ನರೇಂದ್ರ ಮೋದಿ ಹಾಗೂ ಮಮತಾ ಬ್ಯಾನರ್ಜಿ ನಡುವೆ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮ ದಿನಾಚರಣೆ ವೇಳೆ ಉಂಟಾದ ಅಸಮಾಧಾನ ಇನ್ನೂ ಕಡಿಮೆಯಾಗಿಲ್ಲ. ಈ ಬಾರಿ ತಮ್ಮ ನಾಯಕಿ ಮಮತಾರಿಗೆ ಉಂಟಾದ ಅವಮಾನವನ್ನು ಟಿಎಂಸಿ ನಾಯಕರೋರ್ವರು ನೇರವಾಗಿ ಖಂಡಿಸಿದೆ.
‘ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಮತಾ ಬ್ಯಾನರ್ಜಿ ಅವರ ಭಾಷಣದ ವೇಳೆ ಪ್ರೇಕ್ಷಕರ ಒಂದು ವಿಭಾಗ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಿದ್ದು ವಿಷಾದನೀಯʼ ಎಂದು ತೃಣಮೂಲ ಕಾಂಗ್ರೆಸ್ ಅಭಿಪ್ರಾಯ ಪಟ್ಟಿದೆ.
‘ಈ ಘಟನೆಯು ಕೆಲ ಜನರ ದ್ವೇಷಭರಿತ ಮನಸ್ಥಿತಿಯನ್ನು ಬಿಂಬಿಸುತ್ತದೆ. ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಪ್ರಧಾನಿ ಮೋದಿ ಅವರು ಘೋಷಣೆ ಕೂಗುತ್ತಿದ್ದ ಜನರ ನಡವಳಿಕೆ ಕುರಿತು ಖಂಡಿಸಿ ಒಂದೂ ಮಾತನ್ನಾಡಲಿಲ್ಲ. ಇದು ಬಿಜೆಪಿಗೆ ನೇತಾಜಿ ಅವರ ಬಗ್ಗೆ ಗೌರವವಿಲ್ಲ ಎಂಬುದನ್ನು ಸೂಚಿಸುತ್ತದೆ’ ಎಂದು ಎಂ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರದ ಸಚಿವ ಬ್ರಾತ್ಯಾ ಬಸು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
‘ಕರಾಳ ಫ್ಯಾಸಿಸ್ಟ್ ಶಕ್ತಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. ಒಂದು ವೇಳೆ ಅದು ಬಂಗಾಳವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯಕಾರಿ ಸ್ಥಿತಿಯೊದಗುತ್ತದೆ. ಹಾಗಾಗಿ, ಬಂಗಾಳದಲ್ಲಿ ಫ್ಯಾಸಿಸ್ಟ್ ಶಕ್ತಿಗೆ ಅವಕಾಶ ಮಾಡಿಕೊಡಬೇಡಿ. ವಿಭಿನ್ನ ಸಿದ್ಧಾಂತಗಳ ಜನರು ಬಂಗಾಳದಲ್ಲಿ ಮುಕ್ತವಾಗಿ ತಮ್ಮ ಅಭಿವ್ಯಕ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅದನ್ನು ಕೊನೆಗಾಣಿಸಲು ಅವಕಾಶ ನೀಡಬೇಡಿ’ ಎಂದೂ ಅವರು ಮನವಿ ಮಾಡಿದ್ದಾರೆ.
ಸಮಾರಂಭದ ವೇಳೆ ಮಮತಾ ಭಾಷಣಕ್ಕೆ ವೇದಿಕೆಯೇರುವಾಗ ವೀಕ್ಷಕರ ಒಂದು ಗುಂಪು ನರೇಂದ್ರ ಮೋದಿ ಪರ ಹಾಗೂ ಜೈಶ್ರೀರಾಮ್ ಘೋಷಣೆ ಕೂಗಿತ್ತು. ಇದನ್ನು ವೇದಿಕೆಯಲ್ಲಿಯೇ ಖಂಡಿಸಿದ ಮಮತಾ, ಇದು ಯಾವುದೇ ಪಕ್ಷದ ಕಾರ್ಯಕ್ರಮವಲ್ಲ. ಇದು ಜನರ ಕಾರ್ಯಕ್ರಮ, ಸರ್ಕಾರದ ಕಾರ್ಯಕ್ರಮ. ನಾನು ಹೆಚ್ಚಿಗೆ ಮಾತನಾಡಲು ಬಯಸುವುದಿಲ್ಲ ಎಂದು ವೇದಿಕೆಯಂದ ಇಳಿದಿದ್ದರು.