ತಮಿಳುನಾಡು ರಾಜಕಾರಣದಲ್ಲಿ ಐತಿಹಾಸಿಕ ತಿರುವು ಮೂಡಿದ್ದು, ಏಪ್ರಿಲ್ 23ರಂದು ನಡೆದ ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಂದಿದೆ. ಒಟ್ಟು 234 ಕ್ಷೇತ್ರಗಳ ಪೈಕಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆಡಳಿತದಲ್ಲಿದ್ದ ಡಿಎಂಕೆ 59 ಹಾಗೂ ಎಐಎಡಿಎಂಕೆ 47 ಸ್ಥಾನಗಳಿಗೆ ಸೀಮಿತವಾಗಿದೆ.

ದಶಕಗಳ ರಾಜಕೀಯ ಅನುಭವ ಹೊಂದಿರುವ ಪ್ರಮುಖ ಪಕ್ಷಗಳನ್ನು ಹಿಂದಿಕ್ಕಿ ಟಿವಿಕೆ ಸಾಧಿಸಿರುವ ಈ ಗೆಲುವು ರಾಷ್ಟ್ರದ ಗಮನ ಸೆಳೆದಿದೆ. ಆದರೆ ಸ್ಪಷ್ಟ ಬಹುಮತಕ್ಕೆ ಇನ್ನೂ ಸುಮಾರು 10 ಸ್ಥಾನಗಳ ಕೊರತೆ ಇರುವುದರಿಂದ, ಸರ್ಕಾರ ರಚನೆಗೆ ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಕುತೂಹಲ ಹೆಚ್ಚಾಗಿದೆ.ಮೊದಲ ಚುನಾವಣೆಯಲ್ಲೇ ಭರ್ಜರಿ ಸಾಧನೆ ಮಾಡಿದ ಟಿವಿಕೆ ತಂಡದಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳ ಯಶಸ್ಸು ಕೂಡ ಗಮನಾರ್ಹವಾಗಿದೆ.

ವಿಜಯ್ ಅಭಿಮಾನಿಯಾಗಿದ್ದ ಒಬ್ಬ ಆಟೋ ಚಾಲಕ ಶಾಸಕನಾಗಿದ್ದರೆ, ವಿಜಯ್ ಅವರ ಬಳಿ ವರ್ಷಗಳ ಕಾಲ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದ ರಾಜೇಂದ್ರನ್ ಅವರ ಪುತ್ರ ಸಬರಿನಾಥನ್ ಆರ್ ಕೂಡ ಭರ್ಜರಿ ಜಯ ಸಾಧಿಸಿದ್ದಾರೆ.
ವಿರುಗಾಂಪಕ್ಕಂ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಬರಿನಾಥನ್, ಡಿಎಂಕೆ ಅಭ್ಯರ್ಥಿ ಪ್ರಭಾಕರ ರಾಜ ವಿರುದ್ಧ 27,086 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಸಬರಿನಾಥನ್ 76,092 ಮತಗಳನ್ನು ಪಡೆದರೆ, ಪ್ರಭಾಕರ ರಾಜ 49,006 ಮತಗಳನ್ನು ಪಡೆದಿದ್ದಾರೆ.

ಈ ಅಚ್ಚರಿಯ ಫಲಿತಾಂಶ ತಮಿಳುನಾಡಿನ ರಾಜಕೀಯದಲ್ಲಿ ದೊಡ್ಡ ಬದಲಾವಣೆಯ ಸಂಕೇತವಾಗಿದ್ದು, ಹೊಸ ರಾಜಕೀಯ ಶಕ್ತಿಯಾಗಿ ಟಿವಿಕೆ ಉದಯಿಸಿರುವುದು ಸ್ಪಷ್ಟವಾಗಿದೆ. ಇದೀಗ ಸರ್ಕಾರ ರಚನೆಗೆ ಮುಂದಿನ ನಡೆ ಏನು ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.






