ಭಾರತದ ಪರಂಪರೆಯಲ್ಲಿ ನವ ಸಂವತ್ಸರದ ಆರಂಭವಾಗುವುದು ಯುಗಾದಿಯೊಂದಿಗೆ. ಇಂದು ದೇಶಾದ್ಯಂತ ಹಿಂದೂಗಳು ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಿಸುತ್ತಾ, ನವ ಸಂವತ್ಸರವನ್ನು ಸ್ವಾಗತಿಸುತ್ತಾರೆ. ಹಬ್ಬ ಎಂಬ ಪರಿಕಲ್ಪನೆಯೇ ಜನಸಂಸ್ಕೃತಿಯ ಒಡಲಿನಲ್ಲಿ ಮೂಡಿರುವ ಒಂದು ವಿದ್ಯಮಾನ. ಸಾರ್ವತ್ರಿಕವಾಗಿ ಒಂದು ಜನ ಸಮುದಾಯ ತನ್ನೊಳಗಿನ ಎಲ್ಲ ವೈರುಧ್ಯಗಳನ್ನೂ ಮರೆತು, ತನ್ನ ಆಂತರ್ಯದೊಳಗೆ ಅಡಗಿರಬಹುದಾದ ಎಲ್ಲ ಕಲ್ಮಶಗಳನ್ನೂ ತೊಡೆದುಹಾಕಿ, ಸಮಸ್ತ ಮಾನವ ಕೋಟಿ ಒಂದೇ ಎಂಬ ಭಾವನಾತ್ಮಕ ಸಂದೇಶದೊಡನೆ ಸಾರ್ವಜನಿಕವಾಗಿ ಆಚರಿಸುವುದು ಯಾವುದೇ ಹಬ್ಬದ ವಿಶೇಷ. ವೈದಿಕಶಾಹಿಯ ಸ್ವಾಧೀನಕ್ಕೊಳಪಟ್ಟು ಭಾರತದ ಅನೇಕಾನೇಕ ಹಬ್ಬದ ಆಚರಣೆಗಳು ತಮ್ಮ ಮೂಲ ಅರ್ಥವನ್ನು ಕಳೆದುಕೊಂಡಿರುವ ಈ ಸಂದರ್ಭದಲ್ಲೇ ಭಾರತ ಮತ್ತೊಂದು ಯುಗಾದಿಯನ್ನು ಆಚರಿಸುತ್ತಿದೆ.
ಹಬ್ಬದ ಪರಿಕಲ್ಪನೆಯೇ ಸಾಪೇಕ್ಷವಾದುದು. ಹಬ್ಬದ ಆಚರಣೆಯೂ ಸಹ ಸಾಮಾಜಿಕ ಶ್ರೇಣೀಕರಣಕ್ಕೆ ಅನುಗುಣವಾಗಿಯೇ ನಡೆಯುತ್ತದೆ. ತನ್ನ ನಿತ್ಯ ಬದುಕಿನ ಬವಣೆಗಳನ್ನೇ ನೀಗಿಸಲು ಸಾಧ್ಯವಾಗದ ಒಂದು ದುಡಿಮೆಯ ಜೀವಕ್ಕೆ ಹಬ್ಬ ಎನ್ನುವುದು ವಿಶೇಷ ಎನಿಸುವುದಿಲ್ಲ. ಹಸಿರು ತೋರಣ, ಸುಂದರ ರಂಗೋಲಿ, ಬಾಳೆಲೆಯ ಊಟ ಈ ಸಂಭ್ರಮಗಳು ಸಮಾಜದ ಮೇಲ್ ಸ್ತರದ ಸಮುದಾಯಗಳಿಗೆ ಲಭ್ಯವಾಗುವ ಸವಲತ್ತುಗಳಷ್ಟೇ. ಆದರೂ ಕಡುಬಡತನ ಎದುರಿಸುವ ಕುಟುಂಬಗಳೂ ಹಬ್ಬವನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತವೆ. ಹೊಸ ವರ್ಷವನ್ನು ಸ್ವಾಗತಿಸುವ ಯುಗಾದಿ ಈ ಬಡಜನತೆಯ ಪಾಲಿಗೆ ಹೊಸತನ್ನೇನೂ ತರುವುದಿಲ್ಲ. ಹಾಗೆಯೇ ಗತಿಸಿದ ವರುಷದ ಸಂಕಷ್ಟಗಳ ನಿವಾರಣೆಯೂ ಆಗುವುದಿಲ್ಲ.
ತಮ್ಮ ಜೀವನೋಪಾಯದ ಮಾರ್ಗಗಳು ಕಠಿಣವಾಗುತ್ತಿರುವುದನ್ನು ಮೌನಸಮ್ಮತಿಯೊಂದಿಗೆ ಎದುರಿಸುತ್ತಲೇ, ಶ್ರಮ ಶೋಷಣೆಯ ಮೂಲ, ಸ್ವರೂಪ ಮತ್ತು ಕಾರಣಗಳನ್ನು ಅರಿಯದ ಶ್ರಮಜೀವಿಗಳು ಶೊಷಕ ಸಮಾಜದ ಪರಿಚಾರಕರೊಡನೆ ಮುಖಾಮುಖಿಯಾಗುತ್ತಾ ಬದುಕು ಸವೆಸುತ್ತಾರೆ. “ ಸಮಸ್ತ ಜನಕೋಟಿಗೂ ಯುಗಾದಿಯ ಶುಭಾಶಯಗಳು ” ಎಂದು ಸಾರ್ವಜನಿಕವಾಗಿ ಕೋರುವ ಪ್ರತಿಯೊಂದು ಮನಸಿಗೂ ಹೊಳೆಯಬೇಕಾದ ಒಂದು ವಾಸ್ತವ ಎಂದರೆ, ಈ ಸಮಸ್ತ ಜನಕೋಟಿಯಲ್ಲಿ ಬಹುಪಾಲು ಜನರಿಗೆ ಬದುಕು ಹಸನಾಗಿರುವುದಿಲ್ಲ. ಅವರ ಭೂತ ಮತ್ತು ವರ್ತಮಾನದಂತೆಯೇ ಭವಿಷ್ಯವೂ ಅದೇ ಶೋಷಕ ಸಮಾಜದ ಕ್ರೂರ ವ್ಯವಸ್ಥೆಗೆ ಬಲಿಯಾಗಿ ಕರಾಳ ದಿನಗಳನ್ನು ಎದುರಿಸುತ್ತಿರುತ್ತದೆ.

ಹೊಸ ವರ್ಷದ ಆಗಮನವನ್ನು ಸ್ವಾಗತಿಸುವ ಮುನ್ನ, ನಮ್ಮ ಸುತ್ತಲಿನ ಮಾನವ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಒಮ್ಮೆ ಗಮನಿಸಿದಾಗ, ನಮಗೆ ಎಂತಹ ಹೊಸ ವರ್ಷದ ಅವಶ್ಯಕತೆ ಇದೆ ಎನ್ನುವುದೂ ಮನದಟ್ಟಾಗುತ್ತದೆ. ಜಾತಿ, ಮತ, ಧರ್ಮ,ಪಂಥ, ಲಿಂಗ ಹೀಗೆ ಅಸ್ಮಿತೆಗಳ ಚೌಕಟ್ಟುಗಳಲ್ಲಿ ಜನಸಾಮಾನ್ಯರನ್ನು ಬಂಧಿಸಿಟ್ಟು, ತನ್ನ ಬೆವರಿನ ದುಡಿಮೆಯಿಂದಲೇ ಅನ್ನ ಉಣ್ಣುವ ಶ್ರಮಜೀವಿಯ ಊಟದ ತಟ್ಟೆಯಲ್ಲೂ ತಾರತಮ್ಯದ ವಿಷಬೀಜಗಳನ್ನು ಉಣಬಡಿಸುವ ಒಂದು ವಿಕೃತ ಸಾಂಸ್ಕೃತಿಕ ವಿದ್ಯಮಾನವನ್ನು ನಾವು ಕಾಣುತ್ತಿದ್ದೇವೆ. ಪ್ರೀತಿ, ಆದರ, ವಾತ್ಸಲ್ಯ, ಸೋದರತ್ವ ಮತ್ತು ಮಾನವ ಪ್ರೀತಿಯನ್ನು ಪೋಷಿಸಬೇಕಾದ ಸಾಂಸ್ಥಿಕ ವೇದಿಕೆಗಳು, ಜನಸಾಮಾನ್ಯರ ನಡುವೆ ದ್ವೇಷ, ಮತ್ಸರ, ಅಸೂಯೆ ಮತ್ತು ತಾರತಮ್ಯದ ವಿಷಬೀಜಗಳನ್ನು ಬಿತ್ತುತ್ತಿರುವುದನ್ನು ನೋಡುತ್ತಿದ್ದೇವೆ.
ಶ್ರಮಿಕರ ಬದುಕನ್ನು ಹೊರಗಿಟ್ಟು ಮಾನವ ಸಮಾಜ ಯಾವುದೇ ಸಂದರ್ಭವನ್ನೂ ಸಂಭ್ರಮಿಸಲಾಗುವುದಿಲ್ಲ. ಯುಗಾದಿಯ ಹೊಸವರ್ಷಾಚರಣೆಯನ್ನೂ ಸಹ. ಇಂದು ದೇಶದ ರಾಷ್ಟ್ರಪತಿ, ಪ್ರಧಾನಿಯಿಂದ ಹಿಡಿದು ಗ್ರಾಮಪಂಚಾಯತ್ ಸದಸ್ಯನವರೆಗೂ ಎಲ್ಲ ಹಂತದ ಜನಪ್ರತಿನಿಧಿಗಳೂ ಜನತೆಗೆ ಹೊಸ ವರ್ಷಾಚರಣೆಯ ಶುಭಾಶಯಗಳನ್ನು ಕೋರುತ್ತಾರೆ. ಈ ಯಾಂತ್ರಿಕ ಸಂದೇಶಗಳು ಕೋಟ್ಯಂತರ ಜನರನ್ನು ತಲುಪುತ್ತವೆ. ಮನುಜ ಸಮಾಜವನ್ನು ಒಂದುಗೂಡಿಸಲು ನೆರವಾಗುವ ಈ ಸಂದೇಶಗಳು ಭಾವನಾತ್ಮಕ ದೃಷ್ಟಿಯಿಂದ ಅಪ್ಯಾಯಮಾನವೆನಿಸಿದರೂ, ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ಅನ್ಯ ಮತ ದ್ವೇಷದ ಆಂತರಿಕ ಬೇಗುದಿಯು ಇಡೀ ಸಮಾಜವನ್ನು ಒಳಗಿನಿಂದಲೇ ಕ್ಯಾನ್ಸರ್ ರೋಗದಂತೆ ಹರಡಿ ಶಿಥಿಲಗೊಳಿಸುತ್ತಿರುವುದನ್ನು ಗಮನಿಸಿದಾಗ, ಈ ಸಂದೇಶಗಳು ನಾಟಕೀಯ ಎನಿಸಿಬಿಡುತ್ತವೆ.
75 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರ ಪ್ರಪ್ರಥಮ ಬಾರಿಗೆ ಭಾರತದಲ್ಲಿ ಜನಸಾಮಾನ್ಯರು ನಿತ್ಯ ಸೇವಿಸುವ ಆಹಾರ ಮತ್ತು ಬಳಸುವ ವಸ್ತುಗಳು, ಸಾಂಸ್ಥಿಕವಾಗಿ ನಿರ್ದೇಶಿಸಲ್ಪಡುತ್ತಿವೆ. ಯಾರು ಏನನ್ನು ತಿನ್ನಬೇಕು, ಯಾವ ಆಹಾರವನ್ನು ತ್ಯಜಿಸಬೇಕು, ಯಾವುದನ್ನು ತಿರಸ್ಕರಿಸಬೇಕು, ಯಾರಿಂದ ಪಡೆಯಬೇಕು, ಯಾರಿಗೆ ನೀಡಬೇಕು, ತಿನ್ನುವ ಆಹಾರದಲ್ಲಿ ಏನಿರಬೇಕು-ಏನಿರಬಾರದು, ಯಾವ ಸಮಯದಲ್ಲಿ ಏನು ತಿನ್ನಬೇಕು, ಹೀಗೆ ಮನುಷ್ಯ ತನ್ನ ಸಹಜ ಬದುಕಿನಲ್ಲಿ ತನ್ನದೇ ಆದ ವ್ಯಕ್ತಿಗತ ಸ್ವಾತಂತ್ರ್ಯದೊಂದಿಗೆ ಅನುಸರಿಸಬೇಕಾದ ಆಹಾರ ಪದ್ಧತಿ ಇಂದು ನಿರ್ದೇಶಿತವಾಗುತ್ತಿದೆ. ಧಾರ್ಮಿಕ ಗ್ರಂಥಗಳಿಂದ ನಿರ್ದೇಶಿತರಾಗಿ ತಮ್ಮ ಬದುಕನ್ನು ರೂಪಿಸಿಕೊಂಡಿರುವ ಮತನಿಷ್ಠರೂ ಸಹ ಈಗ ನೂತನ ಧಾರ್ಮಿಕ ವ್ಯಾಖ್ಯಾನಕಾರರ ನಿರ್ದೇಶನಗಳಿಗೆ ಮಾನ್ಯತೆ ನೀಡುವಂತಹ ಸನ್ನಿವೇಶ ಸೃಷ್ಟಿಯಾಗಿದೆ.
ಆಹಾರ ಮನುಷ್ಯನ ಸ್ವಾಭಾವಿಕ ಹಕ್ಕು. ಅದನ್ನು ಸಾಂವಿಧಾನಿಕ ಹಕ್ಕು ಎಂದು ಭಾವಿಸಬೇಕಿಲ್ಲ. ಮನುಷ್ಯ ತಾನು ಬೆಳೆದ ಪರಿಸರದಲ್ಲಿ ರೂಢಿಸಿಕೊಂಡು ಬಂದ ಆಹಾರ ಪದ್ಧತಿಯನ್ನೇ ಜೀವನದುದ್ದಕ್ಕೂ ಅನುಸರಿಸುವುದು ನೈಸರ್ಗಿಕವಾಗಿ ಸಹಜ ಪ್ರಕ್ರಿಯೆ. ಈ ಆಹಾರ ಪದ್ಧತಿಗಳು ಜಾತಿ-ಮತಗಳ ಚೌಕಟ್ಟಿನಲ್ಲಿ ತಮ್ಮದೇ ಆದ ವಿಶಿಷ್ಟ ಸ್ವರೂಪವನ್ನು ಪಡೆದುಕೊಂಡಿದ್ದರೆ ಅದು ಸಾಮುದಾಯಿಕ ಪ್ರಶ್ನೆಯಾಗುತ್ತದೆ. ಒಂದು ನಿರ್ದಿಷ್ಟ ಜಾತಿ ಅಥವಾ ಮತದ ಚೌಕಟ್ಟಿನಲ್ಲೂ ಆಹಾರ ಸೇವನೆ ಎನ್ನುವುದು ವ್ಯಕ್ತಿಗತ ಆಯ್ಕೆಯಾಗಿಯೇ ಉಳಿಯುತ್ತದೆ. ಈ ನೈಸರ್ಗಿಕ ಹಕ್ಕನ್ನು ಭಾರತದ ಸಂವಿಧಾನ ಕಾಪಾಡುತ್ತದೆ. ಇಂದು ಈ ಸಾಂವಿಧಾನಿಕ ಮಾನ್ಯತೆ ಮತ್ತು ನೈಸರ್ಗಿಕ ಹಕ್ಕು ಎರಡೂ ಸಹ ಸಾಂಸ್ಕೃತಿಕ ಕಾವಲುಪಡೆಗಳಿಂದ ದಾಳಿಗೊಳಗಾಗುತ್ತಿದೆ.
ಜನಸಾಮಾನ್ಯರು ಎಂತಹ ಆಹಾರ ಸೇವಿಸಬೇಕು ಎನ್ನುವುದಕ್ಕಿಂತಲೂ ಇಂದು ಚರ್ಚೆಗೊಳಗಾಗಬೇಕಿರುವುದು, ಎಷ್ಟು ಜನರು ತಮಗೆ ಬೇಕೆನಿಸಿದ ಆಹಾರವನ್ನು ಸೇವಿಸುವ ಶಕ್ತಿ ಹೊಂದಿದ್ದಾರೆ ಎಂಬ ಪ್ರಶ್ನೆ. ಏಕೆಂದರೆ ಭಾರತದ ಅರ್ಥವ್ಯವಸ್ಥೆ ಬಡಜನತೆಯ ಪಾಲಿಗೆ, ಶ್ರಮಜೀವಿಗಳ ಪಾಲಿಗೆ ಕರಾಳ ದಿನಗಳನ್ನು ರೂಪಿಸುತ್ತಿದೆ. ಈ ಸಂದರ್ಭದಲ್ಲಿ, ತನ್ನ ಆಹಾರಕ್ಕಾಗಿ ಮನುಷ್ಯ ಕೊಲ್ಲುವ ಪ್ರಾಣಿಯಲ್ಲಿ ರಕ್ತದಂಶ ಇರಬೇಕೋ ಬೇಡವೋ ಎಂಬ ಪ್ರಶ್ನೆಗಿಂತಲೂ ನಮ್ಮನ್ನು ಕಾಡಬೇಕಿರುವುದು ದೇಶದ ಬಹುಸಂಖ್ಯೆಯ ಜನತೆಗೆ ತಮಗೆ ಅಗತ್ಯವಿರುವಷ್ಟು ಮಾಂಸಾಹಾರವನ್ನೋ, ಸಸ್ಯಾಹಾರವನ್ನೋ ಕೊಳ್ಳುವ ಸಾಮಥ್ರ್ಯ ಉಳಿದಿದೆಯೇ ಎಂಬ ಪ್ರಶ್ನೆ.

ಯೂನಿಸೆಫ್ನ ಒಂದು ವರದಿಯ ಪ್ರಕಾರ ಭಾರತದಲ್ಲಿ ಕುಂಠಿತ ಬೆಳವಣಿಗೆಯ ಮಕ್ಕಳ ಸಂಖ್ಯೆ ನಾಲ್ಕು ಕೋಟಿಗೂ ಮೀರಿದೆ. ಐದು ವರ್ಷಕ್ಕೆ ಮುನ್ನವೇ ಸಾವನ್ನಪ್ಪುವ ಮಕ್ಕಳಲ್ಲಿ ಶೇ 69ರಷ್ಟು ಮಕ್ಕಳು ಅಪೌಷ್ಟಿಕತೆಯಿಂದಲೇ ಸಾಯುತ್ತಿದ್ದಾರೆ. ಒಕ್ಕೂಟ ಸರ್ಕಾರದ ಅಧಿಕೃತ ಮಾಹಿತಿಯ ಅನುಸಾರವೇ ಭಾರತದಲ್ಲಿ 33 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 107 ರಾಷ್ಟ್ರಗಳ ಪೈಕಿ 94ನೆಯ ಸ್ಥಾನದಲ್ಲಿದೆ. ಇವೆಲ್ಲವನ್ನೂ ಕಲ್ಪಿತ ಅಥವಾ ಸೃಷ್ಟಿಸಲ್ಪಟ್ಟ ಅಂಕಿಅಂಶಗಳೆಂದು ಸರ್ಕಾರಗಳು ಅಲ್ಲಗಳೆದರೂ, ಏರುತ್ತಿರುವ ಆಹಾರ ಪದಾರ್ಥಗಳ ಬೆಲೆಗಳು, ನಗರಗಳಲ್ಲಿ ಹೆಚ್ಚುತ್ತಿರುವ ಕೊಳೆಗೇರಿಗಳು, ತಮ್ಮ ನಾಳಿನ ಬದುಕಿಗಾಗಿ ಹೋರಾಡುತ್ತಿರುವ ವಲಸೆ ಕಾರ್ಮಿಕರು, ಬಡತನದ ಬರ್ಬರತೆಯನ್ನು ಢಾಳಾಗಿ ಪ್ರದರ್ಶಿಸುತ್ತವೆ.
ನಿಕೃಷ್ಟ ಜೀವನ ನಡೆಸುತ್ತಿರಬಹುದಾದ ಈ ಶ್ರಮಜೀವಿ ವರ್ಗಗಳಿಗೆ ಹಲಾಲ್ ಮತ್ತು ಜಟ್ಕಾ ವಿವಾದಗಳು ಅಪ್ರಸ್ತುತವಾಗಿಬಿಡುತ್ತವೆ. ಏರುತ್ತಿರುವ ಆಹಾರ ಪದಾರ್ಥಗಳ ಬೆಲೆಗಳಿಂದ ತತ್ತರಿಸುತ್ತಿರುವ ಶ್ರಮಜೀವಿ ವರ್ಗಗಳಿಗೆ, ಅನೌಪಚಾರಿಕ ಕ್ಷೇತ್ರದ ದಿನಗೂಲಿ ನೌಕರರಿಗೆ ತಾವು ತಿನ್ನುವ ಆಹಾರದಲ್ಲಿ ಪೌಷ್ಟಿಕಾಂಶ ಎಷ್ಟಿದೆ ಎಂಬ ಚಿಂತೆ ಇರುವುದಿಲ್ಲ. ಅಥವಾ ಅದರಲ್ಲಿ ರಕ್ತದಂಶ ಇದೆಯೋ ಇಲ್ಲವೋ ಎಂಬ ಜಿಜ್ಞಾಸೆಯೂ ಇರುವುದಿಲ್ಲ. ಸಸ್ಯಾಹಾರಿಗಳಾದರೂ ತಮ್ಮ ಆಹಾರದಲ್ಲಿ ಕಬ್ಬಿಣಾಂಶ ಎಷ್ಟಿದೆ ಎಂಬ ಪರಿವೆ ಇರುವುದಿಲ್ಲ. ದೇಶದ ಸುಭದ್ರ ಬುನಾದಿಗೆ ತಮ್ಮ ಬೆವರು ಸುರಿಸಿ ದುಡಿಯುವ ಈ ಶ್ರಮಜೀವಿ ವರ್ಗಗಳು ತಮ್ಮ ಜಾತಿ-ಮತ-ಧರ್ಮದ ಅಸ್ಮಿತೆಗಳನ್ನು ಮೀರಿ ಜೀವನ ಸವೆಸುತ್ತಿರುತ್ತಾರೆ.
ಈ ವರ್ಗದ ಜನತೆಗೆ, ಆಹಾರ ವಂಚಿತರಿಗೆ, ಅವಕಾಶವಂಚಿತರಿಗೆ, ಸೌಲಭ್ಯವಂಚಿತರಿಗೆ ಮತ್ತು ಹಕ್ಕು ವಂಚಿತ ಜನಸಮುದಾಯಗಳಿಗೆ “ ಹೊಸ ವರ್ಷಾಚರಣೆ ”ಯ ಸಂದೇಶವನ್ನು ನೀಡುವ ಮುನ್ನ ಉಳ್ಳವರ ಮನಸ್ಸಿನಲ್ಲಿ ಕೊಂಚಮಟ್ಟಿಗಾದರೂ ಪಾಪಪ್ರಜ್ಞೆ ಮೂಡಬೇಕಲ್ಲವೇ ? ಶೇ 50ರಷ್ಟು ಅಪರಾಧದ ಹಿನ್ನೆಲೆಯುಳ್ಳವರನ್ನು, ಶೇ 90ರಷ್ಟು ಕೋಟ್ಯಧಿಪತಿಗಳನ್ನು ಶಾಸನಸಭೆಗಳಿಗೆ ಆಯ್ಕೆ ಮಾಡಿ ಕಳುಹಿಸುವ ಸಾರ್ವಭೌಮ ಜನತೆಗೆ ತಮ್ಮ ಆಹಾರ ಸ್ವಾತಂತ್ರ್ಯವನ್ನೂ ನಿರಾಕರಿಸಲಾಗುತ್ತಿರುವ ಹೊತ್ತಿನಲ್ಲಿ, ಆಳುವ ಸರ್ಕಾರಗಳು ಸೌಹಾರ್ದತೆ ಮತ್ತು ಸಾಂತ್ವನದ ಸಂದೇಶವನ್ನು ನೀಡುವುದು ಹೇಗೆ ಸಾಧ್ಯವಾದೀತು ? ಈ ನಡುವೆಯೇ ಹಬ್ಬವನ್ನು ಜನತೆಗಿಂತಲೂ ಹೆಚ್ಚಾಗಿ ಸಂಭ್ರಮಿಸುವ ಮಾರುಕಟ್ಟೆ ತನ್ನ ಬಾಹುಗಳನ್ನು ಎಲ್ಲ ದಿಕ್ಕುಗಳಲ್ಲೂ ಚಾಚುತ್ತಾ, ಜನರ ಬಳಿ ಉಳಿದಿರಬಹುದಾದ ಅಲ್ಪಸ್ವಲ್ಪ ಸಂಪನ್ಮೂಲಗಳನ್ನೂ ದೋಚಲು ಯೋಚಿಸುತ್ತಿರುತ್ತದೆ. ಈ ಮಾರುಕಟ್ಟೆಯನ್ನು ಪೋಷಿಸುವ ಸಲುವಾಗಿಯೇ ಮಾಧ್ಯಮಗಳು, ಅಧಿಕಾರ ರಾಜಕಾರಣದ ಪ್ರತಿನಿಧಿಗಳು ಒಂದು ಆಕರ್ಷಕ ಜಗತ್ತನ್ನು ಸೃಷ್ಟಿಸಲು ಯತ್ನಿಸುತ್ತಿರುತ್ತಾರೆ.

ಹಬ್ಬದ ದಿನದ ಮಾರುಕಟ್ಟೆಯ ಚಿತ್ರಣವನ್ನೇ ಜನಸಾಮಾನ್ಯರ ಬದುಕಿನ ಹಿತ ಗಳಿಗೆ ಎಂದು ಬಿಂಬಿಸುವ ಮೂಲಕ ಒಂದು ಕಲ್ಪಿತ ಸುಖಿ ಸಮಾಜವನ್ನು ನಾವು ಆನಂದಿಸುತ್ತಿದ್ದೇವೆ. ಆದರೆ ಜನದಟ್ಟಣೆಯ ಮಾರುಕಟ್ಟೆಯ ನಡುವೆಯೂ ಹಸಿದ ಹೊಟ್ಟೆಗಳು ಹೇರಳವಾಗಿರುತ್ತವೆ, ನೊಂದ ಜೀವಗಳು ಅಪಾರ ಸಂಖ್ಯೆಯಲ್ಲಿರುತ್ತವೆ, ಬೆಂದ ಉದರಗಳು ಬೇಕಾದಷ್ಟಿರುತ್ತವೆ. ಈ ಜೀವಗಳ ಒಡಲಿಗೆ ಬೆಂಕಿ ಇಡಲೆಂದೇ ಮತಾಂಧ ಶಕ್ತಿಗಳು ವ್ಯಾಪಾರ ವಹಿವಾಟುಗಳಲ್ಲೂ ಮತೀಯ ಅಸ್ಮಿತೆಗಳ ಗೋಡೆಗಳನ್ನು ನಿರ್ಮಿಸುವ ಮೂಲಕ, ಆಹಾರ ಪದ್ಧತಿಯ ಮೇಲೆ ದಾಳಿ ನಡೆಸುತ್ತಿವೆ. ದ್ವೇಷ, ಅಸೂಯೆ, ಮತ್ಸರ ಮತ್ತು ತಾರತಮ್ಯಗಳ ಹೊಸ ಆಯಾಮಗಳನ್ನು ಶೋಧಿಸುತ್ತಲೇ ಶ್ರಮಜೀವಿಗಳ ಜಗತ್ತನ್ನು ಅಡ್ಡಡ್ಡಲಾಗಿ ಸೀಳುವ ಅಮಾನುಷ ಪ್ರಯತ್ನಗಳ ನಡುವೆಯೇ ಭಾರತ ಮತ್ತೊಂದು ಯುಗಾದಿಯನ್ನು ಸಂಭ್ರಮಿಸುತ್ತಿದೆ.
ಈ ಸಂಭ್ರಮಾಚರಣೆ ಸಾತ್ವಿಕ ನೆಲೆಯಲ್ಲಿ ಅರ್ಥಪೂರ್ಣವಾಗಿ ಕಂಡರೂ ತಾತ್ವಿಕ ನೆಲೆಯಲ್ಲಿ ಚಿಂತನಾರ್ಹವೆನಿಸುವುದಿಲ್ಲವೇ ? ಈ ಆತ್ಮಾವಲೋಕನದೊಂದಿಗೇ ಯುಗಾದಿಯನ್ನು ಸ್ವಾಗತಿಸೋಣ.