ಭಾರತದ ಚಂದ್ರಯಾನ 3 ಬಹುತೇಕ ಯಶಸ್ವಿಯಾಗುವ ಹಂತದಲ್ಲಿದೆ. ಇದೀಗ ಚಂದ್ರನ ಮೇಲ್ಮೈನಲ್ಲಿ ವಿಕ್ರಮ್ ಲ್ಯಾಂಡರ್ ಉಪಗ್ರಹ ಲ್ಯಾಂಡ್ ಮಾಡಲು ವಿಶೇಷ ಕ್ಷಣಕ್ಕಾಗಿ ಭಾರತ ಮಾತ್ರವಲ್ಲ ವಿಶ್ವವೇ ಕಾಯುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ಅವರೂ ವಿದೇಶ ಪ್ರವಾಸದಲ್ಲಿದ್ದಕೊಂಡೇ ವರ್ಚುವಲ್ ಮೂಲಕ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸ್ಪರ್ಶ ವೀಕ್ಷಿಸಲಿದ್ದಾರೆ.
ಆಗಸ್ಟ್ 23ರ ಸಂಜೆ 6.04 ಗಂಟೆಗೆ ವಿಕ್ರಮ ಲ್ಯಾಂಡರ್ ಇಳಿಸಲು ಇಸ್ರೋ ತಯಾರಿ ನಡೆಸಿದೆ. ಇಸ್ರೋ ಕಾರ್ಯಾಚರಣೆಯ ನೇರ ಪ್ರಸಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಆಫ್ರಿಕಾದಿಂದ ಪಾಲ್ಗೊಳ್ಳಲಿದ್ದಾರೆ.
15ನೇ ಬ್ರಿಕ್ಸ್ ಶೃಂಗಸಭೆಗಾಗಿ ಪ್ರಧಾನಿ ಮೋದಿ ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ ತಲುಪಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾದಿಂದಲೇ ಮೋದಿ ವರ್ಚುವಲ್ ಆಗಿ ಲ್ಯಾಂಡಿಂಗ್ ವೀಕ್ಷಣೆ ಮಾಡಲಿದ್ದಾರೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ಬುಧವಾರ ಸಂಜೆ ಇಳಿಯಲಿರುವ ಚಂದ್ರಯಾನ-3 ನೌಕೆಯನ್ನು ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ಟ್ರಾಕ್ ಕೇಂದ್ರದ ವಿಜ್ಞಾನಿಗಳು ನಿರಂತರವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಆ ನೌಕೆ ನಿಗದಿಯಂತೆ ಸುಗಮವಾಗಿ ಚಲಿಸುತ್ತಿರುವುದನ್ನು ಖಾತ್ರಿಪಡಿಸಿಕೊಂಡಿದ್ದಾರೆ.
ಚಂದ್ರಯಾನ 3 ನೌಕೆಯನ್ನು ಪೀಣ್ಯದ ಇಸ್ಟ್ರಾಕ್ ಕೇಂದ್ರದ ಮಿಷನ್ ಆಪರೇಷನ್ ಕಾಂಪ್ಲೆಕ್ಸ್ನಿಂದ ನಿಗಾ ವಹಿಸಲಾಗುತ್ತಿದೆ. ಬುಧವಾರ ನೌಕೆ ಲ್ಯಾಂಡ್ ಆಗಲಿರುವ ಹಿನ್ನೆಲೆಯಲ್ಲಿ ಇಸ್ಟ್ರಾಕ್ ಕೇಂದ್ರದಲ್ಲಿ ಅತ್ಯುತ್ಸಾಹ ಹಾಗೂ ಬಿರುಸಿನ ಚಟುವಟಿಕೆಗಳು ಕಂಡುಬರುತ್ತಿವೆ.
ಈ ಕೇಂದ್ರದಲ್ಲಿನ ಚಟುವಟಿಕೆಗಳನ್ನು ಬುಧವಾರ ಸಂಜೆ 5.20ರಿಂದ ಟೀವಿಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಸಂಜೆ 6.04ಕ್ಕೆ ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಇಳಿಯಲಿದೆ.