ದೇಶದ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಕಾಂಗ್ರೆಸ್ ಭಾನುವಾರ ಅವರಿಗೆ ಶೃದ್ಧಾಂಜಲಿ ಸಲ್ಲಿಸಿ ಗೌರವ ಅರ್ಪಿಸಿದೆ.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಜಾಪ್ರಭುತ್ವದ ಎಲ್ಲಾ ಸ್ತಂಭಗಳು “ದುರ್ಬಲಗೊಳ್ಳುತ್ತಿರುವ” ಸಮಯದಲ್ಲಿ, ವಲ್ಲಭಭಾಯಿ ಪಟೇಲ್ ಅವರ ಕೊಡುಗೆಯನ್ನು ಸ್ಮರಿಸುವುದು ಬಹಳ ಮುಖ್ಯವಾಗಿದೆ. ಈ ಸ್ತಂಭಗಳನ್ನು ನಿರ್ಮಿಸಿದ ಕಾಂಗ್ರೆಸ್ ನಾಯಕರಲ್ಲಿ ವಲ್ಲಭಭಾಯಿ ಪಟೇಲ್ ಅವರು ಪ್ರಮುಖ ಧ್ವನಿಯಾಗಿದ್ದರು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಪಟೇಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ರೈತರಿಗೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದ ಅವರು, ಅವರ ಹೋರಾಟವು ‘ರೈತರ ಮೇಲಿನ ದಬ್ಬಾಳಿಕೆಯ ವಿರುದ್ಧ ನ್ಯಾಯಕ್ಕಾಗಿ ನಡೆಯುವ ಹೋರಾಟದಲ್ಲಿ ಬಂಡೆಯಂತೆ ನಿಲ್ಲಲು ನಮಗೆ ಸ್ಫೂರ್ತಿ ನೀಡುತ್ತದೆ’ ಎಂದು ಹೇಳಿದ್ದಾರೆ.
‘ಉಕ್ಕಿನ ಮನುಷ್ಯ’ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಬಾರ್ಡೋಲಿ ಸತ್ಯಾಗ್ರಹದಲ್ಲಿ ರೈತರ ಹಕ್ಕುಗಳು ಮತ್ತು ಸ್ವಾಭಿಮಾನಕ್ಕಾಗಿ ಧ್ವನಿ ಎತ್ತಿದ್ದರು. ಅವರ ಹೋರಾಟವು ರೈತರ ನ್ಯಾಯಕ್ಕಾಗಿ ಮತ್ತು ಅವರ ಹಕ್ಕುಗಳ ಹೋರಾಟದಲ್ಲಿ ಬಂಡೆಯಂತೆ ನಿಲ್ಲಲು ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ಕೂಡಾ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿ, “ಭಾರತವನ್ನು ಒಗ್ಗೂಡಿಸುವ ಈ ಹೋರಾಟದಲ್ಲಿ; ದ್ವೇಷದ ಮೇಲೆ ಪ್ರೀತಿಗೆ ಜಯವನ್ನು ಖಚಿತಪಡಿಸುವ ಈ ಹೋರಾಟದಲ್ಲಿ; ನಮ್ಮ ರೈತರು, ನಮ್ಮ ಜನರು, ನಮ್ಮ ರಾಷ್ಟ್ರವನ್ನು ರಕ್ಷಿಸುವ ಈ ಹೋರಾಟದಲ್ಲಿ ನಾವು ಭಾರತ ರತ್ನ ಸರ್ದಾರ್ ವಲ್ಲಭಭಾಯಿ ಅವರನ್ನು ಇಂದು ಮತ್ತು ಎಂದೆಂದು ಸ್ಮರಿಸುತ್ತಲೇ ಇರುತ್ತೇವೆಂದು ಹೇಳಿದೆ.
ಪಟೇಲ್ ಅವರ ಜನ್ಮದಿನವನ್ನು “ರಾಷ್ಟ್ರೀಯ ಏಕತಾ ದಿವಸ್” ಅಥವಾ “ರಾಷ್ಟ್ರೀಯ ಏಕತಾ ದಿನ” ಎಂದು ಕೇಂದ್ರ ಸರ್ಕಾರವು ಆಚರಿಸುತ್ತಿದೆ.