ಕಳೆದ ಎರಡು ವರ್ಷಗಳ ಹಿಂದೆ ಈಶಾನ್ಯ ದೆಹಲಿಯಲ್ಲಿ ನಡೆದ ರಾಜಕೀಯ ಪ್ರೇರಿತ ಹಿಂಸಾಚಾರದ ಕುರಿತು ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿಗಳ ವಿಚಾರಣಾ ಆಯೋಗದ ವರದಿ ಬಹಿರಂಗವಾಗಿದೆ. ಮೋದಿ ಆಡಳಿತ ಮತೀಯವಾದಿ ಧರ್ಮಾಂಧರಿಗೆ ನೀಡುತ್ತಿರುವ ಕುಮ್ಮಕ್ಕನ್ನು ಈ ವರದಿ ಗಂಭೀರವಾಗಿ ಟೀಕಿಸಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ, ನ್ಯಾಯಮೂರ್ತಿ ಮದನ್ ಲೋಕೂರ್ ನೇತೃತ್ವದ ಸಮಿತಿಯು ಈ ಹಿಂಸಾಚಾರ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದೆ. ದೆಹಲಿ ಗಲಭೆ ನಡೆದು ಎರಡು ವರ್ಷಗಳು ಕಳೆದ ಮೇಲೆ, ಗಲಭೆಯನ್ನು ನಿಯಂತ್ರಿಸಲಾಗದ ದೆಹಲಿ ಪೊಲೀಸರು, ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಗಳ ಮೇಲೆ ಈ ವರದಿಯು ಕಟುವಾದ ದೋಷಾರೋಪ ಮಾಡಿದೆ.
‘ನಾಗರಿಕ ಸಮಿತಿ ವರದಿ-೨೦೨೦’ ಎಂಬ ತಲೆಬರಹದ ಈ ವರದಿಯ ಪ್ರಕಾರ ಕೇಂದ್ರ ಮತ್ತು ದೆಹಲಿ ರಾಜ್ಯ ಸರ್ಕಾರಗಳು ಜನರ ಜೀವ, ಸಾರ್ವಜನಿಕ ಆಸ್ತಿ ಮತ್ತು ಕಾನೂನು ಸುವ್ಯವಸ್ಥೆ ರಕ್ಷಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು ತಮ್ಮ ಗಂಭೀರ ಹೊಣೆಗಾರಿಕೆನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ ಎಂದು ಈ ವರದಿ ಹೇಳಿದೆ. ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಮದನ್ ಬಿ ಲೋಕುರ್, ಈ ಸತ್ಯಶೋಧನಾ ಸಮಿತಿಯ ಅಧ್ಯಕ್ಷರಾಗಿದ್ದರು. ಮದ್ರಾಸ್ ಮತ್ತು ದೆಹಲಿ ಹೈಕೋರ್ಟ್‌ಗಳ ಮಾಜಿ ಮುಖ್ಯ ನ್ಯಾಯಮೂರ್ತಿ ಮತ್ತು ಕಾನೂನು ಆಯೋಗದ ಮಾಜಿ ಅಧ್ಯಕ್ಷ ನ್ಯಾಯಮೂರ್ತಿ ಎ. ಪಿ. ಶಾ, ದೆಹಲಿ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಆರ್.ಎಸ್. ಸೋಧಿˌ ಪಾಟ್ನಾ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಅಂಜನಾ ಪ್ರಕಾಶ್ ಮತ್ತು ಭಾರತ ಸರಕಾರದ ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಇವರೆಲ್ಲರು ಈ ಸಮಿತಿಯ ಸದಸ್ಯರಾಗಿದ್ದರು.
ದೆಹಲಿ ಪೋಲೀಸರು ತಮ್ಮ ಕರ್ತವ್ಯ ನಿಭಾಯಿಸುವಲ್ಲಿ ವಿಫಲವಾಗಿದ್ದಷ್ಟೆ ಅಲ್ಲದೆ ಈ ಪ್ರಕರಣದಲ್ಲಿ ಅನನ್ಯ ಸಂಕೀರ್ಣತೆಯನ್ನು ಪ್ರದರ್ಶಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಹಲವು ಹಿಂಸಾಚಾರ ಪ್ರಕರಣಗಳನ್ನು

ತಡೆಯುವಲ್ಲಿ ವಿಫಲವಾಗುವುದರ ಜೊತೆಗೆ, ಇತರ ಸಂದರ್ಭಗಳಲ್ಲಿ ಹಿಂಸಾಚಾರದಲ್ಲಿ ವಿವಿಧ ಹಂತಗಳ ಸಂಕೀರ್ಣತೆಯನ್ನು ತೋರಿಸಿದ್ದಾರೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ವಿವಿಧ ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಗಳನ್ನು ಉಲ್ಲೇಖಿಸಿ, ಸಮಿತಿಯು ಅನೇಕ ಉದಾಹರಣೆಗಳನ್ನು ತನ್ನ ವರದಿಯಲ್ಲಿ ವಿವರಿಸಿದೆ. ಫೆಬ್ರವರಿ ೨೪ ರಂದು ನಡೆದ ಗಲಭೆಯಲ್ಲಿ ಪೋಲೀಸರ ಅನೇಕ ಬಗೆಯ ಜಟಿಲತೆಯ ಸ್ಪಷ್ಟವಾದ ನಿದರ್ಶನಗಳು ವರದಿಯಾಗಿವೆಯಂತೆ.
ದೆಹಲಿಯ ಚಾಂದ್ ಬಾಗ್‌ನಲ್ಲಿ ಸಿಎಎ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳದ ಮೇಲೆ ಪೋಲಿಸರೇ ಪ್ರತಿಭಟನಾಕಾರರ ಮೇಲೆ ಗುಂಪು ದಾಳಿ ನಡೆಸುತ್ತಿರುವುದು ಕಂಡುಬಂದಿದೆಯಂತೆ. ಕರ್ದಂಪುರಿಯಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರ ಟೆಂಟ್ ಗಳ ಮೇಲೆ ಪೋಲಿಸರು ಅಶ್ರುವಾಯು ಸಿಡಿಸಿದ್ದರಂತೆ. ಯಮುನಾ ವಿಹಾರ್‌ನಲ್ಲಿ ಮುಸ್ಲಿಮ್ ಹೆಸರಿನ ಅಂಗಡಿಯೊಂದಕ್ಕೆ ಕಲ್ಲೆಸೆದು ಅದನ್ನು ಧ್ವಂಸಗೊಳಿಸುವ ಗೂಂಡಾ ಗುಂಪುಗಳಿಗೆ ಪೋಲಿಸರು ಪ್ರೋತ್ಸಾಹಿಸುತ್ತಿರುವುದು ಸ್ಪಷ್ಟವಾಗಿದೆಯಂತೆ. ಫೆಬ್ರವರಿ ೨೪ ರಂದು ಪೊಲೀಸರು ಫೈಜಾನ್ ಮತ್ತು ಇತರ ನಾಲ್ವರು ಮುಸ್ಲಿಂ ನಾಗರಿಕರ ಮೇಲೆ ಸಾರ್ವಜನಿಕವಾಗಿ ನಡೆಸಿದ ಹಲ್ಲೆಯು ಸಂಪೂರ್ಣ ಪೂರ್ವಾಗ್ರಹದಿಂದ ಕೂಡಿತ್ತು ಮತ್ತು ಅಧಿಕಾರದ ದುರುಪಯೋಗದ ಪ್ರಮುಖ ಉದಾಹರಣೆಯಾಗಿತ್ತು. ಫೆಬ್ರವರಿ ೨೫ ರಂದು ಬ್ರಿಜ್‌ಪುರಿಯಲ್ಲಿರುವ ಫಾರೂಕಿಯಾ ಮಸೀದಿಯಲ್ಲಿ ಪ್ರಾರ್ಥನೆಗೆ ಬಂದವರನ್ನು ಪೋಲಿಸರು ಥಳಿಸುತ್ತಿರುವ ಸಿಸಿ ಟಿವಿ ವೀಡಿಯೊ ದೃಶ್ಯಗಳು ಸಾಕ್ಷ್ಯವಾಗಿ ದಾಖಲೆಗೊಂಡಿವೆ ಎನ್ನುತ್ತದೆ ಈ ವರದಿ.
ಫೆಬ್ರವರಿ ೨೦೨೦ ರಲ್ಲಿ ದೆಹಲಿಯ ಈಶಾನ್ಯ ಪ್ರದೇಶದಲ್ಲಿ ನಡೆದ ಈ ಭೀಕರ ಗಲಭೆಯು ಅಲ್ಲಿನ ಜನರ ಮನಸ್ಸಿನ ಮೇಲೆ ಅಘಾದವಾದ ಕೆಟ್ಟ ಪರಿಣಾಮ ಬೀರಿತ್ತು. ಈ ಗಲಭೆಯಲ್ಲಿ ೫೩ ಜನರು ಸತ್ತು ೪೦ ಜನ ಮುಸ್ಲಿಮ್ˌ ೧೩ ಹಿಂದೂ ನಾಗರಿಕರು ಮತ್ತು ಇನ್ನೂ ಅನೇಕ ಜನರು ಗಾಯಗೊಂಡಿದ್ದರು. ಹಿಂಸಾಚಾರ ಘಟನೆಯ ತದನಂತರ ಪ್ರತಿಭಟನಾ ನಿರತ ಕಾರ್ಯಕರ್ತರ ಮೇಲೆ ಕಟ್ಟುನಿಟ್ಟಾಗಿ ಯುಎಪಿಎ ಆರೋಪ ಹೊರಿಸಿ ಪೋಲಿಸರು ಸರಣಿ ಬಂಧನಗಳನ್ನು ನಡೆಸಿದ್ದರು. ಇಡೀ ಗಲಭೆಯಲ್ಲಿ ದೆಹಲಿ ಪೋಲಿಸರು ಪಕ್ಷಪಾತದಿಂದ ವರ್ತಿಸಿದ್ದಲ್ಲದೆ ಅಮಾನುಷವಾಗಿ ನಡೆದುಕೊಂಡಿದ್ದರು. ದೇಶದ ರಾಜಧಾನಿ ದೆಹಲಿಯಲ್ಲೇ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟುಹೋಗಿತ್ತು. ಕೇಂದ್ರ ಸರಕಾರ ಮತ್ತು ಅದರ ಅಧೀನದಲ್ಲಿರುವ ದೆಹಲಿ ಪೋಲಿಸ್ ಇಲಾಖೆˌ ಹಿಂಸಾಚಾರ ಭುಗಿಲೇಳುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದವು.
ಈ ಸಮಿತಿಯ ೧೭೧ ಪುಟಗಳ ವರದಿಯು ಅನೇಕ ಪ್ರಮುಖ ಸಂಗತಿಗಳನ್ನು ಹೊಂದಿದ್ದು ಅದರ ಮುಖ್ಯಾಂಶಗಳು ಕೆಳಕಂಡಂತಿವೆ:

೧. ದೆಹಲಿ ಪೊಲೀಸರ ವೈಫಲ್ಯ
ಫೆಬ್ರವರಿ ೨೩ ರ ತನಕ ಆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದ್ದ ಜನರ ಧ್ರುವೀಕೃತ ಮತ್ತು ಆತಂಕಕಾರಿ ವಾತಾವರಣವನ್ನು ದೆಹಲಿ ಪೋಲಿಸರು ಸರಿಯಾಗಿ ನಿಭಾಯಿಸಲಿಲ್ಲ ಮತ್ತು ಅದನ್ನು ತಡೆಗಟ್ಟುವಲ್ಲಿ ಅಥವಾ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದರು. ಈ ವರದಿಯ ಗಮನಾರ್ಹ ಅಂಶವೆಂದರೆ ಏಪ್ರಿಲ್ ೨೦೨೨ ರಲ್ಲಿ ದೆಹಲಿಯ ಜಹಾಂಗೀರಪುರಿಯಲ್ಲಿ ನಡೆದ ಕೋಮು ಹಿಂಸಾಚಾರದೊಂದಿಗೆ ಹೋಲಿಕೆ ಮಾಡಿದಾಗ ಆ ಗಲಭೆಯ ಕುರಿತು ದೆಹಲಿ ಪೊಲೀಸರ ಪ್ರತಿಕ್ರಿಯೆಯು ಗಮನಾರ್ಹವಾಗಿ ವಿಭಿನ್ನವಾಗಿತ್ತು ಎನ್ನುವುದು. ದೆಹಲಿಯಲ್ಲಿನ ಇತ್ತೀಚಿನ ಘಟನೆಗಳನ್ನು ಆಧರಿಸಿ ನಗರದಲ್ಲಿ ಭದ್ರತಾ ಪಡೆಗಳ ನಿಯೋಜನೆಯು ಎಷ್ಟೊಂದು ವೇಗವಾಗಿ ನಡೆಯುತ್ತಿದೆˌ ಆದರೆ ೨೦೨೦ ರಲ್ಲಿ ಅದು ಹೀಗಿರಲ್ಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಏಪ್ರಿಲ್ ೨೦೨೨ ರಲ್ಲಿ ವಾಯುವ್ಯ ದೆಹಲಿಯ ಜಹಾಂಗೀರಪುರಿನಲ್ಲಿ ನಡೆದ ಕೋಮು ಹಿಂಸಾಚಾರದ ಘಟನೆಯ ನಂತರ ನೂರಾರು ಪೋಲೀಸ್ ಮತ್ತು ಹೆಚ್ಚುವರಿ ವಿವಿಧ ಅರೆಸೈನಿಕ ಪಡೆಗಳ ತ್ವರಿತ ಮತ್ತು ನಿರಂತರ ನಿಯೋಜನೆ ಮಾಡಲಾಗಿತ್ತು.
ಮುಸ್ಲಿಮರಿಗೆ ಸಂಬಂಧಿಸಿದ ಕಟ್ಟಡಗಳನ್ನು ಧ್ವಂಸಗೊಳಿಸುವ ಸರಕಾರಿ ಪ್ರಾಯೋಜಿತ ಪ್ರಕ್ರೀಯಾಪೂರ್ವ ಭದ್ರತೆಗಾಗಿ ಕೇವಲ ೪೦೦ ಪೋಲಿಸ ಸಿಬ್ಬಂಧಿಯ ಬೇಡಿಕೆ ಇದ್ದಾಗ್ಯೂ ರಾತ್ರೋರಾತ್ರಿ ೧೫೦೦ ಪೋಲಿಸ್ ಸಿಬ್ಬಂಧಿಯನ್ನು ಅಣಿಗೊಳಿಸಲು ಸಾಧ್ಯವಾದಾಗ, ಫೆಬ್ರವರಿ ೨೩, ೨೦೨೦ ರಂದು ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ನಿಯಂತ್ರಿಸಲು ಅಗತ್ಯ ಸಿಬ್ಬಂಧಿ ನಿಯೋಜನೆ ಏಕೆ ಮಾಡಲಿಲ್ಲ ಎನ್ನುವುದು ನಿಘೂಡ ಕಾರಣ ಎನ್ನುತ್ತದೆ ಈ ವರದಿ. ಈ ಪರಿಸ್ಥಿತಿಯು ತನ್ನ ಸಂಪನ್ಮೂಲಗಳು ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರಕಾರ ತೋರಿದ ವೈಫಲ್ಯದ ಗಂಭೀರ ಲೆಕ್ಕಾಚಾರವನ್ನು ತೋರಿಸುತ್ತದೆ ಎಂದು ಈ ವರದಿ ವರ್ಣಿಸಿದೆ. ಈ ವರದಿಯಲ್ಲಿ ಕೇಂದ್ರ ಸರ್ಕಾರ ಮತ್ತು ಗೃಹ ವ್ಯವಹಾರ ಸಚಿವಾಲಯಗಳ ವಿರುದ್ಧ ತೀಕ್ಷ್ಣವಾಗಿ ಹರಿಹಾಯಲಾಗಿದೆ. ಭಾರತ ಸರಕಾರ ಮತ್ತು ದೆಹಲಿ ಸರಕಾರಗಳೆರಡರ ನಿಯಂತ್ರಣದಲ್ಲಿರುವ ರಾಷ್ಟ್ರದ ರಾಜಧಾನಿ ಮತ್ತು ಅದಕ್ಕೆ ಹೊಂದಿಕೊಂಡಿರುವ ಜಿಲ್ಲೆಯೊಂದರಲ್ಲಿ ಸತತ ನಾಲ್ಕು ದಿನಗಳ ಕಾಲ ಸಾಮೂಹಿಕ ಹಿಂಸಾಚಾರ ನಡೆದಿರುವುದು ಸಾಂವಿಧಾನಿಕ ಕರ್ತವ್ಯಗಳ ಜ್ವಲಂತ ವೈಫಲ್ಯಗಳನ್ನು ಸೂಚಿಸುತ್ತದೆ ಎಂದು ಈ ವರದಿ ನೇರವಾಗಿ ಹೇಳುತ್ತದೆ.
ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ದೆಹಲಿ ಪೊಲೀಸರು ಮತ್ತು ಅರೆಸೈನಿಕ ಪಡೆಗಳ ಸಿಂಹಾಚಾರದ ವಿರುದ್ಧದ ಅಸಮರ್ಪಕ ಪ್ರತಿಕ್ರಿಯೆ ಮತ್ತು ಅಗತ್ಯಕ್ಕಿಂತ ಕಡಿಮೆ ಸಿಬ್ಬಂಧಿ ನಿಯೋಜನೆಗೆ ಗೃಹ ಸಚಿವಾಲಯವೇ ಹೊಣೆ ಎಂದು ವರದಿ ಸ್ಪಷ್ಟವಾಗಿ ಹೇಳಿದೆ. ದೆಹಲಿಯ ನಾಗರಿಕರ ಜೀವ ಮತ್ತು ಆಸ್ತಿಯನ್ನು ರಕ್ಷಿಸುವುದು ಕೇಂದ್ರ ಸರ್ಕಾರದ ಪ್ರಾಥಮಿಕ ಜವಾಬ್ದಾರಿಯಾಗಿದ್ದು ಈ ನಿರ್ಣಾಯಕ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಕೇಂದ್ರ ಗೃಹ ಇಲಾಖೆಯು ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರವನ್ನು ತಡೆಯಲು ವಿಫಲವಾಗಿವೆ ಎನ್ನುತ್ತದೆ ಈ ವರದಿ. ಇದರ ಜೊತೆಗೆ ಸಾರ್ವಜನಿಕರ ನಡುವೆ ದ್ವೇಷವನ್ನು ಬಿತ್ತುವಲ್ಲಿ ಮಾಧ್ಯಮಗಳ ಪ್ರಮುಖ ಪಾತ್ರವನ್ನು ಕೂಡ ಈ ವರದಿ ಉಲ್ಲೇಖಿಸಿದೆ.

೨. ದ್ವೇಷ ಹರಡುವಲ್ಲಿ ಮಾಧ್ಯಮಗಳ ಪಾತ್ರ.
ಈ ವರದಿಯು ನಿರ್ದಿಷ್ಟ ಸುದ್ದಿ ವಾಹಿನಿಗಳನ್ನು ಉಲ್ಲೇಖಿಸಿ ಅವು ಈ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ದ್ವೇಷ ಹರಡುವ ನಿರೂಪಣೆಗಳನ್ನು ಹೆಚ್ಚು ಪ್ರಚಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು ಎಂದು ಹೇಳಲಾಗಿದೆ. ಮಾಧ್ಯಮಗಳ ಮತ್ತು ಸಾಮಾಜಿಕ ಜಾಲತಾಣಗಳ ಸುಳ್ಳು ನಿರೂಪಣೆಗಳು ಹಾಗು ದ್ವೇಷ ಹರಡುವ ಸುದ್ದಿಗಳು ಬಹಳ ದೊಡ್ಡ ಸಂಖ್ಯೆಯಲ್ಲಿ ಜನರನ್ನು ತಲುಪಿವೆ ಎಂದು ಈ ವರದಿಯಲ್ಲಿ ಆರೋಪಿಸಲಾಗಿದೆ. ದ್ವೇಷ ಹರಡುವಲ್ಲಿ ಪ್ರಮುಖ ಪಾತ್ರ ವಹಿಸಿದ ರಿಪಬ್ಲಿಕ್ˌ ಟೈಮ್ಸ್ ನೌ (ಇಂಗ್ಲಿಷ್), ಆಜ್ ತಕ್, ಝೀ ನ್ಯೂಸ್, ಇಂಡಿಯಾ ಟಿವಿ, ರಿಪಬ್ಲಿಕ್ ಭಾರತ್ (ಹಿಂದಿ) ವಾಹಿನಿಗಳು ಸೇರಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಸಿಎಎ ವಿರುದ್ಧ ನಡೆದ ಪ್ರತಿಭಟನೆಯ ವೇಳೆಯಲ್ಲಿ ಈ ವಾಹಿನಿಗಳು ಮುಸ್ಲಿಂ ಸಮುದಾಯದ ವಿರುದ್ಧ ಪೂರ್ವಾಗ್ರಹಪೂರಿತ ವರದಿಗಳನ್ನು ಭಿತ್ತರಿಸುವ ಮೂಲಕ ಮುಸಲ್ಮಾನರ ಮೇಲೆ ಅನುಮಾನ ಮೂಡಿಸಿ ಪ್ರಕರಣವನ್ನು ಸಮಸ್ಯಾತ್ಮಕಗೊಳಿಸಿದ್ದವು. ವಾಹಿನಿಗಳು ಬಹುಸಂಖ್ಯಾತ ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವಂತ ನಿರೂಪಣೆ ಹಾಗು ವಿಶ್ಲೇಷಣಾ ವರದಿಗಳು ಪ್ರಸಾರ ಮಾಡಿ ಸಿಎಎ ವಿರೋಧಿ ಪ್ರತಿಭಟನೆಗಳ ಬಗ್ಗೆ ಸುಳ್ಳು ಸುದ್ದಿ ಹರಡಿವೆ ಮತ್ತು ಆಧಾರರಹಿತ ಪಿತೂರಿ ಸಿದ್ಧಾಂತಗಳನ್ನು ಹುಟ್ಟುಹಾಕಿ ಮುಸ್ಲಿಮ್ ವಿರೋಧಿ ಭಾವನೆಗಳನ್ನು ಕೆರಳಿಸಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
೩. ರಾಜಕೀಯ ನಿಪುಣರು ಮತ್ತು ಚುನಾವಣಾ ಆಯೋಗದ ಪ್ರತಿಕ್ರಿಯೆ
೨೦೨೦ ರ ದೆಹಲಿ ಚುನಾವಣೆಯ ಮೇಲೆ ಕಣ್ಣಿಟ್ಟು ಸಿಎಎ ವಿರೋಧಿ ಪ್ರತಿಭಟನೆಗಳನ್ನು ದೇಶವಿರೋಧಿ ಹಾಗು ವಿಭಜಕ ನಿರೂಪಣೆಯ ಹುನ್ನಾರವೆಂದು ಬಿಂಬಿಸಲು ಬಿಜೆಪಿ ಪ್ರಯತ್ನಿಸಿದೆ ಎನ್ನುತ್ತದೆ ಈ ವರದಿ. ಚುನಾವಣಾ ಮತ್ತು ಸಾರ್ವಜನಿಕ ಸಭೆಗಳಲ್ಲಿ ಬಿಜೆಪಿ ಬೆಂಬಲಿಗರಾದ ಕಪಿಲ್ ಮಿಶ್ರಾ ˌ ಅನುರಾಗ್ ಠಾಕೂರ್ ಅವರಂತಹ ಅಭ್ಯರ್ಥಿಗಳು ಮತ್ತು ಬಿಜೆಪಿಯ ಇತರ ನಾಯಕರು ಸಿಎಎ ಪ್ರತಿಭಟನಾಕಾರರನ್ನು ದೇಶದ್ರೋಹಿಗಳು ಎಂದು ಬಿಂಬಿಸಿದ್ದರು. ಸಿಎಎ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿ ಸಾಯಿಸಬೇಕೆಂಬ ಪ್ರಚೋದನಾತ್ಮಕ ಹಾಗು ಹಿಂಸೆಯನ್ನು ಕೆರಳಿಸುವ ಬಿಜೆಪಿ ನಾಯಕರ ಘೋಷಣೆಗಳು ಸಾರ್ವಜನಿಕವಾಗಿ ಹಾಗು ಆ ಪಕ್ಷದ ಯಾವುದೇ ವರಿಷ್ಟ ನಾಯಕರ ಖಂಡನೆ ಇಲ್ಲದೆ ವ್ಯಾಪಕವಾಗಿ ಪುನರಾವರ್ತನೆಯಾದ ಬಗ್ಗೆ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಿಂಹಾಚಾರಕ್ಕೆ ಸಂಬಂಧಿಸಿದ ಕೆಲವು ಪ್ರಕರಣಗಳಲ್ಲಿ ಚುನಾವಣಾ ಆಯೋಗವು ಮೇಲ್ನೋಟಕ್ಕೆ ಹಾಗು ಕಾಟಾಚಾರಕ್ಕೆ ಕೆಲವು ಕ್ರಮಗಳನ್ನು ಕೈಕೊಂಡರೂ, ಅವು ಅಷ್ಟು ಸಮರ್ಪಕವಾಗಿರಲಿಲ್ಲ ಎಂದು ಆಯೋಗವನ್ನು ಕೂಡ ಈ ವರದಿಯಲ್ಲಿ ಟೀಕಿಸಲಾಗಿದೆ. ಆದರೆ ಬಹಿರಂಗವಾಗಿ ದ್ವೇಷ ಭಾಷಣ ಹಾಗು ಹಿಂಸೆಗೆ ಪ್ರಚೋದನೆ ನೀಡಿದ್ದ ಬಿಜೆಪಿ ಪುಢಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಚುನಾವಣಾ ಆಯೋಗವು ಆದೇಶ ನೀಡಿರಲಿಲ್ಲ. ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಚುನಾವಣಾ ಆಯೋಗವು ವಿಫಲವಾಗಿತ್ತು. ಇಡೀ ಪ್ರಕರಣವನ್ನು ಆಡಳಿತ ಪಕ್ಷವು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳುವುದನ್ನು ತಡೆಯುವಲ್ಲಿ ಚುನಾವಣಾ ಆಯೋಗ ಸಂಪೂರ್ಣ ವಿಫಲವಾಗಿತ್ತು ಎಂದು ಈ ವರದಿ ನೇರವಾಗಿ ಹೇಳುತ್ತದೆ. ಹೀಗೆ ವರದಿಯ ಉದ್ದಕ್ಕೂ ಚುನಾವಣಾ ಆಯೋಗ ಈ ಗಲಭೆಯನ್ನು ನಿಯಂತ್ರಿಸುವಲ್ಲಿ ವಿಫಲಗೊಂಡ ಬಗ್ಗೆ ವಿವರವಾಗಿ ಬರೆಯಲಾಗಿದೆ.

೪. ದೆಹಲಿ ಮುಖ್ಯಮಂತ್ರಿಯ ಮೌನ
ಈ ಸಿಂಹಾಚಾರಕ್ಕೆ ಸಂಬಂಧ ಪಟ್ಟಂತೆ ದೆಹಲಿ ಮುಖ್ಯಮಂತ್ರಿ ಸಂಪೂರ್ಣ ಮೌನಕ್ಕೆ ಶರಣಾಗಿದ್ದರು ಎಂದು ಈ ಸಮಿತಿ ಗಂಭೀರವಾಗಿ ಆರೋಪಿಸಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಜನರ ನಡುವೆ ಸೌಹಾರ್ದತೆ ಮೂಡಿಸಲು ದೆಹಲಿ ಮುಖ್ಯಮಂತ್ರಿಯಾಗಲಿ ಅಥವಾ ಅವರ ಪಕ್ಷವಾಗಲಿ ಯಾವುದೆ ಪ್ರಯತ್ನ ಮಾಡಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ದೆಹಲಿ ಪೋಲಿಸರು ಕೇಂದ್ರ ಸರಕಾರದ ಅಧೀನದಲ್ಲಿರುವುದರಿಂದ, ದೆಹಲಿ ಸರಕಾರˌ ಕನಿಷ್ಟಪಕ್ಷ ಪರಿಸ್ಥಿತಿಯನ್ನು ಶಾಂತಗೊಳಿಸಲು ನಾಗರಿಕರ ಮಧ್ಯಸ್ಥಿಕೆ ಮತ್ತು ರಾಜನೈತಿಕ ಪಾತ್ರವನ್ನು ವಹಿಸುವಲ್ಲಿ ಕೂಡ ವಿಫಲವಾಗಿದೆ ಎಂದು ವರದಿ ಹೇಳುತ್ತದೆ. ಇಷ್ಟಿದ್ದಾಗ್ಯೂ ದೆಹಲಿಯ ಜನರು ಅವರನ್ನೆ ಮುಖ್ಯಮಂತ್ರಿಯಾಗಿ ಮತ್ತೆ ಪ್ರಚಂಡ ಗೆಲವು ನೀಡಿದ್ದು ವಿಪರ್ಯಾಸವೆಂದು ವರದಿಯಲ್ಲಿ ವಿವರಿಸಲಾಗಿದೆ. ಅಷ್ಟೆ ಅಲ್ಲದೆˌ ಗಲಭೆಯ ಸಂತ್ರಸ್ತರಿಗೆ ಪರಿಹಾರ ನೀಡುವ ತನ್ನ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಕೂಡ ದೆಹಲಿ ಸರಕಾರ ವಿಫಲವಾಗಿದೆ ಎಂದು ವರದಿಯಲ್ಲಿ ಟೀಕಿಸಲಾಗಿದೆ. ಸೂಕ್ತ ಪರಿಹಾರ ಶಿಬಿರಗಳ ಕೊರತೆ ಮತ್ತು ಈದ್ಗಾ ಶಿಬಿರದ ಹಠಾತ್ ಮುಚ್ಚುವಿಕೆಯು ಅನೇಕ ಅಸಾಹಯಕ ಜನರಿಗೆ ಸಂಕಷ್ಟ ತಂದಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
೫. ಯುಎಪಿಎ ದುರ್ಬಬಳಕೆ
ಈ ಗಲಭೆಯಲ್ಲಿ ದೆಹಲಿ ಪೋಲಿಸರು ಯುಎಪಿಎ ಕಾನೂನನ್ನು ಬೇಕಾಬಿಟ್ಟಿ ದುರ್ಬಳಕೆ ಮಾಡಿಕೊಳ್ಳುವ ಮೂಲಕ ‘ಕಾನೂನಿನ ವಿಕೃತಿ’ ಮೆರೆದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಸರಕಾರವನ್ನು ಪ್ರಶ್ನಿಸುವ ಸಾಮಾಜಿಕ ಕಾರ್ಯಕರ್ತರುˌ ಪತ್ರಕರ್ತರು ಮತ್ತು ಕಲಾವಿದರ ಮೇಲೆ ಯುಎಪಿಎ ಬಳಕೆಯನ್ನು ಈ ವರದಿಯು ಪ್ರಶ್ನಿಸಿದೆ. ಪೋಲಿಸರ ಪ್ರಸ್ತುತ ತನಿಖೆಯು ಪೂರ್ವಾಗ್ರಹಪೀಡಿತವಾಗಿದ್ದು ಅದರಿಂದ ಯಾವುದೆ ಸತ್ಯಾಂಶ ಹೊರಬಂದಿಲ್ಲ, ಪೋಲಿಸರು ಸಂಶಯಿಸಿದಂತೆ ಅಲ್ಲಿ ಯಾವುದೇ ಬಗೆಯ ಅಪರಾಧ ಕೃತ್ಯಗಳಾಗಲಿ ಅಥವಾ ಭಯೋತ್ಪಾದಕ ಕೃತ್ಯವಾಗಲಿ ನಡೆದಿಲ್ಲ ಎಂದು ಸಮಿತಿ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ. ಪ್ರಸ್ತುತ ಪ್ರಕರಣವನ್ನು ಯುಎಪಿಎಯ ತಪ್ಪು ಕಲ್ಪನೆ ಮತ್ತು ಆಧಾರರಹಿತ ಅನ್ವಯವಾಗಿದೆ. ಇದು ಕಾನೂನಿನ ವಿಕೃತಿಯಂತೆ ಕಾಣುತ್ತದೆ ಎಂದು ವರದಿ ಹೇಳುತ್ತದೆ. ದೆಹಲಿ ಗಲಭೆಗೆ ಸಂಬಂಧಿಸಿದಂತೆ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಖಾಲಿದ್ ಸೈಫಿ ಮತ್ತಿತರ ಹಲವಾರು ಸಿಎಎ ವಿರೋಧಿ ಹೋರಾಟದ ಕಾರ್ಯಕರ್ತರು ಎರಡು ವರ್ಷಗಳಿಂದ ಜೈಲಿನಲ್ಲಿದ್ದಾರೆ ಎಂದು ವರದಿಯು ಹೇಳಿದೆ.
ದೆಹಲಿ ಪೋಲಿಸರು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿರುವ ವಿಷಯವು ಮುಸಲ್ಮಾನರು ಹಿಂದೂ ಸಮುದಾಯದಲ್ಲಿ ಭಯೋತ್ಪಾದನೆಯನ್ನು ಉಂಟುಮಾಡುತ್ತಿದ್ದಾರೆ ಎನ್ನಲಾಗಿದೆಯಂತೆ. ಮುಸ್ಲಿಮರ ವಿರುದ್ಧ ತಾರತಮ್ಯದಿಂದ ಕೂಡಿರುವ ಸಿಎಎ ಕಾನೂನನ್ನು ರದ್ದುಗೊಳಿಸಬೇಕು ಎನ್ನುವ ಬೇಡಿಕೆಯಿಂದ ಕೂಡಿದ ಪ್ರತಿಭಟನೆಯು ಭಯೋತ್ಪಾದಕ ಚಟುವಟಿಕೆ ಎಂದು ಪೋಲಿಸರು ಭಾವಿಸಿದ್ದಾದರೂ ಏಕೆ ಎಂದು ಈ ವರದಿಯಲ್ಲಿ ಪ್ರಶ್ನಿಸಲಾಗಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಅಧಿಕೃತ ದತ್ತಾಂಶಗಳ ಆಧಾರದಲ್ಲಿ ಹೇಳುವುದಾದ್ದಲ್ಲಿ ಈ ಗಲಭೆಗಳಲ್ಲಿ ಕೊಲ್ಲಲ್ಪಟ್ಟವರುˌ ದೈಹಿಕವಾಗಿ ಹಲ್ಲೆಗೊಳಗಾದವರು ಮತ್ತು ಆಸ್ತಿಪಾಸ್ತಿ ಹಾನಿಯನ್ನು ಅನುಭವಿಸಿ ಬಲಿಪಶುವಾದವರು ಅಗಾಧ ಸಂಖ್ಯೆಯ ಮುಸ್ಲಿಮರು ಎನ್ನುವುದನ್ನು ಈ ವರದಿ ಬಹಿರಂಗಗೊಳಿಸಿದೆ. ದೆಹಲಿ ಗಲಭೆಗಳಲ್ಲಿ ಮುಸ್ಲಿಮರ ಮನೆˌ ವ್ಯಾಪಾರ ಕೇಂದ್ರ ಮತ್ತು ಪ್ರಾರ್ಥನಾ ಸ್ಥಳಗಳನ್ನು ಪರಮ ಗುರಿಯಾಗಿಸಲಾಗಿತ್ತು ಎಂದು ವರದಿಯಲ್ಲಿ ಒತ್ತಿ ಹೇಳಲಾಗಿದೆ.
ಕೆಲವು ಭಯಂಕರ ನಟರುˌ ಧರ್ಮಾಂಧ ಪತ್ರಕರ್ತರು ಮತ್ತು ರಾಜಕಾರಣಿಗಳ ಸಹಭಾಗಿತ್ವದಿಂದ ಸಶಕ್ತಗೊಂಡ ಪೂರ್ವನಿಯೋಜಿತ ದ್ವೇಷ ಹರಡುವಿಕೆಯ ಈ ಕೃತ್ಯವು ಸಮಾಜವನ್ನು ಮತ-ಧರ್ಮಗಳ ಆಧಾರದಲ್ಲಿ ವಿಭಜಸಿ ತಮ್ಮ ರಾಜಕೀಯ ನೆಲೆಯನ್ನು ವಿಸ್ತರಿಸುವ ಹಾಗು ಗಟ್ಟಿಗೊಳಿಸುವ ಉದ್ದೇಶದಿಂದ ನಡೆದ ಈ ಹಿಂಸಾಚಾರವು ಮತಾಂಧತೆಯ ಪರಾಕಾಷ್ಠೆಯಂತಿತ್ತು ಎಂಬು ವರದಿ ಅಭಿಪ್ರಾಯಪಟ್ಟಿದೆ. ಭಾರತದ ಬಹುತ್ವ ಸಂಸ್ಕೃತಿಯನ್ನು ನಾಶಗೊಳಿಸುವˌ ಸಾಮಾಜಿಕ ಸಂಬಂಧಗಳನ್ನು ಹದಗೆಡಿಸುವ ಮತೀಯವಾದಿಗಳ ಈ ಪ್ರಯತ್ನದಿಂದ ಮುಸ್ಲಿಂ ಸಮುದಾಯ ತೀವ್ರ ನಷ್ಟ ಮತ್ತು ನೋವು ಅನುಭವಿಸುವಂತಾಯಿತು ಎನ್ನುತ್ತದೆ ಈ ವರದಿ. ಅಂತಿಮವಾಗಿ, ಈ ವರದಿಯು ದೆಹಲಿ ಗಲಭೆಯ ತನಿಖೆಯು ನಿಸ್ಪಕ್ಷಪಾತದಿಂದ ನಡೆಯಬೇಕೆಂದರೆ ಈ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರಿಗೆ ವಹಿಸದೆ ಬೇರೆ ಸಂಸ್ಥೆಗೆ ವಹಿಸಬೇಕು ಮತ್ತು ಆ ತನಿಖಾ ಸಂಸ್ಥೆಯು ಕೇಂದ್ರ ಗೃಹ ಇಲಾಖೆಯ ನಿಯಂತ್ರಣದಲ್ಲಿ ಇರಬಾರದು ಎಂದು ಹೇಳುತ್ತದೆ. ಒಟ್ಟಾರೆ ದೆಹಲಿ ಗಲಭೆಯ ಹಿಂದೆ ಬಿಜೆಪಿˌ ಹಿಂದೂ ಮೂಲಭೂತವಾದಿ ಸಂಘಟನೆಗಳುˌ ಬಹುತೇಕ ಧರ್ಮಾಂಧ ಟಿವಿ ನಿರೂಪಕರು ಮತ್ತು ಮಾಧ್ಯಮಗಳು ಇದ್ದವು ಎನ್ನುವುದನ್ನು ಈ ವರದಿ ನೇರವಾಗಿಯೆ ಹೇಳಿದೆ.
