ರಾಜ್ಯ ಬಿಜೆಪಿ ಸರ್ಕಾರದಲ್ಲಿ ಪಿಎಸ್‌ಐ ಅಕ್ರಮ ಸಾವಿರಾರು ಉದ್ಯೋಗ ಆಕಾಂಕ್ಷಿಗಳಿಗೆ ನಿರಾಸೆ ಉಂಟು ಮಾಡಿದೆ. ಕಷ್ಟಪಟ್ಟು ಓದಿ ಕೆಲಸ ಗಿಟ್ಟಿಸುವ ಆಲೋಚನೆಯಲ್ಲಿದ್ದ ಆಕಾಂಕ್ಷಿಗಳು ಕಂತೆ ಕಂತೆ ನೋಟುಗಳು ಕೆಲಸ ಗಿಟ್ಟಿಸುತ್ತಿರುವುದನ್ನು ನೋಡಿ ಕೆಲಸಕ್ಕೆ ಸೇರುವ ಹುಮ್ಮಸ್ಸನ್ನು ಕಳೆದುಕೊಂಡಿದ್ದಾರೆ. ಈ ನಡುವೆ 545 ಮಂದಿ ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಅಕ್ರಮಕ್ಕೆ ಮತ್ತೊಂದು ಸಾಕ್ಷ್ಯ ಲಭ್ಯವಾಗಿದೆ. CID ಬಂಧನದಲ್ಲಿ ಇರುವ ಆರ್ ಡಿ ಪಾಟೀಲ್ ಅಕೌಂಟ್ಗೆ ಬರೋಬ್ಬರಿ 20 ಲಕ್ಷ ರೂಪಾಯಿ ಹಣವನ್ನು ಜಮೆ ಮಾಡಿರುವುದು ಬೆಳಕಿಗೆ ಬಂದಿದೆ. ಇದರ ಜೊತೆಗೆ ಆರ್ ಡಿ ಪಾಟೀಲ್ ವಿಚಾರಣೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳೇ ಕೇಸ್ ಮುಚ್ಚಿ ಹಾಕಲು 3 ಕೋಟಿ ರೂಪಾಯಿ ಕೇಳಿದ್ದಾರೆ ಎನ್ನುವ ಸ್ಫೋಟಕ ವಿಚಾರ ಬಹಿರಂಗ ಮಾಡಿದ್ದು, ಅದಕ್ಕೆ ಸಂಬಂಧಿಸಿದ ಕೆಲವು ಆಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲೂ ಭಾರೀ ವೈರಲ್ ಆಗಿದೆ. ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಕಿಂಗ್ಪಿನ್ ಆಗಿದ್ದ R.D.ಪಾಟೀಲ್ ಬೆಂಬಲಿಗರು ಬಿಡುಗಡೆ ಮಾಡಿದ್ದಾರೆ ಎನ್ನಲಾಗ್ತಿದೆ.

ಹಣಕ್ಕೆ ಡಿಮ್ಯಾಂಡ್ ಮಾಡಿದ್ದು ಯಾವ ಅಧಿಕಾರಿ..!?
ಸಿಐಡಿ ಅಧಿಕಾರಿಗಳು ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆಂದು ಆರ್ ಡಿ ಪಾಟೀಲ್ ವಿಡಿಯೋ ಹರಿಬಿಟ್ಟಿದ್ದಾನೆ. ಸಿಐಡಿ ಅಧಿಕಾರಿಗಳು ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾನೆ. ಸಿಐಡಿ ತನಿಖಾಧಿಕಾರಿ ಡಿವೈಎಸ್ಪಿ ಶಂಕರಗೌಡ ವಿರುದ್ಧ ಗಂಭೀರ ಆರೋಪ ಮಾಡಿದ್ದಾನೆ. 3 ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ ಎಂದು ವೀಡಿಯೋ ಪೋಸ್ಟ್ ಮಾಡಿ ಕೋರ್ಟ್ಗೆ ಬಂದು ಶರಣಾಗತಿ ಆಗಿದ್ದಾನೆ. 3 ಕೋಟಿ ಡಿಮ್ಯಾಂಡ್‌ಗೆ ಒಪ್ಪಿಕೊಂಡು, ಅದರಲ್ಲಿ ₹76 ಲಕ್ಷ ಕೊಟ್ಟಿದ್ದೀನಿ. ನಮ್ಮ ಅಳಿಯನ ಮೂಲಕ 76 ಲಕ್ಷ ರೂಪಾಯಿ ಹಣ ತಲುಪಿಸಿದ್ದೇನೆ. ನಾನು ಬೇಲ್ ಮೇಲೆ ಬರುತ್ತಿದ್ದ ಹಾಗೆ ಹಣಕ್ಕಾಗಿ ಸಿಬ್ಬಂದಿಯನ್ನ ಕಳುಹಿಸಿದ್ರು. ಹಣವಿಲ್ಲದಿದ್ರೆ ಬಂಧಿಸುವುದಾಗಿ ಹೇಳಿದ್ರು ಎಂದು ಪಾಟೀಲ್ ಆರೋಪ ಮಾಡಿದ್ದಾನೆ.

ಮೂರು ಆಡಿಯೋದಲ್ಲಿ ಏನಿದೆ ಸಂಭಾಷಣೆ..!?
ಕಿಂಗ್ಪಿನ್ R.D.ಪಾಟೀಲ್ ಬೆಂಬಲಿಗರು ಬಿಡುಗಡೆ ಮಾಡಿದ್ದಾರೆ ಎನ್ನಲಾಗಿರುವ 3 ಆಡಿಯೋಗಳಲ್ಲಿ DySP ಶಂಕರಗೌಡ ಜೊತೆ ಸಂಭಾಷಣೆ ಮಾಡಿರುವುದು ಎನ್ನಲಾಗ್ತಿದೆ. PSI ಕೇಸಲ್ಲಿ ಸಹಕರಿಸಲು ಹಣದ ಆಫರ್ ನೀಡಿದ್ದ ಆರೋಪಿ, ಚಾರ್ಜ್ಶೀಟ್ ಬೇಗ ಸಲ್ಲಿಸಲು ಹಣದ ಆಫರ್ ಮಾಡಿದ್ದಾನೆ. ರೊಕ್ಕ ಇಂಪಾರ್ಟೆಂಟ್ ಅಲ್ಲ, ಕೆಲಸ ಇಂಪಾರ್ಟೆಂಟ್ ಎಂದು ಶಂಕರಗೌಡಗೆ ರುದ್ರಗೌಡ ಪಾಟೀಲ್ ಹೇಳಿದ್ದಾನೆ. ನೀವು ಯಾರಿಗೆ ಹೇಳ್ತೀರೋ ಅವರಿಗೆ ದುಡ್ಡು ಕೊಡ್ತೇನೆ. ನಾಳೆ ಅಥವಾ ನಾಡಿದ್ದು ಪೇಮೆಂಟ್ ಕಳಿಸ್ತೇನೆ. ಈಗ 1.50 ಕೋಟಿ ರೂಪಾಯಿ ಪೇಮೆಂಟ್ ಮಾಡ್ತೀನಿ. ಇನ್ನೊಂದು ಕೋಟಿ ರೂಪಾಯಿ 16ಕ್ಕೆ ಕಳಿಸ್ತೇನೆ ಎಂದು DySP ಶಂಕರಗೌಡಗೆ ಹೇಳಿದ್ದಾನೆ. ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದ್ದು, ಪಿಎಸ್ಐ ಕೇಸ್ನಲ್ಲಿ ಆರ್ ಡಿ ಪಾಟೀಲ್ ಬಂಧನ ಆಗಿದೆ. ಆರ್ ಡಿ ಪಾಟೀಲ್ ಕಾಂಗ್ರೆಸ್ ಮುಖಂಡ, ಜಿ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ರು ಎಂದಿದ್ದಾರೆ.

ಆರ್.ಡಿ ಪಾಟೀಲ್ ಬಗ್ಗೆ ಸಿಎಂ ಹೇಳಿದ್ದೇನು..?
ಆರ್ ಡಿ ಪಾಟೀಲ್ ತನಿಖಾಧಿಕಾರಿ ಹಣಕ್ಕೆ ಬೇಡಿಕೆ ಇಟ್ಟಿರೋ ವಿಡಿಯೋ ಬಿಡುಗಡೆ ಮಾಡಿರುವ ವಿಚಾರವಾಗಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿರುವ ಸಿಎಂ ಬೊಮ್ಮಾಯಿ, ಆರೋಪಿ ಎನು ಹೇಳಿದ್ದಾನೆ ಎನ್ನುವುದು ಅಲ್ಲಿಯ ಪೊಲೀಸ್ ತನಿಖಾಧಿಕಾರಿಗಳಿಗೆ ಗೊತ್ತಿದೆ. ತನಿಖೆ ಬಳಿಕ ಅಧಿಕಾರಿಯದ್ದು ತಪ್ಪಿದ್ದರೆ ಕ್ರಮ ಕೈಗೊಳ್ಳುತ್ತೆವೆ. ಕೋರ್ಟ್ ಆದೇಶದ ಮೂಲಕ ತನಿಖೆ ನಡೆಯುತ್ತಿದೆ. ಮೊದಲು ಆರೋಪದ ಆಡಿಯೋ ಎನಿದೆ ನೋಡೋಣ, ತನಿಖೆ ಆಗುತ್ತೆ ಎಂದಿದ್ದಾರೆ. ಇನ್ನು ಸಿಎಂ ತೆರಳುತ್ತಿದ್ದ ಮಾರ್ಗದ ಉದ್ದಕ್ಕೂ ಆರ್ ಡಿ ಪಾಟೀಲ್ ಕಟೌಟ್, ಬ್ಯಾನರ್ಸ್ ರಾರಾಜಿಸಿವೆ, ಸಿಎಂಗೆ ಸ್ವಾಗತ ಕೋರಿ ಆರ್ ಡಿ ಪಾಟೀಲ್ ಹೆಸರಲ್ಲಿ ಬ್ಯಾನರ್ ಹಾಕಲಾಗಿತ್ತು. ಆದರೆ ಸಿಎಂಗೆ ಮುಜುಗರ ಆಗಬಾರದು ಎನ್ನುವ ಕಾರಣಕ್ಕೆ ತೆರವು ಮಾಡಲಾಗಿದೆ.

ಎಲ್ಲಾ ಆರೋಪಿಗಳೂ ರಿಲೀಸ್, ಆರ್.ಡಿ ಪಾಟೀಲ್ ಬಂಧನ..!
ಪಿಎಸ್ಐ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದ ಕಲಬುರಗಿ ಬಿಜೆಪಿ ನಾಯಕಿ ಸೇರಿದಂತೆ ಬಹುತೇಕ ಎಲ್ಲಾ ಆರೋಪಿಗಳು ಜೈಲಿನಿಂದ ಬೇಲ್ ಮೇಲೆ ಬಿಡುಗಡೆ ಆಗಿದ್ದಾರೆ. ಆದರೆ D R ಪಾಟೀಲ್ ಜಾಮೀನು ಪಡೆದು ಹೊರಕ್ಕೆ ಬಂದ ಬಳಿಕ ಪೊಲೀಸರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ, ವಿಚಾರಣೆಗೆ ಹಾಜರಾಗಲಿಲ್ಲ ಎನ್ನುವ ಕಾರಣಕ್ಕೆ ಅರೆಸ್ಟ್ ಮಾಡಲು ನಿರ್ಧಾರ ಮಾಡಿದ್ದರು. ಆದರೆ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದ ಡಿ.ಆರ್ ಪಾಟೀಲ್, ಕೋರ್ಟ್ ಎದುರು ಶರಣಾಗಿದ್ದಾನೆ. ಆದರೆ 20 ಲಕ್ಷ ರೂಪಾಯಿ ಹಣ ಹಾಕಿರುವುದು, 3 ಕೋಟಿ ಲಂಚ ಕೇಳಿರುವುದು, ಅದರಲ್ಲಿ 76 ಲಕ್ಷ ರೂಪಾಯಿ ಸಂದಾಯ ಮಾಡಿದ್ದೇನೆ ಎನ್ನುವುದು ಸಾಕಷ್ಟು ಅನುಮಾನಗಳನ್ನು ಮೂಡಿಸುತಿದೆ. ಸರ್ಕಾರ ಮಾತ್ರ ಏನೂ ನಡೆದೇ ಇಲ್ಲ ಎನ್ನವ ಹಾಗೆ ಮೌನಕ್ಕೆ ಶರಣಾಗಿದೆ. ಭ್ರಷ್ಟಾಚಾರ ಎಂಬ ರಾಕ್ಷಸನ ಆರ್ಭಟ ರಾಜ್ಯದಲ್ಲಿ ಮಿತಿಮೀರಿದೆ. ಮುಂದೆ ಬರುವ ಸರ್ಕಾರ ಆದರೂ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಿದ್ರೆ ಉತ್ತಮ.