• Home
  • About Us
  • ಕರ್ನಾಟಕ
Thursday, December 18, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಸಂಯಮ-ಸಭ್ಯತೆಯ ಎಲ್ಲೆ ಮೀರಿದ ರಾಜಕೀಯ ಪರಿಭಾಷೆ: ಸಾರ್ವಜನಿಕ ವಲಯದಲ್ಲಿರುವವರಿಗೆ ಭಾಷಾ ಸೌಜನ್ಯ ಮೂಲ ಮಂತ್ರವಾಗಿರಬೇಕಲ್ಲವೇ ?

ನಾ ದಿವಾಕರ by ನಾ ದಿವಾಕರ
January 22, 2023
in Top Story, ಅಂಕಣ
0
ಸಂಯಮ-ಸಭ್ಯತೆಯ ಎಲ್ಲೆ ಮೀರಿದ ರಾಜಕೀಯ ಪರಿಭಾಷೆ: ಸಾರ್ವಜನಿಕ ವಲಯದಲ್ಲಿರುವವರಿಗೆ ಭಾಷಾ ಸೌಜನ್ಯ ಮೂಲ ಮಂತ್ರವಾಗಿರಬೇಕಲ್ಲವೇ ?
Share on WhatsAppShare on FacebookShare on Telegram

ADVERTISEMENT

ವಿದ್ಯಾರ್ಥಿ ಸಮುದಾಯ ಸಾಮಾನ್ಯವಾಗಿ ವಿಷಯ-ಮಾಹಿತಿ ಕುತೂಹಲಿಯಾಗಿರುತ್ತದೆ. ದಿನಪತ್ರಿಕೆಗಳು, ನಿಯತಕಾಲಿಕ ಮ್ಯಾಗಜೈನ್‌ಗಳು ಇವೆಲ್ಲವೂ ಈ ಸಮೂಹದ ಓದಿನ ವ್ಯಾಪ್ತಿಯಿಂದ ಹೊರಗಿರುವ ಸಂದರ್ಭವೇ ಹೆಚ್ಚಾಗಿರುವುದರಿಂದ, ಈ ಯುವ ಸಮುದಾಯಕ್ಕೆ, ತಾವು ಸಾಮಾಜಿಕ ತಾಣಗಳ ಮೂಲಕ, ವಾಟ್ಸಾಪ್‌ ಮುಂತಾದ ವಾಹಿನಿಗಳ ಮೂಲಕ ಪಡೆದುಕೊಳ್ಳುವ ಅರ್ಧಸತ್ಯಗಳು ಮತ್ತು ಸುಳ್ಳು ಮಾಹಿತಿಗಳೇ ಸಮಕಾಲೀನ-ವರ್ತಮಾನದ ಮಾಹಿತಿ ಕೋಶದಂತೆ ಕಾಣುತ್ತದೆ. ಸತ್ಯಾನ್ವೇಷಣೆಯ ಕಲ್ಪನೆಯೇ ಇಲ್ಲದ ಈ ಯುವ ಮನಸುಗಳಿಗೆ ಕುತೂಹಲ ಹೆಚ್ಚಾಗಲು ಕಾರಣ ತಾವು ವಿದ್ಯುನ್ಮಾನ ಸುದ್ದಿಮನೆಗಳಲ್ಲಿ ನೋಡುವ ಮತ್ತು ಕೇಳುವ ಸುದ್ದಿಗಳಿಗೂ, ತಮ್ಮ ಸುತ್ತಲಿನ ವಾತಾವರಣಕ್ಕೂ ನಡುವೆ ಇರುವ ವ್ಯತ್ಯಾಸ. ಈ ವ್ಯತ್ಯಾಸಕ್ಕೆ ಕಾರಣ ಎಂದರೆ ನಮ್ಮ ಸುದ್ದಿಮನೆಗಳು ಸತ್ಯವನ್ನು ಬಿತ್ತರಿಸುವುದಕ್ಕಿಂತಲೂ ತಮ್ಮ ಮಾರುಕಟ್ಟೆಗೆ ಅನುಕೂಲವಾದಂತಹ ಸತ್ಯಗಳನ್ನು ಸೃಷ್ಟಿಸುವುದರಲ್ಲೇ ಹೆಚ್ಚು ಕ್ರಿಯಾಶೀಲವಾಗಿರುತ್ತವೆ.

ಮಾಧ್ಯಮಗಳು ವೃತ್ತಿಪರತೆ ಮತ್ತು ವಸ್ತುನಿಷ್ಠತೆಯನ್ನು ಕಾಪಾಡಿಕೊಳ್ಳುವುದೇ ಆದರೆ ಬಹುಶಃ ಯುವ ಸಮೂಹಕ್ಕೆ, ನಿರ್ದಿಷ್ಟವಾಗಿ ವಿದ್ಯಾರ್ಥಿ ಸಮುದಾಯಕ್ಕೆ ವಾಸ್ತವದ ಚಿತ್ರಣವೂ ಲಭ್ಯವಾಗಲು ಸಾಧ್ಯ. ಆದರೆ ದುರಾದೃಷ್ಟವಶಾತ್‌ ನವಭಾರತದ ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯಲ್ಲಿ ಮಾಧ್ಯಮಗಳು ಹಣಕಾಸು ಮಾರುಕಟ್ಟೆಯ ಭಾಗಿದಾರರಾಗಿಯೇ ಕಾರ್ಯನಿರ್ವಹಿಸುತ್ತವೆ. ಹಾಗಾಗಿ ತಾವು ಕಾಣುವ ಸನ್ನಿವೇಶ ಮತ್ತು ಕೇಳುವ ಸುದ್ದಿ ಇವೆರಡರ ನಡುವೆ ಇರುವ ಅಪಾರ ಅಂತರ ವಿದ್ಯಾರ್ಥಿ ಸಮೂಹದ ಕುತೂಹಲ ಮತ್ತು ಗೊಂದಲವನ್ನು ಹೆಚ್ಚಿಸುತ್ತವೆ. ಹಾಗೆಯೇ ಮತ್ತೊಂದೆಡೆ ಈ ಸಮುದಾಯದಲ್ಲಿ ಜಿಜ್ಞಾಸೆಗಳನ್ನೂ ಹೆಚ್ಚಿಸುತ್ತವೆ. ಶೈಕ್ಷಣಿಕ ಜ್ಞಾನ ಮತ್ತು ಸಾಮಾಜಿಕ ಪರಿಜ್ಞಾನದ ನಡುವೆ ಇರುವ ಸೂಕ್ಷ್ಮ ಅಂತರವನ್ನು ಗಮನಿಸಿ, ವಿದ್ಯಾರ್ಥಿಗಳಿಗೆ ವಸ್ತುಸ್ಥಿತಿಯನ್ನು ಮನದಟ್ಟುಮಾಡುವ ಹೊಣೆ ವಿಶಾಲ ಸಮಾಜದ ಮೇಲಿರುತ್ತದೆ.

ಈ ನಿಟ್ಟಿನಲ್ಲಿ ಇತ್ತೀಚೆಗಷ್ಟೆ ( 19-01-2023) ಮೈಸೂರಿನಲ್ಲಿ ಏರ್ಪಡಿಸಲಾಗಿದ್ದ “ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ ” ವಿಷಯ ಕುರಿತಂತೆ ವಿಧಾನಸಭಾ ಅಧ್ಯಕ್ಷರೊಡನೆ ವಿದ್ಯಾರ್ಥಿಗಳ ಸಂವಾದ ಒಂದು ಉಪಯುಕ್ತ ಬೌದ್ಧಿಕ ಕಸರತ್ತು ಎನ್ನಬಹುದು. ʼ ಸುಧಾರಣೆ ʼ ಎನ್ನುವುದರ ವ್ಯಾಪ್ತಿ ಮತ್ತು ಹರವು ನಿರ್ದಿಷ್ಟವಾಗಿ ಇಲ್ಲದಿದ್ದರೂ, ಸುಧಾರಣೆ ಆಗಬೇಕು ಎಂಬ ಆಶಯ ಸಮಾಜದಲ್ಲಿ ವ್ಯಾಪಿಸಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಈ ವಾಸ್ತವ ಸುಧಾರಣೆ ಬಯಸದ ರಾಜಕೀಯ ಪಕ್ಷಗಳಿಗೂ ತಿಳಿದಿದೆ. ಮೇಲಾಗಿ ಸುಧಾರಣೆ ಎನ್ನುವುದೇ ಸಾಪೇಕ್ಷ ವಿದ್ಯಮಾನವಾಗಿರುವುದರಿಂದ, ಸುಧಾರಣೆಯ ಗುರಿ ಯಾವುದು ಎಂಬ ಜಟಿಲ ಪ್ರಶ್ನೆಗೆ ನಾವು ಉತ್ತರ ಕಂಡುಕೊಳ್ಳಬೇಕಿದೆ. ಎಲ್ಲವೂ ಸುಸಂಗತವಾಗಿದ್ದರೆ ಸುಧಾರಣೆಯ ಅವಶ್ಯಕತೆಯೇ ಉದ್ಭವಿಸುವುದಿಲ್ಲ. ಎಲ್ಲವೂ ಅವನತಿಯತ್ತ ಸಾಗುತ್ತಿದ್ದರೆ ಸುಧಾರಣೆ ತಕ್ಷಣದ ಅನಿವಾರ್ಯತೆಯಾಗುತ್ತದೆ. ಈ ಎರಡು ಆಯಾಮಗಳ ನಡುವೆ, ಭಾರತದ ಪ್ರಜಾತಂತ್ರ ವ್ಯವಸ್ಥೆ ಮತ್ತು ಇದನ್ನು ಕಾಪಾಡುವ ಸಂಸದೀಯ ಚುನಾವಣಾ ವ್ಯವಸ್ಥೆ ಸುಧಾರಣೆಯನ್ನು ಬಯಸುತ್ತಿರುವುದು ಸುಡುವಾಸ್ತವ.

ಮೈಸೂರಿನಲ್ಲಿ ನಡೆದ ಸಂವಾದದಲ್ಲಿ “ ಚುನಾವಣೆ ಸ್ಪರ್ಧಿಸುವ ಮೊದಲು ಅಭ್ಯರ್ಥಿಗಳಿಗೆ  ಸಚ್ಚಾರಿತ್ರ್ಯ ಇರಬೇಕು, ದಿವಾಳಿ ಆಗಿರಬಾರದೆಂಬ ನಿಯಮ ಇದೆ ಚಾರಿತ್ರ್ಯ ತಿಳಿಯಲು ಮಂಪರು ಪರೀಕ್ಷೆ ನಡೆಸಬಾರದೇಕೆ ” ಎಂದು ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ವಿಧಾನಸಭಾಧ್ಯಕ್ಷರು ತಬ್ಬಿಬ್ಬಾಗಿದ್ದಾರೆ. ಈ ಪ್ರಶ್ನೆಗೆ ಸೂಕ್ತ ಉತ್ತರ ಕಾಣದೆ ಕಾಗೇರಿಯವರು “ ಈ ರೀತಿಯ ಪ್ರಶ್ನೆಯನ್ನು ಇದೇ ಮೊದಲ ಬಾರಿಗೆ ಎದುರಿಸುತ್ತಿದ್ದೇನೆ, ಅದೂ ಮೈಸೂರಿನಲ್ಲಿ, ಈ ಬಗ್ಗೆಯೂ ಚರ್ಚೆ ಮಾಡಲಾಗುವುದು ” ಎಂದು ಉತ್ತರಿಸಿ ನಗೆ ಉಕ್ಕಿಸಿದ್ದಾರೆ. ಈ ಪ್ರಶ್ನೆಯನ್ನು ಗಂಭೀರವಾಗಿ ಗಮನಿಸಿದಾಗ, ಲೌಕಿಕ ಜಗತ್ತಿಗೆ ಇನ್ನೂ ಸಂಪೂರ್ಣವಾಗಿ ತೆರೆದುಕೊಳ್ಳದ ವಿದ್ಯಾರ್ಥಿ ಸಮುದಾಯವು ರಾಜಕೀಯ ನಾಯಕರ ಸಚ್ಚಾರಿತ್ರ್ಯದ ಬಗ್ಗೆ ಆಲೋಚನೆ ಮಾಡುತ್ತಿರುವುದರ ಸೂಕ್ಷ್ಮ ಎಳೆಯನ್ನು ಗುರುತಿಸಬೇಕಿದೆ. ಸಚ್ಚಾರಿತ್ರ್ಯದ ರಾಜಕೀಯ ನಾಯಕರು ಲೌಕಿಕವಾಗಿ ಹಾಗೂ ತಾತ್ವಿಕವಾಗಿ ಕೇವಲ ಗ್ರಾಂಥಿಕ ರೂಪದಲ್ಲಿ ಮಾತ್ರ ಕಾಣಿಸಿಕೊಳ್ಳುವ ಒಂದು ಸಂದರ್ಭದಲ್ಲಿ, ಈ ವಿದ್ಯಾರ್ಥಿಯ ಪ್ರಶ್ನೆ ಕುತೂಹಲವನ್ನು ಹೆಚ್ಚಿಸುವುದು ಸಹಜ.

ಸಚ್ಚಾರಿತ್ರ್ಯ ಎಂಬ ಪದದ ಆಳ-ಅಗಲ, ವ್ಯಾಪ್ತಿ-ಹರವುಗಳ ಪರಿವೆಯೇ ಇಲ್ಲದ ಯುವ ಮನಸುಗಳಲ್ಲಿ ಈ ಪ್ರಶ್ನೆ ಉದ್ಭವಿಸಿರುವುದು ನಮ್ಮ ಕಲುಷಿತ ರಾಜಕಾರಣಕ್ಕೆ ಕನ್ನಡಿ ಹಿಡಿದಂತೆಯೇ ಕಾಣುತ್ತದೆ. ಸುದ್ದಿಮನೆಗಳಲ್ಲಿ ಬಿತ್ತರವಾಗುವ ಪ್ಯಾನೆಲ್‌ ಚರ್ಚೆಗಳು, ರಾಜಕೀಯ ನಾಯಕರ ವಾಗ್ವಾದ, ವಾಗ್ದಾಳಿ ಮತ್ತು ವಾಗ್ಯುದ್ಧ, ಆರೋಪ-ಪ್ರತ್ಯಾರೋಪಗಳ ನಡುವೆ ರಾಜಕೀಯ ನಾಯಕರು ಸಾರ್ವಜನಿಕ ವೇದಿಕೆಗಳಲ್ಲಿ ಬಳಸುವ ಭಾಷೆ ಮತ್ತು ಆಧುನಿಕ ರಾಜಕೀಯ ಪರಿಭಾಷೆ ಇವೆಲ್ಲವನ್ನೂ ಗಮನಿಸುತ್ತಲೇ ಬರುವ ವಿದ್ಯಾರ್ಥಿ-ಯುವ ಸಮುದಾಯಕ್ಕೆ ತಮ್ಮ ಶಾಲೆಗಳ , ಕೌಟುಂಬಿಕ ಹಾಗೂ ನೆರೆಹೊರೆಯ ವಾತಾವರಣದೊಡನೆ ತುಲನೆ ಮಾಡಿದಾಗ, ರಾಜಕೀಯ ನಾಯಕರಲ್ಲಿ ಸಚ್ಚಾರಿತ್ರ್ಯದ ಕೊರತೆ ಕಾಣುವುದು ಸಹಜ. ಸಂಯಮ, ಸಜ್ಜನಿಕೆ, ಸರಳತೆ, ಸೌಜನ್ಯ, ಸಾರ್ವಜನಿಕ ಸಭ್ಯತೆ ಮತ್ತು ಕನಿಷ್ಠ ಮನುಜ ಸಂವೇದನೆ ಈ ಗುಣಲಕ್ಷಣಗಳು ಪ್ರತಿ ವ್ಯಕ್ತಿಯಲ್ಲೂ ಇರಬೇಕಾದುದು ಅತ್ಯವಶ್ಯವಾದರೂ, ಸಾರ್ವಜನಿಕ ಬದುಕಿನಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿದ್ದುಕೊಂಡು, ಸಮಾಜವನ್ನು ತಿದ್ದುವ ಮತ್ತು ಮುಂದೊಯ್ಯುವ ಹೊಣೆ ಹೊತ್ತಿರುವ ವ್ಯಕ್ತಿಗಳಲ್ಲಿ ಈ ಗುಣಗಳು ಇದ್ದರೆ ಮಾತ್ರವೇ ಸಾಮಾಜಿಕ-ಸಾಂಸ್ಕೃತಿಕ ಸ್ವಾಸ್ಥ್ಯ ಸಾಧ್ಯವಾಗುತ್ತದೆ. ರಾಜಕೀಯ ನಾಯಕರು ಇವರಲ್ಲಿ ಪ್ರಧಾನವಾಗಿ ಎದ್ದುಕಾಣುತ್ತಾರೆ.

ದುರಾದೃಷ್ಟವಶಾತ್‌ ಇತ್ತೀಚಿನ ದಿನಗಳಲ್ಲಿ ನಮ್ಮ ನಡುವಿನ ರಾಜಕೀಯ ಪರಿಭಾಷೆ ತನ್ನ ಸೌಜನ್ಯದ ಮುಖವಾಡವನ್ನೂ ಕಳಚಿಕೊಂಡು, ಸಾರ್ವಜನಿಕವಾಗಿ ಬೆತ್ತಲಾಗುತ್ತಿದೆ. ಜನಪ್ರತಿನಿಧಿಗಳು ತಮ್ಮ ಸಾಂವಿಧಾನಿಕ ನಿಷ್ಠೆ ಮತ್ತು ಕರ್ತವ್ಯಗಳನ್ನು ನಿರ್ಲಕ್ಷಿಸಿ ತಮ್ಮದೇ ಸ್ವಾರ್ಥ ಹಿತಾಸಕ್ತಿಗಳತ್ತ ಗಮನಹರಿಸುವ ವಿದ್ಯಮಾನಕ್ಕೆ ದಶಕಗಳಷ್ಟು ಇತಿಹಾಸವಿದೆ. ನಮ್ಮ ಸುಶಿಕ್ಷಿತ ಸಮಾಜವೂ ಇದನ್ನು ಸಹಜ ಅಥವಾ ಅನಿವಾರ್ಯ ಎನ್ನುವಂತೆ ಒಪ್ಪಿಕೊಂಡು ಮನ್ನಣೆ ನೀಡುತ್ತಲೇ ಬಂದಿದೆ. ಹಾಗಾಗಿಯೇ ಚುನಾವಣೆಗಳಲ್ಲಿ ಪ್ರಾಮಾಣಿಕ ಅಭ್ಯರ್ಥಿಗಳಿಗಿಂತಲೂ ಅಪರಾಧದ ಹಿನ್ನೆಲೆ ಇರುವವರು, ಭ್ರಷ್ಟಾಚಾರದ ಆರೋಪ ಹೊತ್ತಿರುವವರು ಸುಲಭವಾಗಿ ಜಯಗಳಿಸುತ್ತಾರೆ. ಕಾರ್ಪೋರೇಟ್‌ ಮಾರುಕಟ್ಟೆಯ ಬಂಡವಾಳವೇ ಇಲ್ಲಿ ನಿರ್ಣಾಯಕವಾಗುವುದರಿಂದ, ಚುನಾವಣಾ ಕಣದಲ್ಲಿ ಬಂಡವಾಳದ ಹರಿವು ಸಹಜ ಪ್ರಕ್ರಿಯೆಯಾಗಿ ಜಾರಿಯಲ್ಲಿದೆ. ಈ ಅಪಸವ್ಯವನ್ನೂ ಮೀರಿ ಯೋಚಿಸಿದಾಗ, ಜನಸಾಮಾನ್ಯರು ತಮ್ಮ ಪ್ರತಿನಿಧಿಗಳಿಂದ ಕನಿಷ್ಠ ಸೌಜನ್ಯಯುತ/ಸಂಭಾವಿತ ಮಾತುಗಳನ್ನಾದರೂ ಕೇಳಲು ಹಂಬಲಿಸುವುದು ಸಹಜವೇ ಆಗಿರುತ್ತದೆ. ಮೇಲೆ ಉಲ್ಲೇಖಿಸಿರುವ ವಿದ್ಯಾರ್ಥಿಯ ಪ್ರಶ್ನೆಯ ಹಿಂದೆ ಈ ಹಂಬಲವನ್ನು ಗುರುತಿಸಬಹುದು.

ರಾಜಕೀಯ ಎದುರಾಳಿಗಳ ವಿರುದ್ಧ ತೀಕ್ಷ್ಣವಾದ ವಾಗ್ದಾಳಿ ನಡೆಸುವುದು ಅಧಿಕಾರ ರಾಜಕಾರಣದ ಒಂದು ಭಾಗ. ಇದು ಸಹಜವೂ ಹೌದು, ಅಧಿಕಾರಕ್ಕಾಗಿ ಹಾತೊರೆಯುವ ರಾಜಕೀಯ ಪಕ್ಷಗಳಿಗೆ ತಮ್ಮ ಸಾಧನೆಯಲ್ಲಿ ಹೇಳಿಕೊಳ್ಳುವಂತಹುದೇನೂ ಇಲ್ಲವಾದಾಗ ಅನಿವಾರ್ಯವೂ ಹೌದು. ಎದುರಾಳಿಯ ದೌರ್ಬಲ್ಯಗಳನ್ನು ಸಾರ್ವಜನಿಕರ ಮುಂದಿರಿಸುತ್ತಲೇ ತಮ್ಮ ಲೋಪದೋಷಗಳನ್ನು ಮುಚ್ಚಿಟ್ಟುಕೊಳ್ಳುವುದು ಒಂದು ರಾಜಕೀಯ ಕಲೆ. ಆದರೆ ಈ ವಾಗ್ದಾಳಿಗಳ ನಡುವೆ ಹೊರಸೂಸಲಾಗುವ ರಾಜಕೀಯ ಪರಿಭಾಷೆ ಸಂಯಮ, ಸಭ್ಯತೆ, ಸೌಜನ್ಯ ಮತ್ತು ನಾಗರಿಕ ಸಹಿಷ್ಣುತೆಯಿಂದ ಕೂಡಿರಬೇಕಾದುದು ಯಾವುದೇ ಆರೋಗ್ಯಕರ ಸಮಾಜದಲ್ಲಿ ಅತ್ಯಗತ್ಯ. ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣದಲ್ಲಿ ನೆಹರೂ ಯುಗದತ್ತ ನೋಡುವುದೇ ಬೇಕಿಲ್ಲ, ಎರಡು ಮೂರು ದಶಕಗಳ ಹಿಂದಿನ ರಾಜಕಾರಣವನ್ನು ಗಮನಿಸಿದರೂ ಎಲ್‌ ಕೆ ಅಡ್ವಾಣಿ, ಅಟಲ್‌ ಬಿಹಾರಿ ವಾಜಪೇಯಿ ಮುಂತಾದ ನಾಯಕರು ತಮ್ಮ ಕಾಂಗ್ರೆಸ್‌ ವಿರೋಧಿ ಧೋರಣೆಯನ್ನು ಅಭಿವ್ಯಕ್ತಿಸುವಾಗ ಬಳಸುತ್ತಿದ್ದ ಸೌಜನ್ಯಯುತ ಭಾಷೆ ನಮಗೆ ಕಂಡುಬರುತ್ತದೆ. ಅವರ ರಾಜಕೀಯ ವಿರೋಧ ಅವರಲ್ಲಿನ ಭಾಷಾ ಸೌಜನ್ಯತೆಯನ್ನು ಭಂಗಗೊಳಿಸಿರಲಿಲ್ಲ ಎನ್ನುವುದು ಗಮನಾರ್ಹ ಅಂಶ.

ಸಾರ್ವಜನಿಕ ಜೀವನದಲ್ಲಿರುವ ಯಾವುದೇ ಉನ್ನತ ಅಧಿಕಾರಿ ಅಥವಾ ಅಧಿಕಾರಸ್ತ ರಾಜಕೀಯ ನಾಯಕರಿಗೆ ತಾವು ಸಾರ್ವಜನಿಕವಾಗಿ ಬಳಸುವ ಭಾಷೆ ಸಮಾಜದ ಮೇಲೆ, ವಿಶೇಷವಾಗಿ ಯುವಪೀಳಿಗೆಯ ಮೇಲೆ ಪ್ರಭಾವ ಬೀರುತ್ತದೆ ಎಂಬ ಪರಿಜ್ಞಾನ ಇರಬೇಕಾಗುತ್ತದೆ.  ಎದುರಾಳಿಗಳ ಚಾರಿತ್ರ್ಯವಧೆ ಮಾಡುವುದು ಅವರವರ ವ್ಯಕ್ತಿಗತ ಹಕ್ಕಾದರೂ, ಅಲ್ಲಿ ಬಳಸುವ ಭಾಷೆ ಸಂಯಮಪೂರ್ಣವಾಗಿ, ಸಭ್ಯತೆಯ ಚೌಕಟ್ಟಿನಲ್ಲೇ ಇರಬೇಕಾಗುತ್ತದೆ. ನಾಗರಿಕತೆಯನ್ನು ಉಸಿರಾಡುವ ಯಾವುದೇ ಸಮಾಜ ಇದನ್ನು ನಿರೀಕ್ಷಿಸುತ್ತದೆ.  ದುರಂತ ಎಂದರೆ ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ಪರಸ್ಪರ ನಿಂದನೆ, ದೋಷಾರೋಪಣೆಯ ನಡುವೆ ಬಳಸುತ್ತಿರುವ ಅವಾಚ್ಯ ಶಬ್ದಗಳು, ನಿಂದನೀಯ ಪದಗಳು, ಅಸಾಂಸ್ಕೃತಿಕ ಮಾತುಗಳು ಮತ್ತು ಅಸಭ್ಯ ಹೇಳಿಕೆಗಳು ಸಮಾಜದ ಈ ನಿರೀಕ್ಷೆಯನ್ನು ಹುಸಿಯಾಗಿಸುತ್ತಿವೆ. ಕಾಂಗ್ರೆಸ್‌ ನಾಯಕ ಹರಿಪ್ರಸಾದ್‌ ಅವರನ್ನು ಪಿಂಪ್‌ ಅಥವಾ ತಲೆಹಿಡುಕ ಎಂದು ಕರೆಯುವ ಬಿಜೆಪಿ ಸಚಿವ ಬಿ. ಸಿ. ಪಾಟೀಲ್‌ ಆಗಲೀ, ಪಕ್ಷಾಂತರಿಗಳನ್ನು ವೇಶ್ಯೆಯರಿಗೆ ಹೋಲಿಸಿರುವ ಹರಿಪ್ರಸಾದ್‌ ಅವರಾಗಲೀ, ಲಿಂಗಸೂಕ್ಷ್ಮತೆಯ ಎಲ್ಲೆ ಮೀರಿರುವುದು ಸ್ಪಷ್ಟವಾಗಿದೆ. ಇಂತಹ ಲಿಂಗ ಸಂವೇದನೆ ಇಲ್ಲದ ಅಸೂಕ್ಷ್ಮ ನುಡಿಗಳು ಭವಿಷ್ಯದ ಪ್ರಜೆಗಳೆಂದೇ ಪರಿಭಾವಿಸಲಾಗುವ ಯುವ ಸಮುದಾಯಕ್ಕೆ ಯಾವ ಸಂದೇಶವನ್ನು ರವಾನಿಸುತ್ತದೆ ? ಈ ಪ್ರಶ್ನೆ ಇಡೀ ರಾಜಕೀಯ ವಲಯವನ್ನೇ ಕಾಡಬೇಕಿದೆ.

ತಾಕತ್ತಿದ್ದರೆ, ಗಂಡಸಾಗಿ ಹುಟ್ಟಿದ್ದರೆ, ಅಪ್ಪನಿಗೇ ಹುಟ್ಟಿದ್ದರೆ , ಗಂಡಸ್ತನವಿದ್ದರೆ ಇವೇ ಮುಂತಾದ ಪದಗಳಂತೂ ಸಾರ್ವಜನಿಕ ವಲಯದಲ್ಲಿ ಯಾವುದೇ ಮುಜುಗರ ಸಂಕೋಚ ಇಲ್ಲದೆ ಹರಿದಾಡುತ್ತವೆ. ಮಹಾತ್ಮಾ ಗಾಂಧಿ-ಜವಹರಲಾಲ್‌ ನೆಹರೂ ಅವರಿಂದ ಪ್ರಧಾನಿ ನರೇಂದ್ರ ಮೋದಿಯವರೆಗೆ ಸ್ವತಂತ್ರ ಭಾರತವನ್ನು ಪ್ರತಿನಿಧಿಸುವ ಎಲ್ಲ ನಾಯಕರಿಗೂ ಒಂದು ಸ್ವಂತ ವ್ಯಕ್ತಿತ್ವ , ವರ್ಚಸ್ಸು ಮತ್ತು ನಿಲುಮೆ ಇರುವುದು ಪ್ರಜಾಪ್ರಭುತ್ವದ ಸಹಜ ಲಕ್ಷಣ. ಎಲ್ಲರನ್ನೂ ವ್ಯಕ್ತಿಗತ ನೆಲೆಯಲ್ಲಿ ಗೌರವದಿಂದ ಕಾಣುವುದು ನಾಗರಿಕತೆಯ ಲಕ್ಷಣ. ರಾಜಕೀಯ ಅಥವಾ ಸೈದ್ಧಾಂತಿಕ ಕಾರಣಗಳಿಗಾಗಿ ಎಂತಹುದೇ ಭಿನ್ನಾಭಿಪ್ರಾಯಗಳಿದ್ದರೂ, ವ್ಯಕ್ತಿಗತ ನೆಲೆಯಲ್ಲಿ ಪರಸ್ಪರ ಹೋಲಿಕೆ ಮಾಡುವಾಗ ʼ ಒಬ್ಬರು ಮತ್ತೊಬ್ಬರ ಪಾದ ಧೂಳಿಗೆ ಸಮಾನರಾ ʼ ಎಂದು ಪ್ರಶ್ನಿಸುವುದು ನಮ್ಮೊಳಗಿನ ಅಸೂಕ್ಷ್ಮತೆ ಮತ್ತು ಅಸಂವೇದನೆಯ ಲಕ್ಷಣವಾಗಿಯೇ ಕಾಣುತ್ತದೆ. ವೈಯುಕ್ತಿಕ ಭಿನ್ನಾಭಿಪ್ರಾಯಗಳಿಗಾಗಿ ಯಾವುದೇ ರಾಜಕೀಯ ನಾಯಕರನ್ನು ಪಾದಧೂಳಿಗೆ ಹೋಲಿಕೆ ಮಾಡುವುದು ಅಕ್ಷಮ್ಯವಷ್ಟೇ ಅಲ್ಲ, ಮನುಜ ಸೂಕ್ಷ್ಮತೆಯಿಲ್ಲದ, ಅಸಭ್ಯತೆಯ ಪರಮಾವಧಿಯೂ ಹೌದು. ಪರಸ್ಪರ ವ್ಯಕ್ತಿಗತ ಅಭಿಪ್ರಾಯಗಳೇನೇ ಇದ್ದರೂ, ದೋಷಾರೋಪಗಳೇನೇ ಇದ್ದರೂ, ರಾಜಕೀಯ ನಾಯಕರು ಸಾರ್ವಜನಿಕ ವಲಯದಲ್ಲಿ ಮಾತನಾಡುವಾಗ ಯಾವುದೇ ವ್ಯಕ್ತಿಯ ಬಗ್ಗೆ ಲಘುವಾದ ಭಾಷೆ ಬಳಸುವುದು ನಾಗರಿಕತೆಯ ಲಕ್ಷಣವಲ್ಲ.

ಕರ್ನಾಟಕದಲ್ಲಿ ಶಾಲಾ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ನಿಟ್ಟಿನಲ್ಲಿ ರಾಜ್ಯದ ಹಲವು ಮಠಾಧೀಶರು ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಈ ಸಲಹೆಗಳನ್ನು ಬದಿಗಿಟ್ಟು ನೋಡಿದಾಗಲೂ, ಇಂದು ಬಹುಮುಖ್ಯವಾಗಿ ಮೌಲ್ಯ ಶಿಕ್ಷಣ ಬೇಕಿರುವುದು ವಿದ್ಯಾರ್ಥಿಗಳಿಗಲ್ಲ, ನಮ್ಮ ರಾಜಕೀಯ ನಾಯಕರುಗಳಿಗೆ ಎನ್ನುವುದು ಸ್ಪಷ್ಟವಾಗುತ್ತದೆ. ಇಂದಿನ ರಾಜಕೀಯ ನೇತಾರರು ಭಾಷಾ ಸಭ್ಯತೆ, ಸೌಜನ್ಯ ಮತ್ತು ಸಜ್ಜನಿಕೆಯನ್ನು ಶೋಧಿಸಲು ಇತಿಹಾಸದ ಪುಟಗಳಿಗೆ ಹಿಂದಿರುಗಬೇಕಿಲ್ಲ. ನೆಹರೂ ಯುಗದ ಸಂಸದೀಯ ಚರ್ಚೆಗಳು, ರಾಮಕೃಷ್ಟ ಹೆಗಡೆಯವರ ಕಾಲಘಟ್ಟದ ವಿಧಾನಮಂಡಲದ ಚರ್ಚೆಗಳು, ಕಟ್ಟಾ ಕಾಂಗ್ರೆಸ್‌ ವಿರೋಧಿಗಳಾಗಿದ್ದ ವಾಜಪೇಯಿ, ಅಡ್ವಾಣಿ ಮುಂತಾದವರ ಚುನಾವಣಾ ಭಾಷಣಗಳು ಇವುಗಳನ್ನು ಮತ್ತೊಮ್ಮೆ ಓದಿದರೆ ಕೊಂಚಮಟ್ಟಿಗಾದರೂ ವಿವೇಕ ಜಾಗೃತವಾಗಬಹುದು. ಭಾರತದ ರಾಜಕಾರಣದ ನಿಘಂಟು ʼಮೌಲ್ಯʼ ಎಂಬ ಪದವನ್ನೇ ಕಳೆದುಕೊಂಡರುವ ಸುಡುವಾಸ್ತವದ ನಡುವೆಯೇ ಭವಿಷ್ಯದ ಪೀಳಿಗೆಯ ಹಿತದೃಷ್ಟಿಯಿಂದಲಾದರೂ ವರ್ತಮಾನದ ರಾಜಕೀಯ ಪರಿಭಾಷೆಯಲ್ಲಿ ಸೌಜನ್ಯ, ಸಂಯಮ ಮತ್ತು ಸಭ್ಯತೆಯನ್ನು ಉಳಿಸಿಕೊಳ್ಳುವತ್ತ ಗಮನಹರಿಸುವುದು ಒಳಿತು. ವ್ಯಕ್ತಿಗತ ಮಾಲಿನ್ಯಗಳು ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ದುಷ್ಪರಿಣಾಮಗಳನ್ನು ಬೀರುತ್ತವೆ ಆದರೆ ಭಾಷಾ ಮಾಲಿನ್ಯವು ಇಡೀ ಸಮಾಜವನ್ನು ಪ್ರಭಾವಿಸುತ್ತದೆ. ಈ ಸೂಕ್ಷ್ಮವನ್ನು ಎಲ್ಲ ರಾಜಕೀಯ ನಾಯಕರೂ, ಕಾರ್ಯಕರ್ತರೂ ಅರಿತಿದ್ದರೆ ಕ್ಷೇಮ.

Previous Post

ತೇಜಸ್ವಿ ಸೂರ್ಯನ ಬಾಲ ಕುಚೇಷ್ಟೆಗಳು

Next Post

ಪಂಚರತ್ನ ಯಶಸ್ಸಿನ ಅಲೆಯಲ್ಲಿದ್ದ ಜೆಡಿಎಸ್​ಗೆ ಎದುರಾಯ್ತು​ ಶಾಕ್​.. ಗೆಲ್ಲುವ ಅಭ್ಯರ್ಥಿ ಸಾವು!

Related Posts

ಶಾಲಾ ಮಕ್ಕಳಿಗೆ ಭಗವದ್ಗೀತೆ ಯಾಕೆ ಬೋಧಿಸಬೇಕು..?: ಕಾರಣ ನೀಡಿದ ಕುಮಾರಸ್ವಾಮಿ
Top Story

ಶಾಲಾ ಮಕ್ಕಳಿಗೆ ಭಗವದ್ಗೀತೆ ಯಾಕೆ ಬೋಧಿಸಬೇಕು..?: ಕಾರಣ ನೀಡಿದ ಕುಮಾರಸ್ವಾಮಿ

by ಪ್ರತಿಧ್ವನಿ
December 18, 2025
0

ನವದೆಹಲಿ: ಶಾಲಾ ಹಂತದಿಂದಲೇ ಭಗವದ್ಗೀತೆಯನ್ನು( Bhagavad Gita) ಮಕ್ಕಳಿಗೆ ಬೋಧಿಸಬೇಕು. ಇದು ಅತ್ಯಂತ ಉತ್ತಮ ಶೈಕ್ಷಣಿಕ ಸುಧಾರಣಾ ಕ್ರಮವಾಗುತ್ತದೆ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು...

Read moreDetails
Daily Horoscope: ಇಂದು ಅದೃಷ್ಟ ಲಕ್ಷ್ಮೀ ಕೈ ಹಿಡಿಯುವ ರಾಶಿಗಳಿವು..!

Daily Horoscope: ಇಂದು ಅದೃಷ್ಟ ಲಕ್ಷ್ಮೀ ಕೈ ಹಿಡಿಯುವ ರಾಶಿಗಳಿವು..!

December 18, 2025
ದೇಶದಲ್ಲಿ ಹಣದುಬ್ಬರ ಪ್ರಮಾಣ ಇಳಿಕೆ..! ಕಾರಣವೇನು?

ದೇಶದಲ್ಲಿ ಹಣದುಬ್ಬರ ಪ್ರಮಾಣ ಇಳಿಕೆ..! ಕಾರಣವೇನು?

December 17, 2025

ರಸ್ತೆ ಅಪಘಾತ ಸಂತ್ರಸ್ತರಿಗೆ 1.5 ಲಕ್ಷದವರೆಗೆ ‘ಉಚಿತ ಚಿಕಿತ್ಸೆ’ ; ಕೇಂದ್ರದಿಂದ ಹೊಸ ಯೋಜನೆ

December 17, 2025

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

December 17, 2025
Next Post
ಪಂಚರತ್ನ ಯಶಸ್ಸಿನ ಅಲೆಯಲ್ಲಿದ್ದ ಜೆಡಿಎಸ್​ಗೆ ಎದುರಾಯ್ತು​ ಶಾಕ್​.. ಗೆಲ್ಲುವ ಅಭ್ಯರ್ಥಿ ಸಾವು!

ಪಂಚರತ್ನ ಯಶಸ್ಸಿನ ಅಲೆಯಲ್ಲಿದ್ದ ಜೆಡಿಎಸ್​ಗೆ ಎದುರಾಯ್ತು​ ಶಾಕ್​.. ಗೆಲ್ಲುವ ಅಭ್ಯರ್ಥಿ ಸಾವು!

Please login to join discussion

Recent News

ಶಾಲಾ ಮಕ್ಕಳಿಗೆ ಭಗವದ್ಗೀತೆ ಯಾಕೆ ಬೋಧಿಸಬೇಕು..?: ಕಾರಣ ನೀಡಿದ ಕುಮಾರಸ್ವಾಮಿ
Top Story

ಶಾಲಾ ಮಕ್ಕಳಿಗೆ ಭಗವದ್ಗೀತೆ ಯಾಕೆ ಬೋಧಿಸಬೇಕು..?: ಕಾರಣ ನೀಡಿದ ಕುಮಾರಸ್ವಾಮಿ

by ಪ್ರತಿಧ್ವನಿ
December 18, 2025
Daily Horoscope: ಇಂದು ಅದೃಷ್ಟ ಲಕ್ಷ್ಮೀ ಕೈ ಹಿಡಿಯುವ ರಾಶಿಗಳಿವು..!
Top Story

Daily Horoscope: ಇಂದು ಅದೃಷ್ಟ ಲಕ್ಷ್ಮೀ ಕೈ ಹಿಡಿಯುವ ರಾಶಿಗಳಿವು..!

by ಪ್ರತಿಧ್ವನಿ
December 18, 2025
ದೇಶದಲ್ಲಿ ಹಣದುಬ್ಬರ ಪ್ರಮಾಣ ಇಳಿಕೆ..! ಕಾರಣವೇನು?
Top Story

ದೇಶದಲ್ಲಿ ಹಣದುಬ್ಬರ ಪ್ರಮಾಣ ಇಳಿಕೆ..! ಕಾರಣವೇನು?

by ಪ್ರತಿಧ್ವನಿ
December 17, 2025
Top Story

ರಸ್ತೆ ಅಪಘಾತ ಸಂತ್ರಸ್ತರಿಗೆ 1.5 ಲಕ್ಷದವರೆಗೆ ‘ಉಚಿತ ಚಿಕಿತ್ಸೆ’ ; ಕೇಂದ್ರದಿಂದ ಹೊಸ ಯೋಜನೆ

by ಪ್ರತಿಧ್ವನಿ
December 17, 2025
Top Story

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
December 17, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಶಾಲಾ ಮಕ್ಕಳಿಗೆ ಭಗವದ್ಗೀತೆ ಯಾಕೆ ಬೋಧಿಸಬೇಕು..?: ಕಾರಣ ನೀಡಿದ ಕುಮಾರಸ್ವಾಮಿ

ಶಾಲಾ ಮಕ್ಕಳಿಗೆ ಭಗವದ್ಗೀತೆ ಯಾಕೆ ಬೋಧಿಸಬೇಕು..?: ಕಾರಣ ನೀಡಿದ ಕುಮಾರಸ್ವಾಮಿ

December 18, 2025
Daily Horoscope: ಇಂದು ಅದೃಷ್ಟ ಲಕ್ಷ್ಮೀ ಕೈ ಹಿಡಿಯುವ ರಾಶಿಗಳಿವು..!

Daily Horoscope: ಇಂದು ಅದೃಷ್ಟ ಲಕ್ಷ್ಮೀ ಕೈ ಹಿಡಿಯುವ ರಾಶಿಗಳಿವು..!

December 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada