ಮೋದಿ ಸರ್ಕಾರದ ನಿಲುವು ಮತ್ತು ದುರಾಡಳಿತದಿಂದ ದುಡಿಯುವ ಸಾಮರ್ಥ್ಯ ಇರುವ 90 ಕೋಟಿ ಭಾರತೀಯರನ್ನು ಹಲವು ಬಿಕ್ಕಟ್ಟಿಕೆ ಸಿಲುಕಿದ್ದಾರೆ ಎಂದು ಕೇಂದ್ರ ಸರ್ಕಾರವನ್ನು ವಿರೋಧ ಪಕ್ಷಗಳು ಆರೋಪಿಸಿ ಕಿಡಿಕಾರುತ್ತಲೇ ಬಂದಿದೆ.
ಹೌದು, ಪಿಎಂ ಮೋದಿಯವರ 8 ವರ್ಷಗಳ ದುರಾಡಳಿತದಿಂದ ದೇಶದ ಪ್ರಗತಿ ಕುಂಟಿತವಾಗಿದೆ. ಒಂದು ಕಾಲದಲ್ಲಿ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಹಾಳುಮಾಡಿದ್ದಾರೆ ಹಾಗಾಗಿ ಈ ದೇಶ ವಿದ್ಯತ್ ಬಿಕ್ಕಟ್ಟು, ಉದ್ಯೋಗ ಬಿಕ್ಕಟ್ಟು, ಉದ್ಯೋಗ ಬಿಕ್ಕಟ್ಟು, ಕೃಷಿ & ರೈತ ಬಿಕ್ಕಟ್ಟುಗಳು ಎದುರಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಆಗಾದರೆ ವಿರೋಧ ಪಕ್ಷಗಳು ಮತ್ತು ರಾಹುಲ್ ಗಾಂಧಿ ಹೇಳುವಂತೆ ದೇಶದಲ್ಲಿ ಅಷ್ಟರ ಮಟ್ಟಕ್ಕೆ ಬಿಕ್ಕಟ್ಟಿದೆಯೇ? ಹೌದು ಅನ್ನುತ್ತಿದೆ ಹಲವು ಸಮೀಕ್ಷೆಗಳು.
ವಿದ್ಯತ್ ಬಿಕ್ಕಟ್ಟು

ದೇಶದ ಬಹುತೇಕ ರಾಜ್ಯಗಳಲ್ಲಿ ಅತೀಯಾದ ತಾಪಮಾನ ವರದಿಯಾಗುತ್ತಿದೆ. ಬಿಸಿಲ ಬೇಗೆಯಿಂದ ಪಾರಾಗಲು ಜನರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದರ ನಡುವೆ ದೇಶದಲ್ಲಿ ವಿದ್ಯುತ್ ಕಡಿತ ಸಮಸ್ಯೆ ಅತೀಯಾಗುತ್ತಿದೆ. ರಾಯಿಟರ್ಸ್ನ ವರದಿಯ ಪ್ರಕಾರ, ಏಪ್ರಿಲ್ನ ಮೊದಲ 27 ದಿನಗಳಲ್ಲಿ 1.88 ಶತಕೋಟಿ ಯೂನಿಟ್ಗಳು ಅಥವಾ 1.6% ರಷ್ಟು ವಿದ್ಯುತ್ ಪೂರೈಕೆಯು ಬೇಡಿಕೆಗಿಂತ ಕಡಿಮೆಯಾಗಿದೆ.
ಭಾರತೀಯ ರೈಲ್ವೇ ಕೂಡ ತೀವ್ರ ವಿದ್ಯುತ್ ಸಮಸ್ಯೆ ಎದುರಿಸುತ್ತಿದೆ. ಈ ಸಮಸ್ಯೆ ನಿಯಂತ್ರಣಕ್ಕೆ ತರಲು ಭಾರತೀಯ ರೈಲ್ವೇ ದಿಢೀರ್ 650ಕ್ಕೂ ಹೆಚ್ಚು ಪ್ಯಾಸೆಂಜರ್ ರೈಲು ಸಂಚಾರ ರದ್ದು ಮಾಡಿದೆ.. ಏತನ್ಮಧ್ಯೆ, ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಏಪ್ರಿಲ್ನಲ್ಲಿ ಕಲ್ಲಿದ್ದಲು ಉತ್ಪಾದನೆಯನ್ನು 27.2% ರಷ್ಟು ಹೆಚ್ಚಿಸಿದೆ. ಆದರೆ ವಿದ್ಯುತ್ ಕೊರತೆಯು ಆರು ದಶಕಗಳಿಗಿಂತಲೂ ಹೆಚ್ಚು ಕೆಟ್ಟದಾಗಿದೆ ಮತ್ತು ಕೆಲವು ರಾಜ್ಯಗಳು ಎಂಟು ಗಂಟೆಗಳವರೆಗೆ ವಿದ್ಯುತ್ ಕಡಿತವನ್ನು ಎದುರಿಸುತ್ತಿವೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಕಲ್ಲಿದ್ದಲು ಸರಬರಾಜಿನಲ್ಲಿ ಆಗುತ್ತಿರುವ ವ್ಯತ್ಯಯದಿಂದಲೂ ವಿದ್ಯುತ್ ಉತ್ಪಾದನೆಗೆ ಸಮಸ್ಯೆಯಾಗಿದೆ. ದೇಶದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಶೇ.70ರಷ್ಟಕ್ಕೆ ಕಲ್ಲಿದ್ದಲು ಬೇಕು. ಕಲ್ಲಿದ್ದಲಿನ ಪೂರೈಕೆಯಿಂದ ಸಮಸ್ಯೆಯಾಗಿದೆ ಎಂದು ರಾಜ್ಯಗಳು ಹೇಳುತ್ತಿವೆಯಾದರೂ, ಬೇಡಿಕೆಗೆ ತಕ್ಕಷ್ಟುಕಲ್ಲಿದ್ದಲು ಅಗತ್ಯವಿದೆ ಎಂದು ಸರ್ಕಾರ ಹೇಳುತ್ತಿದೆ.
ದೆಹಲಿ, ಉತ್ತರಾಖಂಡ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಬಿಹಾರ, ಪಂಜಾಬ್, ರಾಜಸ್ಥಾನ, ಕೇರಳ, ಜಾರ್ಖಂಡ್, ಹರಿಯಾಣ ರಾಜ್ಯಗಳು ಪವರ್ ಕಟ್ ಸಮಸ್ಯೆ ಎದುರಿಸುತ್ತಿದೆ.
ಉದ್ಯೋಗ ಬಿಕ್ಕಟ್ಟು

ಭಾರತದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರ ಸ್ವರೂಪ ತಾಳಿದೆ ಎಂದು ಇತ್ತೀಚೆಗೆ ಬಿಡುಗಡೆಯಾದ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ವರದಿ ತಿಳಿಸಿದೆ. ನಿರುದ್ಯೋಗ ಹೆಚ್ಚಳಕ್ಕೆ ಕೊರೊನಾ ಬಿಕ್ಕಟ್ಟು, ವಿತ್ತೀಯ ಕುಸಿತ ಸೇರಿ ನಾನಾ ಕಾರಣಗಳಿವೆ ಎಂದು ವರದಿ ತಿಳಿಸಿದೆ.
ದುಡಿಯುವ ಸಾಮರ್ಥ್ಯ ಇರುವ 90 ಕೋಟಿ ಭಾರತೀಯರಲ್ಲಿ ಅರ್ಧದಷ್ಟು ಮಂದಿ ಉದ್ಯೋಗ ಹುಡುಕುವುದನ್ನು ನಿಲ್ಲಿಸಿದ್ದಾರೆ ಎಂದು ಮುಂಬೈನ ಖಾಸಗಿ ಸಂಶೋಧನಾ ಸಂಸ್ಥೆಯಾದ ‘ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಪ್ರೈವೇಟ್’ ತನ್ನ ಹೊಸ ವರದಿಯಲ್ಲಿ ತಿಳಿಸಿದೆ.
ಆರು ತಿಂಗಳಲ್ಲಿ ನಿರುದ್ಯೋಗ ದರ ಹೆಚ್ಚಳವಾಗಿದ್ದು, ಅಕ್ಟೋಬರ್ (2021) : 7.74%, ನವೆಂಬರ್ : 6.97%, ಡಿಸೆಂಬರ್ : 7.91%, ಜನವರಿ (2022) : 6.57%, ಫೆಬ್ರವರಿ : 8.1% ಮತ್ತು ಮಾರ್ಚ್ ನಲ್ಲಿ : 7.6% ರಷ್ಟು ಕಡಿಮೆ ಯಾಗಿದೆ ಎಂದು ತಿಳಿಸಿದೆ.
ಭಾರತವು ಕಡಿಮೆ ಮಹಿಳಾ ಭಾಗವಹಿಸುವಿಕೆಯ ಪ್ರಮಾಣವನ್ನು ಹೊಂದಿರುವ ದೇಶವಾಗಿದೆ. ಮಹಿಳೆಯರ ಉದ್ಯೋಗದ ಪ್ರಮಾಣವು 2004-05 ರಲ್ಲಿ 28% ರಷ್ಟಿದ್ದರೆ 2011-12 ರಲ್ಲಿ 21.7% ಕ್ಕೆ ಇಳಿದಿತ್ತು. ಪ್ರಸ್ತುತ ಈ ಅನುಪಾತ ಕೇವಲ 19%. ಇದು ನೆರೆಯ ಬಾಂಗ್ಲಾದೇಶ ಮತ್ತು ಶ್ರೀಲಂಕಾಕ್ಕಿಂತಲೂ ಕಡಿಮೆ. ಈ ಕುಸಿವಿಕೆಗೆ ಗುಣಮಟ್ಟದ ಕೆಲಸ, ವೇತನದ ಅಂತರ, ಭದ್ರತೆ ಹೀಗೆ ನಾನಾ ಕಾರಣಗಳಿವೆ ಎಂದು ಹೇಳಲಾಗಿದೆ.
ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಭರವಸೆಯೊಂದಿಗೆ ಆಡಳಿತಕ್ಕೆ ಬಂದ ಮೋದಿಯವರು ನೋಟ್ಬ್ಯಾನ್, ಜಿಎಸ್ಟಿ, ಕೊರೋನಾ ಹಾವಳಿಯಿಂದ ಈಗಾಗಲೇ ಅಪಾರ ಆರ್ಥಿಕ ನಷ್ಟ, ಉದ್ಯೋಗ ನಷ್ಟ ಅನುಭವಿಸಿರುವ ಭಾರತ ಯುವಜನತೆ ಉದ್ಯೋಗದಿಂದಲೂ ವಿಮುಖವಾಗುವ ಪರಿಸ್ಥಿತಿ ತಂದಿಟ್ಟುಕೊಂಡಿದ್ದಾರೆ.
ಕೃಷಿ & ರ ರೈತ ಬಿಕ್ಕಟ್ಟು

ಕಳೆದ ವರ್ಷ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 3 ವಿವಾದಾತ್ಮಕ ಕೃಷಿ ಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ ತಂದು ರೈತರ ಕೆಂಗಣ್ಣಿಗೆ ಗುರಿಯಾಗಿದ್ದು ಎಲ್ಲರಿಗೂ ತಿಳಿದೇ ಇದೆ. ದೇಶದ ಎಲ್ಲಾ ರೈತ ಸಂಘಟನೆಗಳು ಆ ಕಾಯಿದೆಗಳ ವಿರುದ್ಧ ಚಳವಳಿ ಹೂಡಿದ ಹಿನ್ನೆಲೆಯಲ್ಲಿ ಒಕ್ಕೂಟ ಸರ್ಕಾರ ಅವುಗಳನ್ನು ಸಂಸತ್ನಲ್ಲಿ ಹಿಂಪಡೆದಿದೆ.
ವಿಷಯಕ್ಕೆ ಬಂದುಬಿಡೊಣ, ಕೃಷಿ ಹಾಗೂ ಆಹಾರ ಪದಾರ್ಥಗಳ ರಫ್ತು ಮತ್ತು ಆಮದು ನೀತಿಗಳೂ ರೈತರ ಪರವಾಗಿಲ್ಲ. ಉದಾಹರಣೆಗೆ ದೇಶಕ್ಕೆ ಅಗತ್ಯವಾಗಿ ಬೇಕಾದ ಅಡುಗೆ ಎಣ್ಣೆ ಆಮದು ನೀತಿಗಳಿಂದಾಗಿ ಸುಮಾರು ಶೇಕಡಾ 90ರಷ್ಟು ಆಮದಾಗುತ್ತಿರುವುದರಿಂದ ಸ್ಥಳೀಯ ಎಣ್ಣೆ ಬೀಜಗಳ ಬೆಳೆಗಾರರಿಗೆ ಗಾಣಗಳಿಗೆ ಕಂಟಕವೇ ಹೌದು.
ಇನ್ನು ರೈತರಿಗೆ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಿಂದ ಲಭ್ಯವಾಗುವ ಬೆಳೆ ಸಾಲ ವಿಷಯ ಗಮನಿಸಿದರೆ. ಆರ್ಥಿಕ ತಜ್ಞರ ಪ್ರಕಾರ ಒಂದು ಸಾಲ ಯಾವ ಉದ್ದೇಶಕ್ಕೆ ಪಡೆಯಲಾಗುತ್ತದೋ ಆ ಉದ್ದೇಶ ಕಸುಬಿನಿಂದ ಗಳಿಸಿದ ಹಣದಿಂದ ಸಾಲ ತೀರಿಸುವಂತಹ ಪರಿಸ್ಥಿತಿ ದೇಶದಲ್ಲಿರಬೇಕು. ಅಂಥದ್ದೊಂದು ವ್ಯವಸ್ಥೆ ಜಾರಿಯಲ್ಲಿರಬೇಕು. ಆದರೆ ಭಾರತದಲ್ಲಿ ಅನೇಕ ಸಾರಿ ಹಲವು ಬೆಳೆಗಳು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗುವ ಪರಿಸ್ಥಿತಿ ಇದೆ. ಅಕಸ್ಮಾತ್ ಬರವೋ, ನೆರೆಯೋ ಬಂದರೆ, ಅಷ್ಟೂ ಸಾಲ ರೈತನ ಮೈಮೇಲೆ ಬಂದಿರುತ್ತದೆ. ಇಂಥ ಎಲ್ಲಾ ಪರಿಸ್ಥಿತಿಗಳ ನಡುವೆ ರೈತ ದೇಶಕ್ಕೆ ಆಹಾರ ಉತ್ಪಾದಿಸುವುದಲ್ಲದೆ ತಾನು ಮತ್ತು ತನ್ನ ಕುಟುಂಬವನ್ನು ನಿರ್ವಹಿಸಿಕೊಂಡು ಮರ್ಯಾದೆಯಿಂದ ಬದುಕಬೇಕಿದೆ.
ಭಾರತದ ಆಹಾರ ಮತ್ತು ಕೃಷಿ ರಂಗಕ್ಕೂ ವಿದೇಶಿ ಕೃಷಿ ಬಂಡವಾಳ ಲಗ್ಗೆ ಇಟ್ಟಿ ದೆ. ಪಾಶ್ಚಾತ್ಯ ಕೃಷಿ ವಾಣಿಜ್ಯ (ಅಗ್ರಿಬ್ಯುಝಿನೆಸ್) ಭಾರತದ ಅಭಿವೃದ್ಧಿ ಕಾರ್ಯಸೂಚಿಯನ್ನು ರೂಪಿಸುತ್ತಿದೆ. 3,00,000ಕ್ಕಿಂತಲೂ ಹೆಚ್ಚು ರೈತರು (1994ರಿಂದ) ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಮತ್ತು ಇದಕ್ಕಿಂತಲೂ ಹೆಚ್ಚು ಮಂದಿ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ ಅಥವಾ ತಾವು ಮಾಡಿದ ಸಾಲದ ಪರಿಣಾಮವಾಗಿ ಬೇಸಾಯಕ್ಕೆ ವಿದಾಯ ಹೇಳಿದ್ದಾರೆ. ಅಭಿವೃದ್ಧಿಯ ಈ ಖೋಟಾ ಪರಿಕಲ್ಪನೆ ಇತರ ರಂಗಗಳಿಗೂ ವ್ಯಾಪಿಸಿದೆ. ಉದ್ಯಮಗಳಿಗಾಗಿ ವಿಶೇಷ ಆರ್ಥಿಕ ವಲಯ, ಅಣುಸ್ಥಾವರ ಮತ್ತು ಬೃಹತ್ ಪ್ರಮಾಣದ ಯೋಜನೆಗಳಿಗಾಗಿ ಮಿಲಿಯನ್ ಗಟ್ಟ ಲೆ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಅವರ ಬದುಕನ್ನು ನಾಶಗೊಳಿಸಲಾಗಿದೆ. ಜನರನ್ನು ಅವರ ಜಮೀನುಗಳಿಂದ, ವಾಸಸ್ಥಳಗಳಿಂದ ಬಲವಂತವಾಗಿ ಒಕ್ಕಲೆಬ್ಬಿಸಿ ಹೊರಗೆ ದಬ್ಬಿ ಅವರನ್ನು ಶಿಬಿರಗಳಲ್ಲಿ ಇಟ್ಟು ಅವರ ಮೇಲೆ ಮಾನವಹಕ್ಕು ಉಲ್ಲಂಘನೆಯ ದೌರ್ಜನ್ಯ ಗಳನ್ನೆಸಗಲು ಸರಕಾರಗಳು ಪೊಲೀಸ್ ಹಾಗೂ ಮಿಲಿಟರಿ ಶಕ್ತಿಗಳನ್ನು ಬೇಕಾಬಿಟ್ಟಿಯಾಗಿ ಬಳಸಿಕೊಂಡಿವೆ.
ಹಣದುಬ್ಬರ ಬಿಕ್ಕಟ್ಟು

ದಿನನಿತ್ಯದ ಅಗತ್ತ ವಸ್ತುಗಳ ಹಣದುಬ್ಬರದಲ್ಲಿ ಕೂಡ ಏರು ಪೇರಾಗಿದ್ದು, ಕೆಲವೊಂದು ಜನ ಸಾಮಾನ್ಯನ ಜೇಬಿಗೆ ಕತ್ತರಿ ಹಾಕಿದೆ. ಮೊಟ್ಟೆಯ ಹಣದುಬ್ಬರ ಜನನವರಿಯಲ್ಲಿ ಶೇ. 2.23 ಇದ್ದರೆ, ಫೆಬ್ರವರಿ ಹೊತ್ತಿಗೆ ಅದು ಶೇ. 4.15ಕ್ಕೆ ಏರಿಕೆಯಾಗಿದೆ ಎಂದು ಮಾರ್ಚ್ ತಿಂಗಳಲ್ಲಿ ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಮಾಹಿತಿ ನೀಡಿದೆ.
ಇನ್ನು ಅಡುಗೆ ಎಣ್ಣೆ ಹಣದುಬ್ಬರದಲ್ಲಿ ಇಳಿಕೆಯಾಗಿದ್ದು, ಜನವರಿಯಲ್ಲಿ ಶೇ. 18.70 ರಷ್ಠಿದ್ದ ಹಣದುಬ್ಬರ ಫೆಬ್ರವರಿ ವೇಳೆಗೆ ಶೇ. 16.44ಕ್ಕೆ ಇಳಿಕೆಯಾಗಿದೆ. ತರ್ಕಾರಿಗಳ ಮೇಲಿನ ಹಣದುಬ್ಬರವು ಏರು ಮುಖವಾಗಿದ್ದು, ಜನವರಿಯಲ್ಲಿ ಶೇ. 5.19 ದಾಖಲಾಗಿದ್ದ ಹಣದುಬ್ಬರ ಫೆಬ್ರವರಿಯಲ್ಲಿ ಶೇ. 6.13ಕ್ಕೆ ಏರಿಕೆಯಾಗಿದೆ. ಬಟ್ಟೆ ಹಾಗೂ ಪಾದರಕ್ಷಗಳ ಮೇಲಿನ ಹಣದುಬ್ಬರದಲ್ಲೂ ಅಲ್ಪ ಏರಿಕೆ ಕಂಡಿದ್ದು, ಜನವರಿಯಲ್ಲಿ ಶೇ. 8.84 ರಷ್ಟಿದ್ದ ಹಣದುಬ್ಬರ ಶೇ. 8.86 ರಷ್ಟು ದಾಖಲಾಗಿದೆ.
ಇನ್ನು ಜಾಗತಿಕ ಕಚ್ಚಾ ತೈಲ ದರ ಏರಿಕೆ ಮತ್ತು ಆಹಾರೇತರ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ಸಗಟು ಹಣದುಬ್ಬರ ದರವು ಫೆಬ್ರವರಿಯಲ್ಲಿ ಶೇ.13.11ಕ್ಕೆ ಏರಿಕೆ ಕಂಡಿದೆ. ಇದರೊಂದಿಗೆ 2021ರ ಏಪ್ರಿಲ್‌ನಿಂದ ಈಚೆಗೆ ಸತತ 11ನೇ ತಿಂಗಳು ಹಣದುಬ್ಬರದ ದರ ಎರಡಂಕಿ ಮಟ್ಟದಲ್ಲಿಯೇ ಮುಂದುವರಿದಿದೆ. 2021ರ ಫೆಬ್ರವರಿಯಲ್ಲಿದ್ದ ಶೇ. 4.83ಕ್ಕೆ ಹೋಲಿಸಿದರೆ ಇದು ಭಾರಿ ಹೆಚ್ಚಳವೆನಿಸಿದೆ. ಕಳೆದ ತಿಂಗಳು ಸಗಟು ಹಣದುಬ್ಬರ ದರ ಶೇ 12.96ರಷ್ಟಿತ್ತು. ಆಹಾರ ವಸ್ತುಗಳ ಹಣದುಬ್ಬರ ಪ್ರಮಾಣವು ಜನವರಿಯಲ್ಲಿಶೇ 10.33ರಷ್ಟು ಇದ್ದಿದ್ದು ಫೆಬ್ರವರಿಯಲ್ಲಿ ಶೇ 8.19ಕ್ಕೆ ಇಳಿಕೆ ಆಗಿದೆ. ರಷ್ಯಾ-ಉಕ್ರೇನ್ ಯುದ್ಧದ ಬಿಕ್ಕಟ್ಟಿನಿಂದ ಹಲವು ವಸ್ತುಗಳ ಪೂರೈಕೆ ವ್ಯತ್ಯಯವು ದರ ಹೆಚ್ಚಳಕ್ಕೆ ದಾರಿ ಮಾಡಿದೆ.
ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಭರವಸೆಯೊಂದಿಗೆ ಆಡಳಿತಕ್ಕೆ ಬಂದ ಮೋದಿಯವರು ವಾರ್ಷಿಕ ಜಿಡಿಪಿ ಬೆಳವಣಿಗೆ ಶೇಕಡಾ 8ರಿಂದ ಶೇಕಡಾ 8.5 ರಷ್ಟನ್ನು ಈಗ ಸಾಧಿಸಲೇಬೇಕಾಗಿದೆ. ಅಗಾಧ ಯುವಶಕ್ತಿಯನ್ನು ಹೊಂದಿರುವ ಈ ದೇಶಕ್ಕೆ ಸಮರ್ಪಕ ಉದ್ಯೋಗ ನೀತಿಯೊಂದನ್ನು ರೂಪಿಸದಿದ್ದರೆ ಅತ್ಯಂತ ದೊಡ್ಡ ಪ್ರಮಾಣದ ಆರ್ಥಿಕ ಹೊಡೆತವನ್ನು ಎದುರಿಸಬೇಕಾಗಿಬರಬಹುದು.






