ಬೆಂಗಳೂರು: ರಾಜ್ಯಾದ್ಯಂತ ಆಯುಧ ಪೂಜೆ ಮತ್ತು ದಸರಾ ಹಬ್ಬದ ಸಂಭ್ರಮ ಮನೆಮಾಡಿದೆ. ಹಬ್ಬದ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ತರಕಾರಿ ಹಾಗೂ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿದೆ. ಅದರಲ್ಲೂ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಿದ್ದು, ವ್ಯಾಪಾರ ವಹಿವಾಟು ಗರಿಗೆದರಿದೆ. ಆದರೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೆ ಬಿಸಿ ತಟ್ಟಿದೆ.
ಹಬ್ಬದ ಪೂಜೆಗೆ ಅಗತ್ಯವಿರುವ ಹೂವು, ಹಣ್ಣುಗಳ ದರ ಹೆಚ್ಚಾಗಿರುವುದರಿಂದ ಗ್ರಾಹಕರು ಹೆಚ್ಚಿನ ಹಣ ಖರ್ಚು ಮಾಡುವಂತಾಗಿದೆ. ವ್ಯಾಪಾರಿಗಳಿಗೆ ಹಬ್ಬದ ವ್ಯಾಪಾರದಿಂದ ಲಾಭವಾಗುತ್ತಿದ್ದರೆ, ಗ್ರಾಹಕರು ಬೆಲೆ ಏರಿಕೆಯ ನಡುವೆಯೇ ಖರೀದಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಹೂವು, ಹಾರಗಳ ಬೆಲೆ ಎಷ್ಟಿದೆ?
ಕೆ.ಆರ್. ಮಾರುಕಟ್ಟೆಯಲ್ಲಿ ಸೇವಂತಿಗೆ ಹೂವು ಕೆಜಿಗೆ ₹400, ಗುಲಾಬಿ ಕೆಜಿಗೆ ₹300, ಮಲ್ಲಿಗೆ ಕೆಜಿಗೆ ₹1,600 ಹಾಗೂ ಚೆಂಡು ಹೂವು ಕೆಜಿಗೆ ₹120ರಂತೆ ಮಾರಾಟವಾಗುತ್ತಿದೆ. ಚಿಲ್ಲರೆ ಖರೀದಿಯಲ್ಲಿ ಸೇವಂತಿಗೆ ಒಂದು ಮಾರು ₹15, ಮಲ್ಲಿಗೆ ಒಂದು ಮಾರು ₹120 ಹಾಗೂ ಕನಕಾಂಬರ ಒಂದು ಮಾರು ₹120 ಇದೆ.ಇನ್ನು ಸಣ್ಣ ಮಿನಿ ರೋಸ್ ಹಾರಕ್ಕೆ ₹550, ದೊಡ್ಡ ರೋಸ್ ಹಾರಕ್ಕೆ ₹800 ಹಾಗೂ ಸುಗಂಧರಾಜ ಹಾರಕ್ಕೆ ₹300 ದರವಿದೆ. ದೊಡ್ಡ ತೋಮಾಲೆಯ ಬೆಲೆ ₹2,500 ತಲುಪಿದೆ. ಪೂಜೆಗೆ ಬಳಸುವ ಬಾಳೆ ಎಲೆ ದಿಂಡು ಒಂದು ಜೋಡಿಗೆ ₹50, ಮಾವಿನ ಎಲೆ ಒಂದು ಕಟ್ಟಿಗೆ ₹20 ಹಾಗೂ ಬೂದುಕುಂಬಳಕಾಯಿ ಕೆಜಿಗೆ ₹20ರಂತೆ ಮಾರಾಟವಾಗುತ್ತಿದೆ.
ಹಬ್ಬದ ಹಿನ್ನೆಲೆಯಲ್ಲಿ ಹಣ್ಣುಗಳ ಬೆಲೆಯಲ್ಲಿಯೂ ಏರಿಕೆ ಕಂಡುಬಂದಿದೆ. ಸೇಬು ಕೆಜಿಗೆ ₹140ರಿಂದ ₹200, ಸಪೋಟ ಕೆಜಿಗೆ ₹100 ಹಾಗೂ ದಾಳಿಂಬೆ ಕೆಜಿಗೆ ₹200ರಿಂದ ₹250ರಂತೆ ಮಾರಾಟವಾಗುತ್ತಿದೆ. ಏಲಕ್ಕಿ ಬಾಳೆಹಣ್ಣಿನ ದರ ₹80 ಹಾಗೂ ದೊಡ್ಡ ಬಾಳೆಹಣ್ಣಿನ ದರ ₹40 ಎಂದು ತಿಳಿಸಲಾಗಿದೆ. ಬಾಳೆಹಣ್ಣಿನ ದರವು ಮಾರಾಟದ ಪ್ರಮಾಣ ಮತ್ತು ಗುಣಮಟ್ಟಕ್ಕೆ ಅನುಗುಣವಾಗಿ ಬದಲಾಗಬಹುದು.

ಕಳೆದ ಎರಡು ದಿನಗಳಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸುರಿದ ಮಳೆಯಿಂದ ಹೂವು ಕಟಾವು ಮಾಡಲು ರೈತರಿಗೆ ತೊಂದರೆಯಾಗಿದೆ. ಮಳೆಯಿಂದ ಹೂವಿನ ಬೆಳೆಗೂ ಹಾನಿಯಾಗಿದ್ದು, ಮಾರುಕಟ್ಟೆಗೆ ಹೂವುಗಳ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದು ಹೂವುಗಳ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
ಆಯುಧ ಪೂಜೆ ಮತ್ತು ದಸರಾ ಹಬ್ಬದ ಖರೀದಿ ಜೋರಾಗಿದ್ದರೂ, ಹೂವು ಮತ್ತು ಹಣ್ಣುಗಳ ಬೆಲೆ ಏರಿಕೆ ಸಾಮಾನ್ಯ ಜನರ ಖರ್ಚನ್ನು ಹೆಚ್ಚಿಸಿದೆ. ಮಾರುಕಟ್ಟೆಗೆ ತೆರಳುವ ಗ್ರಾಹಕರು ಬೆಲೆ ಪರಿಶೀಲಿಸಿ, ಅಗತ್ಯಕ್ಕೆ ತಕ್ಕಂತೆ ಖರೀದಿ ಮಾಡುವಂತಾಗಿದೆ.






