ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಬೇಕು ಎಂಬ ಆಸೆ ಹಲವು ವರ್ಷಗಳಿಂದ ಇತ್ತು. ಆದರೆ, ವಿವಿಧ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಈ ಬಾರಿ ಅವಕಾಶ ಸಿಕ್ಕಿದ್ದು, ದಸರಾ ಸಂಭ್ರಮದ ಭಾಗವಾಗುತ್ತಿರುವುದು ಅಪಾರ ಸಂತೋಷ ಮತ್ತು ಉತ್ಸಾಹ ತಂದಿದೆ ಎಂದು ಯುವ ದಸರಾ ಉದ್ಘಾಟಕರೂ ಆದ ಖ್ಯಾತ ನೃತ್ಯ ನಿರ್ದೇಶಕ ಹಾಗೂ ನಟ ಪ್ರಭುದೇವ್ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿವರ್ಷ ದೂರದರ್ಶನದಲ್ಲಿ ಜಂಬೂಸವಾರಿಯನ್ನು ವೀಕ್ಷಿಸುತ್ತಿದ್ದೆ. ಈ ಬಾರಿ ಕುಟುಂಬದವರೊಂದಿಗೆ ದಸರಾ ಮಹೋತ್ಸವದಲ್ಲಿ ನೇರವಾಗಿ ಪಾಲ್ಗೊಳ್ಳುತ್ತಿರುವುದು ವಿಶೇಷ ಸಂತಸ ನೀಡಿದೆ ಎಂದರು.
ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕುಟುಂಬದವರು, ಪರಿಚಿತರು ಮತ್ತು ಆತ್ಮೀಯರು ಆಸಕ್ತಿ ತೋರಿದ್ದಾರೆ. ಎಲ್ಲರಿಗೂ ದಸರಾ ವೈಭವವನ್ನು ಹತ್ತಿರದಿಂದ ವೀಕ್ಷಿಸುವ ಅವಕಾಶ ಕಲ್ಪಿಸಬೇಕೆಂಬ ಉದ್ದೇಶದಿಂದ 75 ಪಾಸ್‌ಗಳನ್ನು ಪಡೆದುಕೊಂಡಿರುವುದಾಗಿ ಪ್ರಭುದೇವ್ ತಿಳಿಸಿದರು.
ತಂದೆಗೆ ಅನಾರೋಗ್ಯವಿರುವ ಕಾರಣ ಈ ಬಾರಿ ಅವರು ದಸರಾ ಕಾರ್ಯಕ್ರಮಕ್ಕೆ ಆಗಮಿಸುತ್ತಿಲ್ಲ. ತಾಯಿ ತಮ್ಮೊಂದಿಗೆ ಬರಲಿದ್ದಾರೆ. ಕುಟುಂಬದವರೊಂದಿಗೆ ದಸರಾ ಸಂಭ್ರಮವನ್ನು ಕಣ್ತುಂಬಿಕೊಳ್ಳುವುದು ವಿಶೇಷ ಅನುಭವವಾಗಲಿದೆ ಎಂದು ಹೇಳಿದರು.

ಯುವ ದಸರಾದಲ್ಲಿ ನಡೆಯುವ ವೈವಿಧ್ಯಮಯ ನೃತ್ಯ ಪ್ರದರ್ಶನಗಳ ಕುರಿತು ಮಾತನಾಡಿದ ಪ್ರಭುದೇವ್, ಇಲ್ಲಿ ಇಷ್ಟೊಂದು ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತವೆ ಎಂದು ನಿರೀಕ್ಷಿಸಿರಲಿಲ್ಲ ಎಂದರು.ನೃತ್ಯ ತಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಬೇಕಾದರೆ ಸೂಕ್ತ ಸಿದ್ಧತೆ ಮತ್ತು ನಿರಂತರ ಅಭ್ಯಾಸ ಅಗತ್ಯ. ಕನಿಷ್ಠ ಒಂದು ತಿಂಗಳಾದರೂ ಅಭ್ಯಾಸ ಮಾಡಬೇಕಾಗುತ್ತದೆ. ಈ ಬಾರಿ ಅದಕ್ಕೆ ಅಗತ್ಯವಾದ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಮುಂದಿನ ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಅವಕಾಶ ದೊರೆತರೆ ಖಂಡಿತವಾಗಿಯೂ ನೃತ್ಯ ಪ್ರದರ್ಶನ ನೀಡಲು ಪ್ರಯತ್ನಿಸುವುದಾಗಿ ತಿಳಿಸಿದರು.

ಅಕ್ಟೋಬರ್ 21ರಂದು ನಡೆಯಲಿರುವ ಜಂಬೂಸವಾರಿಯನ್ನೂ ವೀಕ್ಷಿಸುವ ಆಸೆಯಿದೆ ಎಂದು ಪ್ರಭುದೇವ್ ಹೇಳಿದರು. ಅಲಂಕೃತ ಆನೆಗಳು, ಸಾಂಸ್ಕೃತಿಕ ಕಲಾತಂಡಗಳು ಮತ್ತು ರಾಜಮಾರ್ಗದಲ್ಲಿ ಸಾಗುವ ಭವ್ಯ ಮೆರವಣಿಗೆ ಮೈಸೂರು ದಸರಾದ ಪ್ರಮುಖ ಆಕರ್ಷಣೆಗಳಾಗಿವೆ. ಈ ವೈಭವವನ್ನು ನೇರವಾಗಿ ನೋಡುವುದು ವಿಶಿಷ್ಟ ಅನುಭವ ನೀಡಲಿದೆ. ಹೀಗಾಗಿ ಜಂಬೂಸವಾರಿ ವೀಕ್ಷಿಸಲು ಪಾಸ್‌ಗಳನ್ನು ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಆಡಳಿತದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಭುದೇವ್, ಅವರು ಆಡಳಿತವನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಸೋಮಶೇಖರ್ ಉಪಸ್ಥಿತರಿದ್ದರು.







