2013ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ್ದ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ಉತ್ತಮ ಆಡಳಿತವನ್ನೂ ನೀಡಿತ್ತು. 5 ವರ್ಷಗಳಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿ ಸಿದ್ದರಾಮಯ್ಯ ಉತ್ತಮ ಆಡಳಿತಗಾರ ಎನಿಸಿಕೊಂಡಿದ್ದರು. ಆದರೆ ಕೊನೆಯಲ್ಲಿ ಸರ್ಕಾರ ತೆಗೆದುಕೊಂಡ ನಿರ್ಣಯ ಸರ್ಕಾರ ಸೋಲುಂಡು ವಿಪಕ್ಷ ಸ್ಥಾನವನ್ನು ಸೆರುವಂತಾಯ್ತು. ನಾನು ಧರ್ಮವನ್ನು ಒಡೆಯುವುದಕ್ಕೆ ಮುಂದಾಗಿಲ್ಲ ಎಂದು ಸಿದ್ದರಾಮಯ್ಯ ಪರಿಪರಿಯಾಗಿ ಕೇಳಿಕೊಂಡರೂ ಜನರು ಕೇಳಿಸಿಕೊಳ್ಳುವ ವ್ಯವದಾನ ತೋರಿಸಲಿಲ್ಲ. ಸಿದ್ದರಾಮಯ್ಯ ಲಿಂಗಾಯತ ಹಾಗು ವೀರಶೈವ ಸಮುದಾಯಗಳನ್ನು ಬೇರೆ ಬೇರೆ ಮಾಡಲು ಪ್ರಯತ್ನಿಸಿದ್ದಾರೆ ಎನ್ನುವುದೇ ಜನರ ಭಾವನೆಯನ್ನು ಕೆರಳಿಸಿತ್ತು. 5 ವರ್ಷಗಳ ಕಾಲ ಸದೃಢ ಆಡಳಿತ ನೀಡಿದ್ದ ಕಾಂಗ್ರೆಸ್ ಪಕ್ಷ ನೂರರ ಗಡಿ ದಾಟಲಾರದೆ ರಾಜ್ಯದಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿತ್ತು. ಇದೀಗ ಲಿಂಗಾಯತರಲ್ಲಿ ಪಂಚಮಸಾಲಿಗಳ ಬೇಡಿಕೆ ಈಡೇರಿಸದ ಆಕ್ರೋಶ ಹೆಚ್ಚಾಗಿದೆ.
ಪಂಚಮಸಾಲಿಗಳ ಕೆಂಗಣ್ಣಿಗೆ ಕೇಸರಿ ಪಾಳಯ ಗುರಿ..!
ಲಿಂಗಾಯತರಲ್ಲೇ ಒಂದು ಒಳಪಂಗಡ ಆಗಿರುವ ಪಂಚಮಸಾಲಿಗಳು ಬಹುಪಾಲು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿದ್ದಾರೆ. 2A ಮೀಸಲಾತಿ ಕೊಡಬೇಕು ಎಂದು ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಸರ್ಕಾರ ಕೂಡ ಹಿಂದುಳಿದ ವರ್ಗಗಳ ಆಯೋದದ ಮೂಲಕ ಕುಲಶಾಸ್ತ್ರ ಅಧ್ಯಯನ ಮಾಡಿ ವರದಿ ನೀಡಲು ಸೂಚಿಸಿತ್ತು. ಈ ನಡುವೆ ಕಳೆದ ವರ್ಷದ ಡಿಸೆಂಬರ್ನಲ್ಲಿ ಮಧ್ಯಂತರ ವರದಿಯೂ ಸಲ್ಲಿಕೆ ಆಯ್ತು. ಆದರೆ ಪಂಚಮಸಾಲಿಗಳ ಬೇಡಿಕೆ ಈಡೆರಲಿಲ್ಲ. ರಾಜ್ಯ ಸರ್ಕಾರ 2A ಮೀಸಲಾತಿ ಕೇಳಿದ್ದ ಪಂಚಮಸಾಲಿಗಳನ್ನು ಈಗಾಗಲೇ 3B ಪ್ರವರ್ಗದಲ್ಲಿ ಇದ್ದವರನ್ನು 2D ಪ್ರವರ್ಗಕ್ಕೆ ಬದಲಾವಣೆ ಮಾಡಿ ಮೀಸಲಾತಿ ಕೊಟ್ಟಿದ್ದೇವೆ ಎಂದಿತ್ತು. ಅದೂ ಅಲ್ಲದೆ ಕೇವಲ ಪಂಚಮಸಾಲಿಗಳಿಗೆ 2A ಮೀಸಲಾತಿ ಕೇಳಿದ್ದಕ್ಕೆ ಎಲ್ಲಾ ಲಿಂಗಾಯತರನ್ನು 2Dಗೆ ತಂದು ಕೂರಿಸಿತ್ತು. ಇದು ಪಂಚಮಸಾಲಿ ಸಮುದಾಯದ ಕಣ್ಣು ಕೆಂಪಾಗುವಂತೆ ಮಾಡಿದೆ. ಮುಂದಿನ ಚುನಾವಣೆಯಲ್ಲಿ ಇದರ ಹೊಡೆತ ಕೇಸರಿ ಪಾಳಯವನ್ನು ಮನೆಗೆ ಕಳುಹಿಸುವ ಎಲ್ಲಾ ಸಾಧ್ಯತೆಗಳು ಇವೆ.

ಸರ್ಕಾರ ಹಾಗು ಸಿಎಂ ಜೊತೆಗೆ ಚರ್ಚೆ ನಡೆಸಲ್ಲ..!
ಪಂಚಮಸಾಲಿಗಳ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುವುದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸ್ವಾಮೀಜಿ, ಸಂಕ್ರಾಂತಿ ದಿನದಿಂದಲೂ ಸತ್ಯಾಗ್ರಹ ಮಾಡಲು ಮಾಡುತ್ತಿದ್ದೇವೆ. ಮೀಸಲಾತಿ ವಿಚಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಲೆಗೆ ತುಪ್ಪ ಸವರಿದ್ದಾರೆ. ಇನ್ನು ಮುಂದೆ ಸಿಎಂ ಜೊತೆಗೆ ಯಾವುದೇ ಚರ್ಚೆ ಮಾಡುವುದಿಲ್ಲ. ಮೀಸಲಾತಿ ವಿಚಾರದಲ್ಲಿ ಮೋದಿ ಹಾಗು ಅಮಿತ್ ಷಾಗೆ ಪತ್ರ ಬರೆದಿದ್ದೇವೆ. ಸ್ಪಂದಿಸುವ ನಿರೀಕ್ಷೆ ಇದೆ. ಚುನಾವಣೆಗೂ ಮುನ್ನವೇ ಮೀಸಲಾತಿ ವಿಚಾರದಲ್ಲಿ ಸ್ಪಷ್ಟತೆ ಸಿಗದಿದ್ದರೆ, 224 ಕ್ಷೇತ್ರದಲ್ಲೂ ಪ್ರವಾಸ ಮಾಡುತ್ತೇನೆ. ಸಮುದಾಯ ಮೀಸಲಾತಿ ಪರವಾಗಿ ಯಾರಿದ್ದಾರೆ..? ಮೀಸಲಾತಿ ವಿರುದ್ಧವಾಗಿ ಯಾರಿದ್ದಾರೆ ಅನ್ನೋ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡ್ತೇನೆ ಎಂದಿದ್ದಾರೆ. ಇದು ಬಿಜೆಪಿ ಪಾಳಯಕ್ಕೆ ನುಂಗಲಾರದ ತುತ್ತಾಗಿದೆ.
ಕಾಂಗ್ರೆಸ್ಗೆ ಎದುರಾದ ಸ್ಥಿತಿ ಬಿಜೆಪಿಗೂ ಎದುರಾಗುತ್ತಾ..?
2018ರಲ್ಲಿ ಲಿಂಗಾಯತ ಸಮುದಾಯ ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದಿತ್ತು. ಉತ್ತರ ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಾದ್ಯಂತ ಕಾಂಗ್ರೆಸ್ ಹಿನ್ನೆಡೆಗೆ ಕಾರಣವಾಗಿತ್ತು. ಇದೀಗ ಪಂಚಮಸಾಲಿ ಸಮುದಾಯವೇ ಹೆಚ್ಚಾಗಿ ವಾಸ ಮಾಡುವ ಬಾಗಲಕೋಟೆ, ಗದಗ, ಕೊಪ್ಪಳ, ವಿಜಯಪುರ, ಬೆಳಗಾವಿ ಸೇರಿದಂತೆ ಸಾಕಷ್ಟು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಬಿಜೆಪಿಗೆ ಹಿನ್ನಡೆ ಆಗುವ ಭೀತಿ ಎದುರಾಗಿದೆ. ಪಂಚಮಸಾಲಿ ಸಮುದಾಯದ ಮತದಾರರು ಹಲವಾರು ಕ್ಷೇತ್ರಗಳಲ್ಲಿ ನಿರ್ಣಾಯಕರಾಗಿದ್ದಾರೆ. ಬಸವಜಯ ಮೃತ್ಯುಂಜಯ ಸ್ವಾಮೀಜಿ ಕ್ಷೇತ್ರವಾರು ಪ್ರಚಾರ ಮಾಡಿದರೆ ಸಂಕಷ್ಟ ಎದುರಾಗುವ ಭೀತಿ ಜೊತೆಗೆ ಕಟ್ಟರ್ ಬಿಜೆಪಿ ಕಾರ್ಯಕರ್ತರಾಗಿರುವ ಪಂಚಮಸಾಲಿಗಳು ಪಕ್ಷನಿಷ್ಠೆ ಪಾಲಿಸುತ್ತಾರೆ ಎನ್ನುವ ನಂಬಿಕೆ ಬಿಜೆಪಿಯಲ್ಲ್ಲಿದೆ. ಆದರೆ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಯಾವ ಪ್ರಮಾಣದಲ್ಲಿ ಜನರನ್ನು ಮೀಸಲಾತಿ ವಿಚಾರದಲ್ಲಿ ಎಷ್ಟರ ಮಟ್ಟಿಗೆ ಪ್ರಚೋದಿಸುತ್ತಾರೆ ಎನ್ನುವುದರ ಆಧಾರದಲ್ಲಿ ಕೇಸರಿ ಪಾಳಯಕ್ಕೆ ಸಂಕಷ್ಟ ತಂದೊಡ್ಡಲಿದೆ.