ಐಎಫ್ಎಸ್ ಬಚಾವು ಮಾಡಲು ಪಿಎಸ್ಐ ಮೇಲೆ ಪ್ರಬಲ ದಂಡಪ್ರಯೋಗ!

ದಲಿತ ಯುವಕನೊಬ್ಬನನ್ನು ವಶಕ್ಕೆ ಪಡೆದು ರಾತ್ರಿಯಿಡೀ ಲಾಕಪ್ ನಲ್ಲಿ ಕೂಡಿಹಾಕಿ, ವಿಚಾರಣೆ ನೆಪದಲ್ಲಿ ಆತನಿಗೆ ಮನಸೋಇಚ್ಛೆ ಥಳಿಸಿದ್ದಲ್ಲದೆ, ಮತ್ತೊಬ್ಬ ಆರೋಪಿಯ ಮೂತ್ರ ಕುಡಿಸಿದ ಹೇಯ ಘಟನೆಗೆ ಸಂಬಂಧಿಸಿದಂತೆ ಮೂಡಿಗೆರೆ ಸಮೀಪದ ಗೋಣಿಬೀಡು ಪೊಲೀಸ್ ಠಾಣೆ ಪಿಎಸ್ಐ ಅಮಾನತು ಮಾಡಿ, ಪ್ರಕರಣದ ತನಿಖೆಯನ್ನು ಸಿಒಡಿಗೆ ವಹಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ವಾರ ನಡೆದ ಎರಡು ಪ್ರಮುಖ ಪೊಲೀಸ್ ಕರ್ತವ್ಯಲೋಪ ಮತ್ತು ಖಾಕಿ ಅಟ್ಟಹಾಸದ ಘಟನೆಗಳ ಪೈಕಿ ಗೋಣಿಬೀಡು ಘಟನೆ ಒಂದಾದರೆ, ಕೋವಿಡ್ ನಿಯಮ ಉಲ್ಲಂಘಿಸಿದ ಹಿರಿಯ ಐಎಫ್ ಎಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಬದಲಾಗಿ, ಅವರ ಕಾನೂನುಬಾಹಿರ ನಡವಳಿಕೆಯನ್ನು ಪ್ರಶ್ನಿಸಿದ ಶಾಂತವೇರಿ ಗ್ರಾಮದ ಕರೋನಾ ವಾರಿಯರ್ಸ್ ವಿರುದ್ಧವೇ ಎಫ್ ಐಆರ್ ದಾಖಲಿಸಿದ್ದು ಮತ್ತೊಂದು ಘಟನೆ.

ದಲಿತ ಯುವಕನ ಮೇಲೆ ಗೋಣಿಬೀಡು ಠಾಣಾಧಿಕಾರಿ ನಡೆಸಿದ ಅಮಾನವೀಯ ಕೃತ್ಯ ಮತ್ತು ಆ ಯುವಕನ ಸಾಮಾಜಿಕ ಹಿನ್ನೆಲೆಯ ಕಾರಣಕ್ಕೆ ಆ ಘಟನೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿತ್ತು. ಜೊತೆಗೆ ಮಾಧ್ಯಮಗಳು ಕೂಡ ಆ ಬಗ್ಗೆ ದೊಡ್ಡಮಟ್ಟದಲ್ಲಿ ದನಿ ಎತ್ತಿದ್ದವು. ಹಾಗೇ ದಲಿತ ಸಂಘಟನೆಗಳು ಮತ್ತಿತರ ಸಾಮಾಜಿಕ ಮತ್ತು ರಾಜಕೀಯ ಸಂಘಟನೆಗಳು ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪಿಎಸ್ ಐ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದವು. ಹಾಗಾಗಿ ವಿವಿಧ ವಲಯಗಳ ಒತ್ತಡದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗೋಣಿಬೀಡಿಗೆ ಭೇಟಿ ನೀಡಿ ಸಂತ್ರಸ್ತ ಯುವಕ ಮತ್ತು ಸ್ವತಃ ಪೊಲೀಸ್ ಸಿಬ್ಬಂದಿಯಿಂದ ಘಟನೆಯ ಕುರಿತು ಮಾಹಿತಿ ಪಡೆದಿದ್ದರು. ಆ ಬಳಿಕ ಪೈಶಾಚಿಕ ಕೃತ್ಯ ಎಸಗಿದ ಪಿಎಸ್ಐ ಅರ್ಜುನ್ ಅವರನ್ನು ಅಮಾನತುಗೊಳಿಸಿ ಪಶ್ಚಿಮ ವಲಯ ಐಜಿಪಿ ಆದೇಶ ಹೊರಡಿಸಿದ್ದರು.

ಘಟನೆ ಬೆಳಕಿಗೆ ಬಂದ ಒಂದೆರಡು ದಿನದಲ್ಲೇ ಈ ಪ್ರಕರಣದಲ್ಲಿ ರಾಜ್ಯ ಪೊಲೀಸ್ ಇಲಾಖೆ ಮತ್ತು ಗೃಹ ಸಚಿವರು ಅತ್ಯಂತ ಚುರುಕಾಗಿ ಸಂತ್ರಸ್ತನ ಪರ ನಿರ್ಧಾರ ಕೈಗೊಂಡಿರುವುದಾಗಿ ಈ ಪ್ರಕರಣವನ್ನು ಈಗ ವ್ಯಾಖ್ಯಾನಿಸಲಾಗುತ್ತಿದೆ. ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ, ಪಶ್ಚಿಮ ವಲಯ ಐಜಿಪಿ ಅವರ ಕ್ರಮವನ್ನು ಕೂಡ ಶ್ಲಾಘಿಸಲಾಗುತ್ತಿದೆ.

ಗೋಣಿಬೀಡು ಪ್ರಕರಣ ಒಂದನ್ನೇ ಪ್ರತ್ಯೇಕವಾಗಿ ನೋಡಿದರೆ, ಪೊಲೀಸ್ ಇಲಾಖೆಯ ಸಕಾಲಿಕ ಕ್ರಮವನ್ನು ಹಾಗೆ ಶ್ಲಾಘಿಸುವುದು ಸಹಜವೇ. ಆದರೆ, ಗೋಣಿಬೀಡಿನಲ್ಲಿ ದಲಿತ ಯುವಕನಿಗೆ ಚಿತ್ರಹಿಂಸೆ ನೀಡಿ ಮೂತ್ರ ಕುಡಿಸಿದ ಪ್ರಕರಣ ಬೆಳಕಿಗೆ ಬರುವ ಹೊತ್ತಿಗೇ ಅದೇ ಚಿಕ್ಕಮಗಳೂರಿನ ಮತ್ತೊಂದು ತುದಿಯಲ್ಲಿ, ತರೀಕೆರೆ ತಾಲೂಕಿನ ಲಿಂಗದಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಘಟನೆ ಮತ್ತು ಅದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರತಿಕ್ರಿಯಿಸಿದ ರೀತಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ನೋಡಿದರೆ, ಬೇರೆಯದೇ ಸತ್ಯ ಗೋಚರಿಸದೇ ಇರದು.

ಲಿಂಗದಹಳ್ಳಿ ಠಾಣೆ ವ್ಯಾಪ್ತಿಯ ಶಾಂತವೇರಿಯಲ್ಲಿ ಕಳೆದ ವಾರ ಕಠಿಣ ಲಾಕ್ ಡೌನ್ ಮತ್ತು ಸೆಕ್ಷನ್ 144 ಎ ಉಲ್ಲಂಘಿಸಿ ಮೋಜು ಮಸ್ತಿಗೆ ತೆರಳಿದ್ದ ರಾಜ್ಯ ಅರಣ್ಯ ಇಲಾಖೆಯ ಮುಖ್ಯಸ್ಥರು ಸೇರಿದಂತೆ ಸಾಲು ಸಾಲು ಅತ್ಯುನ್ನತ ಅಧಿಕಾರಿಗಳು ಮತ್ತು ಕರೋನಾ ಹರಡುವ ಭೀತಿಯಲ್ಲಿ ಅವರನ್ನು ತಡೆದ ಸ್ಥಳೀಯ ಕೋವಿಡ್ ಟಾಸ್ಕ್ ಫೋರ್ಸ್ ಸದಸ್ಯರ ನಡುವೆ ನಡೆದ ವಾಗ್ವಾದ, ಅಂತಿಮವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಅಧಿಕಾರಿಗಳು ತಾವು ಕರ್ತವ್ಯದ ಮೇಲೆ ಬಂದಿದ್ದು, ತಮ್ಮ ಸರ್ಕಾರಿ ಕರ್ತವ್ಯಪಾಲನೆಗೆ ಗ್ರಾಮಸ್ಥರು ಅಡ್ಡಿಪಡಿಸಿದ್ದಾರೆ ಎಂದು ಮೂವರು ಪಂಚಾಯ್ತಿ ಸದಸ್ಯರು ಸೇರಿದಂತೆ ನಾಲ್ವರ ವಿರುದ್ಧ ದೂರು ನೀಡಿದ್ದರು. ಅಧಿಕಾರಿಗಳ ದೂರು ಸ್ವೀಕೃತವಾದ ಕೆಲವೇ ತಾಸಿನಲ್ಲಿ ಎಫ್ ಐಆರ್ ದಾಖಲಿಸಿದ್ದ ಚಿಕ್ಕಮಗಳೂರು ಪೊಲೀಸರು, ಆ ಕುರಿತ ಮರು ಯೋಚನೆಯೇ ಇಲ್ಲದೆ ತನಿಖೆಗೆ ಚಾಲನೆ ನೀಡಿದ್ದರು. ಆದರೆ, ಅದೇ ಹೊತ್ತಿಗೆ ಹತ್ತಾರು ವಾಹನಗಳಲ್ಲಿ ಅಂತರ್ ಜಿಲ್ಲಾ ಪ್ರವಾಸ ಮಾಡಿ, 40-50 ಮಂದಿ ಗುಂಪಾಗಿ ಗ್ರಾಮಕ್ಕೆ ಬಂದು ಕೋವಿಡ್ ಲಾಕ್ ಡೌನ್ ನಿಯಮ, ಜಿಲ್ಲೆಯಲ್ಲಿ ಜಾರಿಯಲ್ಲಿರುವ 144 ಎ ಕಾಯ್ದೆ ಮತ್ತು ಸಾಂಕ್ರಾಮಿಕ ತಡೆ ಕಾಯ್ದೆಗಳನ್ನು ಉಲ್ಲಂಘಿಸಿದ್ದಾರೆ ಎಂದು ನೀಡಿದ ಗ್ರಾಮಸ್ಥರ ದೂರನ್ನು ಮಾತ್ರ ಗಂಭೀರವಲ್ಲದ ಪ್ರಕರಣ ಎಂದು ದಾಖಲಿಸಿ, ರಶೀದಿ ನೀಡಿ ಮೂಲೆಗುಂಪು ಮಾಡಿದ್ದಾರೆ!

ನಿಜವಾಗಿಯೂ ಕಾನೂನು ಉಲ್ಲಂಘಿಸಿ ಗ್ರಾಮದಲ್ಲಿ ಕರೋನಾ ಆತಂಕ ಸೃಷ್ಟಿಸಿದ ಉನ್ನತ ಅಧಿಕಾರಿಗಳನ್ನು ರಕ್ಷಿಸಲು ಚಿಕ್ಕಮಗಳೂರು ಪೊಲೀಸ್, ಜಿಲ್ಲಾಧಿಕಾರಿಗಳ ಸೂಚನೆಯಂತೆ ಕೋವಿಡ್ ವಾರಿಯರ್ಸ್ ಆಗಿ ತಮ್ಮ ಕರ್ತವ್ಯ ನಿರ್ವಹಿಸಿದ ಅಮಾಯಕ ಹಳ್ಳಿಗರನ್ನು ಜೈಲಿಗೆ ಹಾಕುವ ನಿಟ್ಟಿನಲ್ಲಿ ಬಹಳ ಚುರುಕವಾಗಿ ಕೆಲಸ ಮಾಡಿದೆ. ಆ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿರುವ ಮೂವರು ಪಂಚಾಯ್ತಿ ಸದಸ್ಯರು ಸೇರಿದಂತೆ ನಾಲ್ವರು ಗ್ರಾಮಸ್ಥರು, ಪೊಲೀಸ್ ಬಂಧನದಿಂದ ರಕ್ಷಣೆ ಪಡೆಯಲು ಜಾಮೀನಿಗಾಗಿ ಹರಸಾಹಸ ಮಾಡುತ್ತಿದ್ದಾರೆ. ಆದರೆ, ನಿಜವಾಗಿಯೂ ತಮ್ಮ ಆದೇಶ ಪಾಲಿಸಿದ ಗ್ರಾಮಸ್ಥರ ಪರ ನಿಲ್ಲಬೇಕಿದ್ದ ಜಿಲ್ಲಾಡಳಿತ, ಅದಕ್ಕೆ ತದ್ವಿರುದ್ಧವಾಗಿ ದೇಶದ ಕೋವಿಡ್ ಮಾರ್ಗಸೂಚಿಗಳನ್ನು, ಲಾಕ್ ಡೌನ್ ಆದೇಶಗಳನ್ನೇ ಗಾಳಿಗೆ ತೂರಿದ ಅಧಿಕಾರಿಗಳ ಪರ ನಿಂತಿದೆ.

ಆ ಹಿನ್ನೆಲೆಯಲ್ಲಿ ಲಿಂಗದಹಳ್ಳಿ ಘಟನೆ, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಸ್ಥಳೀಯ ಮತ್ತು ರಾಷ್ಟ್ರೀಯ ಮಾಧ್ಯಮಗಳಲ್ಲಿ ಕೂಡ ಚಿಕ್ಕಮಗಳೂರು ಪೊಲೀಸ್ ಮತ್ತು ಜಿಲ್ಲಾಡಳಿತ ವರಸೆಯ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಈ ನಡುವೆ ಜಿಲ್ಲೆಯ ಕೆಲವು ರಾಜಕೀಯ ಮುಖಂಡರು ಕೂಡ ಜಿಲ್ಲಾ ಪೊಲೀಸರು ಮತ್ತು ಜಿಲ್ಲಾಡಳಿತದ ಈ ಜನವಿರೋಧಿ ನಡೆಯನ್ನು ತೀವ್ರವಾಗಿ ಖಂಡಿಸಿದ್ದರು ಮತ್ತು ‘ಕಾನೂನು ಉಲ್ಲಂಘಿಸಿದ್ದೇ ಅಲ್ಲದೆ, ಕಾನೂನು ಪ್ರಕಾರ ಮೋಜುಮಸ್ತಿಯನ್ನು ಪ್ರಶ್ನಿಸಿದ ಗ್ರಾಮಸ್ಥರ ವಿರುದ್ಧವೇ ಅಧಿಕಾರಿಗಳು ನೀಡಿದ ಸುಳ್ಳು ದೂರು ಮತ್ತು ಅದಕ್ಕೆ ತಕ್ಕಂತೆ ದಾಖಲಿಸಿರುವ ಎಫ್ ಐಆರ್ ದಾಖಲಿಸಿದ ತೋರಿದ ಆಸಕ್ತಿ ಮತ್ತು ಜರೂರನ್ನು, ಗ್ರಾಮಸ್ಥರು ಕಾನೂನು ರೀತ್ಯ ನೀಡಿದ ದೂರನ್ನು ನಿರ್ಲಕ್ಷಿಸಿ ಜನವಿರೋಧಿಯಾಗಿ ನಡೆದುಕೊಂಡ ಪೊಲೀಸರು ಕೂಡಲೇ ತಮ್ಮ ತಪ್ಪು ಸರಿಪಡಿಸಿಕೊಂಡು, ಗ್ರಾಮಸ್ಥರ ದೂರಿನ ಪ್ರಕಾರ ಅಧಿಕಾರಿಗಳ ವಿರುದ್ಧವೂ ಎಫ್ ಐಆರ್ ದಾಖಲಿಸದೇ ಇದ್ದಲ್ಲಿ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸುವುದಾಗಿಯೂ’ ಎಚ್ಚರಿಕೆ ನೀಡಿದ್ದರು.

ಆ ಹಿನ್ನೆಲೆಯಲ್ಲಿ ಸಹಜವಾಗೇ ಪೊಲೀಸ್ ವರಿಷ್ಠಾಧಿಕಾರಿಗಳು ಒತ್ತಡಕ್ಕೆ ಸಿಲುಕಿದ್ದರು. ಒಂದು ಕಡೆ ಪಿಸಿಸಿಎಫ್, ಹೆಚ್ಚುವರಿ ಕಾರ್ಯದರ್ಶಿಯಂತಹ ಉನ್ನತ ಹುದ್ದೆಯ ಪ್ರಭಾವ ಬಳಸಿ ಅರಣ್ಯ ಇಲಾಖೆ ಅಧಿಕಾರಿಗಳು, ತಮ್ಮ ವಿರುದ್ಧ ಎಫ್ ಐಆರ್ ದಾಖಲಿಸದಂತೆ ಹೇರುತ್ತಿರುವ ಒತ್ತಡ. ಮತ್ತೊಂದೆಡೆ ಕಾನೂನು ಪ್ರಕಾರ ಸರಿ ದಾರಿಯಲ್ಲಿರುವ ಶಾಂತವೇರಿ ಗ್ರಾಮಸ್ಥರ ಪರ ನಿಂತ ರಾಜಕೀಯ ಮುಖಂಡರು, ಮಾಧ್ಯಮ ಮತ್ತು ಜನಸಾಮಾನ್ಯರ ನಡುವೆ ಈ ಪ್ರಕರಣ ಚಿಕ್ಕಮಗಳೂರು ಪೊಲೀಸರ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿತ್ತು. ಹೀಗೆ  ದಿಕ್ಕೆಟ್ಟು ಕುಳಿತ ಹೊತ್ತಲ್ಲೇ ದಿಢೀರನೇ ಗೋಣಿಬೀಡು ದಲಿತ ಯುವಕರ ಪ್ರಕರಣ ಬೆಳಕಿಗೆ ಬಂದಿದ್ದು, ಒಂದು ರೀತಿಯಲ್ಲಿ ಅನಿರೀಕ್ಷಿತ ವರವಾಗಿ ಪರಿಣಮಿಸಿತು. ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಪಿಸಿಸಿಎಫ್, ಸಿಸಿಎಫ್, ಡಿಸಿಎಫ್ ನಂತಹ ಐಎಫ್ ಎಸ್ ಹಿತ ಕಾಯಲು, ಗೋಣಿಬೀಡು ಪ್ರಕರಣದಲ್ಲಿ ಬಹಳ ಚುರುಕಾಗಿ ಪ್ರತಿಕ್ರಿಯಿಸಿ, ಲಿಂಗದಹಳ್ಳಿ ಪ್ರಕರಣವನ್ನು ಮರೆಮಾಚಿಸಲಾಯಿತು!

ಹೌದು, ಇದೊಂದು ರೀತಿಯಲ್ಲಿ ದೊಡ್ಡ ಮೀನನ್ನು ಬಚಾವು ಮಾಡಲು ಇನ್ನಾವುದೋ ಸಣ್ಣ ಮೀನು ಬಲಿ ಕೊಟ್ಟು ಸಮಾಧಾನಪಡಿಸುವ ತಂತ್ರಗಾರಿಕೆ. ಚಿಕ್ಕಮಗಳೂರು ಪೊಲೀಸರು ಆ ತಂತ್ರವನ್ನು ಈಗ ಬಹಳ ಯಶಸ್ವಿಯಾಗಿ ಪ್ರಯೋಗಿಸಿದ್ದಾರೆ!

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...