ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ಮಾಡಿಯೇ ತೀರುತ್ತೇವೆ ಎಂದು ಪ್ರತಿಭಟನಾ ನಿರತ ರೈತರು ಸ್ಪಷ್ಟಪಡಿಸಿದ್ದಾರೆ. ಆದರೆ, ಯೋಜನೆಯಲ್ಲಿ ಒಂದಿಷ್ಟು ಮಾರ್ಪಾಡಾಗಿದೆ. ಮೆರವಣಿಗೆ ಸಾಗುವ ಮಾರ್ಗಗಳನ್ನು ಬದಲಾಯಿಸಲಾಗಿದೆ ಎಂದು ರೈತರು ತಿಳಿಸಿದ್ದಾರೆ.
ಇಷ್ಟು ದಿನ ದೆಹಲಿಯ ಔಟರ್ ರಿಂಗ್ ರೋಡ್ ನಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ನಡೆಸುವುದಾಗಿ ಪಟ್ಟು ಹಿಡಿದಿದ್ದ ರೈತರು, ಕೊನೆಗೂ ದೆಹಲಿ ಪೊಲೀಸರ ಮನವಿಗೆ ತಮ್ಮ ಪಟ್ಟು ಸಡಿಲಿಸಿ ಮಾರ್ಗಗಳನ್ನು ಬದಲಾಯಿಸಿದ್ದಾರೆ. ಇದಕ್ಕೆ ದೆಹಲಿ ಪೊಲೀಸರ ಅನುಮತಿಯೂ ಸಿಕ್ಕಿದೆ.
ಟ್ರಾಕ್ಟರ್ ಪರೇಡಿನಲ್ಲಿ ಸುಮಾರು 1 ಲಕ್ಷ ಟ್ರ್ಯಾಕ್ಟರ್ ಗಳು ಭಾಗವಹಿಸಲಿವೆ ಎಂದು ಅಂದಾಜಿಸಲಾಗಿದೆ. ಸುಮಾರು 100ಕಿಲೋ ಮೀಟರ್ ಗೂ ಅಧಿಕ ದೂರದವರೆಗೆ ಐದು ಮಾರ್ಗಗಳಲ್ಲಿ ಮೆರವಣಿಗೆ ಸಾಗಲಿದೆ. ಔಟರ್ ರಿಂಗ್ ರೋಡ್ ಗೆ ಬದಲಿಗೆ ರಾಜಧಾನಿಯ ಒಳಭಾಗಗಳಲ್ಲಿ ರೈತರು ಸಂಚರಿಸಲು ಒಪ್ಪಿದ ಬಳಿಕ, ಸಿಂಘು ಮತ್ತು ಟೆಕ್ರಿ ಗಡಿಭಾಗದಿಂದ ಬ್ಯಾರಿಕೇಡ್ ಗಳನ್ನು ತೆಗೆಯಲು ಪೊಲೀಸರು ಒಪ್ಪಿದ್ದಾರೆ. ಪೊಲೀಸರು ದೆಹಲಿಗೆ ಒಳಗೆ ಟ್ರ್ಯಾಕ್ಟರ್ ಹೋಗಲು ಅನುವು ಮಾಡಿಕೊಡಲಿದ್ದು, ದೆಹಲಿಯ ರಾಜ್ ಪಥ್ ನಲ್ಲಿ ಸರ್ಕಾರದ ವತಿಯ ಗಣರಾಜ್ಯೋತ್ಸವ ಪರೇಡ್ ಮುಗಿದ ಬಳಿಕ ಈ ರೈತರ ಪರ್ಯಾಯ ಪರೇಡ್ ನಡೆಯಲಿದೆ.
ರೈತರ ಪರೇಡ್ ಎಲ್ಲಿ ನಡೆಸುವುದು ಎಂಬ ಬಗ್ಗೆ ರೈತ ಮುಖಂಡರು ಮತ್ತು ಪೊಲೀಸರ ಮಧ್ಯೆ ಹಲವು ಬಾರಿ ಮಾತುಕತೆಗಳು ನಡೆದು ಇಲ್ಲಿಯವರೆಗೆ ಯಾವುದೇ ಒಮ್ಮತದ ತೀರ್ಮಾನಕ್ಕೆ ಬಂದಿರಲಿಲ್ಲ. ಔಟರ್ ರಿಂಗ್ ರೋಡ್ ನಲ್ಲಿ ನಡೆಸುತ್ತೇವೆ ಎಂದು ರೈತರು ಹಠಕ್ಕೆ ಹಿಡಿದಿದ್ದರು. ಆದರೆ, ಅದಕ್ಕೆ ದೆಹಲಿ ಪೊಲೀಸರು ಒಪ್ಪಿರಲಿಲ್ಲ. ಇದರಿಂದ ಸರ್ಕಾರದ ಅಧಿಕೃತ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಹಿನ್ನಡೆಯಾಗಬಹುದು ಎಂದು ಪೊಲೀಸರು ವಾದ ಮಾಡಿದ್ದರು. ಕೊನೆಗೆ ರೈತ ಮುಖಂಡರೇ ಶಾಂತಿಯುತವಾಗಿ ಟ್ರ್ಯಾಕ್ಟರ್ ಮೆರವಣಿಗೆ ನಡೆಸುತ್ತೇವೆ, ಮಾರ್ಗ ಬದಲಾಯಿಸುತ್ತೇವೆ ಎಂದ ಬಳಿಕ ಪೊಲೀಸರು ಅನುಮತಿ ಕೊಟ್ಟಿದ್ದಾರೆ.
ರಾಜ್ ಪಥ್ ನಲ್ಲಿ ಸಾಂಪ್ರದಾಯಿಕ ಪರೇಡ್ ಬಳಿಕ ಟ್ರ್ಯಾಕ್ಟರ್ ಪರೇಡ್ ಪ್ರಾರಂಭವಾಗಲಿದ್ದು, ಕೆಂಪು ಕೋಟೆಯಲ್ಲಿ ಕೊನೆಗೊಳ್ಳುತ್ತದೆ ಎಂದು ರೈತ ಸಂಘಟನೆಗಳು ತಿಳಿಸಿವೆ.