ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗ ಪೊಲೀಸ್ ಇಲಾಖೆ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಧರ್ಮ ನುಸುಳಿತ್ತು. ಪೊಲೀಸರು ಆಯುಧ ಪೂಜೆ ಮಾಡುವಾಗ ಕೇಸರಿ ವಸ್ತ್ರ ಧರಿಸಿ ಕಾಣಿಸಿಕೊಂಡಿದ್ದರು. ಆಗಲೇ ಸಿದ್ದರಾಮಯ್ಯ ಪೊಲೀಸರನ್ನು ಎಚ್ಚೆರಿಸುವ ಕೆಲಸ ಮಾಡಿದ್ದರು. ಒಂದು ಧರ್ಮದ ಪರವಾಗಿ ಕಾಣಿಸಿಕೊಳ್ಳುವುದು ಬೇರೊಂದು ಧರ್ಮದ ಜನರನ್ನು ಭಯಭೀತರನ್ನಾಗಿ ಮಾಡಿದಂತೆ ಆಗುತ್ತದೆ. ಸಂವಿಧಾನದ ಆಶಯದಲ್ಲಿ ಕೆಲಸ ಮಾಡುವ ಆರಕ್ಷಕರು ತಮ್ಮ ಯೂನಿಫಾರಂ ಮಾತ್ರ ಬಳಸಬೇಕು. ಕೇಸರಿ ವಸ್ತ್ರಗಳನ್ನು ಠಾಣೆಯಲ್ಲಿ ಹಾಕಿಕೊಂಡು ಬಂದಿದ್ದು ಸರಿಯಲ್ಲ ಎನ್ನುವ ವಾದ ಮಂಡನೆ ಮಾಡಿದ್ದರು. ಇನ್ನು ಬಿಜೆಪಿ ನಾಯಕರು ಸೇರಿದಂತೆ ಹಿರಿಯ ಪೊಲೀಸ್ ಆಧಿಕಾರಿಗಳು, ಆಯುಧ ಪೂಜೆ ದಿನ ತಮ್ಮಿಷ್ಟದ ಧಿರಿಸು ಧರಿಸಿಕೊಂಡು ಬಂದು ಪೂಜೆ ಮಾಡುವುದು ವಾಡಿಕೆ. ಇದರಲ್ಲಿ ವಿಶೇಷ ಏನೂ ಇಲ್ಲ ಎನ್ನುವ ಮೂಲಕ ಪೊಲೀಸ್ ಅಧಿಕಾರಿಗಳನ್ನು ಸಮರ್ಥಿಸಿಕೊಂಡಿದ್ದರು. ಆದರೆ ಮೊದಲ ಸಭೆಯಲ್ಲಿ ಪೊಲೀಸರಿಗೆ ಕಾಂಗ್ರೆಸ್ ಸರ್ಕಾರ ಖಡಕ್ ವಾರ್ನಿಂಗ್ ಮಾಡಿದೆ.
ಬಿಜೆಪಿ ಸರ್ಕಾರದ ವ್ಯವಸ್ಥೆ ನಮ್ಮ ಸರ್ಕಾರದಲ್ಲಿ ಬೇಡ..!
ರಾಜ್ಯದಲ್ಲಿ ಹೊಸ ಸರ್ಕಾರ ರಚನೆ ಆದ ಬಳಿಕ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್, ಅಧಿಕಾರಿಗಳಿಗೆ ಖಡಕ್ ಸಂದೇಶ ರವಾನೆ ಮಾಡಿದ್ದಾರೆ. ಕಳೆದ 4 ವರ್ಷದ ವ್ಯವಸ್ಥೆ ನಮಗೆ ಬೇಡ. ನಮ್ಮ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ಇರಬೇಕು. ನಮ್ಮ ಸರ್ಕಾರದಲ್ಲಿ ಕಾನೂನು ಎಲ್ಲರಿಗೂ ಒಂದೇ. ಕಾನೂನು ಪಾಲನೆ ಮಾಡಬೇಕು. ಎಷ್ಟೇ ದೊಡ್ಡವರಾದರೂ ಕಾನೂನು ಎಲ್ಲರಿಗೂ ಒಂದೇ ಇರಬೇಕು. ರೌಡಿಸಂ ಚಟುವಟಿಕೆಗಳ ಮೇಲೆ ಹೆಚ್ಚು ನಿಗಾ ಇಡಬೇಕು. ಯಾವುದೇ ಕಾನೂನು ಉಲ್ಲಂಘನೆ, ರೌಡಿಸಂ ಚಟುವಟಿಕೆಗಳು ನಡೆದರೆ ಅದಕ್ಕೆ ಆಯಾ ವಲಯದ ಡಿಸಿಪಿಗಳು, ಎಸ್ಪಿ ಮಟ್ಟದ ಅಧಿಕಾರಿಯನ್ನೇ ಹೊಣೆ ಮಾಡ್ತೀವಿ. ಅಕ್ರಮ ನೈಟ್ ಕ್ಲಬ್ಗಳ ಮೇಲೆ ಪೊಲೀಸರು ನಿಗಾ ಇಡಬೇಕು. ಒಳ್ಳೆ ಕೆಲಸ ಮಾಡೋರ ಜೊತೆ ಸರ್ಕಾರ ಇರುತ್ತೆ. ಡ್ರಗ್ಸ್, ಅಕ್ರಮ ಚಟುವಟಿಕೆ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಿ. ಸಾಮಾಜಿಕ ಜಾಲತಾಣಗಳ ಮೇಲೂ ಹೆಚ್ಚು ನಿಗಾ ಇಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಯಾರಾದ್ರು ತೇಜೋವಧೆ ಮಾಡಿದ್ರೆ, ಸುಮೋಟೋ ಕೇಸ್ ದಾಖಲಿಸಿ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ.
ಹಳೇ ತಪ್ಪುಗಳು ಪುನರಾವರ್ತನೆ ಆಗಬಾರದು ಹುಷಾರ್
ನೀವು ಸ್ವತಂತ್ರವಾಗಿ, ಮುಕ್ತವಾಗಿ ಕೆಲಸ ಮಾಡಿ, ನಿಮ್ಮ ಕೆಲಸದಲ್ಲಿ ನಾವು ಯಾವುದೇ ಕಾರಣಕ್ಕೂ ಮಧ್ಯ ಪ್ರವೇಶಿಸುವುದಿಲ್ಲ. ಸಮಸ್ಯೆಗಳೊಂದಿಗೆ ಜನಸಾಮಾನ್ಯರು ಪೋಲಿಸ್ ಠಾಣೆಗೆ ಬಂದಾಗ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಜನರಿಗೆ ವಿಶ್ವಾಸ ಮೂಡುವ ರೀತಿಯಲ್ಲಿ ಕೆಲಸ ಮಾಡಿ ಎಂದು ಸಿಎಂ, ಡಿಸಿಎಂ ಸೂಚನೆ ಕೊಟ್ಟಿದ್ದಾರೆ. ಬಿಜೆಪಿ ಸರ್ಕಾರ ಹೋಗಿದೆ, ಇವಾಗ ಇರೋದು ನಮ್ಮ ಸರ್ಕಾರ. ಇಷ್ಟು ದಿನ ಬಿಜೆಪಿ ಪರವಾಗಿ ಕೆಲಸ ಮಾಡಿದ್ದು ಸಾಕು. ಇನ್ಮುಂದೆ ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಕಳೆದ ನಾಲ್ಕು ವರ್ಷ ಬಿಜೆಪಿ ಸರ್ಕಾರದ ಅಧಿಕಾರದಲ್ಲಿ ಏನು ಮಾಡಿದ್ದೀರಿ ಅಂತ ಗೊತ್ತಿದೆ. ಆ ತಪ್ಪುಗಳು ಮರುಕಳಿಸಬಾರದು ಎಂದು ತಾಕೀತು ಮಾಡಿದ್ದಾರೆ. ಸರ್ಕಾರದ ಒಳ್ಳೆಯ ರೀತಿಯಲ್ಲಿ ಸಾಗಲು ಸಹಕರಿಸಿ. ನಾವು ನಿಮ್ಮ ಜೊತೆ ಇರ್ತೀವಿ. ಜನ ಈ ಸರ್ಕಾರದ ಮೇಲೆ ತುಂಬಾ ನಂಬಿಕೆ ಇಟ್ಟುಕೊಂಡಿದ್ದಾರೆ. ಅದ್ರಂತೆ ನಡೆದುಕೊಳ್ಳಿ ಎಂದು ತಾಕೀತು ಮಾಡಿದ್ದಾರೆ ಡಿ.ಕೆ ಶಿವಕುಮಾರ್.
ಈ ಸಭೆಗೂ ಕೇಸರಿ ಶಲ್ಯ ಹಾಕಿಕೊಂಡೇ ಬರಬೇಕಿತ್ತು..!
ಪೊಲೀಸ್ ಇಲಾಖೆಯನ್ನ ಕೇಸರಿಕರಣ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನೆ ಮಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್, ನಮ್ಮ ಸರ್ಕಾರದಲ್ಲಿ ಇದಕ್ಕೆ ಅವಕಾಶ ಕೊಡಲ್ಲ. ಮಂಗಳೂರಿನಲ್ಲಿ ಪೊಲೀಸರೇ ಕೇಸರಿ ಶಾಲು ಹಾಕ್ತೀರಾ ಅಂದರೆ ಹೇಗೆ..? ಈ ಸಭೆಗೂ ಕೇಸರಿ ಶಾಲು ಹಾಕಿಕೊಂಡು ಬರಬೇಕಿತ್ತು ಎಂದು ಛೇಡಿಸಿದ್ದಾರೆ. ನಮ್ಮ ಸರ್ಕಾರದಲ್ಲಿ ಪೊಲೀಸ್ ಇಲಾಖೆಯನ್ನ ಕೇಸರಿಕರಣ ಮಾಡಲು ನಾವು ಬಿಡಲ್ಲ. PSI ಅಕ್ರಮದಲ್ಲಿ ಒಬ್ಬ ಎಡಿಜಿಪಿ ಪೇಪರ್ ತಿದ್ದುತ್ತಾರೆ ಅಂದರೆ ಇಲಾಖೆ ಎಷ್ಟು ಕೆಟ್ಟು ಹೋಗಿದೆ. ಪೊಲೀಸ್ ಇಲಾಖೆ ಘನತೆಯನ್ನ ಹಾಳು ಮಾಡಿದ್ದೀರಿ ನೀವು, ಇದನ್ನ ನಾವು ಸಹಿಸಲ್ಲ. ನಮ್ಮ ಸರ್ಕಾರದಲ್ಲಿ ಎಲ್ಲವೂ ಕ್ಲೀನ್ ಆಗಬೇಕು. ಜನ ದೊಡ್ಡ ಬದಲಾವಣೆ ನಿರೀಕ್ಷೆಯಲ್ಲಿದ್ದಾರೆ. ಜನರ ನಿರೀಕ್ಷೆಯಂತೆ ಬದಲಾವಣೆ ಆಗಬೇಕು. ನೀವು ಯಾರು ನಮಗೆ ಹಣ ಕೊಡೋದು ಬೇಡ. ಉತ್ತಮವಾಗಿ ಕೆಲಸ ಮಾಡಿದ್ರೆ ಸಾಕು ಎಂದು ಹಿರಿಯ ಪೊಲೀಸರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಖಡಕ್ ಸಂದೇಶ ನೀಡಿದ್ದಾರೆ. ಜೊತೆಗೆ ನಿಮ್ಮ ವರ್ತನೆಯಲ್ಲಿ ನೀವು ಬದಲಾಗಿ, ಒಂದು ವೇಳೆ ನೀವು ಬದಲಾಗಲಿಲ್ಲ ಅಂದರೆ ನೀವೆ ಬದಲಾಗುತ್ತೀರಾ ಎನ್ನುವ ವಿಚಾರವನ್ನು ಸೂಕ್ಷ್ಮವಾಗಿ ತಿಳಿಸಿದ್ದಾರೆ.
ಸಿದ್ದರಾಮಯ್ಯನನ್ನು ಹೊಡೆದು ಹಾಕಿ ಅಂದಿದ್ದು ತಪ್ಪಲ್ಲವೇ..?
ಟಿಪ್ಪು ಸುಲ್ತಾನ್ ಅವರನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದು ಕೊಲೆ ಮಾಡಲು ಕರೆ ನೀಡಿದ, ಪ್ರೇರಣೆ ನೀಡಿದವರ ವಿರುದ್ಧ ಯಾಕೆ ಕೇಸ್ ಹಾಕಲಿಲ್ಲ ನೀವು..? ಅದು ಕ್ರೈಂ ಅಲ್ವಾ..? ನೀವು ಏನೇನೂ ಮಾಡಿದ್ದೀರಾ ಅಂತ ನಮ್ಮ ಬಳಿ ಸಾಕ್ಷಿ ಇವೆ. ನಾವು ಎಲ್ಲವನ್ನೂ ವಾಚ್ ಮಾಡಿದ್ದೇವೆ. ಇವೆಲ್ಲ ನಮ್ಮ ಸರ್ಕಾರದಲ್ಲಿ ನಡೆಯಲ್ಲ. ನೀವು ಬದಲಾಗಬೇಕು. ನಿಮ್ಮ ವರ್ತನೆ ಬದಲಾಗಬೇಕು. ಇಲ್ಲ ಅಂದ್ರೆ ನಿಮ್ಮನ್ನೇ ಬದಲಾವಣೆ ಮಾಡಬೇಕಾಗುತ್ತದೆ. ನಾವು ದ್ವೇಷ ಸಾಧಿಸೋದಿಲ್ಲ. ಅದರಲ್ಲಿ ನಮಗೆ ನಂಬಿಕೆ ಇಲ್ಲ. ನೀವು ಬದಲಾಗಿ, ಹಳೆಯದು ಬಿಡಿ. ಹೊಸದಾಗಿ ಕೆಲಸ ಶುರು ಮಾಡಿ. ಜನರ ನೆಮ್ಮದಿ ಕಾಪಾಡಿ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ರೆ ನಾವು ನಿಮ್ಮ ಜೊತೆ ಇರುತ್ತೇವೆ. ಈ ಸರ್ಕಾರದ ಮೇಲೆ ಜನ ನಂಬಿಕೆ ಇಟ್ಟಿದ್ದಾರೆ. ಅದನ್ನ ಉಳಿಸಿಕೊಳ್ಳಿ. ಹಿಂದಿನ ಸರಕಾರದ ಅವಧಿಯಲ್ಲಿ ನಿಮ್ಮ ಕೆಲಸದ ವೈಖರಿ ಸರಿ ಇರಲಿಲ್ಲ. ಸರಕಾರಕ್ಕೆ ಉತ್ತಮ ಹೆಸರು ತರುವುದು, ಬಿಡುವುದು ನಿಮ್ಮ ಕೈಯಲ್ಲೇ ಇದೆ. ನೀವು ಸರಿಯಾಗಿ ಕೆಲಸ ಮಾಡಿದರೆ ಸರಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ನಮ್ಮ ಸರಕಾರ ನಿಮ್ಮಿಂದ ಉತ್ತಮ ಕೆಲಸ ಬಯಸುತ್ತದೆ. ಸರಿಯಾಗಿ ಕೆಲಸ ಮಾಡದಿದ್ದರೆ ನಾವು ಸಹಿಸುವುದಿಲ್ಲ. ಕಠಿಣ ಕ್ರಮ ತೆಗೆದುಕೊಳ್ಳಲು ಅವಕಾಶ ಕೊಡಬೇಡಿ ಎಂದು ವಾರ್ನ್ ಮಾಡಿದ್ದಾರೆ.