ಕೋವಿಡ್ ಕೇಸ್ ಇಳಿಕೆ ಆಗಿದೆ ನಿಜ. ಆದರೆ ಸಂಪೂರ್ಣ ಮುಗಿದಿಲ್ಲ. ಹೀಗಾಗಿ ರಕ್ಷಣೆ ಮುಖ್ಯ ಅಂತ ಹೇಳ್ತಿರುವ ತಜ್ಞರು ಬೂಸ್ಟರ್ ಡೋಸ್ ಪಡೆದುಕೊಳ್ಳಿ ಎಂದು ಕರೆ ಕೊಟ್ಟರೂ ಜನ ಮಾತ್ರ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಯಾಕೋ ಮೊದಲನೇ ಡೋಸ್ ಹಾಗೂ ಎರಡನೇ ಡೋಸ್ಗೆ ಸಿಕ್ಕ ರೆಸ್ಪಾನ್ಸ್ ಬೂಸ್ಟರ್ ಡೋಸ್ಗೆ ಸಿಗುತ್ತಿಲ್ಲ.
ಕೋವಿಡ್ ಜತೆ ಬದುಕು ನಡೆಸುವ ಕಲೆ ಜನರಿಗೆ ಕರಗತವಾಗಿ ಬಿಟ್ಟಿದೆ. 2 ವರ್ಷಗಳ ಕಾಲದ ಒಡನಾಟದಿಂದ ಕೋವಿಡ್ ನಿಂದ ಸಾಕಷ್ಟು ಪಾಠ ಕಲಿತು ಬಿಟ್ಟಿದ್ದಾರೆ. ಕೋವಿಡ್ ಹೆಸರಿಗೇ ಭಯ ಬೀಳುತ್ತಿದ್ದ ಜನರಿಗೆ, ಸದ್ಯ ವುಹಾನ್ ವೈರಸ್ ಚಿರಪರಿಚಿತವಾಗಿ ಬಿಟ್ಟಿದೆ. ಕೋವಿಡ್ ವೈರಸ್ನ ಜಾತಕವನ್ನು ಬಲ್ಲ ಜನ, ಲಸಿಕೆ ಬಗ್ಗೆ ಮೂಗು ಮುರಿದಿದ್ದಾರೆ. ಇತ್ತೀಚಿಗೆ ಕೇಂದ್ರದಿಂದ ಚಾಲನೆಗೊಂಡ ಬೂಸ್ಟರ್ ಡೋಸ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೂಸ್ಟರ್ ಡೋಸ್ ಅಭಿಯಾನ ಶುರುವಾಗಿ ತಿಂಗಳು ಕಳೆಯುತ್ತಾ ಬಂದರೂ, ಕೇವಲ ಬೆರಳಣಿಕೆಯಷ್ಟು ಜನ ಮಾತ್ರ ಮೂರನೇ ಡೋಸ್ ಪಡೆದಿದ್ದಾರೆ.
ಬೂಸ್ಟರ್ ಡೋಸ್ ಠುಸ್ ಪಟಾಕಿಯಾಗಲು ಹಲವು ಕಾರಣಗಳು ಇವೆ. ಮುಂಚೆ ಕೋವಿಡ್ ಲಸಿಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಜನರಿಗೆ ಉಚಿತವಾಗಿ ನೀಡಲಾಗುತ್ತಿತ್ತು. ಆದರೀಗಾ ಬೂಸ್ಟರ್ ಡೋಸ್ ಬೇಕು ಅಂದ್ರೆ ಜನ ಖಾಸಗಿ ಆಸ್ಪತ್ರೆಗೆ ಹೋಗಬೇಕು. 380 ಹಣ ಕೊಟ್ಟು ಬೂಸ್ಟರ್ ಡೋಸ್ ಪಡಿಯಬೇಕು. ಆರೋಗ್ಯ ಕಾರ್ಯಕರ್ತರೇ ಬೂಸ್ಟರ್ ಡೋಸ್ ಪಡೆದುಕೊಳ್ಳಲು ಹಿಂದೇಟು ಹಾಕಿರುವ ಕಾರಣ ಜನರಿಗೂ ಇದರ ಬಗ್ಗೆ ಭರವಸೆ ಮೂಡಿಲ್ಲ. ಹೇಗೂ ಕೋವಿಡ್ ಕೇಸ್ ಕಡಿಮೆ ಆಗಿದೆ ಅಂತ ಜನರ ನಿರಾಸಕ್ತಿ ಮತ್ತಷ್ಟು ಹೆಚ್ಚಿದೆ. ಮತ್ತೊಂದೆಡೆ ಬೂಸ್ಟರ್ ಡೋಸ್ ಅಭಿಯಾನಕ್ಕೆ ಖಾಸಗಿ ಆಸ್ಪತ್ರೆಗಳು ಕೂಡ ಹಿಂದೇಟು ಹಾಕಿವೆ. ಎರಡನೇ ಡೋಸ್ ಲಸಿಕೆ ಜನ ಪಡೆಯಲು ಹಿಂದೇಟು ಹಾಕಿದ ಕಾರಣ ಲಕ್ಷ ಲಕ್ಷ ಲಸಿಕೆಗಳು ಗೋದಾಮಿನಲ್ಲಿದೆ. ಅಲ್ಲದೇ ಬೂಸ್ಟರ್ ಡೋಸ್ ಬಗ್ಗೆ ಜನ ನಿರಾಸಕ್ತಿ ತೋರಿರುವ ಕಾರಣ ಲಸಿಕೆ ದರ ಕಡಿಮೆ ಮಾಡಲು ಸೂಚನೆ ನೀಡಲಾಗಿದೆ. ಕೇಂದ್ರದ ಈ ಸೂಚನೆ ಬಗ್ಗೆ ಖಾಸಗಿ ಆಸ್ಪತ್ರೆ ಆಡಳಿತ ಅಸಮಾಧಾನ ವ್ಯಕ್ತಪಡಿಸಿವೆ. ಆದರೆ ಈ ಬಗ್ಗೆ ಚರ್ಚೆ ನಡೆಸಿ ಸಮಸ್ಯೆ ಬಗೆ ಹರಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ಪ್ರತಿ ಅಲೆಯನ್ನು ಅಕ್ಯುರೇಟ್ ಆಗಿ ಅಳೆಯುವ ಇಂಡಿಯನ್ ಇನ್ಸ್ಟಿಟ್ಯೂಟ್ ನ ವರದಿ ಬಗ್ಗೆ ತಜ್ಞರು ಕೂಡ ಬೆಳಕು ಚೆಲ್ಲಿದ್ದಾರೆ. ಹೀಗಾಗಿ ಬೂಸ್ಟರ್ ಡೋಸ್ ಈಗ ಉಪಯೋಗ ಇಲ್ಲ ಅಂತ ಅಂದುಕೊಂಡವರಿಗೆ, 4ನೇ ಅಲೆಗೆ ಅಪಾಯ ತರಬಹುದು ಎಂಬುದು ವೈದ್ಯರ ಮಾತು.