ಅಮಿತ್ ಶಾ ಕರ್ನಾಟಕಕ್ಕೆ ಬಂದಾಗಲೆಲ್ಲಾ ಅವರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣಿಸಲಾಗಿರುವ ಘಟನೆ ಬಗ್ಗೆ ವಿವಾದಗಳು ಏಳುತ್ತವೆ. ಈ ಬಾರಿ ಸಿದ್ದಗಂಗಾ ಮಠದ ಸ್ವಾಮಿಜಿ ಮುಂದೆ ಶೂ ಧರಿಸಿ, ಕಾಲು ಮೇಲೆ ಕಾಲು ಹಾಕಿ ಕೂತಿರುವ ಚಿತ್ರ ಕೂಡಾ ಆಕ್ರೋಶ ಹುಟ್ಟು ಹಾಕಿದೆ. ಮಾತ್ರವಲ್ಲ ಎಂದಿನಂತೆ ಕನ್ನಡ ಕಡೆಗಣನೆ ಕೂಡಾ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಸತ್ಯ ಸಾಯಿ 400 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆಯನ್ನು ನೇರವೇರಿಸಿದ್ದಾರೆ. ಆದರೆ, ಅಲ್ಲಿ ಕನ್ನಡ ಬಳಕೆ ಇಲ್ಲದೆ, ಕೇವಲ ಹಿಂದಿ ಮತ್ತು ಇಂಗ್ಲಿಷ್ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ.
ಕಳೆದ ವರುಶ ಶಿವಮೊಗ್ಗದಲ್ಲಿ ನೆಡೆದ CRPF ಕ್ಯಾಂಪಸ್ ಶಿಲಾನ್ನಾಸ ಕಾರ್ಯಕ್ರಮಕ್ಕೆ ಅಮಿತ್ ಶಾ ಬಂದಿದ್ದಾಗ ಕನ್ನಡ ಕಡೆಗಣನೆಯಾಗಿತ್ತು. ಇದರ ಬಗ್ಗೆ ಕನ್ನಡಿಗರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಸರಕಾರ, ಇನ್ಮೇಲೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳತ್ತೇವೆ ಎಂದು ಹೇಳಿತ್ತು. ಇಂದು ಮತ್ತದೇ ರೀತಿ ಕನ್ನಡವನ್ನು ಕಡೆಗಣಿಸಲಾಗಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಇನ್ನು ಕೆಲವರು, ಅಮಿತ್ ಶಾ ಕನ್ನಡ ಬಳಸಕೂಡದು, ಹಿಂದಿಯೇ ಬಳಸಿ ಎಂದು ಹೇಳಿದ್ದಾರೆಯೇ? ಎಂದು ಮುಖ್ಯಮಂತ್ರಿಯನ್ನು ಉಲ್ಲೇಖಿಸಿ ಟ್ವಿಟರಿನಲ್ಲಿ ಪ್ರಶ್ನಿಸಿದ್ದಾರೆ. ಅಲ್ಲದೆ, ಈ ಆಸ್ಪತ್ರೆ ಉತ್ತರಭಾರತದ ಜನರಿಗಾಗಿ ಎಂದು ಸುದ್ದಿ ಇದೆ. ನಿಜವೇ? ಇಲ್ಲಿ ಕನ್ನಡಿಗರಿಗೆ ಸೇವೆ ಸಿಗುತ್ತದೆಯೇ? ಆಸ್ಪತ್ರೆಗೆ ಹಣ,ನೆಲ ನೀಡಿದ ಕನ್ನಡಿಗನಿಗೆ ಈ ಮಾಹಿತಿ ಹಿಂದಿಯಲ್ಲಿ ತಲುಪುತ್ತದೆಯೇ? ಎಂದು ಟ್ವಿಟರ್ ಬಳಕೆದಾರರು ಪ್ರಶ್ನಿಸಿದ್ದಾರೆ.
“ಕರ್ನಾಟಕದಲ್ಲಿ ಕನ್ನಡ ಕೈಬಿಟ್ಟು,ಕನ್ನಡಿಗರು ಹಿಂದಿ ಹೇರಿಕೆ ಅಂತ ಕೂಗುವುದನ್ನು ನೋಡೋದ್ರಲ್ಲಿ ಅಮಿತ್ ಶಾ ಅವರಿಗೆ ಕಿಕ್ ಸಿಗುತ್ತೆ ಅನ್ನಿಸುತ್ತೆ, ಹಾಗಾಗಿಯೇ ಅಮಿತ್ ಶಾ ಅವರು ಕರ್ನಾಟಕಕ್ಕೆ ಬಂದಾಲೆಲ್ಲಾ ಕನ್ನಡ ಕೈಬಿಡಲಾಗುತ್ತೇನೋ.” ಎಂದು ಅರುಣ್ ಜಾವಗಲ್ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.