ದಲಿತ ಯುವಕನಿಗೆ ಪೊಲೀಸರಿಂದ ಕಿರುಕುಳ, ಮೂತ್ರ ಕುಡಿಯುವಂತೆ ಒತ್ತಾಯ ಆರೋಪ: SI ತಲೆದಂಡಕ್ಕೆ ಆಗ್ರಹ

ಚಿಕ್ಕಮಗಳೂರಿನ ಮೂಡಿಗೆರೆಯ ಗೋಣಿಬೀಡು ಪೊಲೀಸ್‌ ಠಾಣೆಯಲ್ಲಿ ಪರಿಶಿಷ್ಟ ಜಾತಿಯ ಯುವಕನೊಬ್ಬನ ಮೇಲೆ ಪೊಲೀಸರಿಂದ ಅಮಾನವೀಯ ದೌರ್ಜನ್ಯ ನಡೆದಿರುವುದಾಗಿ ದೂರು ಕೇಳಿ ಬಂದಿದೆ. ತನ್ನ ಮೇಲೆ ದೌರ್ಜನ್ಯವೆಸಗಿದ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಯುವಕರ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಗ್ರಾಮಸ್ಥರ ಮೌಖಿಕ ದೂರುಗಳ ಆಧಾರದ ಮೇಲೆ ಮೇ 10 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಕಿರಂಗುಂದ ನಿವಾಸಿ ಪುನಿತ್ ಕೆ.ಎಲ್ ಎಂಬಾತನನ್ನು ಗೋನಿಬೀಡು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಮಹಿಳೆಯೊಬ್ಬಳು ಪರಾರಿ ಆಗಿರುವುದಕ್ಕೂ ಪುನಿತ್‌ಗೂ ಸಂಬಂಧವಿದೆಯೆಂಬ ಶಂಕೆಯ ಮೇಲೆ ಪೊಲೀಸರು ಪುನೀತ್‌ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಪುನಿತ್‌ ದೂರಿನ ಪ್ರಕಾರ, ಠಾಣಾ ಎಸ್‌ಐ ಅರ್ಜುನ್‌ ಪುನೀತ್‌ರ ವಿರುದ್ಧ ಯಾವುದೇ ಲಿಖಿತ ದೂರು ಇಲ್ಲದಿದ್ದರೂ, ತಪ್ಪು ಒಪ್ಪಿಕೊಳ್ಳುವಂತೆ ಕಿರುಕುಳ ನೀಡಿದ್ದಾರೆ. ಈ ವೇಳೆ ಪುನೀತ್‌ರ ಜಾತಿ ಪ್ರಶ್ನಿಸಿದ್ದು, ಪರಿಶಿಷ್ಟ ಜಾತಿ ಎನ್ನುತ್ತಿದ್ದಂತೆಯೇ, ಜಾತಿ ನಿಂದೆಯನ್ನು ಮಾಡಿದ್ದು, ʼನಿಮಗೆ ಇದೇ ಕೆಲಸವೆಂದುʼ ಹಿಯಾಳಿಸಿದ್ದಾರೆ ಎಂದು ಪುನೀತ್‌ ದೂರಿನಲ್ಲಿ ಹೇಳಿದ್ದಾರೆ. ಅಲ್ಲದೆ, ಸಹ ಖೈದಿ ಚೇತನ್‌ ಬಳಿ ಪುನಿತ್‌ರ ಮುಖಕ್ಕೆ ಮೂತ್ರ ವಿಸರ್ಜನೆ ನಡೆಸುವಂತೆ ಎಸ್‌ಐ ಬೆದರಿಸಿದ್ದು, ಎಸ್‌ಐಗೆ ಭಯಬಿದ್ದ ಚೇತನ್‌ ಪುನಿತ್‌ ಮುಖದ ಮೇಲೆ ಮೂತ್ರ ವಿಸರ್ಜನೆ ನಡೆಸಿದ್ದಾರೆ. ಅದನ್ನು ಕುಡಿಯುವಂತೆ ಚಿತ್ರಹಿಂಸೆ ನೀಡಿದ ಎಸ್‌ಐ ಅರ್ಜುನ್‌ ನೆಲದ ಮೇಲೆ ಬಿದ್ದ ಮೂತ್ರದ ಹನಿಯನ್ನು ನೆಕ್ಕುವಂತೆ ಒತ್ತಾಯಿಸಿ, ನೆಕ್ಕಿಸಿದ್ದಾರೆಂದು ಪುನೀತ್‌ ದೂರಿನಲ್ಲಿ ತಿಳಿಸಿದ್ದಾರೆ.

ಪುನೀತ್‌ ಮೇಲೆ ನಡೆದ ದೌರ್ಜನ್ಯ ಹೊರಜಗತ್ತಿಗೆ ಗೊತ್ತಾಗಿ ಎಸ್‌ಐ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಎಸ್‌ಐ ಅರ್ಜುನ್‌ ನಾಪತ್ತೆಯಾಗಿದ್ದಾನೆಂದು ತಿಳಿದುಬಂದಿದೆ. ಪೊಲೀಸ್‌ ಇಲಾಖೆ ಆಂತರಿಕೆ ತನಿಖೆ ಕೈಗೆತ್ತಿಕೊಂಡಿದ್ದು, ತಕ್ಷಣಕ್ಕೆ ಠಾಣೆಯಿಂದ ಬೇರೆಡೆಗೆ ಅರ್ಜುನ್‌ರನ್ನು ವರ್ಗಾಯಿಸಲಾಗಿದೆ.

ಆದರೆ, ಕೇವಲ ವರ್ಗಾವಣೆ ಸಾಲದು. ಆರೋಪಿ ಪ್ರಭಾವಿ ಆಗಿರುವುದರಿಂದ, ತನ್ನ ಅಧೀಕಾರ ಹಾಗೂ ಪ್ರಭಾವ ಬಳಸಿ ಸಾಕ್ಷ್ಯ ನಾಶ ಮಾಡುವ ಅವಕಾಶಗಳು ಇರುವುದರಿಂದ ತಕ್ಷಣವೇ ಗಂಭೀರವಾಗಿ ಪ್ರಕರಣವನ್ನು ಪರಿಗಣಿಸಬೇಕು. ಹಾಗೂ ಅರ್ಜುನ್‌ರನ್ನು ಅಮಾನತು ಮಾಡಬೇಕೆಂದು ಆಗ್ರಹಗಳು ಕೇಳಿ ಬಂದಿವೆ.

ಈ ಕುರಿತು ರಾಜ್ಯಾದ್ಯಂತ ಚರ್ಚೆಯಾಗುತ್ತಿದ್ದು, ಚಿಕ್ಕಮಗಳೂರು ಎಸ್‌ಪಿಯೇ ಈ ಪ್ರಕರಣದಲ್ಲಿ ನಿಸ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪವೂ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಪ್ರಕರಣದ ಕುರಿತು ಹಿರಿಯ ಪತ್ರಕರ್ತ ದಿನೇಶ್‌ ಕುಮಾರ್‌ ಎಸ್‌ಸಿ ಪ್ರತಿಕ್ರಿಯಿಸಿದ್ದು, ಚಿಕ್ಕಮಗಳೂರು ಎಸ್ ಪಿಗೆ ಈ ಪ್ರಕರಣ ದೊಡ್ಡದಾಗುವುದು ಬೇಕಾಗಿಲ್ಲ. ಹೀಗಾಗಿ ಉಚ್ಚೆ ಕುಡಿಸಲ್ಪಟ್ಟ ದಲಿತ ಯುವಕ ಪುನೀತ್ ಗೆ ನ್ಯಾಯ ದೊರೆಯುವುದು ಕಷ್ಟ. ಸಬ್ ಇನ್ಸ್ ಪೆಕ್ಟರ್ ಅರ್ಜುನ್ ಈ ಕ್ಷಣದವರೆಗೆ ಸಸ್ಪೆಂಡಾಗಿಲ್ಲ. ಹೀಗಾಗಿ ಸಾಕ್ಷ್ಯ ನಾಶಕ್ಕೆ ಅವನಿಗೆ ಬೇಕಾದಷ್ಟು ಅವಕಾಶಗಳು ಇರುತ್ತವೆ ಎಂದು ಬರೆದಿದ್ದಾರೆ.

ಅಲ್ಲದೆ, ತಕ್ಷಣವೇ ಸಬ್ ಇನ್ಸ್ಪೆಕ್ಟರ್ ಅರ್ಜನ್ ಕೂಡಲೇ ಸಸ್ಪೆಂಡ್ ಆಗಬೇಕು. ಸಬ್ ಇನ್ಸ್ ಪೆಕ್ಟರ್ ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಪಿಸಿಗಳ ವಿರುದ್ಧ ಅಸ್ಪೃಶ್ಯತೆ ತಡೆ ಕಾಯ್ದೆಯೂ ಸೇರಿದಂತೆ ಸೂಕ್ತ ಐಪಿಸಿ ಸೆಕ್ಷನ್ ಗಳಡಿ ಮೊಕದ್ದಮೆ ದಾಖಲಿಸಿಕೊಂಡು ಕೂಡಲೇ ಬಂಧಿಸಬೇಕು. ಸ್ಟೇಷನ್ ಡೈರಿ ಸೇರಿದಂತೆ ಎಲ್ಲ ದಾಖಲೆಗಳನ್ನು ವಶಪಡಿಸಿಕೊಳ್ಳಬೇಕು.  ಒಂದು ವೇಳೆ ಅರ್ಜುನ್ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗದಿದ್ದಲ್ಲಿ, ನ್ಯಾಯಾಲಯದ ಖಾಸಗಿ ಮೊಕದ್ದಮೆ ಹೂಡಬೇಕು.  ಮಾನವ ಹಕ್ಕುಗಳ ಆಯೋಗ ಸ್ವಯಂಪ್ರೇರಿತವಾಗಿ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳಬೇಕು.  ಜನಪ್ರತಿನಿಧಿಗಳು, ವಿರೋಧ ಪಕ್ಷಗಳ ನಾಯಕರು ಕೂಡಲೇ ಧ್ವನಿ ಎತ್ತಬೇಕು.  ಈ ಪ್ರಕರಣವನ್ನು ಮುಚ್ಚಿಹಾಕಲು ಎಲ್ಲ ರೀತಿಯ ಪ್ರಯತ್ನಗಳು ನಡೆಯಬಹುದಾದ್ದರಿಂದ ಮೂಡಿಗೆರೆ, ಚಿಕ್ಕಮಗಳೂರು ಮಾತ್ರವಲ್ಲದೆ ಬೆಂಗಳೂರಿನ ಜನಪರ ವಕೀಲರು ಒಂದು ತಂಡವಾಗಿ ಕೆಲಸ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದು ಕೋವಿಡ್ ಸಂದರ್ಭವಾದ್ದರಿಂದ ಜನರು ಪ್ರತಿಭಟನೆಗೆ ಇಳಿಯುವುದೂ ಕಷ್ಟಸಾಧ್ಯ. ಪ್ರತಿಭಟಿಸಿದರೂ ಕೋವಿಡ್ ಹೆಸರಿನಲ್ಲಿ ಅದನ್ನು ಹತ್ತಿಕ್ಕುವ ಎಲ್ಲ ಪ್ರಯತ್ನ ನಡೆಯಲಿದೆ. ಆದರೆ ಈ ಪ್ರಕರಣ ಮುಚ್ಚಿಹೋಗದಂತೆ ಎಲ್ಲ ಪ್ರಯತ್ನಗಳನ್ನು ಮಾಡಬೇಕಿದೆ‌ ಎಂದು ದಿನೇಶ್‌ ಕುಮಾರ್‌ ಕರೆ ನೀಡಿದ್ದಾರೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...