ಕಾಗದದಲ್ಲಿ ವಾಯು ಮಾಲಿನ್ಯ ನಿಯಂತ್ರಿಸುವ ಸರ್ಕಾರಗಳು ಕಾರ್ಯರೂಪಕ್ಕೆ ತರುವುದು ಯಾವಾಗ?

ಕೈಗಾರಿಕೆ, ವಾಹನಗಳ ಬಳಕೆ ಮುಂತಾದ ಮಾನವ ಚಟುವಟಿಕೆ ಹೆಚ್ಚಾದಂತೆಲ್ಲ ಪ್ರಕೃತಿ ಮಾಲಿನ್ಯವೂ ಏರಿಕೆಯಾಗುತ್ತದೆ ಎಂಬುದು ಸತ್ಯವಾದರೂ, ಎಲ್ಲ ದೇಶಗಳಿಗೂ ಎಲ್ಲ ಕಾಲಕ್ಕೂ ಅದು ಅನ್ವಯಿಸುವುದಿಲ್ಲ.

ಶತಮಾನಗಳ ಹಿಂದೆ ಬ್ರಿಟನ್, ಅಮೆರಿಕದಂಥ ದೇಶಗಳು ಕೈಗಾರಿಕೆಗಳ ಏರುಮುಖದ ಕಾರಣದಿಂದ ಉಂಟಾಗುವ ಪರಿಸರ ಮಾಲಿನ್ಯದಿಂದ ಸಂಕಷ್ಟದಲ್ಲಿದ್ದವು. ಆದರೆ ಈಗ ಆ ದೇಶಗಳು ಉಳಿದ ಅದೆಷ್ಟೋ ರಾಷ್ಟ್ರಗಳಿಗಿಂತ ಉತ್ತಮ ಸ್ಥಿತಿಯಲ್ಲಿವೆ. ಒಂದೆರಡು ದಶಕಗಳ ಹಿಂದೆ ‘ಚೀನಾ’ ಎಂಬ ಹೆಸರು ಪರಿಸರ ಮಾಲಿನ್ಯಕ್ಕೆ ಪರ್ಯಾಯ ಪದ ಎನ್ನುವಷ್ಟರ ಮಟ್ಟಿಗೆ ಅಲ್ಲಿನ ಸ್ಥಿತಿ ಇತ್ತು. ಆದರೆ ಈಗ ಆ ಪರಿಸ್ಥಿತಿ ಬದಲಾಗಿದೆ. ಅಲ್ಲಿನ ಸರಕಾರ ಕಠಿಣ ಕ್ರಮಗಳನ್ನು ಕೈಗೊಂಡ ಕಾರಣದಿಂದ ಅಲ್ಲಿನ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಬಂದು ಪರಿಸ್ಥಿತಿ ಸುಧಾರಿಸಿದೆ.

ಹಿಂದೆ ವಾಯು ಮಾಲಿನ್ಯ ಸಹಿತ ಹಲವಾರು ವಿಧದ ಪರಿಸರ ಮಾಲಿನ್ಯದ ಕಾರಣದಿಂದ ಕಂಗೆಟ್ಟಿದ್ದ ಅನೇಕ ದೇಶಗಳು ಈಗ ಚೇತರಿಸಿಕೊಳ್ಳಲು ಅಲ್ಲಿನ ಸರಕಾರಗಳು ಕಾಲ ಕಾಲಕ್ಕೆ ತಂದಿರುವ ಪರಿಸರ ರಕ್ಷಣೆಯ ನೀತಿಗಳೇ ಕಾರಣ ಎಂದರೂ ತಪ್ಪಾಗಲಾರದು.

ನೀತಿನಿರೂಪಣೆಯ ಸುಧಾರಣೆ ಕ್ರಮಗಳು ಅಗತ್ಯ:

“ನೀತಿಯನ್ನು ರೂಪಿಸುವವರು ಬಹಳಷ್ಟು ಬಾರಿ ಸೋಲುವುದು ಅವರು ತಪ್ಪು ಸಮಸ್ಯೆಯನ್ನು ಪರಿಹರಿಸುವ ಕಾರಣದಿಂದಲೇ ಹೊರತು ಸರಿಯಾದ ಸಮಸ್ಯೆಗೆ ತಪ್ಪಾದ ಪರಿಹಾರವನ್ನು ಕಂಡುಕೊಳ್ಳುವುದರಿಂದ ಅಲ್ಲ”

ಅಮೆರಿಕದ ಗಣಿತಜ್ಞ ಎಡ್ವರ್ಡ್ ಕ್ವಾಡ್ ಅವರ ಈ ವಿಶ್ಲೇಷಣೆ ಇಂದಿನ ದಿನಮಾನದಲ್ಲೂ ಅಷ್ಟೇ ಅರ್ಥಪೂರ್ಣವಾಗಿ ಅಷ್ಟೇ ಪ್ರಭಾವಶಾಲಿಯಾಗಿಯೂ ಉಳಿದಿದೆ. ಅದರಲ್ಲೂ ಭಾರತದ ವಾಯು ಮಾಲಿನ್ಯ ನೀತಿಗೆ ಸಂಬಂಧಿಸಿದಂತೆ ಕ್ವಾಡ್ ನ ವಿಶ್ಲೇಷಣೆ ಹೆಚ್ಚು ತರ್ಕಬದ್ಧವಾಗಿ ಕಂಡರೂ ಅಚ್ಚರಿಯಿಲ್ಲ. ಏಕೆಂದರೆ ನಮ್ಮಲ್ಲಿ ಎಲ್ಲರಿಗೂ ಹಂಚಿ ಮಿಕ್ಕುವಷ್ಟು ‘ಪರಿಹಾರ’ಗಳು ಲಭ್ಯವಾಗುವುದನ್ನು ನೋಡಬಹುದು. ಆದರೆ ಸಮಸ್ಯೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದನ್ನು ಕಾಣಲಾರೆವು.

ಸುಮ್ಮನೆ ನಮ್ಮಲ್ಲಿನ ಮನೋಸ್ಥಿತಿಗಳ ಬಗ್ಗೆ ಯೋಚಿಸಿ. ನಮ್ಮ ಜನ ಮಾಲಿನ್ಯಗೊಂಡ ಪರಿಸರವನ್ನು ಸ್ವಚ್ಛಗೊಳಿಸುವ ಇಚ್ಛೆಗಿಂತ ಹೆಚ್ಚಾಗಿ ಪರಿಸರವನ್ನು ಇನ್ನಷ್ಟು ಮಲಿನಗೊಳಿಸಲು ನಮಗಿರುವ ಹಕ್ಕಿನ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ. ಇದರ ಫಲಿತಾಂಶವೇ ವಾಯು ಮಾಲಿನ್ಯದಲ್ಲಿ ಭಾರಿ ಏರಿಕೆ.! ಹೀಗಾಗಿ ನಮ್ಮ ನೀತಿನಿರೂಪಕರು, ಸರಕಾರಗಳು ಕೂಡ ಪರಿಸರ ಮಾಲಿನ್ಯ ಹೇಗೆ ನಿಯಂತ್ರಿಸುವುದು ಎನ್ನುವುದರ ಬದಲು ನಿರೀಕ್ಷಿತ ಮಟ್ಟದ ಪರಿಸರ ಮಾಲಿನ್ಯವನ್ನು ಸಾಧಿಸುವುದು ಹೇಗೆ ಎಂಬುದರ ಬಗ್ಗೆ ಗಮನ ಹರಿಸುತ್ತಾರೆ. ಇದೇ ಅವರ ಪರಿಸರ ಮಾಲಿನ್ಯದ ಮೂಲ ಮಂತ್ರವಾದರೆ ಪರಿಸರದ ಗತಿ ಏನಾಗಬೇಡ?

ಕೊರೋನಾ ಕಲಿಸಿದ ಪಾಠದಿಂದ ಕಲಿಯುವವರು ಯಾರು?

ಮಾನವರು ಸೇರಿದಂತೆ ಈ ಭೂಮಿಯ ಮೇಲಿರುವ ಎಲ್ಲ ಜೀವಿಗಳಿಗೂ ಹಾನಿ ಇಲ್ಲವೇ ತೊಂದರೆ ಉಂಟುಮಾಡುವ, ನಿಸರ್ಗದ ನೈಸರ್ಗಿಕ ಪರಿಸರವನ್ನು ಹಾಳುಮಾಡುವ ರಾಸಾಯನಿಕಗಳು, ಘನ, ದ್ರವ, ಅನಿಲ ರೂಪದ ವಿಷಕಾರಿ ಸೂಕ್ಷ್ಮ ಕಣಗಳು ಅಥವಾ ಜೈವಿಕ ವಸ್ತುಗಳು ನಮ್ಮ ವಾತಾವರಣ ಪ್ರವೇಶಿಸಿದಾಗ ಅದನ್ನು ‘ವಾಯು ಮಾಲಿನ್ಯ’ ಎನ್ನಲಾಗುತ್ತದೆ.

ಈ ವಾಯು ಮಾಲಿನ್ಯದ ವಿಚಾರಕ್ಕೆ ಬಂದರೆ ಕೊರೋನಾ ಕಾಲದಲ್ಲಿ ಜಗತ್ತಿನಲ್ಲಿ ಆಗಿರುವ ಬದಲಾವಣೆಯಿಂದ ಕಲಿಯಬೇಕಾದ ಪಾಠ ದೊಡ್ಡದಿದೆ. ಕಳೆದ ಒಂದೂವರೆ ವರ್ಷದಿಂದ ಜಗತ್ತಿನ ಅತಿ ಹೆಚ್ಚು ವಾಯು ಮಾಲಿನ್ಯ ಇರುವ ನಗರಗಳಲ್ಲಿ ಕೂಡ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿರುವುದು ದೊಡ್ಡ ಫಲಿತಾಂಶವಾಗಿದೆ. ಈ ಭೂಮಂಡಲದ ಮೇಲೆ ಏನೇ ಸುಟ್ಟರೂ ಅದು ವಾಯು ಮಾಲಿನ್ಯದ ಮೇಲೆ ಪ್ರಭಾವ ಬೀರುತ್ತದೆ ಹಾಗೂ ಎಷ್ಟೇ ಪ್ರದೂಷಣವನ್ನು ಕಡಿಮೆ ಮಾಡಿದರೂ ಅದು ಮಹತ್ವಪೂರ್ಣ ಮಟ್ಟದಲ್ಲಿ ಅದರಲ್ಲೂ ಕೆಲವು ಸಂದರ್ಭಗಳಲ್ಲಿ ತಕ್ಷಣವೇ ವಾಯು ಮಾಲಿನ್ಯವನ್ನು ತಗ್ಗಿಸುತ್ತದೆ ಎಂಬ ಪಾಠವನ್ನು ಕೊರೋನಾ ಕಾಲವು ಜಗತ್ತಿಗೆ ಕಲಿಸಿಕೊಟ್ಟಿದೆ. ಆದರೆ ಈ ಪಾಠದಿಂದ ಸರಕಾರಗಳು, ನೀತಿ ನಿರೂಪಕರು ಕಲಿಯುತ್ತಾರೆಯೇ? ಭಾರತದಂಥ ದೇಶದಲ್ಲಿ ಕೊರೋನಾ ಕಲಿಸಿದ ಪರಿಸರ ಪಾಠಗಳು ಅನುಷ್ಠಾನಕ್ಕೆ ಬರಲು ಸಾಧ್ಯವಾಗುವುದು ಯಾವಾಗ?

ರಾಷ್ಟ್ರೀಯ ಮಟ್ಟದಲ್ಲಿ ಸರಕಾರಿ ಸಂಸ್ಥೆಗಳ ಬದ್ಧತೆ ಕೊರತೆ:

ದೇಶದ ಬಜೆಟ್ನಲ್ಲಿ ಪರಿಸರ ಮಾಲಿನ್ಯ ತಗ್ಗಿಸಲು ಖರ್ಚು ಮಾಡಬೇಕಾದ ಮೊತ್ತದಲ್ಲಿ ಇಳಿಕೆ ಒಂದೆಡೆಯಾದರೆ, ಇನ್ನೊಂದೆಡೆ ಸರಕಾರದ ಇತರೆ ಸಂಸ್ಥೆಗಳು ಪರಿಸರದ ವಾಯುವಿನ ಗುಣಮಟ್ಟ ಕಾಪಾಡುವುದಕ್ಕೆ ಸಂಬಂಧಿಸಿದಂತೆ ಉತ್ತರದಾಯಿಯಾಗಬೇಕು. ಆದರೆ ಹಾಗಾಗುತ್ತಿಲ್ಲ. ನಮ್ಮ ಪರಿಸರದ ವಾಯು ಮಾಲಿನ್ಯವನ್ನು ತಡೆಯುವುದು ಈ ಸಂಸ್ಥೆಗಳ ಆದ್ಯತೆಯೇ ಆಗಿಲ್ಲ. ಇನ್ನೊಂದೆಡೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಂತೂ ಹಲ್ಲಿಲ್ಲದ ಹಾವಿನಂತಾಗಿದೆ. ಗಾಳಿಯ ಗುಣಮಟ್ಟಕ್ಕೆ ಪ್ರಾಮುಖ್ಯ ನೀಡುವ ಬಗ್ಗೆ ಕೇಂದ್ರ ಸರಕಾರಕ್ಕೂ ಬದ್ಧತೆ ಇದ್ದಂತಿಲ್ಲ. ಬಜೆಟ್ ನಲ್ಲಿ ನೀಡಿರುವ ಅನುದಾನವನ್ನು ಗಮನಿಸಿದರೆ ಸಾಕು. ಸರಕಾರವು ಈ ಮಂಡಳಿಯನ್ನು ಕೇವಲ ದತ್ತಾಂಶ ಹಾಗೂ ಕ್ರಿಯಾಯೋಜನೆಗಳ ಸಂಗ್ರಾಹಕನಾಗಿ ಮಾಡಿಬಿಟ್ಟಿದೆ.

ಹಾಗೆ ನೋಡಿದರೆ ನಮ್ಮ ದೇಶದ ಎಲ್ಲ ರಾಜ್ಯಗಳಲ್ಲೂ ಮಾಲಿನ್ಯ ನಿಯಂತ್ರಣ ಮಂಡಳಿಗಳಿವೆ. ಅಗತ್ಯ ಬಿದ್ದಾಗ ಮಾಲಿನ್ಯ ಉಂಟುಮಾಡುವ ಮೂಲಗಳ ಮೌಲ್ಯಮಾಪನ ಸೇರಿದಂತೆ ಸಮಸ್ಯೆಗಳ ನಿರ್ವಹಣೆ ಹಾಗೂ ಲೆಕ್ಕಾಚಾರಗಳನ್ನು ಈ ಮಂಡಳಿಗಳು ಮಾಡಬೇಕು. ಆದರೆ ಅಧ್ಯಯನದಲ್ಲಿನ ದೋಷಗಳು ಇನ್ನಷ್ಟು ಅಧ್ಯಯನಕ್ಕೆ ಇಲ್ಲವೇ ಮತ್ತಷ್ಟು ಚರ್ಚೆಗೆ ಕಾರಣವಾಗುವ ಮೂಲಕ ಪರಸ್ಪರ ಕೆಸರೆರಚಾಟಕ್ಕೆ ಕಾರಣವಾಗಿ ಮಂಡಳಿಗಳ ಉದ್ದೇಶವೇ ದಾರಿ ತಪ್ಪುತ್ತದೆ.

ಉದಾಹರಣೆಗೆ ದಿಲ್ಲಿಯನ್ನೇ ತೆಗೆದುಕೊಳ್ಳೋಣ. ಅಲ್ಲಿ ಪ್ರತಿವರ್ಷವೂ ದೀಪಾವಳಿ ಬಂದಾಗ, ರೈತರು ಪಂಜಾಬ್ ಹಾಗೂ ಹರ್ಯಾಣದಲ್ಲಿ ಅಕ್ಟೋಬರ್–ನವೆಂಬರ್ ತಿಂಗಳಲ್ಲಿ ಸುಗ್ಗಿಯ ನಂತರ ತಮ್ಮ ಹೊಲಗದ್ದೆಗಳಲ್ಲಿ ಬೆಳೆಗಳ ಶೇಷವನ್ನು ಸುಡುವಾಗ ಎಲ್ಲರೂ ಎಚ್ಚೆತ್ತುಕೊಂಡು ಬೈಯಲಾರಂಭಿಸುತ್ತಾರೆ.  ಸರಕಾರದ ನೀತಿಗಳು ಹಾಗೂ ಸಾರ್ವಜನಿಕರ ಪರಿಸರ ಪರ ಚರ್ಚೆಗಳು ಈ ಸಂದರ್ಭದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿರುತ್ತವೆ.

ಅಸಲಿಗೆ, ದಿಲ್ಲಿಯಲ್ಲಿ ಇಡೀ ವರ್ಷ ಕಾಡುವ ವಾಯು ಮಾಲಿನ್ಯಕ್ಕೆ ದೀಪಾವಳಿಯ ಸಂದರ್ಭದಲ್ಲಿ ಒಂದು ವಾರ ನಡೆಯುವ ಪಟಾಕಿ ಹಬ್ಬ ಮತ್ತು ರೈತರು ಒಂದೆರಡು ಮೂರು ವಾರ ಇಲ್ಲವೇ ಒಂದೆರಡು ತಿಂಗಳುಗಳ ಕಾಲ ಸುಡುವ ಬೆಳೆಗಳ ಶೇಷವಷ್ಟೇ ಕಾರಣವೇ?

ದಿಲ್ಲಿಯಲ್ಲಿ ಎರಡು ಕೋಟಿ ಜನರಿದ್ದಾರೆ.1.1 ಕೋಟಿ ನೋಂದಾಯಿತ ವಾಹನಗಳಿವೆ. 20 ಸಾವಿರ ಕಿಮೀ ಧೂಳುಮಯ ರಸ್ತೆಗಳಿವೆ. 10 ಸಾವಿರ ಸಣ್ಣ ಕೈಗಾರಿಕಾ ಘಟಕಗಳಿವೆ. ನಿತ್ಯ ತ್ಯಾಜ್ಯಗಳ ಉತ್ಪತ್ತಿಯಾಗುತ್ತದೆ. ಅವುಗಳನ್ನು ಸುಡಲಾಗುತ್ತದೆ.ಇನ್ನೊಂದೆಡೆ ಕಟ್ಟಡ ನಿರ್ಮಾಣ ಕಾಮಗಾರಿ ಚಟುವಟಿಕೆಗಳು ನಡೆಯುತ್ತಿರುತ್ತದೆ. ಇವೆಲ್ಲವೂ ವರ್ಷವಿಡೀ ಅಂದರೆ 365 ದಿನಗಳ ಕಾಲ ನಡೆಯುವ ವಾಯು ಮಾಲಿನ್ಯ ಪ್ರಕ್ರಿಯೆಗಳು. ಆದರೆ ನೀತಿ ನಿರೂಪಕರು, ಸರಕಾರಗಳು ಇವುಗಳ ಕಡೆ ಗಮನ ಹರಿಸುವ ಬದಲು ಕೇವಲ ದೀಪಾವಳಿ, ರೈತರು ಸುಡುವ ಬೆಳೆ ಶೇಷಗಳ ಬಗ್ಗೆ ಗಮನಹರಿಸಿ, ತನ್ನ ಫೋಕಸ್ ಅನ್ನು ಅಲ್ಲಿಗೆ ಮಾತ್ರ ಉಳಿಸಿಕೊಳ್ಳುತ್ತದೆ. ಅಸಲಿ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನವನ್ನೂ ಮಾಡುವುದಿಲ್ಲ.

ನಾವಿನ್ಯತೆಯ ಕಡೆಗೆ ಗಮನಹರಿಸದಿರುವ ದೋಷ:

ಭಾರತದಲ್ಲಿ ಬಸ್ ಗಳಿಗೆ ಆದ್ಯತೆ ನೀಡಬೇಕು ಎಂಬ ವಿಚಾರ ಮೊದಲಿನಿಂದಲೂ ರೂಢಿಯಲ್ಲಿದೆ. ವಾಯು ಮಾಲಿನ್ಯ ಕಡಿಮೆ ಮಾಡಲು, ಇಂಧನ ಉಳಿಸಲು ಸಾರ್ವಜನಿಕ ಬಸ್ ನಂಥ ಆಯ್ಕೆಗಳು ಅತ್ಯುತ್ತಮ ಎಂದು ಸರಕಾರಗಳೂ ಆಗಾಗ ಹೇಳುತ್ತವೆ. ಭಾರತದಲ್ಲಿ ಈಗ ಭಾರತ್ VI ಎಂಬ ಇಂಧನ ಹಾಗೂ ವಾಹನ ಮಾನದಂಡವನ್ನು ಬಳಸುತ್ತಿದ್ದು, ಉಳಿದ ಮಾನದಂಡಗಳಿಗೆ ಹೋಲಿಸಿದರೆ ಇದರಲ್ಲಿ ಶೇ.95ರಷ್ಟು ಪ್ರದೂಷಣದ ಹೊರಸೂಸುವಿಕೆ ಕಡಿಮೆಯಾಗಿರುತ್ತದೆ. ಇನ್ನೊಂದೆಡೆ ಎಲೆಕ್ಟ್ರಿಕ್ ವಾಹನಗಳನ್ನು ಸಾರ್ವಜನಿಕ ಸಾರಿಗೆಯಲ್ಲಿ ಬಳಸುವುದು ಒಳ್ಳೆಯದು ಎಂಬ ಚರ್ಚೆಗಳೂ ಮುನ್ನೆಲೆಯಲ್ಲಿವೆ. ಆದರೆ ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾದ ಮೂಲ ಸೌಲಭ್ಯವನ್ನೂ ಸರಕಾರಗಳು ಮಾಡಿಕೊಡಬೇಕಲ್ಲವೇ? ಅವುಗಳ ನಿರ್ಮಾಣಕ್ಕೆ ಅಗತ್ಯವಾದ ನೂತನ ತಂತ್ರಜ್ಞಾನಗಳ ಪೂರೈಕೆ, ಬಸ್ ಗಳು ಹಾಗೂ ಬ್ಯಾಟರಿಗಳು, ಅವುಗಳ ಮೇಲ್ವಿಚಾರಣೆ ತರಬೇತಿ ಇತ್ಯಾದಿಗಳ ಕಡೆ ಕೂಡ ಸರಕಾರಗಳು ಗಮನಹರಿಸಬೇಕಲ್ಲವೇ?

ಬಸ್ಗಳ ಉದಾಹರಣೆಯನ್ನೇ ನೋಡೋಣ. 1997ರಲ್ಲಿ ವಾಯು ಮಾಲಿನ್ಯಕ್ಕೆ ಸಂಬಂಧಿಸಿದಂತೆ ದಿಲ್ಲಿ ಸರಕಾರವು ಹೊರಡಿಸಿದ ಶ್ವೇತಪತ್ರದಲ್ಲಿ 2000 ದ ಸುಮಾರಿಗೆ ಪರಿಸರ ಮಾಲಿನ್ಯ ಕಡಿಮೆ ಮಾಡುವ 15 ಸಾವಿರ ಆಧುನಿಕ ತಂತ್ರಜ್ಞಾನದ ಬಸ್ಗಳ ಅವಶ್ಯಕತೆಗಳ ಬಗ್ಗೆ ಪ್ರಸ್ತಾಪಿಸಿತ್ತು. 2020 ರಲ್ಲೂ ಹೊಸ ಕ್ರಿಯಾ ಯೋಜನೆಯು 15 ಸಾವಿರ ಆಧುನಿಕ ತಂತ್ರಜ್ಞಾನದ ಬಸ್ ಗಳ ಬಗ್ಗೆ ಪ್ರಸ್ತಾಪಿಸಿದೆ. ಪ್ರತಿ ಸಲವೂ ಸರಕಾರಗಳು ಬದಲಾಗಿವೆ. ಆದರೆ ಈ ಬಸ್ ಗಳು ಮಾತ್ರ ರಸ್ತೆಗೆ ಬಂದಿಲ್ಲ. ಸಮಸ್ಯೆಗಳು ಉಲ್ಬಣವಾಗಿದೆ. ಪರಿಹಾರ ಮಾತ್ರ ಪ್ರಸ್ತಾವನೆಯಲ್ಲೇ ಉಳಿದಿದೆ.

ಇದು ದಿಲ್ಲಿ ಮಾತ್ರವಲ್ಲ, ಎಲ್ಲ ಸರಕಾರಗಳದ್ದೂ ಇದೇ ಕತೆಯಾಗಿದೆ. ವಾಯು ಮಾಲಿನ್ಯ ತಗ್ಗಿಸುವ ಪ್ರಯತ್ನಗಳು ಕಾಗದದಲ್ಲಿ ನಡೆಯುತ್ತವೆ. ಆದರೆ ಅದು ಕಾರ್ಯರೂಪಕ್ಕೆ ಮಾತ್ರ ಬರುವುದಿಲ್ಲ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...