ವಿಶೇಷ ಬರಹ : ದಿನೇಶ್ ಅಮಿನ್ ಮಟ್ಟು, ಹಿರಿಯ ಪತ್ರಕರ್ತರು
ಕೇರಳದಲ್ಲಿ ಎಲ್ ಡಿಎಫ್ ಸೋಲಿನ ಕಾರಣ ಹುಡುಕುತ್ತಿರುವವರು ರಾಜ್ಯ ಸಿಐಟಿಯು ಕಾರ್ಯದರ್ಶಿಗಳಲ್ಲೊಬ್ಬರಾದ ಮಹಾಂತೇಶ್ ಕರಿಯಪ್ಪ ಅವರ ಫೇಸ್ ಬುಕ್ ಬರಹಗಳನ್ನು ಓದಿದರೆ ಸೋಲಿನ ಕಾರಣಗಳ ಬಗ್ಗೆ ಒಂದು ಅಂದಾಜು ಸಿಗಬಹುದು.

‘’ಕೇ’ರಳದಲ್ಲಿ ಎಲ್ ಡಿಎಫ್ ಸೋಲಿಸುವಲ್ಲಿ ಅಲ್ಲಿನ ಕ್ರಿಶ್ಚಿಯನ್ ಮತ್ತು ಮುಸ್ಲಿಮ್ ಸಮುದಾಯಗಳ ಪಾತ್ರ ಮುಂಚೂಣಿಯಲ್ಲಿದೆ..’’ ಎಂದು ಮಹಂತೇಶ್ ಹೇಳಿದ್ದಾರೆ. ಅಷ್ಟು ಮಾತ್ರವಲ್ಲ ‘’1957 ರಲ್ಲಿ ಕಮ್ಯುನಿಸ್ಟರ ಮೊದಲ ಸರ್ಕಾರವನ್ನು ಉರುಳಿಸುವ ಪ್ರಯತ್ನಕ್ಕೆ ಚಾಲನೆ ದೊರೆತದ್ದೇ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳ ಒಡೆಯರಾದ ಚರ್ಚ್‌ಗಳು ಮತ್ತು ಅವುಗಳ ದಾತಾರರಾದ ರೋಮಿನ ಪೋಪ್ ಮತ್ತು ವಿಶ್ವ ಕ್ರಿಶ್ಚಿಯನ್ ಕೌನ್ಸಿಲ್‌ಗಳಿಂದ, ಅವರು ಹರಿಸಿದ ಹಣದ ಹೊಳೆಯಿಂದ…’’’ಎಂದು ಇತಿಹಾಸವನ್ನು ಬಗೆದು ಮುಂದಿಟ್ಟಿದ್ದಾರೆ.
ಈ ಆರೋಪಗಳನ್ನು ನಿರಾಕರಿಸಲು ನನ್ನಲ್ಲಿ ಆಧಾರಗಳಿಲ್ಲ, ಆದರೆ ಈ ಬಾರಿ ಕೇರಳದಲ್ಲಿ ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಕೆಲವು ಪತ್ರಕರ್ತರು ನನ್ನೊಡನೆ ಮಾತನಾಡುತ್ತಾ’’ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮುಸ್ಲಿಮರ ಸರ್ಕಾರ ಬರುತ್ತದೆ ಎಂದು ಕಮ್ಯುನಿಸ್ಟರು ಪ್ರಚಾರ ನಡೆಸುತ್ತಿದ್ದಾರೆ’’ ಎಂದು ಹೇಳಿದ್ದರು, ನಾನು ನಂಬಿರಲಿಲ್ಲ. ಫಲಿತಾಂಶದ ನಂತರ ಶ್ರೀನಿವಾಸ ಕಕ್ಕಿಲ್ಲಾಯರೂ ಇದನ್ನು ಬರೆದಿದ್ದಾರೆ. ಸತ್ಯಾಸತ್ಯತೆಯ ಪರಿಶೀಲನೆಯನ್ನು ಪ್ರಜ್ಞಾವಂತರಿಗೆ ಬಿಡುತ್ತೇನೆ.
ಇಷ್ಟೆಲ್ಲ ಬರೆದಿರುವ ಮಹಂತೇಶ್ ಅವರು ಕೊನೆಯಲ್ಲಿ ‘’’ಇವತ್ತು ಭಾರತ ಚರಿತ್ರೆಯಲ್ಲಿ ಕಮ್ಯೂನಿಸ್ಟರು ಅಧಿಕಾರ ಕಳೆದುಕೊಂಡು ಗೊಣಗಾಡುವ ಮಾಧ್ಯಮಗಳು ಹಾಗೂ ಬುದ್ದಿಜೀವಿ ಕಾಂಗ್ರೆಸ್ ಬೆಂಬಲಿತ ಚಿಂತಕರು ಭಾರತದಲ್ಲಿ ಅಧಿಕಾರದ ಹೊರಗಿದ್ದೂ ಸಮರದೀರ ಹೋರಾಟ ನಡೆಸಿದ ಹಾಗೂ ನಡೆಸುತ್ತಿರುವ ಕಮ್ಯೂನಿಸ್ಟರ ಚರಿತ್ರೆಯನ್ನು ಮರು ಓದಲು ಕೋರಿಕೆ…. ಎಂದು ಷರಾ ಬರೆದಿದ್ದಾರೆ. ಇದನ್ನು ಓದಿದ ನಂತರ ಇದಕ್ಕೆ ಪ್ರತಿಕ್ರಿಯಿಸೋಣ ಎಂದು ಅನಿಸಿದೆ. ದೂರದ ಕೇರಳದ ಚುನಾವಣೆ ಬಗ್ಗೆ ಇಷ್ಟೊಂದು ತಲೆಕೆಡಿಸಿಕೊಂಡಿರುವ ಮಹಂತೇಶ್ ಕರಿಯಪ್ಪ ಅವರು ತಮ್ಮೂರಾದ ದಾವಣಗೆರೆ ಉಪಚುನಾವಣೆ ಬಗ್ಗೆ ಏನಾದರೂ ಪ್ರತಿಕ್ರಿಯಿಸಿದ್ದಾರಾ? ಎಂದು ಹುಡುಕಾಡಿದರೆ ಎಲ್ಲಿಯೂ ಸುದ್ದಿಯೇ ಇಲ್ಲ.
ಇದನ್ನೂ ಓದಿ : ಪೋಕ್ಸೋ ಆರೋಪಿಗೆ ಕೊಲೆ: ಮಗಳ ತಂದೆಯೇ ಸೂತ್ರಧಾರ? ಬೆಂಗಳೂರಿನಲ್ಲಿ ಭೀಕರ ಘಟನೆ
ಎಲ್ಲರಿಗೂ ಗೊತ್ತಿರುವ ಹಾಗೆ ಕರ್ನಾಟಕದ ಮಾಸ್ಕೋ, ಕೆಂಪು ಕೋಟೆ ಎಂದೆಲ್ಲ ಖ್ಯಾತಿ ಪಡೆದಿದ್ದ ಇದೇ ದಾವಣಗೆರೆಯಲ್ಲ ಪಂಪಾಪತಿ ಎಂಬ ಮಿಲ್ ಕಾರ್ಮಿಕನೊಬ್ಬ ದುಡ್ಡು ಮತ್ತು ಜಾತಿಯ ಬಲವನ್ನು ಎದುರಿಸಿ ಮೂರು ಬಾರಿ (1978,83,85) ವಿಧಾನ ಸಭಾ ಸದಸ್ಯರಾಗಿದ್ದರು, ದಾವಣಗೆರೆ ನಗರ ಸಭಾಧ್ಯಕ್ಷರೂ ಆಗಿದ್ದರು. ಆ ಊರಲ್ಲಿ . ‘ಲೆನಿನ್ ನಗರ’ ಭಗತ್ ಸಿಂಗ್ ನಗರ ,ಡಾಂಗೆ ಪಾರ್ಕ್ ,ಮಾರ್ಕ್ಸ್ ನಗರ ಎಂಬ ಬಡಾವಣೆಗಳಿದ್ದವು. ಇಂತಹ ದಾವಣಗೆರೆಯಲ್ಲಿ ಎಡಪಕ್ಷಗಳನ್ನು ನಿರ್ನಾಮ ಮಾಡಿದ್ದು ಯಾವ ಕ್ರಿಶ್ಚಿಯನ್, ಮುಸ್ಲಿಮ್ ಕೋಮುವಾದ? ದಾವಣಗೆರೆಯಲ್ಲಿ ಕಾರ್ಮಿಕ ಸಂಘಟನೆಗಳು ಯಾವ ಸ್ಥಿತಿಯಲ್ಲಿದೆ? ಇದರಲ್ಲಿ ಮಹಂತೇಶ್ ಅವರು ಪ್ರತಿನಿಧಿಸುವ ಸಿಐಟಿಯು ಪಾತ್ರ ಏನು?
‘’ಅಲ್ಲಿನ ಬಿಜೆಪಿಯನ್ನೇ ಶಾಮನೂರು ಕುಟುಂಬ ಖರೀದಿಸಿಬಿಟ್ಟಿದೆಯಂತಲ್ಲಾ?’’ ಎಂದು ದಾವಣಗೆರೆ ಉಪಚುನಾವಣೆ ನಡೆಯುತ್ತಿದ್ದ ಸಮಯದಲ್ಲಿ ಸ್ಥಳೀಯರಾದ ಮಾಜಿ ವಿಧಾನಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ ಅವರನ್ನು ಕೇಳಿದ್ದೆ. ಅದಕ್ಕೆ ಅವರು ‘’ ಅಯ್ಯೋ ಬಿಜೆಪಿಯವರನ್ನು ಬಿಡಿ ಅಲ್ಲಿನ ಕಮ್ಯುನಿಸ್ಟರಾದರೂ ಅವರ ವಿರುದ್ದ ಮಾತನಾಡುತ್ತಾರಾ? ಕೇಳಿ’’ ಎಂದು ನನ್ನ ಬಾಯಿ ಮುಚ್ಚಿಸಿದ್ದರು. ( ಅವರು ಇನ್ನೂ ಕಟುವಾದ ಮಾತುಗಳನ್ನು ಆಡಿದ್ದರು). ಸ್ವಲ್ಪ ಕೆದಕಿ ನೋಡಿದರೆ ನಮ್ಮ ಅಬ್ದುಲ್ ಮುನೀರ್ ಕಾಟಿಪಳ್ಳ ಅವರನ್ನು ಹೊರತುಪಡಿಸಿದರೆ ದಾವಣಗೆರೆ ಉಪಚುನಾವಣೆ ಬಗ್ಗೆ ಸ್ಥಳೀಯ ಕಮ್ಯುನಿಸ್ಟರು ಸೇರಿದಂತೆ ಬೇರೆ ಯಾರೂ ಪ್ರತಿಕ್ರಿಯಿಸಿದ ಹಾಗೆ ಕಾಣಲಿಲ್ಲ. (ಕಣ್ತಪ್ಪಿನಿಂದ ಗಮನಿಸದೆ ಇದ್ದರೆ ಕ್ಷಮೆ ಇರಲಿ). ಕೊನೆಯದಾಗಿ ಕಮ್ಯುನಿಸ್ಟ್ ಚರಿತ್ರೆಯನ್ನು ಮರು ಓದಲು ಕಾಂಗ್ರೆಸ್ ಬೆಂಬಲಿತ ಬುದ್ದಿಜೀವಿಗಳನ್ನು ಮಹಂತೇಶ್ ಕೋರಿದ್ದಾರೆ. ಓದೋಣ,
ಅದಕ್ಕಿಂತ ಮೊದಲು ಈ’’ ಕಾಂಗ್ರೆಸ್ ಬೆಂಬಲಿತ ಬುದ್ದಿಜೀವಿಗಳು’’ ಎಂದರೆ ಯಾರು ಎನ್ನುವುದನ್ನು ಅವರು ಸ್ಪಷ್ಟಪಡಿಸಿದರೆ ಅನುಕೂಲವಾಗುತ್ತದೆ. ಸಿಪಿಐ ಮತ್ತು ಸಿಪಿಐ ಎಂ ಪಕ್ಷಗಳು ಕೂಡಾ ಇಂಡಿಯಾ ಒಕ್ಕೂಟದಲ್ಲಿರುವುದರಿಂದ ಕಾಂಗ್ರೆಸ್ ಬೆಂಬಲಿತ ಬುದ್ದಿಜೀವಿಗಳಲ್ಲಿ ಅವರೂ ಬರುತ್ತಾರೆ ಎನ್ನುವುದು ನನ್ನ ತಿಳುವಳಿಕೆ. ಇದರಿಂದಾಗಿಯೇ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಅಕಾಡೆಮಿ-ಪ್ರಾಧಿಕಾರಗಳಿಗೆ ಸಿಪಿಎಂ, ಸಿಪಿಐ ನಾಯಕರು ಕಾರ್ಯಕರ್ತರು ಸದಸ್ಯರಾಗಿದ್ದಾರೆ, ಸರ್ಕಾರ ನೀಡುವ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಮಹಂತೇಶ್ ಅವರೇನಾದರೂ ತಮ್ಮದೇ ಪಕ್ಷದ ಬುದ್ದಿಜೀವಿಗಳನ್ನು ಗುರಿಯಾಗಿಟ್ಟುಕೊಂಡು ಬುದ್ದಿ ಹೇಳಿದ್ದಾರೆಯೇ? ಅವರೇ ಸ್ಪಷ್ಟಪಡಿಸಬೇಕು.






