ಬೆಂಗಳೂರಿನಲ್ಲಿ ನಡೆದ ಬೃಹತ್ ಮತದಾರರ ದತ್ತಾಂಶ ಸಂಗ್ರಹ (ಚಿಲುಮೆ ಹಗರಣ)ದ ಕುರಿತಂತೆ ‘ಪ್ರತಿಧ್ವನಿ’ ಮತ್ತು The news minute ಮಾಡಿದ ಜಂಟಿ ತನಿಖಾ ವರದಿಗೆ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ 2022 ಪ್ರಶಸ್ತಿಗಳ ತನಿಖಾ ಪತ್ರಿಕೋದ್ಯಮ ವಿಭಾಗದಲ್ಲಿ ವಿಶೇಷ ಮನ್ನಣೆಯು ಲಭಿಸಿದೆ.
ಈ ವಿಭಾಗದಲ್ಲಿ ಎರಡು ವರದಿಗಳಿಗೆ ವಿಶೇಷ ಮನ್ನಣೆ ಲಭಿಸಿದ್ದು, ಕ್ವಿಂಟ್.ಕಾಂ ಮಾಡಿರುವ ಮತ್ತೊಂದು ವರದಿಗೆ ಈ ಮನ್ನಣೆ ಲಭಿಸಿದೆ.
ತಮ್ಮ ವೃತ್ತಿಯಲ್ಲಿ ಅತ್ಯುತ್ತಮ ಬದ್ಧತೆ ಮತ್ತು ಸಮರ್ಪಣೆಯನ್ನು ಪ್ರದರ್ಶಿಸಿದ ಅಸಾಧಾರಣ ಪತ್ರಕರ್ತರನ್ನು ಗುರುತಿಸಿ ಗೌರವಿಸುವ ಗುರಿಯಿಂದ ಈ ಪ್ರಶಸ್ತಿಗಳನ್ನು ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ (ACJ) ಕೊಡುತ್ತವೆ ಎಂದು ಸಂಸ್ಥೆಯು ಹೇಳಿದೆ.
ಮತದಾರರ ದತ್ತಾಂಶ ಸಂಗ್ರಹದ ಹಗರಣ ಕುರಿತಂತೆ ದಿ ನ್ಯೂಸ್ ಮಿನಿಟ್ ಹಾಗು ಪ್ರತಿಧ್ವನಿಯು ಜಂಟಿಯಾಗಿ ಸರಣಿ ತನಿಖಾ ವರದಿ ಪ್ರಕಟಿಸಿತ್ತು. ಈ ವರದಿಗಳು ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದನ್ನು ಮಾಡಿದ್ದು, ಆಡಳಿತ ಪಕ್ಷ ಬಿಜೆಪಿ ತೀವ್ರ ಮುಜುಗರ ಅನುಭವಿಸಿತ್ತು. ಅಕ್ರಮದಲ್ಲಿ ಭಾಗಿಯಾದ ಹಲವು ಅಧಿಕಾರಿಗಳು ತನಿಖೆಗಳನ್ನು ಎದುರಿಸುತ್ತಿದ್ದಾರೆ.