಟನೆಗಳು ಈ ಒಳಗೊಳ್ಳುವಿಕೆಯನ್ನು ಒತ್ತಾಯಿಸಿದರೆ, ಪುನಃ ಮಸೂದೆಯನ್ನು ಮುಂದೂಡುವ ಸಂಭವವೇ ಹೆಚ್ಚಾಗಿರುತ್ತದೆ. ಈ ಜಂಜಾಟವನ್ನು ಪರಿಹರಿಸಿಕೊಳ್ಳುವುದು ಸಂಘಟನೆಗಳ ಜವಾಬ್ದಾರಿಯಾಗಿದೆ.

ಮುಂದೂಡುವುದರ ಅಪಾಯಗಳು
ಮಹಿಳಾ ಮೀಸಲಾತಿ ಮಸೂದೆಯನ್ನು ಮುಂದೂಡಿದಷ್ಟೂ ನಮ್ಮ ರಾಜಕೀಯ ವಲಯದಲ್ಲಿ ಪಿತೃಪ್ರಧಾನತೆಯ ಬೇರುಗಳು ಆಳಕ್ಕಿಳಿಯುತ್ತಲೇ ಹೋಗುತ್ತವೆ. 2024-25ರಲ್ಲಿ ನಡೆದ 10 ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ 1276 ಶಾಸಕರ ಪೈಕಿ ಕೇವಲ 123 ಮಹಿಳೆಯರು ಆಯ್ಕೆಯಾಗಿರುವುದನ್ನು ಗಮನಿಸಿದರೆ, ರಾಜಕೀಯ ಪಕ್ಷಗಳು (ಎಡಪಕ್ಷಗಳನ್ನೂ ಸೇರಿದಂತೆ) ತಾವಾಗಿಯೇ ಮಹಿಳೆಯರಿಗೆ ಶೇಕಡಾ 33ರಷ್ಟು ಪ್ರಾತಿನಿಧ್ಯವನ್ನು ಕಲ್ಪಿಸುವುದು ಅಸಂಭವ ಎಂದೇ ಖಚಿತವಾಗಿ ಹೇಳಬಹುದು. ಈ ದೃಷ್ಟಿಯಿಂದ ಮಹಿಳಾ ಮೀಸಲಾತಿಯನ್ನು 2023ರ ಕಾಯ್ದೆಯನ್ವಯ, ಕ್ಷೇತ್ರ ಮರುವಿಂಗಡನೆ ಮತ್ತು ಜನಗಣತಿಯ ನಿಬಂಧನೆಗಳನ್ನು ಹೊರತುಪಡಿಸಿ, ಅನುಷ್ಟಾನಗೊಳಿಸುವುದು ಸೂಕ್ತ ಎನಿಸುತ್ತದೆ.

ಆದರೆ ಇದರಿಂದ ಪುನಃ ಶಾಸನಸಭೆಗಳು ಮೇಲ್ಜಾತಿಗಳ ಆಡುಂಬೊಲವಾಗುವ ಸಾಧ್ಯತೆಗಳನ್ನು ಮನಗಂಡು, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಗೌರವಿಸುವ ರಾಜಕೀಯ ಪಕ್ಷಗಳು ಆಂತರಿಕವಾಗಿ ಮಹಿಳಾ ಪ್ರಾತಿನಿಧ್ಯವನ್ನು ಎಲ್ಲ ಸಮುದಾಯಗಳನ್ನೂ ಒಳಗೊಳ್ಳುವ ಪ್ರಕ್ರಿಯೆಯಾಗಿ ಅನುಸರಿಸಬೇಕಾಗುತ್ತದೆ. ಭಾರತದ ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲದಿರುವುದು ಮಹಿಳಾ ಪ್ರಾತಿನಿಧ್ಯದ ಕೊರತೆಗೂ ಕಾರಣವಾಗಿದೆ. ಅಂಬೇಡ್ಕರ್/ಸಂವಿಧಾನ/ಪ್ರಜಾತಂತ್ರವನ್ನು ಆರಾಧಿಸುವ ಪಕ್ಷಗಳು ಆಂತರಿಕವಾಗಿ ಆತ್ಮಶೋಧನೆ ಮಾಡಿಕೊಳ್ಳುವ ವಿಚಾರ ಇದು. ಇಲ್ಲವಾದರೆ ವಂಚಿತ ಸಮುದಾಯಗಳನ್ನು ಹೊರಗಿಡುವ ಪ್ರಕ್ರಿಯೆಗೆ ಪುನಶ್ಚೇತನ ಕಲ್ಪಿಸಿದಂತಾಗುತ್ತದೆ. ಹಿಂದೂ ರಾಷ್ಟ್ರದ ಕನಸು ಹೊತ್ತಿರುವ ಬಿಜೆಪಿ ಇದನ್ನು ತೆರೆದ ಬಾಹುಗಳಿಂದ ಸ್ವಾಗತಿಸುತ್ತದೆ.

ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಫಲಾನುಭವಿ ಸಮುದಾಯಗಳು, ಗುಂಪುಗಳು ಅವಕಾಶವಂಚಿತರ ಬಗ್ಗೆ ಸಹಾನುಭೂತಿ ಹೊಂದಿರುವುದು ಅತ್ಯವಶ್ಯ. ಎಸ್ಸಿ/ಎಸ್ಟಿ ಮೀಸಲಾತಿಯ ಸಂದರ್ಭದಲ್ಲಿ ಒಳಮೀಸಲಾತಿ ಹೋರಾಟಗಳನ್ನು ಗಮನಿಸಿದಾಗ ಇದರ ಕೊರತೆ ಎದ್ದು ಕಾಣುತ್ತದೆ. ಅಂಬೇಡ್ಕರಾದಿಯಾಗಿ ಸ್ವಾತಂತ್ರ್ಯದ ಪೂರ್ವಸೂರಿಗಳು ಅಪೇಕ್ಷಿಸಿದ ಒಳಗೊಳ್ಳುವ (Inclusive) ಭಾರತವನ್ನು ಮರುಕಟ್ಟುವುದೇ ಆದರೆ, ಫಲಾನುಭವಿ ಸಮಾಜಗಳು ವಂಚಿತ/ಅಂಚನಲ್ಲಿರುವ ಸಮಾಜ/ಸಮುದಾಯಗಳ ಸಾಂವಿಧಾನಿಕ ಹಕ್ಕುಗಳನ್ನು ಗೌರವಿಸಬೇಕು. ಇದಕ್ಕೆ ಬೇಕಿರುವುದು ಆಂತರಿಕ ಪ್ರಜಾಪ್ರಭುತ್ವದ ಸ್ಥಾಪನೆ ಮತ್ತು ಪಿತೃಪ್ರಧಾನ ಚೌಕಟ್ಟುಗಳ ಸಂಪೂರ್ಣ ನಾಶ. ಎಷ್ಟು ರಾಜಕೀಯ ಪಕ್ಷಗಳು/ಸಾಮಾಜಿಕ ಸಂಘಟನೆಗಳು ಈ ನೈತಿಕ ಜವಾಬ್ದಾರಿಯನ್ನು ಅರಿತು ಕಾರ್ಯೋನ್ಮುಖವಾಗುತ್ತವೆ ? ಇದು ಸ್ವ-ವಿಮರ್ಶೆಯ ಪ್ರಶ್ನೆ.
ಹಕ್ಕು-ಬಾಧ್ಯತೆ ಮತ್ತು ನೈತಿಕ ಆದ್ಯತೆ
ಮಹಿಳಾ ಪ್ರಾತಿನಿಧ್ಯ ಒಂದು ಸಾಮಾಜಿಕ ಆಂದೋಲನದ ರೂಪದಲ್ಲಿ ನಮ್ಮ ಸಮಾಜದ ಸಾಂಪ್ರದಾಯಿಕ ಬೇರುಗಳನ್ನು ಅಲುಗಾಡಿಸಬೇಕಿದೆ. 80 ವರ್ಷಗಳಲ್ಲಿ ಭಾರತೀಯ ಸಾಮಾಜಿಕ-ರಾಜಕೀಯ ಚಟುವಟಿಕೆಗಳು ಪ್ರಜಾತಂತ್ರದ ಹಾದಿಯಲ್ಲಿ ಪ್ರಾಮಾಣಿಕವಾಗಿ ಸಾಗಿದ್ದರೆ ಸಮಾನ ಹಕ್ಕುಗಳಿಗಾಗಿ, ಶಾಸನಸಭೆಯ 33 % ಮೀಸಲಾತಿಗಾಗಿ ಶಾಸನಗಳೇ ಬೇಕಿರಲಿಲ್ಲ. ಇದು ವ್ಯವಸ್ಥೆಯ ಸ್ವಪ್ರೇರಣೆಯಿಂದಲೇ ಸಾಧ್ಯವಾಗಬಹುದಿತ್ತು. ದುರದೃಷ್ಟವಶಾತ್ ನಾವು ಅಷ್ಟು ವಿಶಾಲ ಮನಸ್ಸಿನಿಂದ ಯೋಚಿಸಿಯೇ ಇಲ್ಲ. ಈಗಲೂ ಹೀಗೆ ಯೋಚಿಸಲು ಯಾವ ಅಡ್ಡಿ ಆತಂಕಗಳೂ ಇರಲು ಸಾಧ್ಯವಿಲ್ಲ. ನಮ್ಮ ಸಾಂಪ್ರದಾಯಿಕ ಮನಸ್ಥಿತಿಯಲ್ಲಿ ಬದಲಾವಣೆಯಾಗಬೇಕಿದೆ. ತತ್ವ-ಸಿದ್ಧಾಂತಗಳು ಮನಸ್ಥಿತಿಯ ಔದಾತ್ಯದ ಮಾರ್ಗಗಳನ್ನಷ್ಟೇ ಸೂಚಿಸುತ್ತವೆ, ಮೂಲದಲ್ಲಿ ಬದಲಾಯಿಸುವುದಿಲ್ಲ.

ಮಹಿಳೆಯರ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಮೂರು ದಶಕಗಳ ಕಾಲ ಹೋರಾಟ ನಡೆಸಿರುವುದೇ ಪುರುಷಾಧಿಪತ್ಯ ವ್ಯವಸ್ಥೆಯನ್ನು ಘಾಸಿಗೊಳಿಸಬೇಕಿತ್ತು. ಇದೇನೂ ಪುರುಷ ಕೇಂದ್ರಿತ ವ್ಯವಸ್ಥೆಯ ಔದಾರ್ಯ ಆಗಬೇಕಿರಲಿಲ್ಲ. ಸಾಂವಿಧಾನಿಕ ಬಾಧ್ಯತೆಯಾಗಿ, ನೈತಿಕ ಆದ್ಯತೆಯಾಗಿ ಪುರುಷಾಡಳಿತದ ಕೇಂದ್ರಗಳು, ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಕಾರ್ಮಿಕ ಸಂಘಗಳು, ಸಾಮಾಜಿಕ ಸಂಘಟನೆಗಳು ಮತ್ತು ಜನಾಂದೋಲನಗಳು ತಳಮಟ್ಟದಿಂದಲೇ ತನ್ನ ಪಿತೃಪ್ರಧಾನತೆಯ ಕವಚಗಳನ್ನು ಕಳಚುತ್ತಾ ಬಂದಿದ್ದರೆ, ಈ ವೇಳೆ ಶಾಸನಸಭೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸಂಘ-ಸಂಸ್ಥೆಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಸಮರ್ಥನೀಯವಾಗಿ ಕಾಣಬಹುದಿತ್ತು. ಹಾಗಾಗಿದ್ದರೆ ಈ ಸಂಭಾವ್ಯ ಹಿಂದೂ ರಾಷ್ಟ್ರದ ಅಪಾಯಗಳ ಆತಂಕ ಕಾಡುತ್ತಿರಲಿಲ್ಲ. ನಮ್ಮ ವೈಫಲ್ಯಗಳೇ ಇಂದು ಮಹಿಳಾ ಪ್ರಾತಿನಿಧ್ಯವನ್ನು “ಮೀಸಲಾತಿ ” ಎಂಬ ಸಾಂವಿಧಾನಿಕ ಸೌಲಭ್ಯವಾಗಿ ಪರಿಗಣಿಸುವಂತೆ ಮಾಡಿದೆ. ಈ ವೈಪಲ್ಯವನ್ನು ಒಪ್ಪಿಕೊಳ್ಳುತ್ತಲೇ, ಶೇಕಡಾ 33ರ ಮಹಿಳಾ ಮೀಸಲಾತಿಗಾಗಿ ದನಿಗೂಡಿಸಬೇಕಿದೆ.

ಭಾರತದ ಮಹಿಳಾ ಸಂಕುಲ ಪ್ರಾತಿನಿಧ್ಯಕ್ಕಾಗಿ ಕೈಚಾಚಿ ನಿಂತಿಲ್ಲ, ನಿಲ್ಲುವುದೂ ಇಲ್ಲ. ಇದು ದೇಶದ ಸಂವಿಧಾನ ಕಲ್ಪಿಸಿರುವ ಒಂದು ಶಾಸನಬದ್ಧ ಹಕ್ಕು. ಇದನ್ನು ಗೌರವಿಸುವುದು ಆಡಳಿತಾರೂಢ ಸರ್ಕಾರಗಳ ಕರ್ತವ್ಯ ಹಾಗೆಯೇ ಇಡೀ ರಾಜಕೀಯ-ಸಾಮಾಜಿಕ ವಲಯದ ನೈತಿಕ ಬಾಧ್ಯತೆ.
( ಈ ಲೇಖನದ ಕೆಲವು ಮಾಹಿತಿ ದತ್ತಾಂಶಗಳಿಗೆ ಆಧಾರ : Womenʼs reservation and delimitation should be delinked ಬೃಂದಾ ಕಾರಟ್ – ದ ಹಿಂದೂ 16 ಏಪ್ರಿಲ್ 2026 )
-೦-೦-೦-೦-೦-





