ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಗೆ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆಯುವ ಮೂಲಕ ದೇಶದಲ್ಲಿ ಮಹಿಳಾ ಪ್ರಾತಿನಿಧ್ಯ ತರುವುದಕ್ಕೆ ಮುನ್ನಡಿ ಬರೆದಿದೆ. 1997ರಿಂದ ಶುರುವಾಗಿದ್ದ ಮಹಿಳಾ ಮೀಸಲಾತಿ ಕೂಗಿಗೆ ಕೊನೆಗೂ ನರೇಂದ್ರ ಮೋದಿ ಸರ್ಕಾರ ಮುದ್ರೆ ಒತ್ತಿದೆ. ಕನ್ನಡಿಗ ಹೆಚ್.ಡಿ ದೇವೇಗೌಡರ ಕನಸು ಮಹಿಳೆಯರಿಗೆ ವಿಧಾನಸಭೆ ಹಾಗು ಲೋಕಸಭಾ ಚುನಾವಣೆಯಲ್ಲಿ ಮೀಸಲಾತಿ ನೀಡಬೇಕು ಎನ್ನುವುದು. ಆದರೆ ಅಂದು ರಾಜಕೀಯ ಅಸ್ಥಿರತೆಯಲ್ಲಿ ಮಸೂದೆ ಜಾರಿಯಾಗಿರಲಿಲ್ಲ. ಆ ಬಳಿಕ ಅಧಿಕಾರಕ್ಕೆ ಬಂದಿದ್ದ ರಾಜಕೀಯ ಪಕ್ಷಗಳು ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರುವ ಬಗ್ಗೆ ಮಾತನಾಡಿದವು. ಆದರೆ ಲೋಕಸಭೆಯಲ್ಲಿ ಚರ್ಚೆಗೇ ಬರಲಿಲ್ಲ. ಅಂತಿಮವಾಗಿ ಮೋದಿ ಸರ್ಕಾರ ಮಹಿಳಾ ಮೀಸಲಾತಿ ಜಾರಿ ಮಾಡಿದೆ.
ಮಹಿಳಾ ಮೀಸಲಾತಿಗೆ ಅಂಕಿತ ಹಾಕಿದ್ರು ಮುರ್ಮು..!
ಮಹಿಳಾ ಮೀಸಲಾತಿ ಮಸೂದೆ ಲೋಕಸಭೆ ಹಾಗು ರಾಜ್ಯಸಭೆಯಲ್ಲಿ ಒಪ್ಪಿಗೆ ಪಡೆದುಕೊಂಡು ವಾರದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ. ಸೆಪ್ಟೆಂಬರ್ 28ರಂದು ಮುಹಿಳಾ ಮೀಸಲಾತಿ ಮಸೂದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ ಎಂದು ಕಾನೂನು ಸಚಿವರು ಮಾಹಿತಿ ನೀಡಿದ್ದಾರೆ. ಇನ್ಮುಂದೆ ದೇಶಾದ್ಯಂಯ ಲೋಕಸಭೆ ಹಾಗು ವಿಧಾನಸಭಾ ಚುನಾವಣೆಯಲ್ಲೂ ಶೇಕಡ 33ರಷ್ಟು ಮೀಸಲಾತಿ ಸಿಗಲಿದ್ದು, ಇನ್ಮುಂದೆ ಮಹಿಳೆಯರು ಮಹಿಳಾ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಅನುಕೂಲ ಆಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರ ಕಣ್ಣೊರೆಸುವ ತಂತ್ರ ಮಾಡಿದೆ ಎನ್ನುವ ಆರೋಪವೂ ಕೇಳಿಬರ್ತಿದೆ.
ಮಸೂದೆ ಅಂಗೀಕಾರ ಆದ್ಮೇಲೂ ಕೊಂಕು ಮಾತು ಏನಕ್ಕೆ..?
ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33 ರಷ್ಟು ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ಮಸೂದೆಗೆ ಉಭಯ ಸದನಗಳಲ್ಲಿ ಒಪ್ಪಿಗೆ ಸಿಕ್ಕ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಸಹಿ ಹಾಕಿದ್ದಾರೆ. ಸೆಪ್ಟೆಂಬರ್ 20ರಂದು ಲೋಕಸಭೆಯ ವಿಶೇಷ ಅಧಿವೇಶನದಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿತ್ತು. 454 ಸದಸ್ಯರು ಶಾಸನದ ಪರವಾಗಿ ಮತ ಚಲಾಯಿಸುವ ಮೂಲಕ ಅಭೂತಪೂರ್ವ ಬೆಂಬಲ ನೀಡಿದ್ದರು. ಕೇವಲ ಇಬ್ಬರು ಸದಸ್ಯರು ಮಾತ್ರ ಮಹಿಳಾ ಮೀಸಲಾತಿ ವಿರುದ್ಧ ಮತ ಚಲಾಯಿಸಿದ್ರು. ಸೆಪ್ಟೆಂಬರ್ 21ರಂದು ರಾಜ್ಯಸಭೆಯಲ್ಲೂ ಅಂಗೀಕಾರ ಆಗಿತ್ತು. ಇದೀಗ ಒಪ್ಪಿಗೆಯೂ ಸಿಕ್ಕಿದೆ. ಆದರೂ ಕಾಂಗ್ರೆಸ್ ಮಾತ್ರ ಬಿಜೆಪಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದೆ.
ಲೋಕಸಭಾ ಚುನಾವಣೆಗಾಗಿ ಗಿಮಿಕ್ ಮಾಡ್ತಿದ್ಯಾ ಮೋದಿ ಸರ್ಕಾರ..?
ಲೋಕಸಭಾ ಚುನಾವಣೆಗೆ ಮತ ಕ್ರೂಢೀಕರಣ ಕೆಲಸ ಶುರುವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಮಹಿಳಾ ಮೀಸಲಾತಿ ಲಾಭ ಪಡೆದುಕೊಂಡು ಮಹಿಳಾ ಮತಬ್ಯಾಂಕ್ಗೆ ಲಗ್ಗೆ ಹಾಕುವ ಹುನ್ನಾರ ಮಾಡುತ್ತಿವೆ. ಆದರೆ ಬಿಜೆಪಿ ಪಕ್ಷ ಮಹಿಳಾ ಮೀಸಲಾತಿಯನ್ನು ಕೊಟ್ಟಂತೆ ಮಾಡಿದೆ. ಆದರೆ ಮೀಸಲಾತಿಯನ್ನು ಕೊಟ್ಟಿಲ್ಲ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಜನಸಂಖ್ಯಾಗಣತಿ ನಡೆದ ಬಳಿಕ ಅಷ್ಟೇ ಮಹಿಳಾ ಮೀಸಲಾತಿ ಜಾರಿ ಆಗ್ಬೇಕು ಅನ್ನೋ ನಿಯಮ ಸೇರ್ಪಡೆ ಮಾಡುವ ಮೂಲಕ ಮೋದಿ ಸರ್ಕಾರ ಮಹಿಳೆಯರಿಗೆ ಮೋಸಲಾತಿ ಕೊಟ್ಟಂತೆ ಮಾಡಿ ಕಿತ್ತುಕೊಂಡಿದೆ. ಮಹಿಳೆಯರಿಗೆ ಮೀಸಲಾತಿ ಕೊಡಬೇಕು ಅನ್ನೋ ಇಚ್ಛಾಶಕ್ತಿ ಇದ್ದಿದ್ದರೆ ಜನಗಣತಿ ನಿಯಮ ಸೇರ್ಪಡೆ ಮಾಡಬಾರದಿತ್ತು ಅನ್ನೋದು ವಾದ. ಅಂದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೀಸಲಾತಿ ಜಾರಿ ಆಗಲ್ಲ ಅನ್ನೋದು ಮಾತ್ರ ಸತ್ಯ.
–ಕೃಷ್ಣಮಣಿ