ಬೆಂಗಳೂರು : ರಾಜಸ್ಥಾನ ಶ್ರೀ ಗಂಗಾನಗರದಲ್ಲಿ ಮಾನವೀಯತೆಯನ್ನೇ ಬೆಚ್ಚಿಬೀಳಿಸುವ ಅತ್ಯಂತ ಭೀಕರ ಮತ್ತು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. 13 ವರ್ಷದ ಅಪ್ರಾಪ್ತ ಬಾಲಕಿಯ ಅಪಹರಣ, ಮಾನವ ಕಳ್ಳಸಾಗಣೆ ಮತ್ತು ಸಾಮೂಹಿಕ ಅತ್ಯಾಚಾರದ ಆಘಾತಕಾರಿ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಘೋರ ಅಪರಾಧ ಕೃತ್ಯದ ಬಗ್ಗೆ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 12 ಆರೋಪಿಗಳನ್ನು ಬಂಧಿಸಿದ್ದು, ಅಲ್ಲಿನ ಸರ್ಕಾರ ಬುಲ್ಡೋಜರ್‌ಗಳನ್ನು ಬಳಸಿ ಅಪರಾಧದ ಕೇಂದ್ರವಾಗಿದ್ದ 4 ಅಕ್ರಮ ಹೋಟೆಲ್‌ಗಳನ್ನು ಸಂಪೂರ್ಣವಾಗಿ ನೆಲಸಮ ಮಾಡಿದ್ದಾರೆ.

ಇನ್ನೂ ಈ ಆಘಾತಕಾರಿ ಪ್ರಕರಣ ಜೂನ್ 18, ರಿಂದ ಸದ್ದು ಮಾಡತೊಡಗಿತ್ತು. ಸಂತ್ರಸ್ತ ಅಪ್ರಾಪ್ತ ಬಾಲಕಿ ತನ್ನ ಸ್ನೇಹಿತೆಯನ್ನು ಭೇಟಿಯಾಗಲು ಶ್ರೀವಿಜಯನಗರಕ್ಕೆ ಹೋಗಿದ್ದಳು, ಆದರೆ ಅವಳು ಸಮಯಕ್ಕೆ ಮನೆಗೆ ಬಂದಿರಲಿಲ್ಲ. ಅವಳ ಬಗ್ಗೆ ಯಾವುದೇ ಮಾಹಿತಿ ಸಿಗದ ಕಾರಣಕ್ಕೆ ಆತಂಕಗೊಂಡ ಕುಟುಂಬ ಸದಸ್ಯರು ಅವಳು ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ.
ಸುಳ್ಳಿನ ಕಥೆ ಕಟ್ಟಿ ಪುಸಲಾಯಿಸಿದ್ದ ಕಾಮುಕ ರಾಂಪಾಲ್..!
ಬಳಿಕ ಈ ಬಗ್ಗೆ ಆರಂಭಿಕ ತನಿಖೆ ಕೈಗೊಂಡ ಪೊಲೀಸರಿಗೆ ಒಂದೊಂದು ಮಾಹಿತಿ ದೊರೆಯುತ್ತದೆ. ಆರಂಭದಲ್ಲಿ ಬಾಲಕಿ ಮನೆಗೆ ಹೋಗಲು ಇ-ರಿಕ್ಷಾದಲ್ಲಿ ಕುಳಿತಿದ್ದಳು. ಆ ಸಮಯದಲ್ಲಿ, ರಾಂಬಾಬು ಎಂಬ ರಿಕ್ಷಾ ಚಾಲಕ ಅವಳನ್ನು ಮನೆಗೆ ಬಿಡುವುದಾಗಿ ಸುಳ್ಳು ಭರವಸೆ ನೀಡಿ ಅವಳ ನಂಬಿಕೆಯನ್ನು ಗಳಿಸಿದ್ದನು. ಆದರೆ ಆತ ಅವಳನ್ನು ಮನೆಗೆ ಕರೆದೊಯ್ಯುವ ಬದಲು, ನೇರವಾಗಿ ಹೋಟೆಲ್‌ಗೆ ಕರೆದೊಯ್ದು ಹಣಕ್ಕಾಗಿ ಹೋಟೆಲ್ ಮಾಲೀಕರಿಗೆ ಒಪ್ಪಿಸಿದ್ದನು. ಬಳಿಕ ಈ ಮುಗ್ದೆಯ ಮೇಲೆ ಹೀನ ಕೃತ್ಯಗಳು ಪ್ರಾರಂಭವಾಗಿದ್ದವು ಹೀಗೆ ಪೊಲೀಸರಿಗೆ ತನಿಖೆಯ ಸಮಯದಲ್ಲಿ ಬೆಳಕಿಗೆ ಬಂದ ಸಂಗತಿಗಳು ತುಂಬಾ ಆಘಾತಕಾರಿಯಾಗಿದ್ದವು.
ಇದನ್ನೂ ಓದಿ : ಬೆಳಗಾವಿಯಲ್ಲಿ RSS ಶಕ್ತಿ ಪ್ರದರ್ಶನ: ಪ್ರಿಯಾಂಕ್ ಖರ್ಗೆಗೆ ಪರೋಕ್ಷ ಟಾಂಟ್..?
ಅಪಹರಣದ ಜಾಲದಲ್ಲಿ ಸಿಲುಕಿದ್ದ ಸಂತ್ರಸ್ತೆಯನ್ನು ಹೋಟೆಲ್‌ನಲ್ಲಿ ಇರಿಸಲಾಗಿತ್ತು. 5 ದಿನಗಳ ಕಾಲ ಒಟ್ಟು ನಾಲ್ಕು ಬೇರೆ ಬೇರೆ ಹೋಟೆಲ್‌ಗಳಲ್ಲಿ ಆಕೆಯನ್ನು ಸ್ಥಳಾಂತರಿಸಲಾಗಿತ್ತು. ಈ ಸಮಯದಲ್ಲಿ ಕ್ರೂರ ಹೋಟೆಲ್ ಮಾಲೀಕರು ಮತ್ತು ವ್ಯವಸ್ಥಾಪಕರು (ಮ್ಯಾನೇಜರ್‌ಗಳು) ಕೆಲವೇ ದಿನಗಳಲ್ಲಿ 30 ಕ್ಕೂ ಹೆಚ್ಚು ಪುರುಷರು ಬಾಲಕಿ ಮೇಲೆ ಅತ್ಯಾಚಾರವೆಸಗಲು ನೆರವಾಗಿದ್ದರು. ಹೀಗೆ ಸಂತ್ರಸ್ತೆಯ ಮೇಲೆ ಪದೇ ಪದೇ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಆದರೆ ಅವಳು ನೋವಿನಿಂದ ಕೂಗಿದಾಗ, ಅವಳ ಧ್ವನಿ ಯಾರಿಗೂ ಕೇಳಿಸದಂತೆ ಬಲವಂತವಾಗಿ ಮದ್ಯವನ್ನು ಕುಡಿಸಲಾಗಿತ್ತು. ಇದಷ್ಟೇ ಅಲ್ಲದೆ ಹೋಟೆಲ್ ವ್ಯವಸ್ಥಾಪಕರೊಬ್ಬರು ಸಂತ್ರಸ್ತೆಯ ಫೋಟೋಗಳನ್ನು ತೆಗೆದು ಸಾಮಾಜಿಕ ಮಾಧ್ಯಮದಲ್ಲಿ (Social Media) ಅಪ್‌ಲೋಡ್ ಮಾಡಿದ್ದರು. ಇದನ್ನು ಹಲವು ಕಾಮುಕರು ಈ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಕಾರಣವಾಗಿದೆ ಎಂಬ ಸ್ಫೋಟಕ ಆತಂಕಕಾರಿ ವಿವರಗಳು ಖಾಕಿ ತನಿಖೆಯಲ್ಲಿ ಬಯಲಿಗೆ ಬಂದಿವೆ.
ಖಾಕಿ ಆರೋಪಿಗಳ ಹೆಡೆ ಮುರಿ ಕಟ್ಟಿದ್ದೇ ರೋಚಕ..!
ಈ ಭಯಾನಕ ಪ್ರಕರಣದ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕ ತಕ್ಷಣ, ಜೂನ್ 22 ರಂದು ತನಿಖಾ ತಂಡವು ಹೋಟೆಲ್ ಮೇಲೆ ದಾಳಿ ನಡೆಸಿ ಬಾಲಕಿಯನ್ನು ರಕ್ಷಿಸಿತ್ತು. ಈ ಪ್ರಕರಣದಲ್ಲಿ, ಪ್ರಮುಖ ಆರೋಪಿ ಇ-ರಿಕ್ಷಾ ಚಾಲಕ ರಾಂಬಾಬು, ಹೋಟೆಲ್ ಮಾಲೀಕ ಮಾಯಾಂಕ್ ಸೈನ್, ಹೋಟೆಲ್ ವ್ಯವಸ್ಥಾಪಕ ಹರ್ದೀಪ್ ನಾಥ್ ಮತ್ತು ಸಚಿನ್, ದೀಪಕ್ ಮತ್ತು ತರುಣ್ ಸೇರಿದಂತೆ ಒಟ್ಟು 12 ಜನ ನಿರ್ದಯಿ ಕಾಮುಕರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇದಾದ ಬಳಿಕ ಇದೇ ಪ್ರಕರಣದ ಬೆನ್ನತ್ತಿರುವ ಶ್ರೀಗಂಗಾನಗರ ಎಸ್‌ಪಿ ಹರಿಶಂಕರ್ ಯಾದವ್ ನೇತೃತ್ವದ ತಂಡ, ಅನುಮಾನಾಸ್ಪದ ಎಲ್ಲ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದೆ. ಅಲ್ಲದೆ ಹೇಯ ಕೃತ್ಯವೆಸಗಿರುವ ಆರೋಪಿಗಳ ಮೊಬೈಲ್‌ಗಳನ್ನು ಪರಿಶೀಲನೆ ನಡೆಸುವ ಮೂಲಕ ಡಿಜಿಟಲ್ ದಾಖಲೆ ಸಂಗ್ರಹ ಮಾಡುತ್ತಿದ್ದು, ಇನ್ನುಳಿದ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದೆ.

ಇನ್ನೂ ಈ ಅಮಾನವೀಯ ಘಟನೆಯ ನಂತರ, ರಾಜಸ್ತಾನ ಸೇರಿದಂತೆ ದೇಶಾದ್ಯಂತ ತೀವ್ರ ಆಕ್ರೋಶದ ಅಲೆ ಹರಡಿದ್ದು, ಸಾರ್ವಜನಿಕರೂ ಕೂಡ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ. ಪೊಲೀಸ್ ತನಿಖೆಯಲ್ಲಿ ಬಯಲಾದ ಅಮಾನವೀಯ ಹಾಗೂ ಹೇಯ ಕೃತ್ಯಗಳ ಮಾಹಿತಿ ತಿಳಿದು ಜನಸಾಮಾನ್ಯರ ರಕ್ತ ಕುದಿಯುವಂತೆ ಆಗುತ್ತಿದೆ. ಎಲ್ಲೆಡೆ ಪ್ರಕರಣದ ವಿರುದ್ಧ ಆಕ್ರೋಶ, ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆಯೇ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸರ್ಕಾರ ನಿನ್ನೆ ತಡರಾತ್ರಿ ಕಠಿಣ ನಿರ್ಧಾರ ಕೈಗೊಂಡು ಅಪ್ರಾಪ್ತ ಬಾಲಕಿಯನ್ನು ಅಮಾನವೀಯವಾಗಿ ಚಿತ್ರಹಿಂಸೆ ನೀಡಿದ್ದ ನಾಲ್ಕು ಅಕ್ರಮ ಹೋಟೆಲ್‌ಗಳನ್ನು ಬುಲ್ಡೋಜರ್ ಬಳಸಿ ನೆಲಸಮ ಮಾಡುವ ಮೂಲಕ ಈ ರೀತಿಯ ಕೃತ್ಯಗಳಲ್ಲಿ ತೊಡಗದಂತೆ ಹೋಟೆಲ್ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ. ಇನ್ನು ಮುಂದೆ ಈ ರೀತಿಯ ಅಪರಾಧಗಳಲ್ಲಿ ಭಾಗಿಯಾದವರನ್ನು ಯಾವುದೇ ಕಾರಣಕ್ಕೂ ಬಿಡವುದಿಲ್ಲ, ಸರ್ಕಾರ ಕಠಿಣ ತೀರ್ಮಾನ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂಬ ಸಂದೇಶ ರವಾನಿಸಿದೆ.
ಉತ್ತರಿಸುವರೇ ಮೋದಿ, ಶಾ, ಶರ್ಮಾ..?
ಆದರೆ ದೇಶದಲ್ಲಿ ಮಹಿಳೆಯರ ಸುರಕ್ಷತೆ ಹಾಗೂ ನಾರಿಯರ ಸಬಲೀಕರಣದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಬಿಜೆಪಿ ಸರ್ಕಾರ ಇರುವ ರಾಜಸ್ತಾನದಲ್ಲಿ ಈ ರೀತಿಯ ಮಾನವ ಸಮಾಜವೇ ತಲೆ ತಗ್ಗಿಸುವ ಕೃತ್ಯ ನಡೆದಿದೆ. ಹೀಗಿದ್ದರೂ ಬಿಜೆಪಿ ನಾಯಕರು ಈ ವಿಚಾರದಲ್ಲಿ ಮೌನ ವಹಿಸಿರುವುದು ನಿಜಕ್ಕೂ ಬೇಸರದ ವಿಚಾರ. ಪ್ರಧಾನಿ ನರೇಂದ್ರ ಮೋದಿ. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜಸ್ತಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಸೇರಿದಂತೆ ಬಿಜೆಪಿ ನಾಯಕರು ದೇಶದ ಜನರಿಗೆ ಉತ್ತರಿಸಬೇಕಿದೆ. ವಾಸ್ತವವಾಗಿ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ಈ ರೀತಿಯ ಘಟನೆಗಳು ನಡೆದರೆ ಆಗ ಇಡೀ ಸರ್ಕಾರವನ್ನೇ ಹೊಣೆಗಾರರನ್ನಾಗಿ ಮಾಡುತ್ತಿದ್ದ ಬಿಜೆಪಿ ಈ ವಿಚಾರದಲ್ಲಿ ಏನು ಹೇಳುತ್ತದೆ? ಎನ್ನುವುದು ಪ್ರತಿಯೊಬ್ಬ ಭಾರತೀಯನ ಪ್ರಶ್ನೆಯಾಗಿದೆ.
ರಾಜಸ್ತಾನದಲ್ಲಿ ಮೇಲಿಂದ ಮೇಲೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಆ ರೀತಿಯ ಘಟನೆಗಳ ವರದಿಗಳು ಬರುತ್ತಿರುತ್ತವೆ. ಆದರೆ ಈ ಎಲ್ಲವುಗಳನ್ನು ನೋಡಿದಾಗ ಅಲ್ಲಿನ ಕಾನೂನು ಸುವ್ಯವಸ್ಥೆಯ ಬಗ್ಗೆ ಇಂದು ದೇಶದ ಜನರು ಪ್ರಶ್ನಿಸುವ ಸ್ಥಿತಿ ನಿರ್ಮಾಣವಾಗಿದೆ. ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ಸಾಂತ್ವನದ ಮಾತುಗಳನ್ನು ಹೇಳಿದರೆ ಸಾಲದು, ಅದರಿಂದ ಆ ಮುಗ್ದೆ ಅನುಭವಿಸಿದ ನೋವು, ಅನ್ಯಾಯ ವಾಪಸ್ ಬರುವುದಿಲ್ಲ. ಆದರೆ ಕನಿಷ್ಠ ಈ ಘಟನೆಗಳು ಯಾಕೆ ನಡೆಯುತ್ತಿವೆ, ಇವುಗಳನ್ನು ತಡೆಯಲು ಕಾನೂನನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ಯೋಚಿಸಬೇಕಿದೆ.
ಬದಲಾಗಬೇಕಿದೆ ಭಾರತ, ಸಿಗಬೇಕಿದೆ ನೊಂದ ಜೀವಗಳಿಗೆ ನ್ಯಾಯ..
ಬಡವರ ಜೀವಕ್ಕೆ ಬೆಲೆಯೇ ಇಲ್ಲದ ಸಮಾಜದಲ್ಲಿ ನಾವಿದ್ದೇವೆ ಎಂಬ ಭಾಸವಾಗುವುದು ಸಹಜ. ಈ ರೀತಿಯ ದುರುಳರು ಇರುವುದರಿಂದ ಮನಗಳು ಕಲುಷಿತಗೊಳ್ಳುತ್ತಿವೆ. ಈ ಕೊಳಕು, ಹೀನ ಮನಸ್ಥಿತಿಗಳ ಪರಿಣಾಮವೇ ಹೇಯ ಕೃತ್ಯಗಳಾಗಿವೆ ಎಂದರೆ ತಪ್ಪಾಗಲಾರದು. ಹೆಣ್ಣು ಯಾರೇ ಆಗಲಿ ಅದು ನಿಮ್ಮವರೇ ಆಗಿರಲಿ, ಅಥವಾ ಪರರ ಮನೆಯವರೇ ಆಗಿರಲಿ ಅವರು ಸಮಾಜದಲ್ಲಿ ತಲೆ ಎತ್ತಿ ಸ್ವಾಭಿಮಾನದಿಂದ ಬದುಕಬೇಕು. ಅಂದಾಗ ಸಮಾನತೆ ಕಾಣಲು ಸಾಧ್ಯವಾಗುತ್ತದೆ. ಆದರೆ ಇದಕ್ಕೆ ಇಂದಿನ ಕಲುಷಿತ ಆಡಳಿತ ವ್ಯವಸ್ಥೆ ಎಷ್ಟು ಅವಕಾಶ ಮಾಡಿಕೊಡುತ್ತಿದೆ ಅನ್ನುವುದನ್ನು ಗಮನಿಸಿದಾಗ ಅದರ ವೈಫಲ್ಯತೆಯನ್ನು ಈ ಘಟನೆಗಳೇ ಒತ್ತಿ ಹೇಳುತ್ತಿವೆ.
ಈ ಅತ್ಯಾಚಾರಿಗಳ ವಿಚಾರದಲ್ಲಿ ಈಗಾಗಲೇ ಕಠಿಣ ಕಾನೂನುಗಳಿದ್ದರೂ ಅವುಗಳ ಪರಿಣಾಮಕಾರಿ ಅನುಷ್ಠಾನದ ಕೊರತೆಯನ್ನು ನಾವು ಒಪ್ಪಿಕೊಳ್ಳಲೇ ಬೇಕಿದೆ. ಹೀಗಾಗಿ ಹಲ್ಲಿಲ್ಲದ ಹಾವಿನಂತೆ ಸದ್ಯದ ಕಾನೂನುಗಳ ಸ್ಥಿತಿ ಇದ್ದಂತಿದೆ. ನೈಜ ಅತ್ಯಾಚಾರ ಪ್ರಕರಣಗಳ ವಿಚಾರದಲ್ಲಿ ಕಾನೂನುಗಳು ಇನ್ನಷ್ಟು ಬಲಗೊಳ್ಳಬೇಕಿದೆ. ಅಂದಾಗಲೇ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ನಮ್ಮ ದೇಶದ ಮನಸ್ಥಿತಿಗಳು ಬದಲಾಗಬೇಕಿದೆ. ಅದೆಷ್ಟೋ ನೊಂದ ಜೀವಗಳಿಗೆ ನ್ಯಾಯ ಸಿಗಲೇಬೇಕಿದೆ.






